ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ: ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿ.ಕೆ.ಶಿವಕುಮಾರ್ ಆಹ್ವಾನ

Update: 2021-12-30 17:57 GMT

ಬೆಂಗಳೂರು, ಡಿ.30: ಬೆಂಗಳೂರಿನ ಜನಸಂಖ್ಯೆ 2 ಕೋಟಿ ಸಮೀಪವಿದ್ದರೆ, ಕಾವೇರಿ ಜಲಾನಯನ ಪ್ರದೇಶದ ಜನಸಂಖ್ಯೆ 2 ಕೋಟಿ ಇದೆ. ನಾವೆಲ್ಲ ಸೇರಿ ಪಕ್ಷಾತೀತವಾಗಿ ರಾಷ್ಟ್ರಧ್ವಜ, ಕನ್ನಡ ಬಾವುಟ ಇಟ್ಟು ಈ ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ನಡಿಗೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನಿಸುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ನಗರದ ಶಿವಾನಂದ ವೃತ್ತದಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಮಯದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಕಳುಹಿಸಿಕೊಟ್ಟಿದ್ದು, ಅನುಮತಿ ಸಿಕ್ಕಿದೆ. ಪರಿಸರ ಇಲಾಖೆ ಅನುಮತಿ ಮಾತ್ರ ಬೇಕಾಗಿದೆ. ಸಿದ್ದರಾಮಯ್ಯ ಕಾಲದಲ್ಲಿ ಎಂ.ಬಿ.ಪಾಟೀಲ್ ನೀರಾವರಿ ಸಚಿವರಾಗಿದ್ದಾಗ ಮೊದಲು ಡಿಪಿಆರ್ ಪ್ರಾರಂಭವಾಯಿತು. ಆದರೆ ಅದು ವಾಪಸ್ ಬಂದಿತ್ತು. ಈಗ ಈ ಯೋಜನೆಗೆ ಯಾವುದೇ ನ್ಯಾಯಾಲಯದಲ್ಲಿ ತಕರಾರು ಇಲ್ಲ ಎಂದರು.

ಈಗಾಗಲೇ ಬೆಂಗಳೂರಿನಲ್ಲಿ ಯಾವ ರೀತಿ ಸಮಸ್ಯೆಯಾಗುತ್ತಿದೆ, ಅಪಾರ್ಟ್‍ಮೆಂಟ್‍ಗಳಲ್ಲಿ ಹೇಗೆ ಟ್ಯಾಂಕರ್‍ಗಳ ಮೂಲಕ ನೀರು ತರಿಸಿಕೊಳ್ಳಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವರು ಇದನ್ನು ರಾಜಕಾರಣ ಎಂದು ಮಾತನಾಡುತ್ತಿದ್ದಾರೆ, ತೊಂದರೆ ಇಲ್ಲ. ಎಲ್ಲದರಲ್ಲೂ ರಾಜಕಾರಣ ಮಾತನಾಡುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಒಳ್ಳೆಯ ವಿಚಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಎಲ್ಲ ಕಲಾವಿದರು, ನಿರ್ಮಾಪಕರು, ವಿತರಕರು ಈ ಭಾಷೆ, ನೆಲ, ಜಲ ವಿಚಾರ ಬಂದಾಗ ಸಂಪೂರ್ಣ ಸಹಕಾರ ನೀಡಿ ಬೆಂಬಲವಾಗಿ ನಿಂತಿದ್ದೀರಿ. ಮಹಾದಾಯಿ, ಕೃಷ್ಣ, ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದೀರಿ. ನಿಮ್ಮ ಸ್ವಾಭಿಮಾನವನ್ನು ಗೌರವದಿಂದ ಉಳಿಸಿಕೊಂಡಿದ್ದೀರಿ ಎಂದು ಅವರು ತಿಳಿಸಿದರು.

ಮೇಕೆದಾಟಿನಲ್ಲಿ ಜ.9 ರಿಂದ ಆರಂಭವಾಗಿ ಜ.19 ರವರೆಗೂ 10 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಕೆಂಗೇರಿವರೆಗೂ ತಲುಪಲು 5 ದಿನ ಆಗುತ್ತದೆ. ನಂತರ ನಗರದೊಳಗೆ ಐದು ದಿನ ನಡೆಯಲಿದೆ. ನಿಮ್ಮಲ್ಲಿ ಯಾರೆಲ್ಲಾ ಬರುತ್ತೀರಿ ಎಂದರೆ, ನಿಮಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಇದರಲ್ಲಿ ಭಾಗವಹಿಸಲು ನಿಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಶಿವಕುಮಾರ್ ಹೇಳಿದರು.

