ಸಿಂಗಲ್ ಸುಂದರನ ಮ್ಯಾರೇಜ್ ಕಹಾನಿ

Update: 2023-06-30 10:48 GMT

ನಗಿಸುತ್ತಾ ನಗಿಸುತ್ತಾ ಎಲ್ಲರ ಕಣ್ಣಂಚಲ್ಲೂ ನೀರು ತರಿಸುವುದರಲ್ಲಿ ನವರಸ ನಾಯಕ ಜಗ್ಗೇಶ್ ತುಂಬ ಪ್ರಸಿದ್ಧರು. ಕಾಮಿಡಿ ಸಿನೆಮಾಗಳನ್ನು ಇಷ್ಟಪಟ್ಟು, ಥಿಯೇಟರ್‌ಗೆ ಜಗ್ಗೇಶ್ ಸಿನೆಮಾಗಳನ್ನು ನೋಡಲು ಹೋಗುವ ಪ್ರೇಕ್ಷಕರು ಭಾವುಕರಾಗಿಯೇ ಥಿಯೇಟರ್‌ನಿಂದ ಹೊರಗೆ ಬರುತ್ತಾರೆ. ಕಾಮಿಡಿ ಜೊತೆಗೆ ಸೆಂಟಿಮೆಂಟ್ ಬೆರೆಸಿ ನಟಿಸುವುದರಲ್ಲಿ ಜಗ್ಗೇಶ್ ನಿಪುಣರು. ಅಂಥ ನವರಸ ನಾಯಕ ಈಗ ಮತ್ತೆ ಕಾಮಿಡಿ ಸಿನೆಮಾದ ಜೊತೆ ಥಿಯೇಟರ್‌ಗೆ ಬಂದಿದ್ದಾರೆ. ‘ರಾಘವೇಂದ್ರ ಸ್ಟೋರ್ಸ್’ನಲ್ಲಿ ಕಾಮಿಡಿ ಕಿಕ್ ಕೊಡುತ್ತ, ಪ್ರೇಕ್ಷಕರನ್ನು ನಕ್ಕು ನಗಿಸುತ್ತಾರೆ. ಜಗ್ಗೇಶ್ ಸಿನೆಮಾಗಳು ಎಂದರೆ ಅಲ್ಲಿ ಹಾಸ್ಯ ಹಾಸುಹೊಕ್ಕಾಗಿರುತ್ತದೆ ಎಂಬ ನಂಬಿಕೆಗೆ ದ್ರೋಹ ಮಾಡದ ಹಾಗೆ ನಟಿಸಿದ್ದಾರೆ ಜಗ್ಗೇಶ್. ರಾಘವೇಂದ್ರ ಸ್ಟೋರ್ಸ್‌ನಲ್ಲಿ ಹಾಸ್ಯವಿದೆ. ಸಂಬಂಧಗಳ ಸೆಳೆತವಿದೆ. ಜೊತೆಗೆ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದು ಮೆಸೇಜ್ ಕೂಡ ಇದೆ.

ನವರಸ ನಾಯಕ, ಸಂತೋಷ್ ಆನಂದ್ ರಾಮ್ ಜೊತೆಗೆ ಹೊಂಬಾಳೆ ಫಿಲ್ಮ್ಸ್ -ಈ ಮೂವರ ಕಾಂಬಿನೇಷನ್ ಚಿತ್ರರಸಿಕರಿಗೆ ಕಿಕ್ ಕೊಟ್ಟಿದೆ. ಹಾಸ್ಯದ ಜೊತೆ ಜೊತೆಗೆ ಒಂದಷ್ಟು ಭಾವುಕ ಸನ್ನಿವೇಶಗಳು, ಪ್ರಸಕ್ತ ರಾಜಕೀಯ ದೊಂಬರಾಟ, ಜೊತೆಗೆ ಸಂದೇಶ ಎಲ್ಲವೂ ಸೇರಿ ರಾಘವೇಂದ್ರ ಸ್ಟೋರ್ಸ್ ಸಿನೆಮಾ ಫುಲ್ ಪ್ಯಾಕ್ಡ್ ಮನರಂಜನೆ ಎಂದರೂ ತಪ್ಪಲ್ಲ. ರಾಘವೇಂದ್ರ ಸ್ಟೋರ್ಸ್ ಚಿತ್ರದ ನಾಯಕನಾಗಿ ಜಗ್ಗೇಶ್ ಅಭಿನಯಕ್ಕಂತೂ ಪ್ರೇಕ್ಷಕರು ಮಾರುಹೋಗಿದ್ದಾರೆ. ಎಲ್ಲಾ ಭಾವನೆಗಳನ್ನೂ ಮುಖದಲ್ಲೇ ವ್ಯಕ್ತಪಡಿಸುವ ಅವರ ರೀತಿಗೆ ಪ್ರೇಕ್ಷಕರಂತೂ ಥಿಯೇಟರ್‌ನಲ್ಲಿ ಬಿದ್ದು ಬಿದ್ದು ನಗುತ್ತಾರೆ. ಮತ್ತೆ ಮತ್ತೆ ಆ ಚಿತ್ರದ ಡೈಲಾಗ್‌ಗಳನ್ನು ನೆನಪಿಸಿಕೊಂಡು ಖುಷಿಯಾಗುತ್ತಾರೆ.

