ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ

Update: 2021-12-26 17:19 GMT

ಬೆಂಗಳೂರು, ಡಿ. 26: ಮಾದಕ ವಸ್ತುಗಳ(ಡ್ರಗ್ಸ್) ಸಹವಾಸ ಮಾಡುವವರಿಗೆ ಎಂದಿದ್ದರೂ ಕಾರಾಗೃಹ ವಾಸ ಕಟ್ಟಿಟ್ಟ ಬುತ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ವಿಧಾನಸೌಧದ ಮುಂಭಾಗದಲ್ಲಿನ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನಕ್ಕೆ ಚಾಲನೆ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಮಂತರು, ಡ್ರಗ್ಸ್ ಸೇವನೆಯನ್ನು ಫ್ಯಾಷನ್‍ಗಾಗಿ ಮಾಡುತ್ತಾರೆ. ಅದನ್ನು ಬೇರೆ ಕಡೆ ಬೇಕಿದ್ದರೆ ಮಾಡಲಿ. ಆದರೆ, ನಮ್ಮ ರಾಜ್ಯದಲ್ಲಿ ಮಾಡಬೇಡಿ ಎಂದು ಸಲಹೆ ಮಾಡಿದರು.

ಮಾದಕ ವಸ್ತುಗಳ ಸಾಗಾಣೆದಾರರ ವಿರುದ್ಧ ಕಠಿಣ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷ ಕಾನೂನನ್ನು ಜಾರಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಡ್ರಗ್ಸ್ ಮಾರಾಟ ಮತ್ತು ಬಳಕೆಗೆ ಉತ್ತೇಜನ ನೀಡಬಾರದು. ಎಲ್ಲರೂ ಸೇರಿಸಿ ಇದರ ವಿರುದ್ಧ ಹೋರಾಟ ಮಾಡೋಣ. ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ. ಇತರರೂ ಮಾದಕ ವಸ್ತುಗಳ ಸೇವನೆಗೆ ಅವಕಾಶ ನೀಡುವುದಿಲ್ಲವೆಂಬ ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು.

ಮಾದಕ ವಸ್ತುಗಳ ಮಾರಾಟ ಮಾಡುವವರು ಕಂಡುಬಂದರೆ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ. ಡ್ರಗ್ಸ್ ಮಾರಾಟ ಮಾಡುವವರು ದೇಶದ್ರೋಹಿಗಳು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ದೇಶದಿಂದ ಡ್ರಗ್ಸ್ ಪಿಡುಗನ್ನು ನಿರ್ಮೂಲನೆ ಮಾಡಲು ಪೆÇಲೀಸರೊಂದಿಗೆ ಕೈ ಜೋಡಿಸಿ ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಾಲೇಜುಗಳ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಕಾಲೇಜು ಕ್ಯಾಂಪಸ್, ಹಾಸ್ಟೆಲ್‍ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಬೇಕು. ಕ್ಯಾಂಪಸ್‍ನಲ್ಲಿ ಡ್ರಗ್ಸ್ ಮಾರಾಟ ಬಳಕೆ ಕಂಡುಬಂದರೆ ಕಾಲೇಜು ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಡ್ರಗ್ಸ್ ಮಾರಾಟ ಮಾಡುವವರಿಗೆ ಉಗ್ರ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಅತಿಹೆಚ್ಚು ಡ್ರಗ್ಸ್‍ನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಡ್ರಗ್ಸ್ ಪಿಡುಗು ತೊಲಗುವವರೆಗೂ ಅಭಿಯಾನ ನಿಲ್ಲುವುದಿಲ್ಲ. ಒಂದೂವರೆ ವರ್ಷದಿಂದ ಸಮರವನ್ನು ಸಾರಲಾಗಿದೆ ಎಂದು ಅವರು ತಿಳಿಸಿದರು.

ಪಾಕಿಸ್ತಾನದ ಗಡಿ ಸೇರಿದಂತೆ ವಿದೇಶಗಳಿಂದ ಡ್ರಗ್ಸ್ ಬರುತ್ತಿದ್ದು, ಯುವ ಜನತೆ ಅದರ ದಾಸರಾಗುತ್ತಿದ್ದಾರೆ. ಇದರಿಂದ ಅವರ ಭವಿಷ್ಯ ಕರಾಳವಾಗುತ್ತದೆ. ಪ್ರಧಾನಿ ಮೋದಿ ಅವರು ಡ್ರಗ್ಸ್ ವಿರುದ್ಧ ಸಮರ ಸಾರುವ ಸಂಕಲ್ಪ ಮಾಡಿದ್ದಾರೆ. ನಾವು ಈ ಅಭಿಯಾನವನ್ನು ಮನೆ ಮನೆಗೆ ತಲುಪಿಸಿ ಯುವ ಜನತೆ ಡ್ರಗ್ಸ್‍ನಿಂದ ದೂರ ಉಳಿಯುವಂತೆ ಮಾಡಬೇಕು ಎಂದು ಅವರು ಇದೇ ವೇಳೆ ಕೋರಿದರು.

ನಾನೂ ಇನ್ನೂ 18 ವರ್ಷದ ಯುವಕ ಎನಿಸುತ್ತಿದೆ. ಕಾಲೇಜು ದಿನಗಳು ನೆನಪಾಗುತ್ತಿವೆ. ಯುವಕರ ಶಕ್ತಿ ಭವಿಷ್ಯದ ನಿರ್ಮಾಣಕ್ಕೆ ಬಳಕೆಯಾಗಬೇಕು. ಆ ಮೂಲಕ ಕನ್ನಡ ನಾಡು, ವಿದ್ಯೆ ಕಲಿಸಿದ ಗುರುಗಳು, ತಂದೆತಾಯಿಗಳಿಗೆ ಹೆಸರು ತರುವಂತಹ ಸಂಕಲ್ಪ ಮಾಡಬೇಕು ಎಂದ ಅವರು, ರಾಜ್ಯದಲ್ಲಿ ಮಾದಕವಸ್ತು ಮಾರಾಟ ಮಾಡುವವರ ಹವಾ ಇರಬಾರದು. ಇನ್ನೇನಿದ್ದರೂ ಯುವಕರ ಹವಾ ಇರಬೇಕು. ನಿಮ್ಮ ನಿಮ್ಮ ಕಾಲೇಜಿನಲ್ಲಿ ಡ್ರಗ್ಸ್‍ನಂತಹ ಒಂದು ಸಣ್ಣ ಕುಡಿ ಕಂಡುಬಂದರೂ ಅದನ್ನು ಪುಡಿ ಪುಡಿ ಮಾಡಬೇಕು ಎಂದು ಅವರು ಹೇಳಿದರು.

ಡ್ರಗ್ಸ್ ವಿರುದ್ಧ ಸಮರ ಸಾರುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್.ಅಶೋಕ್, ಚಿತ್ರ ನಟ ಗಣೇಶ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News