ನೆಟ್‌ಫ್ಲಿಕ್ಸ್‌ನಲ್ಲಿ ಅಪ್ಪಳಿಸಿರುವ ‘ದಿ ಸೈಲೆಂಟ್ ಸೀ’

Update: 2021-12-30 06:32 GMT

‘ದಿ ಸೈಲೆಂಟ್ ಸೀ’ ಸರಣಿಯ ತೆರೆಗಳು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಮೊರೆಯುತ್ತಿವೆ. ಸ್ಕ್ವಿಡ್ ಗೇಮ್‌ನ ಬಳಿಕ ಬಂದ ಇನ್ನೊಂದು ಕುತೂಹಲಕಾರಿ, ಥ್ರಿಲ್ಲರ್ ಸರಣಿ ಇದು. ಇಡೀ ವಿಶ್ವ ನೀರಿಗಾಗಿ ತತ್ತರಿಸುತ್ತಿರುವ ಕಾಲ. ವಿಶ್ವದ ಬಹುತೇಕ ನದಿಗಳು ಬತ್ತಿ ಹೋಗಿವೆ. ಇರುವ ಅಳಿದುಳಿದ ನದಿಗಳು ಕೊಳೆತು ಹೋಗಿವೆ. ಸಾಗರ ಇಳಿಮುಖವಾಗಿದೆ. ಜನರು ಎಟಿಎಂ ಕಾರ್ಡ್ ಹಿಡಿದು, ನೀರಿಗಾಗಿ ಸರದಿಯಲ್ಲಿ ನಿಂತಿದ್ದಾರೆ.

ಒಳ್ಳೆಯ ದರ್ಜೆಯ ನೀರು, ಕಳಪೆ ನೀರು ಎನ್ನುವ ವಿಭಾಗೀಕರಣವೂ ನಡೆದಿದೆ. ಗೋಲ್ಡನ್ ಕಾರ್ಡ್ ಇದ್ದವರಿಗೆ ಜೀವನ ಪೂರ್ತಿ ಒಳ್ಳೆಯ ನೀರು ಒದಗಿಸುವ ವ್ಯವಸ್ಥೆಗಳೂ ಇವೆ. ಶ್ರೀಸಾಮಾನ್ಯರು ಪ್ರಥಮ ದರ್ಜೆಯ ನೀರಿನ ಹಕ್ಕನ್ನು ಕಳೆದುಕೊಂಡಿದ್ದಾರೆ. ಜನರು ಸೀಮೆ ಎಣ್ಣೆಗೆ ಕ್ಯೂ ನಿಂತಂತೆ ಕಾರ್ಡ್ ಹಿಡಿದು ನೀರು ಸರಬರಾಜು ಕೇಂದ್ರದ ಮುಂದೆ ನೀರಿಗಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ‘‘ನಿಮ್ಮ ಮಗುವಿನ ಆರೋಗ್ಯ ಸುಧಾರಣೆಯಾಗಬೇಕಾದರೆ ಪ್ರಥಮ ದರ್ಜೆಯ ನೀರಿನ ಅಗತ್ಯವಿದೆ. ತಕ್ಷಣ ವ್ಯವಸ್ಥೆ ಮಾಡಿ’’ ಎಂದು ಪಾಲಕರೊಂದಿಗೆ ಹೇಳುವಾಗ ಅವರು ಅಸಹಾಯಕರಾಗುತ್ತಾರೆ.

ಯಾಕೆಂದರೆ ಪ್ರಥಮ ದರ್ಜೆಯ ಶುದ್ಧ ನೀರು ಅಷ್ಟೊಂದು ದುಬಾರಿ. ಅದು ಕೈಗೆಟಕುವಂತಹದಲ್ಲ. ಇದೇ ಹೊತ್ತಿಗೆ, ರಿಪಬ್ಲಿಕ್ ಆಫ್ ಕೊರಿಯಾದ ಬಾಹ್ಯಾಕಾಶ ವಿಭಾಗ, ಚಂದ್ರನ ಕಡೆಗೊಂದು ತಂಡವನ್ನು ಕಳುಹಿಸುತ್ತದೆ. ಐದು ವರ್ಷಗಳ ಹಿಂದೆ ನಿಗೂಢ ಅವಘಡದಿಂದ 117 ಸಿಬ್ಬಂದಿ ಮೃತಪಟ್ಟ ಬಳಿಕ ಮುಚ್ಚಲ್ಪಟ್ಟ ಚಂದ್ರನ ಮೇಲಿರುವ ಬಾಲ್‌ಹೇ ಲೂನಾರ್ ರಿಸರ್ಚ್ ಸ್ಟೇಶನ್‌ನಲ್ಲಿರುವ ಒಂದು ಅಪಾಯಕಾರಿ ‘ಸ್ಯಾಂಪಲ್ ಅಥವಾ ಮಾದರಿ’ಯನ್ನು ಭೂಮಿಗೆ ತರುವುದು ಅವರ ಮುಂದಿರುವ ಸವಾಲು. ಈ ತಂಡದ ನೇತೃತ್ವವನ್ನು ಕ್ಯಾಪ್ಟನ್ ಹಾನ್ ವಹಿಸಿಕೊಂಡಿದ್ದಾನೆ. ಈ ತಂಡದಲ್ಲಿ ಪ್ರಮುಖ ಜೈವಿಕ ವಿಜ್ಞಾನಿಗಳಲ್ಲಿ ಒಬ್ಬಳಾಗಿರುವ ಡಾ. ಸಾಂಗ್ ಕೂಡ ಸೇರಿದ್ದಾಳೆ. ಐದು ವರ್ಷಗಳ ಹಿಂದೆ ಲೂನಾರ್ ಸ್ಟೇಶನ್‌ನಲ್ಲಿ ನಡೆದ ದುರಂತದಲ್ಲಿ ಈಕೆಯ ಸೋದರಿಯೂ ಮೃತಪಟ್ಟಿರುತ್ತಾಳೆ. ಸ್ಯಾಂಪಲ್‌ನ್ನು ಭೂಮಿಗೆ ತರುವುದಷ್ಟೇ ಅಲ್ಲ, ತನ್ನ ಸೋದರಿಯ ಸಾವಿನ ನಿಗೂಢತೆಯನ್ನು ತಿಳಿದುಕೊಳ್ಳುವುದು ಕೂಡ ಆಕೆಯ ಉದ್ದೇಶವಾಗಿರುತ್ತದೆ. ಇದೇ ಸಂದರ್ಭದಲ್ಲಿ ಇಡೀ ತಂಡಕ್ಕೆ ತಾವು ಏನನ್ನು ತರಲು ಹೊರಟಿದ್ದೇವೆ, ಅದರ ಉದ್ದೇಶವೇನು? ಅದು ಅಪಾಯಕಾರಿಯಾದರೆ ಯಾಕೆ? ಎಂಬಿತ್ಯಾದಿಗಳ ಬಗ್ಗೆ ಯಾರಿಗೂ ಮಾಹಿತಿಗಳಿರುವುದಿಲ್ಲ. ಬಾಹ್ಯಾಕಾಶ ಮುಖ್ಯಸ್ಥರು ಆ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುತ್ತಾರೆ.

