ಹೆಣ್ಣು ಅಬಲೆಯಲ್ಲ ಎನ್ನುವ ‘ವೇದ’

ಸಿನೆಮಾತು

Update: 2022-12-25 09:08 GMT

ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ, ವಿತ್ ಮೆಸೇಜ್ = ವೇದ. ಹೌದು ಈ ವಾರ ರಿಲೀಸ್ ಆದ ವೇದ ಸಿನೆಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ವೇದ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನೆಮಾ. ಅದರಲ್ಲೂ ಅವರ ಹೋಂ ಬ್ಯಾನರ್‌ನಲ್ಲಿ ಮೂಡಿಬಂದಿರುವ ಚಿತ್ರ. ಇಲ್ಲಿ ಶಿವರಾಜ್ ಕುಮಾರ್ ಅವರಿಗೆ ಜಾಸ್ತಿ ಬಿಲ್ಡಪ್ ಇರುತ್ತದೆ, ಹೆಚ್ಚು ಸ್ಕ್ರೀನ್ ಸ್ಪೇಸ್ ಇರುತ್ತದೆ ಅಂದುಕೊಂಡಿದ್ದರೆ ಆ ಊಹೆ ತಪ್ಪಾಗುತ್ತದೆ. ಯಾಕೆಂದರೆ ಇದು ಅಪ್ಪಟ ಹೆಣ್ಣುಮಕ್ಕಳ ಚಿತ್ರ ಅಂದರೇನೇ ಸರಿ.

ವ್ಯಾಲ್ಯೂ ಫಾರ್ ವಿಮೆನ್ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ. ಮಹಿಳೆಯರ ಮೇಲಿನ ದೌರ್ಜನ್ಯದ ಸುತ್ತ ಈ ಕಥೆ ಸುತ್ತುತ್ತದೆ. ವಿಶೇಷವೆಂದರೆ ಇಲ್ಲಿ ಹೆಣ್ಣುಮಕ್ಕಳೇ ತಮಗಾದ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಯಾರೋ ಬಂದು ಕಾಪಾಡುತ್ತಾರೆಂಬ ಭ್ರಮೆಯಿಂದ ಹೊರಬಂದು ಅನ್ಯಾಯದ ವಿರುದ್ಧ ದಂಗೆಯೇಳುತ್ತಾರೆ. ಅತ್ಯಾಚಾರಿಗಳನ್ನು ರಕ್ತದ ಮಡುವಿಗೆ ತಳ್ಳುತ್ತಾರೆ. ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಇಂತಹ ಒಂದು ಸಬ್ಜೆಕ್ಟ್, ಇಂತಹ ಒಂದು ಮೆಸೇಜ್ ಇರುವ ಸಿನೆಮಾ ಬಂದಿರುವುದು ಸೂಕ್ತವೇ ಆಗಿದೆ.

ಇದು ಶಿವರಾಜ್ ಕುಮಾರ್ ಸಿನೆಮಾ ಆದರೂ ಮಹಿಳಾ ದರ್ಬಾರ್ ಜೋರಾಗಿದೆ. ಸಿನೆಮಾದ ಕಥೆ ಸರಳ. ಅದರೆ ಆ ಕಥೆಯ ಹಿಂದಿರುವ ಉದ್ದೇಶ, ಆಕ್ರೋಶ ಎಲ್ಲವೂ ಅಷ್ಟು ಸರಳವಾಗಿಲ್ಲ. ಮಗಳ ಮೇಲಿನ ದೌರ್ಜನ್ಯಕ್ಕೆ ಸೇಡು ತೀರಿಸಿಕೊಳ್ಳುವ ಅಪ್ಪನ ಕಥೆ ಇಲ್ಲಿದೆ. ಹಾಗಂತ ಇಲ್ಲಿ ಅಪ್ಪನೇರವಾಗಿ ಹೋರಾಟಕ್ಕೆ ಇಳಿಯುವುದಿಲ್ಲ. ಅಂತಹ ಹೋರಾಟ ಮಾಡುವ ಶಕ್ತಿಯನ್ನು ಇಡೀ ಸ್ತ್ರೀ ಕುಲಕ್ಕೆ ತುಂಬುವ ಕೆಲಸ ಮಾಡುತ್ತಾನೆ ನಾಯಕ ವೇದ.

