ಕಡಿಮೆಯಾಗುತ್ತಿರುವ ಹೊಲಗಳ ಗಾತ್ರ ಮತ್ತು ಹೆಚ್ಚುತ್ತಿರುವ ಹಸಿವು

Update: 2021-12-27 06:11 GMT

ಆಂಧ್ರಪ್ರದೇಶದ ಶೇ. 82 ರೈತರು ಸಾಲದಲ್ಲಿದ್ದಾರೆ ಎನ್ನುವುದನ್ನು ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆಯ ಅಂಕಿ-ಅಂಶಗಳು ತೋರಿಸಿವೆ. ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಸಾಲದಲ್ಲಿರುವ ರೈತರ ಪ್ರಮಾಣ ಶೇ.65. ಈ ರಾಜ್ಯಗಳಲ್ಲಿ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ, ಉತ್ತಮ ಸಂಗ್ರಹ ವ್ಯವಸ್ಥೆ, ಮಾರುಕಟ್ಟೆ ಸೌಲಭ್ಯಗಳನ್ನು ನೀಡಿದರೆ, ಕೃಷಿ ಉತ್ಪನ್ನದ ವೆಚ್ಚದಲ್ಲಿ ಕಡಿತವಾದರೆ ಹಾಗೂ ಈ ಕ್ಷೇತ್ರಕ್ಕೆ ಬಂಡವಾಳ ಶಾಹಿಗಳ ಪ್ರವೇಶವನ್ನು ನಿಷೇಧಿಸಿದರೆ ದೇಶವು ರೈತರ ಹೊಟ್ಟೆಯನ್ನು ತುಂಬಿಸಬಹುದಾಗಿದೆ.

ಮೂರು ಕೃಷಿ ಕಾನೂನುಗಳನ್ನು ಕೇಂದ್ರದ ಮೋದಿ ಸರಕಾರ ಹಿಂದಕ್ಕೆ ಪಡೆದುಕೊಂಡ ಬಳಿಕ, ರೈತರು ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡು ಮನೆಗೆ ಹೋಗಿರಬಹುದು. ಆದರೆ, ಈಗ ಭಾರತದ ಆರ್ಥಿಕ ನೀತಿಯ ಪಂಚಾಂಗ ಎಷ್ಟು ಗಟ್ಟಿಯಾಗಿದೆ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸುವ ಕಾಲ ಸನ್ನಿಹಿತವಾಗಿದೆ. ಬಿಕ್ಕಟ್ಟು ಎಷ್ಟು ಆಳವಾಗಿದೆಯೆಂದರೆ, ದೇಶದ ಬೆಳೆಯುತ್ತಿರುವ ಜನಸಂಖ್ಯೆಗೆ ವ್ಯವಸಾಯದಿಂದ ಆಹಾರ ಪೂರೈಸುವುದು ಸಾಧ್ಯವೇ ಎಂದು ಪ್ರಶ್ನಿಸುವ ಹಂತಕ್ಕೆ ನಾವು ಬಂದು ತಲುಪಿದ್ದೇವೆ.

ಆದರೆ ಇದೇನೂ ಹೊಸ ಸವಾಲಲ್ಲ. ಸ್ವಾತಂತ್ರ್ಯಾನಂತರ ದೇಶಕ್ಕೆ ಆಹಾರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯವಾಗಿಲ್ಲ ಎನ್ನುವುದು ದೊಡ್ಡ ದುರಂತವೇ ಸರಿ. ಇಂದು ಕೃಷಿಭೂಮಿಗಳನ್ನು ಇತರ ಉದ್ದೇಶಗಳಿಗಾಗಿ ವೇಗವಾಗಿ ಪರಿವರ್ತನೆ ಮಾಡಲಾಗುತ್ತಿದೆ ಹಾಗೂ ರೈತರು ಕೃಷಿಯಿಂದ ದೂರ ಹೋಗುತ್ತಿದ್ದಾರೆ. ಹಾಗಾಗಿ, ಭಾರತದಲ್ಲಿ ಆಹಾರದ ಭದ್ರತೆಗೆ ಬೆದರಿಕೆ ಹೆಚ್ಚುತ್ತಿದೆ.

