ಬೆಂಗಳೂರು: ಲ್ಯಾಪ್‍ಟಾಪ್ ಕಳವು ಪ್ರಕರಣ; ರಾಮ್ ಜಿ ಗ್ಯಾಂಗ್ ನ 11 ಮಂದಿ ಬಂಧನ
ಬೆಂಗಳೂರು, ಡಿ.28: ಲ್ಯಾಪ್‍ಟಾಪ್ ಕಳವು ಮಾಡುತ್ತಿದ್ದ ಆರೋಪದಡಿ 11 ಮಂದಿಯನ್ನು ಮಾರತ್ತಹಳ್ಳಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ.
ತಮಿಳುನಾಡು ಮೂಲದ ರಜನಿಕಾಂತ್, ಸುಂದರ್, ಸೆಂದಿಲ್ ಕುಮಾರ್, ಗೋಪಾಲ, ವೆಂಕಟೇಶ್, ಸುಬ್ರಹ್ಮಣಿ, ಶಿವಕುಮಾರ್, ಮುರುಳಿ, ಮೂರ್ತಿ, ಮುರುಗನಂದಂ ಹಾಗು ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಸುಲಿಗೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ತಿರುಚ್ಚಿ ಸಮೀಪದ ರಾಮ್ ಜಿ ಗ್ಯಾಂಗ್‍ನ ಸದಸ್ಯರಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ರಾಮ್ ಜಿ ಗ್ಯಾಂಗ್ ತಮಿಳುನಾಡಿನ ಕೃಷ್ಣಗಿರಿ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಮಗಳೂರು ಹಾಗು ಉಡುಪಿ ಜಿಲ್ಲೆಗಳಲ್ಲಿ 42ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತರಿಂದ 7 ಲ್ಯಾಪ್‍ಟಾಪ್, 1 ಐಪ್ಯಾಡ್, 1 ಕ್ಯಾಮರಾ ಮತ್ತು 50 ಸಾವಿರ ರೂ. ನಗದು ಸೇರಿದಂತೆ ಏಳು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ದೇಶಾದ್ಯಂತ ಕಳ್ಳತನದಲ್ಲಿ ತೊಡಗಿದ್ದು ತಾವು ಭೇಟಿ ನೀಡುವ ಪ್ರದೇಶದಲ್ಲಿ ಇರುವುದು ಕೇವಲ 20 ರಿಂದ 25 ದಿನಗಳು ಮಾತ್ರ. ಈ ಅವಧಿಯಲ್ಲಿ ಕಳ್ಳತನ ಮಾಡಿ ತಮ್ಮೂರು ಸೇರಿ ಬಿಡುತ್ತಿದ್ದರು. ಇವರು ನಾಲ್ಕು ತಂಡಗಳಲ್ಲಿ ದುಷ್ಕೃತ್ಯಗಳಲ್ಲಿ ತೊಡಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.