ನಿವೃತ್ತ ಅಸಂಘಟಿಕ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ಪುನರಾರಂಭಿಸುವಂತೆ ಒತ್ತಾಯಿಸಿ ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ
ಬೆಂಗಳೂರು, ಡಿ.28: ಬಿಬಿಎಂಪಿ ನಿವೃತ್ತಿ ಹೊಂದಿದ ಅಸಂಘಟಿಕ ಕಾರ್ಮಿಕರಿಗೆ ಮಧ್ಯಾಹ್ನ ಪೌಷ್ಟಿಕ ಆಹಾರವನ್ನು ನೀಡುತ್ತಿತ್ತು. ಆದರೆ 2020ರ ಮಾರ್ಚ್‍ನಲ್ಲಿ ಕೊರೋನ ನೆಪವೊಡ್ಡಿ ಈ ಯೋಜನೆಯನ್ನು ಕೈ ಬಿಟ್ಟಿದ್ದು, ಇದುವರೆಗೂ ಪುನರಾರಂಭಿಸಿಲ್ಲ ಎಂದು ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಂಪಮ್ಮ ಆರೋಪಿಸಿದ್ದಾರೆ.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಸರಕಾರವು ವಯೋವೃದ್ಧರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಹಾಗಾಗಿ ಕಳೆದ ವರ್ಷ ಕೊರೋನ ನೆಪವೊಡ್ಡಿ ವಯಸ್ಸಾದ ಕಾರ್ಮಿಕರಿಗೆ ನೀಡುತ್ತಿದ್ದ ಮಧ್ಯಾಹ್ನ ಬಿಸಿಯೂಟವನ್ನು ಸ್ಥಗಿತಗೊಳಿಸಿದೆ. ಆದರೆ ಕೊರೋನ ಹತೋಟಿಗೆ ಬಂದ ಬಳಿಕವೂ ಈ ಯೋಜನೆಯನ್ನು ಪುನರಾರಂಭಿಸಿಲ್ಲ. ಇದರಿಂದ ವಯಸ್ಸಾದ ಕಾರ್ಮಿಕರು ಅತಂತ್ರರಾಗಿದ್ದಾರೆ. ಸರಕಾರವು ಶೀಘ್ರವಾಗಿ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.
ಒಕ್ಕೂಟದ ಖಜಾಂಚಿ ಲಕ್ಷ್ಮಮ್ಮ ಮಾತನಾಡಿ, ಕೇವಲ 30 ವರ್ಷ ದುಡಿಯುವ ಸರಕಾರಿ ನೌಕರರು ನಿವೃತ್ತಿ ಹೊಂದಿದ ಬಳಿಕ ಸರಕಾರಿ ಸವಲತ್ತುಗಳನ್ನು ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳುತ್ತಾರೆ. ಹಾಗೆಯೇ 5 ವರ್ಷ ಜನಸೇವೆಯ ಹೆಸರಿನಲ್ಲಿ ಆಳುವ ಜನಪ್ರತಿನಿಧಿಗಳು ಮರು ಚುನಾವಣೆಯಲ್ಲಿ ಸೋತರೂ, ಸವಲತ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದರೆ ಅವರ ಸುಖಜೀವನಕ್ಕಾಗಿ ಕಟ್ಟಡಗಳನ್ನು ನಿರ್ಮಿಸಲು ಅಸಂಘಟಿತ ಕಾರ್ಮಿಕರು ಜೀವನ ಪೂರ್ತಿ ದುಡಿದರೂ, ವಯಸ್ಸಾದ ಬಳಿಕ ಸರಕಾರದಿಂದ ಸವಲತ್ತನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಸರಕಾರವು ಇಂದು ಕೇವಲ ಒಂದು ಹೊತ್ತು ಊಟಕ್ಕಾಗಿ ಜನರು ಪ್ರತಿಭಟನೆ ಮಾಡುವಂತಹ ವಾತಾವರಣವನ್ನು ನಿರ್ಮಿಸಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪ್ರಸ್ತುತ ನಮ್ಮನ್ನು ಆಳುತ್ತಿರುವ ಸರಕಾರವು ಜನ ಕಲ್ಯಾಣ ಯೋಜನೆಗಳನ್ನು ಸಂಪೂರ್ಣವಾಗಿ ಮರೆತಂತಿದೆ. ಎಲ್ಲವನ್ನು ಪ್ರತಿಭಟನೆಯ ಮೂಲಕವೇ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸರಾಕಾರವು ಅರ್ಥ ಮಾಡಿಕೊಳ್ಳಬೇಕು. ಮೊದಮೊದಲು ಕೊರೋನ ಕಾರಣದಿಂದಾಗಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾರಣ ನೀಡುತ್ತಿದ್ದ ಪಾಲಿಕೆಯ ಅಧಿಕಾರಿಗಳು, ಈಗ ಅನುಧಾನ ಮಂಜೂರು ಆಗಿಲ್ಲ ಎಂದು ತಿಳಿಸುತ್ತಿದ್ದಾರೆ. ಹೀಗೆ ಸರಕಾರವು ಯಾವುದೋ ಒಂದು ಕಾರಣವನ್ನು ಹೇಳಿ ಹಂತ ಹಂತವಾಗಿ ಯೋಜನೆಗಳನ್ನು ನಿಲ್ಲಿಸುತ್ತಿದೆ.
-ಶ್ರೀದೇವಿ ಸಜ್ಜನ್, ಮುಖ್ಯಸ್ಥೆ, ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