ಅಷ್ಟೇ ಅಲ್ಲ, ಕುಂದುತ್ತಿರುವ ಕೃಷಿ ಜಮೀನು ಭಾರತದ ಸಾಮಾಜಿಕ-ಆರ್ಥಿಕ ಹಂದರದ ಮೇಲೆ ಪರಿಣಾಮ ಬೀರುತ್ತಿದೆ. ಸರಕಾರವೇನೋ ಬಂಜರು ಜಮೀನುಗಳನ್ನು ನೀರಾವರಿ ಜಮೀನುಗಳಾಗಿ ಪರಿವರ್ತಿಸಿರುವ ಕತೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ ನಮ್ಮ ದೇಶದಲ್ಲಿ ಕೃಷಿ ಯೋಗ್ಯ ಭೂಮಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎನ್ನುವುದು ಕಟು ವಾಸ್ತವ. ಇದನ್ನು ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲಗಳ ಇಲಾಖೆ ಮತ್ತು ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಪ್ರಕಟಿಸಿರುವ ‘ವೆಸ್ಟ್‌ಲ್ಯಾಂಡ್ ಅಟ್ಲಾಸ್ 2019’ ರಲ್ಲಿ ನಮೂದಿಸಲಾಗಿದೆ. ಜನಸಂಖ್ಯಾ ಬೆಳವಣಿಗೆಯಿಂದಾಗಿ ಆಹಾರದ ಬೇಡಿಕೆಯೂ ಹೆಚ್ಚುತ್ತಿದೆ. ಹಾಗಾಗಿ, ಆಹಾರಕ್ಕಾಗಿ ಜಗತ್ತಿನ ಇತರ ದೇಶಗಳ ಮೇಲಿನ ನಮ್ಮ ಅವಲಂಬನೆಯೂ ಇದರಿಂದ ಹೆಚ್ಚಿದೆ.

ಪಂಜಾಬ್‌ನಂತಹ ಕೃಷಿ ಪ್ರಧಾನ ರಾಜ್ಯದಲ್ಲಿ 14,000 ಹೆಕ್ಟೇರ್ ಅಥವಾ ರಾಜ್ಯದ ಒಟ್ಟು ಜಮೀನಿನ 0.33 ಶೇ. ಭಾಗದಲ್ಲಿ ಕೃಷಿ ಮಾಡಲಾಗುತ್ತಿದೆ ಹಾಗೂ ಪಶ್ಚಿಮ ಬಂಗಾಳದಲ್ಲಿ 62,000 ಹೆಕ್ಟೇರ್ ಮತ್ತು ಕೇರಳದಲ್ಲಿ 42,000 ಹೆಕ್ಟೇರ್ ಜಮೀನು ಪಾಳುಬಿದ್ದಿದೆ.

ಅತ್ಯಂತ ಜನಭರಿತ ರಾಜ್ಯವಾದ ಉತ್ತರಪ್ರದೇಶಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಪರಮಾಣು ಬಾಂಬಿಗಿಂತಲೂ ಹೆಚ್ಚು ಅಪಾಯಕಾರಿ ಯಾಗಿವೆ. ಈ ರಾಜ್ಯದಲ್ಲಿ ಪ್ರತಿ ವರ್ಷ 48,000 ಹೆಕ್ಟೇರ್ ಕೃಷಿ ಭೂಮಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶಪಡಿಸಲಾಗುತ್ತಿದೆ. ಹೆಚ್ಚಿನ ಫಲವತ್ತಾದ ಕೃಷಿ ಭೂಮಿಯನ್ನು ಮನೆಗಳು, ಕಾರ್ಖಾನೆಗಳು ಮತ್ತು ರಸ್ತೆಗಳಿಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಕೃಷಿ ಭೂಮಿಯ ನಾಶದಿಂದಾಗಿ ತಲಾವಾರು ಆದಾಯ ಯಾಕೆ ಹೆಚ್ಚಾಗುತ್ತಿದೆ ಎನ್ನುವುದನ್ನು ಯಾರೂ ಯೋಚಿಸುತ್ತಿಲ್ಲ. ಆದರೆ ಅದೇ ಹೊತ್ತಿಗೆ ನಿರುದ್ಯೋಗ ದರವೂ ಹೆಚ್ಚುತ್ತಿದೆ ಎನ್ನುವುದನ್ನು ಗಮನಿಸಬೇಕು. ಎಮ್‌ಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸ ಹೆಚ್ಚುತ್ತಿರುವುದರಿಂದಾಗಿ, ಕೃಷಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ ಹಾಗೂ ಕೆಲಸದ ಅಲಭ್ಯತೆಯಿಂದಾಗಿ ರೈತರು ಕೃಷಿಯನ್ನು ತೊರೆಯುತ್ತಿದ್ದಾರೆ.

ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 14 ಕೋಟಿ ಹೆಕ್ಟೇರ್ ಕೃಷಿ ಭೂಮಿಯಿದೆ. 1992ರಲ್ಲಿ ಗ್ರಾಮೀಣ ಕುಟುಂಬಗಳು11.7 ಕೋಟಿ ಹೆಕ್ಟೇರ್ ಭೂಮಿಯನ್ನು ಹೊಂದಿದ್ದವು. ಅದು 2013ರ ವೇಳೆಗೆ 9.2 ಕೋಟಿ ಹೆಕ್ಟೇರ್‌ಗೆ ಇಳಿಯಿತು. ಇದೇ ಪ್ರವೃತ್ತಿ ಮುಂದುವರಿದರೆ, ಮೂರು ವರ್ಷಗಳ ಬಳಿಕ, ಕೃಷಿ ಜಮೀನಿನ ವಿಸ್ತೀರ್ಣ 8 ಕೋಟಿ ಹೆಕ್ಟೇರ್‌ಗೆ ಕುಸಿಯಲಿದೆ. ಹಾಗಾದರೆ, ಇಷ್ಟೊಂದು ಕೃಷಿ ಭೂಮಿ ಎಲ್ಲಿಗೆ ಹೋಗುತ್ತದೆ? ಕೃಷಿ ಜಮೀನುಗಳ ನಾಶಕ್ಕೆ ಮುಖ್ಯ ಕಾರಣಗಳೆಂದರೆ ಕೃಷಿ ವ್ಯಾಪಾರದ ಕೊರತೆ, ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗದಿರುವುದು, ಹವಾಮಾನ ಬದಲಾವಣೆ ಮುಂತಾದವುಗಳು. ಅಷ್ಟೇ ಅಲ್ಲ, ಅಭಿವೃದ್ಧಿಯ ಹೆಸರಿನಲ್ಲಿ 201.4 ಕೋಟಿ ಹೆಕ್ಟೇರ್ ಭೂಮಿಯನ್ನು ಉದ್ದೇಶಿತ ಆರು ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ಈ ಕಾರಿಡಾರ್‌ಗಳು ಈಗ ದೇಶಾದ್ಯಂತ ನಿರ್ಮಾಣಗೊಳ್ಳುತ್ತಿವೆ. ಈ ಭೂಮಿಯಲ್ಲಿ ಕೃಷಿ ಜಮೀನುಗಳೂ ಇವೆ.

2031ರ ವೇಳೆಗೆ 150 ಕೋಟಿ ತಲುಪುವ ಜನಸಂಖ್ಯೆಯನ್ನು ಹೊಂದಿರುವ ದೇಶವೊಂದು ಕೃಷಿ ಕ್ಷೇತ್ರದ ವಿಸ್ತರಣೆಯಿಲ್ಲದೆ ಆಹಾರ ಭದ್ರತೆಯನ್ನು ಹೇಗೆ ಸಾಧಿಸುತ್ತದೆ? ಈ ಬಗ್ಗೆ ನಾವೆಲ್ಲರೂ ಯೋಚಿಸಬೇಕಾಗಿದೆ.

