ನೋವು-ನಲಿವುಗಳ ಹಾಡಿನ ‘ಆರ್ಕೆಸ್ಟ್ರಾ’

Update: 2023-06-30 10:50 GMT

ಆರ್ಕೆಸ್ಟ್ರಾ. ಸಾಮಾನ್ಯವಾಗಿ ಆರ್ಕೆಸ್ಟ್ರಾ ಅಂದರೆ ಎಲ್ಲರಿಗೂ ಒಂದಷ್ಟು ಮನರಂಜನೆಯ ಖುಷಿ ನೆನಪಾಗುತ್ತದೆ. ಅದೇ ಆರ್ಕೆಸ್ಟ್ರಾದಲ್ಲಿ ಎಷ್ಟೋ ಪ್ರೇಮಕಥೆಗಳು ಅರಳುತ್ತವೆ. ಎಷ್ಟೋ ಕಥೆಗಳು ಅಲ್ಲೇ ಮುಗಿದು ಹೋಗುತ್ತವೆ. ಆದರೆ ಆರ್ಕೆಸ್ಟ್ರಾದಲ್ಲಿ ಹಾಡುವ ಕಲಾವಿದರ ಬದುಕು ಯಾರಿಗೂ ಕಾಣುವುದೇ ಇಲ್ಲ. ಅಂತಹ ಬದುಕನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದೆ ‘ಆರ್ಕೆಸ್ಟ್ರಾ ಮೈಸೂರು’ ಚಿತ್ರತಂಡ. ಈ ವಾರ ರಿಲೀಸ್ ಆದ ಈ ಸಿನೆಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನೆಮಾದಲ್ಲಿ ಒಂದು ಎಮೋಷನ್ ಇದೆ. ಬದುಕಿನ ಹೋರಾಟವಿದೆ. ಹಾಡುಗಾರರ ಬದುಕು ಬವಣೆ ಎಲ್ಲವೂ ಈ ಚಿತ್ರದಲ್ಲಿದೆ.

ಸಂಗೀತವನ್ನೇ ನಂಬಿಕೊಂಡು ಬದುಕು ಅರಸುತ್ತಾ ಹೊರಡುವವರ ಕಥೆಯೇ ಈ ಆರ್ಕೆಸ್ಟ್ರಾ ಮೈಸೂರು ಸಿನೆಮಾ. ಬಣ್ಣ ಬಣ್ಣವಾಗಿ ಕಾಣಿಸುವವರ ಬದುಕಿನ ಹಿಂದೆ ಎಂಥ ಕಷ್ಟಗಳಿರುತ್ತವೆ, ಆ ಬದುಕು ಕಟ್ಟಿಕೊಳ್ಳಲು ಅವರು ಎಂಥ ಪರಿಸ್ಥಿತಿಗಳನ್ನು ಎದುರಿಸಿರುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಸುನೀಲ್ ಮೈಸೂರು. ಸಂಪೂರ್ಣವಾಗಿ ಮೈಸೂರಿನವರೇ ಸೇರಿಕೊಂಡು ಈ ಚಿತ್ರ ಮಾಡಿದ್ದು, ಆ ಮಣ್ಣಿನ ಸಂಸ್ಕೃತಿ, ಆರ್ಕೆಸ್ಟ್ರಾದ ಒಡನಾಟ, ಅಲ್ಲಿನ ಜೀವನಶೈಲಿ ಎಲ್ಲವೂ ಇಲ್ಲಿ ಬಂದುಹೋಗುತ್ತದೆ.

ಇದು ಸಿನೆಮಾ ಅನ್ನುವುದಕ್ಕಿಂತ ಒಂದು ಅನುಭವ ಅಂದರೇನೇ ಚೆನ್ನಾಗಿರುತ್ತದೆ. ಯಾಕೆಂದರೆ, ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವವರ ಅನುಭವವನ್ನೇ ಇಲ್ಲಿ ಸಿನೆಮಾ ಮಾಡಿದ್ದಾರೆ ನಿರ್ದೇಶಕರು. ಕಥೆ ಸಾಮಾನ್ಯ ಅನಿಸಿದರೂ, ಅದನ್ನು ಮನಮುಟ್ಟುವಂತೆ ನಿರೂಪಣೆ ಮಾಡಿದ್ದಾರೆ. ಪಕ್ಕಾ ಮೈಸೂರು ಸಿನೆಮಾ ಆಗಿರುವುದರಿಂದ, ಅಲ್ಲಿನ ಭಾಷೆ, ಅಲ್ಲಿನ ಜೀವನಶೈಲಿ, ಆರ್ಕೆಸ್ಟ್ರಾಕ್ಕೆ ಅಲ್ಲಿ ಸಿಗುವ ಮನ್ನಣೆ, ಅದೇ ಸ್ಟೇಜಿನಲ್ಲಿ ಅರಳುವ ಬದುಕುಗಳು ಎಲ್ಲವನ್ನೂ ಈ ಸಿನೆಮಾದಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ. ಕಥೆಯಲ್ಲಿ ಒಂದು ತಾಜಾತನ ಇದೆ. ಜೊತೆಗೆ ಉತ್ಸಾಹವೂ ಎದ್ದು ಕಾಣುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕರು ಜಾಣ್ಮೆ ಪ್ರದರ್ಶಿಸಿದ್ದಾರೆ.

ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರೆಲ್ಲರೂ ಪಾತ್ರಕ್ಕೆ ಜೀವತುಂಬಿದ್ದಾರೆ. ಸಿನೆಮಾ ನೋಡುವ ಪ್ರೇಕ್ಷಕರಿಗೆ ತಟ್ಟುವ ಹಾಗೆ ಅಭಿನಯಿಸಿದ್ದಾರೆ. ದಿಲೀಪ್ ರಾಜ್, ಮಹದೇವ್ ಪ್ರಸಾದ್, ರಾಜಲಕ್ಷ್ಮೀ ಸೇರಿದಂತೆ ಕಲಾವಿದರೆಲ್ಲರ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಕೆಸ್ಟ್ರಾ, ಅಲ್ಲಿನ ಹಾಡುಗಳು, ಆ ಪರಿಸರವನ್ನು ಇಷ್ಟಪಡುವ ಪ್ರೇಕ್ಷಕರಿಗೆ ಸಿನೆಮಾ ಇಷ್ಟವಾಗುತ್ತದೆ. ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆಯೂ ಮಾಡುತ್ತದೆ.

ಚಿತ್ರ: ಆರ್ಕೆಸ್ಟ್ರಾ ಮೈಸೂರು

 ತಾರಾಗಣ: ದಿಲೀಪ್ ರಾಜ್, ಮಹದೇವ್ ಪ್ರಸಾದ್, ನಾಗಭೂಷಣ್, ಸಂಚು, ರಾಜಲಕ್ಷ್ಮೀ

ನಿರ್ದೇಶಕ: ಸುನೀಲ್ ಮೈಸೂರು

ನಿರ್ಮಾಪಕ: ಅಶ್ವಿನ್

ಸಂಗೀತ ನಿರ್ದೇಶಕ: ರಘು ದೀಕ್ಷಿತ್

Similar News