ಅನುಮತಿ ಇಲ್ಲದೆ ಮೈಮುಟ್ಟಿದವನ ಮೈ ಕೈ ಮುರಿಯಲು ಮಹಿಳೆಯರಿಗೆ ಯಾರ ಅನುಮತಿಯೂ ಬೇಕಿಲ್ಲ ಎನ್ನುವುದೇ ನಾಯಕ ವೇದ ನಂಬಿಕೆ. ವೇದ ಪಾತ್ರದಲ್ಲಿ ಶಿವರಾಜ್ ಕುಮಾರ್ ಸಖತ್ತಾಗಿಯೇ ಮಿಂಚಿದ್ದಾರೆ. ಒಮ್ಮಾಮ್ಮೆ ಗಾಂಭೀರ್ಯ, ಮತ್ತೊಮ್ಮೆ ತುಂಟತನ, ಕೆಲವೊಮ್ಮೆ ಅಮಾಯಕತೆ, ಖುಷಿಯಾದಾಗ ಹಾಡು, ಡ್ಯಾನ್ಸ್, ಕೋಪ ಬಂದಾಗ ಫೈಟ್ ಎಲ್ಲಾ ಭಾವನೆಗಳಲ್ಲೂ ಶಿವರಾಜ್ ಕುಮಾರ್ ತಮ್ಮ ಅಸಲಿಯತ್ತು ತೋರಿಸಿದ್ದಾರೆ. ಇಲ್ಲಿರುವ ಮಹಿಳಾ ಪಾತ್ರಗಳೂ ಅಷ್ಟೇ ಪವರ್‌ಫುಲ್ ಆಗಿವೆ.

ನಾಯಕಿಯಾಗಿ ಗಾನವಿ, ನಾಯಕನ ಮಗಳ ಪಾತ್ರದಲ್ಲಿ ನಟಿಸಿರುವ ಅದಿತಿ ಸಾಗರ್ ಪಾತ್ರವನ್ನು ಆಕ್ರಮಿಸಿರುವ ರೀತಿ ಗಮನ ಸೆಳೆಯುತ್ತದೆ. ವೇಶ್ಯೆಯ ಪಾತ್ರದಲ್ಲಿ ಶ್ವೇತಾ ಚೆಂಗಪ್ಪ, ಜೊತೆಗೆ ಉಮಾಶ್ರೀ ಅವರ ಪಾತ್ರ ಸಿನೆಮಾದ ಹೈಲೆಟ್ಸ್. ಅದಿತಿ ಸಾಗರ್ ಅವರ ಡೈಲಾಗ್‌ಗಳು ಕಡಿಮೆಯಾದ್ರೂ, ಆ ಪಾತ್ರಕ್ಕೆ ಬೇಕಿರುವಂತೆ ಅವರು ತೋರಿಸಿರುವ ರೋಷ, ಆವೇಶಕ್ಕೆ ಪ್ರೇಕ್ಷಕರೇ ನಡುಗಿ ಹೋಗುತ್ತಾರೆ. ಅರ್ಜುನ್ ಜನ್ಯ ಸಂಗೀತ ಸಿನೆಮಾಕ್ಕೆ ಹೆಚ್ಚು ಬಲ ಕೊಟ್ಟಿದೆ. ಹಿನ್ನೆಲೆ ಸಂಗೀತ ಕೂಡ ಚಿತ್ರವನ್ನು ಎತ್ತಿಹಿಡಿಯುತ್ತದೆ.

ಹಾಗಂತ ಸಿನೆಮಾದಲ್ಲಿ ಮೈನಸ್ ಪಾಯಿಂಟ್‌ಗಳಿಲ್ಲ ಅಂತಲ್ಲ. ಇಲ್ಲೂ ಕೆಲವು ಸನ್ನಿವೇಶಗಳು, ಡೈಲಾಗ್‌ಗಳು ಬೋರ್ ಹೊಡೆಸುತ್ತವೆ. ಕೆಲವು ಸನ್ನಿವೇಶಗಳನ್ನಂತೂ ಪ್ರೇಕ್ಷಕರು ಮೊದಲೇ ಊಹಿಸಿಬಿಡಬಹುದು, ಹಾಗೆ ಸುಳಿವು ಬಿಟ್ಟುಕೊಡುವ ಸಡಿಲತೆ ಇದೆ. ನಿರ್ದೇಶಕ ಹರ್ಷ ಸಿನೆಮಾವನ್ನು ಅಚ್ಚುಕಟ್ಟಾದ ಫ್ರೇಮ್‌ನಲ್ಲಿ ಹೊರತಂದಿದ್ದಾರೆ. ಡೈಲಾಗ್‌ಗಳು ಚುರುಕಾಗಿವೆ. ಕೊನೆಯಲ್ಲಿ ನಾಯಕ ಹೇಳುವ ಡೈಲಾಗ್ ಪ್ರೇಕ್ಷಕರ ಮನ ಮುಟ್ಟುತ್ತದೆ. ಇಂಟ್ರೊಡಕ್ಷನ್‌ನಿಂದ, ಇಂಟರ್‌ವಲ್‌ವರೆಗೂ ಸಿನೆಮಾ ಅಲ್ಟಿಮೇಟ್ ಅನಿಸುತ್ತದೆ. ಮಧ್ಯಂತರದ ನಂತರ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುವಂತಿದೆ.

ಚಿತ್ರ: ವೇದ

ನಿರ್ದೇಶನ: ಎ. ಹರ್ಷ

ತಾರಾಗಣ: ಶಿವರಾಜ್ ಕುಮಾರ್, ಗಾನವಿ, ಉಮಾಶ್ರೀ, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ

ಸಂಗೀತ ನಿರ್ದೇಶನ: ಅರ್ಜುನ್ ಜನ್ಯ

Similar News