×
Ad

ಪಾದಚಾರಿ ಮಾರ್ಗಗಳಲ್ಲಿನ ಟ್ರಾನ್ಸ್ ಫಾರ್ಮರ್ ತೆರವುಗೊಳಿಸುವ ವರದಿ ಕೇಳಿದ ಹೈಕೋರ್ಟ್

Update: 2021-12-26 20:56 IST

ಬೆಂಗಳೂರು, ಡಿ.26: ನಗರದ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್‍ಗಳನ್ನು ಎಷ್ಟು ದಿನಗಳಲ್ಲಿ ಮತ್ತು ಹೇಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಕುರಿತು ವಿವರವಾದ ಮಾಹಿತಿ ನೀಡುವಂತೆ ಹೈಕೋರ್ಟ್ ಬೆಸ್ಕಾಂಗೆ ನಿರ್ದೇಶಿಸಿದೆ.

ಪಾದಚಾರಿ ಮಾರ್ಗಗಳಲ್ಲಿ ಹಾಗೂ ರಾಜಕಾಲುವೆಗಳ ಅಂಚಿನಲ್ಲಿ ಅಳವಡಿಸಿರುವ ಅಪಾಯಕಾರಿ ಟ್ರಾನ್ಸ್‍ಫಾರ್ಮರ್‍ಗಳನ್ನು ತೆರವು ಮಾಡಲು ನಿರ್ದೇಶನ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಟ್ರಾನ್ಸ್‍ಫಾರ್ಮರ್‍ಗಳನ್ನು ತೆರವುಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ವಕೀಲರು, ಈ ಸಂಬಂಧ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಿದ್ದೇವೆ. ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ಉನ್ನತ ಸಮಿತಿ ಸ್ಥಳಾಂತರಿಸಬೇಕಾದ ಟ್ರಾನ್ಸ್‍ಫಾರ್ಮರ್‍ಗಳನ್ನು ಗುರುತಿಸಿದೆ. ಅವುಗಳನ್ನು ಸ್ಥಳಾಂತರಿಸಲು ಏಜೆನ್ಸಿಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಟೆಂಡರ್ ಪೂರ್ಣಗೊಳಿಸಿ ಕಾರ್ಯಾದೇಶ ನೀಡಲಾಗುವುದು ಎಂದರು.

ವಿವರಣೆಗೆ ತೃಪ್ತವಾಗದ ಪೀಠ, ನಿಮ್ಮ ಟೆಂಡರ್, ಕಾರ್ಯಾದೇಶ ವಿಚಾರಗಳು ನಮಗೆ ಬೇಕಿಲ್ಲ. ಟ್ರಾನ್ಸಫಾರ್ಮರ್‍ಗಳನ್ನು ತೆರವು ಮಾಡಲಾಗಿದೆಯೇ ಎಂಬುದಷ್ಟೇ ಮುಖ್ಯ. ಹೀಗಾಗಿ, ಎಷ್ಟು ದಿನದಲ್ಲಿ ಸ್ಥಳಾಂತರಿಸುತ್ತೀರಿ ಎಂದು ಪ್ರಶ್ನಿಸಿತು. ಆಗ ವಕೀಲರು ಅಂದಾಜು ಒಂದು ವರ್ಷ ಬೇಕಾಗಬಹುದು ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮೊದಲಿಗೆ ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್‍ಫಾರ್ಮರ್‍ಗಳನ್ನು ಅಳವಡಿಸಿದ್ದೇ ತಪ್ಪು. ಈಗ ಒಂದು ವರ್ಷ ಬೇಕೆನ್ನುತ್ತೀರಿ. ಹೀಗೆ ಹೇಳಿದರೆ ಅದರ ಪರಿಣಾಮವನ್ನ ನೀವು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಅಲ್ಲದೇ, ಯಾವ ನಿಯಮಗಳ ಆಧಾರದಲ್ಲಿ ಪಾದಚಾರಿ ಮಾರ್ಗದಲ್ಲಿ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದೀರಿ ಎಂದಿತು. ಉತ್ತರಿಸಿದ ವಕೀಲರು, ಟೆಲಿಗ್ರಾಪ್ ಕಾಯ್ದೆ ಅನ್ವಯ ಅಳವಡಿಸಲಾಗಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಸಿಜೆ, ನೀವು ಸರಿ ಇದ್ದಿದ್ದರೆ ಅವುಗಳನ್ನು ಸ್ಥಳಾಂತರಿಸುತ್ತಿರುವುದೇಕೆ ಎಂದು ಕಟುವಾಗಿ ಪ್ರಶ್ನಿಸಿದರು. ಅಂತಿಮವಾಗಿ, ಟ್ರಾನ್ಸ್‍ಫಾರ್ಮರ್‍ಗಳನ್ನು ಹೇಗೆ ಮತ್ತು ಎಷ್ಟು ದಿನಗಳಲ್ಲಿ ಸ್ಥಳಾಂತರಿಸುತ್ತೀರಿ ಎಂಬ ಕುರಿತು ಕ್ರಿಯಾ ಯೋಜನೆ ಸಲ್ಲಿಸಿ ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News