ರಾಘವೇಂದ್ರ ಸ್ಟೋರ್ಸ್ ಸಿನೆಮಾದ ನಾಯಕ ಹಯವದನ ಪಾತ್ರದಲ್ಲಿ ಜಗ್ಗೇಶ್ ನಟಿಸಿದ್ದಾರೆ. ರಾಘವೇಂದ್ರ ಸ್ಟೋರ್ಸ್ ಹೊಟೇಲ್‌ನ ಮಾಲಕ ಗುಂಡಾಭಟ್ರು ಪಾತ್ರದಲ್ಲಿ ದತ್ತಣ್ಣ ಗಮನ ಸೆಳೆಯುತ್ತಾರೆ. ಕೇಟರಿಂಗ್ ಮಾಡಿಕೊಂಡಿದ್ದ ಸಿಂಗಲ್ ಸುಂದರ ಹಯವದನನ ಕಥೆಯೇ ರಾಘವೇಂದ್ರ ಸ್ಟೋರ್ಸ್ ಸಿನೆಮಾದ ಕಥೆ. ನಾಯಕನಿಗೆ ೪೦ ವರ್ಷಗಳಾದರೂ ಮದುವೆ ಆಗಿರುವುದಿಲ್ಲ. ಹುಡುಗಿ ನೋಡಲು ಹೋದಾಗ ಒಂದಲ್ಲ ಒಂದು ಕಾರಣಕ್ಕೆ ಆ ಮದುವೆ ಸೆಟ್ ಆಗಿರುವುದಿಲ್ಲ. ಅದೇ ಕೊರಗಿನಲ್ಲಿ ನಾಯಕ ದಿನಕಳೆಯುತ್ತಿರುತ್ತಾನೆ. ಅಂತೂ ಇಂತೂ ಈ ಸಿಂಗಲ್ ಸುಂದರನಿಗೆ ಜಂಟಿಯಾಗುವ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ನಟಿಸಿದ್ಧಾರೆ.

ಸಿನೆಮಾ ಶುರುವಾಗುವುದೇ ಹಯವದನನ ಹೆಣ್ಣು ನೋಡುವ ಶಾಸ್ತ್ರದಿಂದ. ಆದರೆ ಆ ಹುಡುಗಿ ನಾಯಕನನ್ನು ಬಿಟ್ಟು, ನಾಯಕನ ತಮ್ಮನನ್ನು ಮದುವೆ ಆಗುತ್ತಾಳೆ. ಅಲ್ಲಿಂದ ಹಯವದನನ ಮದುವೆ ಸರ್ಕಸ್ ಶುರುವಾಗುತ್ತದೆ. ಹಾಗೋ ಹೀಗೋ ನಾಯಕಿ ವೈಜಯಂತಿ ಜೊತೆ ಮದುವೆ ಆಗುತ್ತದೆ. ಆದರೆ ಅಸಲಿ ಕಥೆ ಶುರುವಾಗುವುದೇ ಅಲ್ಲಿಂದ. ಹಯವದನನಿಗೆ ಮದುವೆ ಆಗುವಷ್ಟರಲ್ಲಿ ಫಸ್ಟ್ ಹಾಫ್ ಮುಗಿಯುತ್ತದೆ. ಫಸ್ಟ್ ಹಾಫ್ ಪೂರ್ತಿ ಕಾಮಿಡಿಯೋ ಕಾಮಿಡಿ. ನಕ್ಕು ನಕ್ಕು ಸುಸ್ತಾಗುವ ಪ್ರೇಕ್ಷಕರಿಗೆ ಮುಂದಿದೆ ಅಸಲಿ ಕಥೆ ಎಂಬ ಸುಳಿವು ಕೊಡುತ್ತದೆ ಜಗ್ಗೇಶ್ ಅವರ ಪರದಾಟ.