ರೈತರ ಹಿತವನ್ನು ಕಾಯ್ದುಕೊಳ್ಳಲು ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ. ಬೀಜದ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಟಿ ಮುಂತಾದ ವಿದೇಶಿ ಬೀಜಗಳು ದುಬಾರಿಯಾಗಿವೆ. ಇಂತಹ ಬೀಜಗಳು ಅಧಿಕ ಇಳುವರಿ ನೀಡುತ್ತವೆ ಹಾಗೂ ಅವುಗಳನ್ನು ಕೀಟಗಳು ಬಾಧಿಸುವುದಿಲ್ಲ ಎನ್ನುವ ಹೇಳಿಕೆಗಳು ಸುಳ್ಳಾಗಿವೆ. ಇದರ ಹೊರತಾಗಿಯೂ, ವಿದೇಶಿ ಕುಲಾಂತರಿ ಬೀಜಗಳನ್ನು ಬಳಸುವಂತೆ ಸರಕಾರಿ ಅಧಿಕಾರಿಗಳು ರೈತರನ್ನು ಒತ್ತಾಯಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ವಿವೇಚನಾರಹಿತ ಬಳಕೆಯು ರೈತರು ಮತ್ತು ಅವರ ಹೊಲಗಳ ಮೇಲೆ ದುಷ್ಪರಿಣಾಮ ಬೀರಿವೆ. ಆದರೂ, ರೈತರು ಸಾಂಪ್ರದಾಯಿಕ ಕೃಷಿಯನ್ನು ತೊರೆದು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬುದಾಗಿ ಸರಕಾರ ಬಯಸುತ್ತದೆ. ಇದರ ಪರಿಣಾಮವಾಗಿ, ಕೃಷಿ ವೆಚ್ಚ ಹೆಚ್ಚುತ್ತಿದೆ ಹಾಗೂ ಲಾಭ ಕಡಿಮೆಯಾಗುತ್ತಿದೆ. ಈ ಪಿತೂರಿಯ ಹಿಂದೆ ಕೆಲವು ಹಣಕಾಸು ಸಂಸ್ಥೆಗಳು ಇವೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿನ ತಮ್ಮ ಮಾರುಕಟ್ಟೆಯನ್ನು ಬಲಗೊಳಿಸಲು ಅವುಗಳು ದಾರಿಗಳನ್ನು ಹುಡುಕುತ್ತಿವೆ. ವಾಸ್ತವವಾಗಿ, ರೈತರು ಯಾವಾಗಲೂ ಸಾಲಗಾರರಾಗಿಯೇ ಉಳಿಯುತ್ತಾರೆ.

ಆಂಧ್ರಪ್ರದೇಶದ ಶೇ. 82 ರೈತರು ಸಾಲದಲ್ಲಿದ್ದಾರೆ ಎನ್ನುವುದನ್ನು ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆಯ ಅಂಕಿ-ಅಂಶಗಳು ತೋರಿಸಿವೆ. ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಸಾಲದಲ್ಲಿರುವ ರೈತರ ಪ್ರಮಾಣ ಶೇ. 65. ಈ ರಾಜ್ಯಗಳಲ್ಲಿ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ತಮ್ಮ ಬೆಳೆಗಳಿಗೆ ಸರಿಯಾದ ಬೆಲೆ, ಉತ್ತಮ ಸಂಗ್ರಹ ವ್ಯವಸ್ಥೆ, ಮಾರುಕಟ್ಟೆ ಸೌಲಭ್ಯಗಳನ್ನು ನೀಡಿದರೆ, ಕೃಷಿ ಉತ್ಪನ್ನದ ವೆಚ್ಚದಲ್ಲಿ ಕಡಿತವಾದರೆ ಹಾಗೂ ಈ ಕ್ಷೇತ್ರಕ್ಕೆ ಬಂಡವಾಳಶಾಹಿಗಳ ಪ್ರವೇಶವನ್ನು ನಿಷೇಧಿಸಿದರೆ ದೇಶವು ರೈತರ ಹೊಟ್ಟೆಯನ್ನು ತುಂಬಿಸಬಹುದಾಗಿದೆ.

ಕೃಪೆ : theprint.in

Similar News