ದೂರದ ಚಂದ್ರನ ಮೇಲಿರುವ ಕಲೆಯನ್ನು ನಾವು ‘ಮೊಲ’ವೆಂದು ಭಾವಿಸಿದ್ದೇವೆ. ನಿಜಕ್ಕೂ ಅದೇನು? ಎನ್ನುವುದನ್ನು ಇಡೀ ಸರಣಿಯಲ್ಲಿ ಅತ್ಯಂತ ಕುತೂಹಲಕಾರಿಯಾಗಿ ನಿರೂಪಿಸಲಾಗಿದೆ. ಮನಿ ಹೈಸ್ಟ್, ಸ್ಕ್ವಿಡ್ ಗೇಮ್ ಬಳಿಕ, ಇದೀಗ ಈ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸುದ್ದಿ ಮಾಡುತ್ತಿದೆ. ಮನುಷ್ಯನ ಸ್ವಾರ್ಥ, ಕ್ರೌರ್ಯ, ನೀರು ಮತ್ತು ರಕ್ತಕ್ಕಿರುವ ಸಂಬಂಧ, ಮನುಷ್ಯನ ಎದೆಯೊಳಗೂ ಬತ್ತಿ ಹೋಗಿರುವ ಮಾನವೀಯತೆಯ ಜೀವ ದ್ರವ್ಯ ಮತ್ತು ಅದರ ಪರಿಣಾಮಗಳನ್ನು ಕಟ್ಟಿಕೊಡುವ ಈ ಸರಣಿ ವಿಜ್ಞಾನ, ಫ್ಯಾಂಟಸಿ, ವಾಸ್ತವಗಳ ಸಮ್ಮಿಶ್ರಣವಾಗಿವೆ. ಭವಿಷ್ಯದಲ್ಲಿ ಎಂದಾದರೂ ನಡೆಯಬಹುದಾದ ಸಂಗತಿಗಳನ್ನು ಊಹಿಸಿ ನಿರ್ದೇಶಕ ಚೋಯ್ ಹಾಂಗ್ ಯೋಂಗ್ ನಿರೂಪಿಸಿದ್ದಾರೆ.

‘ಸ್ಕ್ವಿಡ್ ಗೇಮ್’ನ ಕೆಲವು ತಂತ್ರಗಳು ಇಲ್ಲೂ ಬಳಕೆಯಾಗಿವೆ. ಬಲಾಢ್ಯರು ಗೆಲ್ಲುವುದಿಲ್ಲ. ಅಂತಿಮವಾಗಿ ಮನುಷ್ಯತ್ವವೇ ಮೇಲುಗೈ ಸಾಧಿಸುತ್ತದೆ. ದಿನ ಬಳಕೆಯಲ್ಲಿ ನಾವು ಬಳಸುವ ನೀರಿನ ಮಹತ್ವವನ್ನು ಅತ್ಯಂತ ಪರಿಣಾಮಕಾರಿಯಾಗಿ ಮನದಟ್ಟು ಮಾಡುವ ಸರಣಿ ಇದು. ನಮ್ಮ ಬೊಗಸೆಯಿಂದ ಸೋರಿ ಹೋಗುವ ನೀರು, ಹೇಗೆ ಮುಂದೊಂದು ದಿನ ಮನುಕುಲದ ಪಾಲಿಗೆ ಮರಣಶಾಸನವಾಗಲಿದೆ ಎನ್ನುವುದನ್ನು ಮನಮುಟ್ಟುವಂತೆ ಈ ಸರಣಿಯಲ್ಲಿ ಹೇಳಲಾಗಿದೆ.

ಎ.ಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News