ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆ; ಮಹಿಳೆಯ ಕೊಲೆ
ಬೆಂಗಳೂರು: ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಆನೇಕಲ್ ತಾಲೂಕಿನ ಜಿಗಣಿ ಬಳಿ ಸೋಮವಾರ ರಾತ್ರಿ ನಡೆದಿದೆ.
ಅರ್ಚನಾ ರೆಡ್ಡಿ (38) ಹತ್ಯೆಯಾದ ಮಹಿಳೆಯಾಗಿದ್ದಾರೆ.
ಹತ್ಯೆಯಾಗಿರುವ ಅರ್ಚನಾ ಅವರು 8 ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಜಿಗಣಿಯಲ್ಲಿ ನೆಲೆಸಿರುವ ಅರ್ಚನಾ ಸಂಬಂಧಿಕರೊಬ್ಬ ಮನೆಗೆ ಭೇಟಿ ನೀಡಿ, ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರು ಹಾಗೂ ಸ್ಕೂಟರ್ ನಲ್ಲಿ ಬಂದಿರುವ ದುಷ್ಕರ್ಮಿಗಳು ಮಹಿಳೆಯನ್ನು ಹಿಂಬಾಲಿಸಿ ಕಾರನ್ನು ಅಡ್ಡಗಟ್ಟಿದ್ದಾರೆ. ನಂತರ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಅರ್ಚನಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.