ಎಂಇಎಸ್, ಶಿವಸೇನೆ ನಿಷೇಧಕ್ಕೆ ಆಗ್ರಹಿಸಿ: ‘ಕರವೇ’ಯಿಂದ ರಾಜಭವನ ಚಲೋ
ಬೆಂಗಳೂರು, ಡಿ.30: ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ದ್ವೇಷ ಹುಟ್ಟುಹಾಕುತ್ತಿರುವ ಎಂಇಎಸ್ ಮತ್ತು ಶಿವಸೇನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪುರಭವನ ಮುಂಭಾಗದಿಂದ ರಾಜಭವನ ಚಲೋ ನಡೆಸಿದ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರನ್ನು ಮೈಸೂರು ಬ್ಯಾಂಕ್ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಭಾμÁವಾರು ಪ್ರಾಂತ್ಯ ವಿಂಗಡಣೆ ನಂತರ ಮಹಾರಾಷ್ಟ್ರ ರಾಜಕಾರಣಿಗಳು ಅಲ್ಲಿನ ಸರಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇ ಪದೇ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಇಎಸ್ ಎಂಬ ಸಂಘಟನೆ ಹಲವು ದಶಕಗಳಿಂದ ದ್ವೇಷದ ವಾತಾವರಣ ಸೃಷ್ಟಿಸುತ್ತಿದೆ. ಇದರ ಜತೆಗೆ ಶಿವಸೇನೆ ಎಂಬ ರಾಜಕೀಯ ಪಕ್ಷವು ಬೆಳಗಾವಿಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ. ಇತ್ತೀಚೆಗೆ ಕನ್ನಡ ಧ್ವಜ ಸುಟ್ಟ ಪ್ರಕರಣ, ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ್ದು, ಜಗಜ್ಯೋತಿ ಬಸವಣ್ಣನವರ ಪ್ರತಿಮೆಗೆ ಮಸಿ ಹಚ್ಚಿದ ಪ್ರಕರಣಗಳು ಕನ್ನಡಿಗರನ್ನು ಕೆರಳಿಸಿದೆ.
ರಾಜ್ಯಗಳ ಮಧ್ಯೆ ಶಾಂತಿ-ಸೌಹಾರ್ದತೆ ಕಾಪಾಡಬೇಕಾದ ಇಂತಹ ಸಂಘಟನೆಗಳು ನಿರಂತರವಾಗಿ ಅಶಾಂತಿಯನ್ನು ಉಂಟು ಮಾಡುವ ಕೆಲಸ ಮಾಡುತ್ತಿವೆ. ಈ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು. ಕಾನೂನಾತ್ಮಕವಾಗಿ ಬೆಳಗಾವಿಯಲ್ಲಿ ಅಧಿಕಾರ ಪಡೆಯಲು ವಿಫಲವಾಗಿರುವ ಮಹಾರಾಷ್ಟ್ರ ರಾಜಕಾರಣಿಗಳು ಎಂಇಎಸ್ ಮತ್ತು ಶಿವಸೇನೆ ಸಂಘರ್ಷದ ಮೂಲಕ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಹುನ್ನಾರ ನಡೆಸುತ್ತಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮರಾಠಿಗರು ಕರ್ನಾಟಕ ಸರಕಾರದ ವಿರುದ್ಧ ಮಾನಹಾನಿ ಪ್ರಚೋದನಾಕಾರಿ ಭಾಷಣ ಮಾಡುವುದು, ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವುದು, ನಿರಂತರವಾಗಿ ನಡೆಯುತ್ತಲೇ ಇದೆ ಎಂದು ತಿಳಿಸಿದರು.
ಎಂಇಎಸ್ ಮತ್ತು ಶಿವಸೇನೆಯನ್ನು ಬೆಳಗಾವಿ ಮತ್ತು ಗಡಿಭಾಗದ ಜನ ಈಗಾಗಲೇ ತಿರಸ್ಕರಿಸಿದ್ದಾರೆ. ಹತಾಶೆಗೊಳಗಾದ ಈ ಸಂಘಟನೆಗಳು ಹಿಂಸಾಚಾರಕ್ಕೆ ಇಳಿದಿವೆ. ಕನ್ನಡಿಗರ ಆಸ್ತಿ-ಪಾಸ್ತಿ, ವಾಹನಗಳನ್ನು ನಷ್ಟ ಮಾಡುತ್ತಿವೆ. ಈ ಕಾರಣಕ್ಕಾಗಿ ಈ ಸಂಘಟನೆಗಳ ನಿಷೇಧ ಮಾಡಬೇಕೆಂದು ನಾವು ಮೊದಲಿನಿಂದಲೂ ಹೋರಾಟ ಮಾಡುತ್ತ ಬಂದಿದ್ದು, ಅದರ ಮುಂದುವರೆದ ಭಾಗವಾಗಿ ಗುರುವಾರ ರಾಜಧಾನಿ ಚಲೋ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಿದ್ದೇವೆ.
ಬೆಳಗಾವಿ ಜನರಲ್ಲಿ ಭಯ, ಆತಂಕ, ಅಭದ್ರತೆಯ ಭಾವನೆಗಳನ್ನು ಮೂಡಿಸಿ ಜನರಲ್ಲಿ ಭಯ ಉಂಟುಮಾಡುವ ಈ ಸಂಘಟನೆ, ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು ಮತ್ತು ನಿಷೇಧಕ್ಕೆ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನೂ ಕೂಡಲೇ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಕರವೇ ಕಾರ್ಯಕರ್ತರ ಬಂಧನ, ಬಿಡುಗಡೆ
ಕರ್ನಾಟಕದಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.
ಕೇಂದ್ರಕ್ಕೆ ಶಿಫಾರಸು ಮಾಡಬೇಕು
‘ಎಂಇಎಸ್, ಶಿವಸೇನೆಯ ಸಮಾಜಘಾತಕ ಕೃತ್ಯಗಳು ಮಿತಿಮೀರಿ ಹೋಗಿವೆ. ರಾಜ್ಯದಲ್ಲಿ ದ್ವೇಷದ ವಾತಾವರಣ ನಿರ್ಮಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸರಕಾರ ತಡಮಾಡದೆ ಈ ಸಂಘಟನೆಗಳನ್ನು ನಿμÉೀಧ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು.’
ಟಿ.ಎ.ನಾರಾಯಣಗೌಡ, ಕರವೇ, ರಾಜ್ಯಾಧ್ಯಕ್ಷ