ಮಸೀದಿಗಳ ಧ್ವನಿವರ್ಧಕಗಳ ಬಗೆಗಿನ ಗೊಂದಲ ನಿವಾರಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಶಾಸಕ ಝಮೀರ್ ಅಹ್ಮದ್ ಮನವಿ

Update: 2021-12-28 12:56 GMT

ಬೆಂಗಳೂರು, ಡಿ.28: ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಶಬ್ದ ಮಾಲಿನ್ಯವಾಗದಂತೆ ನಿಯಮಗಳಿಗೆ ಒಳಪಟ್ಟು ಬಳಸಲಾಗುತ್ತಿದೆ. ಅಧಿಕೃತ ಪ್ರಾಧಿಕಾರದಿಂದ ಮಾನ್ಯತೆ ಪಡೆದು ಅದರ ನಿಯಮಗಳ ಅನುಸಾರ ಶಬ್ದ ಮಾಲಿನ್ಯವಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಪ್ರಕರಣ ಬಾಕಿ ಇದ್ದರೂ ಕೆಲವು ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿ ಮಾಡಿ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗುತ್ತಿದೆ. ನೋಟಿಸ್ ಜಾರಿ ಮಾಡುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.

ಆದುದರಿಂದ, ಧರ್ಮ ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಇತ್ತೀಚೆಗೆ ಹರಡಿರುವ ಗೊಂದಲವನ್ನು ನಿವಾರಿಸಿ, ನೀಡಲಾಗಿರುವ ಪೊಲೀಸ್ ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಹಾಗೂ ಮಾನ್ಯತೆ ಪಡೆದ ಪ್ರಾಧಿಕಾರದ ನಿಯಮಗಳ ಪ್ರಕಾರ ಮಸೀದಿಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡುವಂತೆ ಝಮೀರ್ ಅಹ್ಮದ್ ಖಾನ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News