ಬೆಂಗಳೂರು: ದರೋಡೆ ಪ್ರಕರಣ; ಪಿಎಸ್‍ಐಗೆ ಚಾಕು ಇರಿತ
ಬೆಂಗಳೂರು, ಡಿ.30: ಬಂಧಿಸಲು ಹೋದ ಯಶವಂತಪುರ ಪೊಲೀಸ್ ಠಾಣೆ ಸಬ್‍ಇನ್‍ಸ್ಪೆಕ್ಟರ್ ಅವರಿಗೆ ದರೋಡೆಕೋರ ಚುಚ್ಚಿ ಪರಾರಿಯಾಗಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಸಬ್‍ಇನ್‍ಸ್ಪೆಕ್ಟರ್ ವಿನೋದ್ ರಾಥೋಡ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದರೋಡೆ ಪ್ರಕರಣದ ಆರೋಪಿಯು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂಪಸಂದ್ರ-ಹೆಬ್ಬಾಳ ರಸ್ತೆಯಲ್ಲಿರುವ ತೋಟದ ಬಳಿ ಇರುವ ಬಗ್ಗೆ ಸಬ್ ಇನ್‍ಸ್ಪೆಕ್ಟರ್ ವಿನೋದ್ ರಾಥೋಡ್ ಅವರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ವಿನೋದ್ ಅವರು ಸಿಬ್ಬಂದಿಯೊಂದಿಗೆ ರಾತ್ರಿ 11ಗಂಟೆ ಸುಮಾರಿನಲ್ಲಿ ತೋಟದ ಬಳಿ ಹೋಗಿ ದರೋಡೆಕೋರರನ್ನು ಹಿಡಿಯಲು ಮುಂದಾಗಿದ್ದಾರೆ. ಆ ವೇಳೆ ದರೋಡೆಕೋರ ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣ ಸಬ್ ಇನ್‍ಸ್ಪೆಕ್ಟರ್ ವಿನೋದ್ ರಾಥೋಡ್ ಅವರು ಹಿಡಿಯಲು ಹೋದಾಗ ಚಾಕುವಿನಿಂದ ಅವರ ಭುಜಕ್ಕೆ ಚುಚ್ಚಿ ದರೋಡೆಕೋರ ಪರಾರಿಯಾಗಿದ್ದಾನೆ. ಈ ಬಗ್ಗೆ ಸಂಜಯನಗರ ಠಾಣೆ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿ ವಿನೋದ್ ಅವರು ದೂರು ನೀಡಿ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರನಿಗೆ ಹುಡುಕಾಟ ನಡೆಸಿದ್ದಾರೆ.