ಮದುವೆ ಆದಮೇಲೆ ಶುರುವಾಗುವ ಸಮಸ್ಯೆಗಳು, ಆ ಸಮಸ್ಯೆಗಳಿಂದ ಮನೆಯಲ್ಲಿ ಉಂಟಾಗುವ ಮನಸ್ತಾಪ ಇವೆಲ್ಲವೂ ಪ್ರೇಕ್ಷಕರನ್ನು ಉತ್ತರಾರ್ಧದಲ್ಲಿ ಭಾವುಕರನ್ನಾಗಿ ಮಾಡಿಸುತ್ತವೆ. ಅಷ್ಟಕ್ಕೂ ಆ ಸಮಸ್ಯೆ ಏನು ? ಅದಕ್ಕೆ ಪರಿಹಾರ ಏನು ಎಂಬ ಕುತೂಹಲಕ್ಕೆ ಉತ್ತರ ಸಿನೆಮಾದಲ್ಲಿದೆ. ತಡವಾಗಿ ಮದುವೆ ಆಗಬಾರದು, ಒಂದು ವೇಳೆ ತಡವಾಗಿ ಮದುವೆಯಾದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಹೇಳಲು ಕಥೆಗೆ ಹಾಸ್ಯದ ಟಚ್ ಕೊಟ್ಟು ಸಿನೆಮಾ ಮಾಡಿದ್ದಾರೆ ನಿರ್ದೇಶಕರು. ಕಥೆ ಹಾಸ್ಯದ್ದೇ ಆದರೂ, ಅಲ್ಲೊಂದು ಮೆಸೇಜ್ ಇದೆ. ಮನ ಕಲಕುವ ಕ್ಲೈಮ್ಯಾಕ್ಸ್ ಕೂಡ ಇದೆ. ಸಿನೆಮಾ ಬೋರ್ ಆಗುವುದಿಲ್ಲ. ಹಾಗೆಂದು ಸಿನೆಮಾ ಅದ್ಭುತವಾಗಿದೆ ಎಂದೇನೂ ಅಲ್ಲ. ಮನರಂಜನೆ ಇಷ್ಟಪಡುವ ಪ್ರೇಕ್ಷಕರಿಗೆ ಸ್ವಲ್ಪಮಟ್ಟಿಗೆ ಖುಷಿಯಂತೂ ಸಿಗುತ್ತದೆ.

ಇನ್ನುಳಿದಂತೆ ರವಿಶಂಕರ್ ಗೌಡ, ಮಿತ್ರ, ಅಚ್ಯುತ್ ಕುಮಾರ್, ದತ್ತಣ್ಣ ಎಲ್ಲರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನೆಮಾದ ಡೈಲಾಗ್‌ಗಳು ಪ್ರೇಕ್ಷಕರಿಗೆ ಕಾಮಿಡಿಯ ಕಿಕ್ ಕೊಡುತ್ತವೆ. ಅಜನೀಶ್ ಲೋಕನಾಥ್ ಸಂಗೀತ ಕೂಡ ಚೆನ್ನಾಗಿದೆ.

ಚಿತ್ರ: ರಾಘವೇಂದ್ರ ಸ್ಟೋರ್ಸ್

ತಾರಾಗಣ: ಜಗ್ಗೇಶ್, ದತ್ತಣ್ಣ, ಶ್ವೇತಾ ಶ್ರೀವಾಸ್ತವ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ

ನಿರ್ದೇಶಕ: ಸಂತೋಷ್ ಆನಂದ್ ರಾಮ್

ಸಂಗೀತ: ಅಜನೀಶ್ ಲೋಕನಾಥ್

ನಿರ್ಮಾಣ: ಹೊಂಬಾಳೆ ಫಿಲ್ಮ್ಸ್

Similar News