ಕೆಆರ್ ಐಡಿಎಲ್‍ ಕಾಮಗಾರಿಗಳಲ್ಲಿ ಬಿಜೆಪಿ ಶಾಸಕ ಎಸ್.ರಘು ಕಮಿಷನ್ ದಂಧೆ: ಎಎಪಿಯ ಮೋಹನ್ ದಾಸರಿ ಆರೋಪ

Update: 2021-12-28 17:01 GMT
photo: @AAPBangalore
 

ಬೆಂಗಳೂರು, ಡಿ.28: ಸಿ.ವಿ.ರಾಮನ್ ನಗರದ ಕಾಮಗಾರಿಗಳನ್ನು ಅಂದಾಜು ಮೊತ್ತಕ್ಕಿಂತ ಶೇ.15ರಷ್ಟು ಕಡಿಮೆ ದರದಲ್ಲಿ ಟೆಂಡರ್ ನಿರ್ವಹಿಸಲು ಗುತ್ತಿಗೆದಾರರು ಮುಂದೆ ಬಂದಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆಯು ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಎಲ್ಲ ಕಾಮಗಾರಿಗಳನ್ನು ಕೆಆರ್ ಐಡಿಎಲ್‍ಗೆ ವಹಿಸಲಾಗಿದೆ. ಇದರ ಹಿಂದೆ ಶಾಸಕ ಎಸ್.ರಘು ಕಮಿಷನ್ ದಂಧೆ ಇದೆ ಎಂದು ಎಎಪಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.

ಮಂಗಳವಾರ ತಿಪ್ಪಸಂದ್ರ ಮುಖ್ಯರಸ್ತೆಯ ಮಹಾದ್ವಾರದ ಬಳಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯು ಸಿ.ವಿ.ರಾಮನ್ ನಗರದ ಒಟ್ಟು 3 ಕೋಟಿ ರೂ. ಮೊತ್ತದ ಆರು ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಅಂದಾಜು ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಗುತ್ತಿಗೆದಾರರು ಕಾಮಗಾರಿಗಳನ್ನು ನಿರ್ವಹಿಸಲು ಸಿದ್ಧರಿದ್ದರೂ, ಕೆಆರ್ ಐಡಿಎಲ್‍ಗೆ ಕಾಮಗಾರಿಗಳನ್ನು ವಹಿಸಲಾಗಿದೆ. ಕೆಆರ್ ಐಡಿಎಲ್ ಕಾಮಗಾರಿಯಲ್ಲಿ ಶಾಸಕರು ತಮ್ಮ ಹಿಂಬಾಲಕರಿಂದಲೇ ಕೆಲಸ ಮಾಡಿಸಿ ದುಡ್ಡು ಹೊಡೆದಿದ್ದಾರೆ ಎಂದರು. 

ಕೆಆರ್ ಐಡಿಎಲ್‍ಗೆ ಕಾಮಗಾರಿಯನ್ನು ವಹಿಸದೆ, ಗುತ್ತಿಗೆದಾರರಿಗೆ ನೀಡಿದ್ದರೆ ಈ ಪೈಕಿ ಎರಡು ಕಾಮಗಾರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಗುತ್ತಿಗೆದಾರರಿಗೆ ಸಿಗಬೇಕಿತ್ತು. ಆದರೆ ಕಾಮಗಾರಿಗಳನ್ನು ಕೆಆರ್‍ಐಡಿಎಲ್‍ಗೆ ನೀಡಿ ದಲಿತರಿಗೆ ಅನ್ಯಾಯ ಮಾಡಿದಂತಾಗಿದೆ. ರಾಜ್ಯ ಸರಕಾರವು ಇಲಾಖೆಗಳ ಎಸ್‍ಸಿಪಿ, ಟಿಎಸ್‍ಪಿ ಅನುದಾನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕ್ಷೇತ್ರದ ನಾಯಕರುಗಳಾದ ಆನಂದ್ ವಾಸುದೇವನ್, ಜಗದೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆ ಹತ್ತಿಕ್ಕಲು ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ: ಶಾಸಕ ಎಸ್.ರಘು ಕಮಿಷನ್ ದಂಧೆ ಖಂಡಿಸಿ ತಿಪ್ಪಸಂದ್ರ ಮುಖ್ಯರಸ್ತೆಯ ಮಹಾದ್ವಾರದ ಬಳಿ ಆಮ್ ಆದ್ಮಿ ಪಾರ್ಟಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ, ಠಾಣೆಯ ಎದುರೇ ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ನಡೆಸಿದರು. ಇದರಿಂದ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಗುಂಪು ಘರ್ಷಣೆ ನಡೆದಿದೆ. ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಮಾಧ್ಯಮದವರ ಕ್ಯಾಮೆರಾಗಳನ್ನು ಕಸಿದುಕೊಂಡರು. ಪ್ರತಿಭಟನೆಗೆ ಸಂಬಂಧಿಸಿ ಎಎಪಿ ಮುಖಂಡ ಮೋಹನ್ ದಾಸರಿ, ಆನಂದ್ ವಾಸುದೇವನ್, ಜಗದೀಶ್ ವಿ ಸದಂ, ವಿನ್ಸೆಂಟ್ ಮತ್ತಿತರರನ್ನು ಪೊಲೀಸರನ್ನು ಬಂಧಿಸಿದ್ದಾರೆ ಎಂದು ಎಎಪಿ ಪ್ರಕಟನೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News