ದಲಿತ, ಹಿಂದುಳಿದ ಆತ್ಮಕಥನಗಳ ಪರಿಚಯದಿಂದ ಮರು ಇತಿಹಾಸ ಸೃಷ್ಟಿ: ಡಾ.ಎಂ.ಎಸ್.ಆಶಾದೇವಿ

Update: 2021-12-26 14:21 GMT

ಬೆಂಗಳೂರು, ಡಿ.26: ದಲಿತ, ಹಿಂದುಳಿದವರ ಆತ್ಮಕಥನಗಳ ಪರಿಚಯದ ಮೂಲಕ ಮರು ಇತಿಹಾಸವನ್ನು ಸೃಷ್ಟಿಸುವ ಕೆಲಸವಾಗುತ್ತಿದೆ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಹೇಳಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಲಂಡನ್‌ನ ಬಹುರೂಪಿ ಹಾಗೂ ಬಸವ ಅಂತರಾಷ್ಟೀಯ ಪ್ರತಿಷ್ಠಾನ ಆಯೋಜಿಸಿದ್ದ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ಬಿಡುಗಡೆ ಹಾಗೂ ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವೈದಿಕ ಪರವುಳ್ಳ ಜನರು ಮಹಿಳೆ, ದಲಿತ ಹಾಗೂ ಹಿಂದುಳಿದ ವರ್ಗದವರನ್ನು ಸಾಂಸ್ಕೃತಿಕ, ಸಾಮಾಜಿಕವಾಗಿ ಹೊರಗಡೆ ಇಟ್ಟಿದ್ದಾರೆ. ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನಗಳ ಮೂಲಕ ಮರು ಇತಿಹಾಸ ಸೃಷ್ಟಿಯಾಗುತ್ತದೆ. ಈ ಸಮುದಾಯಗಳಿಗೆ ಇರುವ ಘನತೆ ಬಗ್ಗೆ ಮಾಹಿತಿ ಲಭಿಸುತ್ತದೆ ಎಂದು ಹೇಳಿದರು.

ಎಂ.ಎಂ.ಕಲಬುರ್ಗಿ ಅವರು ಕವಿರಾಜ ಮಾರ್ಗವನ್ನು ದೇಶಿ ಅಂಶ ಹಾಗೂ ವೈದಿಕ ಅಂಶ ಇರುವ ಕೃತಿ ಎಂದು ಕರೆಯುತ್ತಿದ್ದರು. ಜತೆಗೆ ಮಿಶ್ರಿತ ಕೃತಿ ಎನ್ನುತ್ತಿದ್ದರು ಎಂದು ಹೇಳಿದರು.

ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು, ಕಳೆದ 10 ವರ್ಷಗಳಲ್ಲಿ ದೇಶ ಬಹಳಷ್ಟು ಅಭಿವೃದ್ಧಿಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ಈ ಕುರಿತು ನೈತಿಕವಾಗಿ ಮಾತನಾಡುವವರೂ ಮಾತನಾಡದೆ ಸುಮ್ಮನಾಗಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಕಾರ್ಖಾನೆಗಳನ್ನೆ ದೇವಸ್ಥಾನವೆಂದು ಹಲವು ಕಾರ್ಖಾನೆಗಳನ್ನು ಸ್ಥಾಪಿಸಿದರು. ಅವರಿಂದ ಏನೂ ಅಭಿವೃದ್ಧಿಯಾಗಿಲ್ಲ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ತಿಳಿಸಿದರು. 

ಎಂ.ಎಂ.ಕಲಬುರ್ಗಿ ಅವರಂಥ ಚಿಂತಕರು ಪ್ರಧಾನಿ ಮೋದಿ ಅವರಂಥವರನ್ನು ಪ್ರಶ್ನಿಸುತ್ತಿದ್ದರು ಹಾಗೂ ಮೂಢನಂಬಿಕೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಹಾಗೂ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡುತ್ತಿದ್ದರು ಎಂದು ಹೇಳಿದರು.

ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಯಿಂದ ಬಂದಿರುವ ಮೊತ್ತವನ್ನು ವಿಕಲಚೇತನರ ಸಂಸ್ಥೆಗೆ ನೀಡಲು ತೀರ್ಮಾನಿಸಿದ್ದೇನೆ. ಅಲ್ಲದೆ, ಕಲಬುರ್ಗಿ ಅವರ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ತಮ್ಮ ಪುಟ್ಟ ಪ್ರಯತ್ನಕ್ಕೆ ದೊಡ್ಡ ಪ್ರಶಸ್ತಿ ಎಂದು ಹೇಳಿದರು. 
ಕಾರ್ಯಕ್ರಮ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಡಾ.ಕೆ.ಮರುಳಸಿದ್ದಪ್ಪ ವಹಿಸಿದ್ದರು. ಸಾಹಿತಿ ಜಿ.ಎನ್.ಮೋಹನ್ ಉಪಸ್ಥಿತರಿದ್ದರು. 

ರಂಗಾಯಣ, ಕಸಾಪದಲ್ಲಿ ರಾಜಕೀಯ ಹಸ್ತಕ್ಷೇಪ

‘ಈ ಮೊದಲು ರಂಗಾಯಣ, ಪ್ರಾಧಿಕಾರಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಲಿಲ್ಲ. ಆದರೆ, ಇತ್ತೀಚೆಗೆ ಈ ಸ್ಥಳಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕೋಮುವಾದಿ ಪಕ್ಷವೊಂದರ ಹಸ್ತಕ್ಷೇಪ ನಡೆದಿದೆ.’

ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News