ಕೃಷ್ಣಮೃಗದ ಕೊಂಬು, ಚರ್ಮ ಮಾರಾಟ: ಇಬ್ಬರು ಸೆರೆ
Update: 2021-12-29 21:44 IST
ಬೆಂಗಳೂರು, ಡಿ.29: ಅಳಿವಿನಂಚಿನಲ್ಲಿರುವ ಕೃಷ್ಣಮೃಗದ ಕೊಂಬು ಮತ್ತು ಚರ್ಮವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಲೊಕೇಶ್ ಮತ್ತು ಎರ್ರಿಸ್ವಾಮಿ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಎರ್ರಿಸ್ವಾಮಿ ಎಂಬಾತ ಆಂಧ್ರಪ್ರದೇಶದ ಅನಂತ್‍ಪುರ ಜಿಲ್ಲೆಯ ಪಾಲೂರ್ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗಗಳನ್ನು ಕೊಂದು, ಅವುಗಳ ಕೊಂಬು ಮತ್ತು ಚರ್ಮವನ್ನು ಬೆಂಗಳೂರಿಗೆ ತಂದಿದ್ದ. ಬಳಿಕ ನಗರದಲ್ಲಿರುವ ಸ್ನೇಹಿತ ಲೋಕೇಶ್ ಜೊತೆ ಸೇರಿ ಮಾರಾಟ ಮಾಡಲು ಯತ್ನಿಸಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಜೆ.ಪಿ.ನಗರದ ಸಾರಕ್ಕಿ ಬಳಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ 2 ಕೃಷ್ಣಮೃಗದ ಚರ್ಮ ಹಾಗೂ 4 ಕೊಂಬುಗಳನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.