ದಿನಕ್ಕೆ 15 ಕಿ.ಮೀ ದೂರ ಪಾದಯಾತ್ರೆ ನಡೆಯಲಿದೆ. ನೀವು ಒಂದು ದಿನವಾದರೂ ನಡೆಯಿರಿ ಅಥವಾ 10 ದಿನವಾದರೂ ನಡೆಯಿರಿ, ಅರ್ಧ ದಿನವಾದರೂ ನಡೆಯಿರಿ. ಕೊನೇ ದಿನದ ಕಾರ್ಯಕ್ರಮ ಬಸವನಗುಡಿಯಲ್ಲಿ ನಡೆಯಲಿದೆ. ಇದು ಕಾಂಗ್ರೆಸ್ ಪಕ್ಷವೊಂದರ ಕಾರ್ಯಕ್ರಮವಲ್ಲ. ನಾವು ಎಲ್ಲ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳನ್ನು ಆಹ್ವಾನಿಸುತ್ತೇವೆ ಎಂದು ಅವರು ತಿಳಿಸಿದರು.

ಜನರ ಮೇಲೆ ಪ್ರೀತಿ, ವಿಶ್ವಾಸ ಇದ್ದವರು ಬರಲಿ. ಯಾರಿಗೂ ಬರಲೇಬೇಕು ಎಂದು ಬಲವಂತ ಮಾಡುವುದಿಲ್ಲ. ನಾನು ಈ ರಂಗಕ್ಕೆ ಹೊಸಬನಲ್ಲ. ನನ್ನದೇ ಆದ ಶ್ರಮ ಇದೆ. ಅದರ ಫಲ ಇದೆ. ರಾಜ್ಯದ ಹಿತಕ್ಕಾಗಿ ಈ ಹೋರಾಟ ಮಾಡುತ್ತಿದ್ದು, ತಾವೆಲ್ಲ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. 

ಈ ಯೋಜನೆ ಜಾರಿಗೆ ಕೇಂದ್ರ ಸರಕಾರದ ಅನುಮತಿ, ಸುಪ್ರೀಂ ಕೋರ್ಟ್ ಅನುಮತಿ ಇದೆ. ಹೀಗಾಗಿ ರಾಜಕೀಯ ಬದ್ಧತೆ ಮಾತ್ರ ಬೇಕಾಗಿದೆ. ಹೀಗಾಗಿ ಈ ಹೋರಾಟದಲ್ಲಿ ನಾನು ರಾಜಕೀಯ ಪಕ್ಷದ ಚಿಹ್ನೆ ಹಾಕದೇ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಕಾವೇರಿ ಚಿಹ್ನೆ ಬಳಸುತ್ತಿದ್ದೇವೆ ಎಂದು ಅವರು ಹೇಳಿದರು.   

ವಾಣಿಜ್ಯ ಮಂಡಳಿಗೆ ಬಂದು ಆಹ್ವಾನಿಸಿದರೆ, ಇಡೀ ಚಿತ್ರರಂಗಕ್ಕೆ ಆಹ್ವಾನಿಸಿದಂತೆ. ಎಲ್ಲರಿಗೂ ಇದೇ ಮೂಲ ಬೇರು. ಚಿತ್ರರಂಗಕ್ಕೆ ಇದು ನ್ಯಾಯಾಲಯ ಇದ್ದಂತೆ. ನಾವು ಈ ಹೋರಾಟದಲ್ಲಿ ಭಾಗವಹಿಸುವಂತೆ ಸುದೀಪ್, ಶಿವಣ್ಣ, ದರ್ಶನ್, ಯಶ್ ಸೇರಿದಂತೆ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇವೆ. ಯಾರಿಗೂ ಬಲವಂತ ಮಾಡುವುದಿಲ್ಲ. ನಮ್ಮ ನೀರು ನಮ್ಮ ಹಕ್ಕು, ಅವರ ನೀರು, ಅವರ ಹಕ್ಕು. ಈ ಹೋರಾಟಕ್ಕೆ ಬೆಂಬಲ ನೀಡುವುದು ಅವರ ಧರ್ಮ. ಇದು ಪಕ್ಷಾತೀತ ಹಾಗೂ ಜಾತ್ಯತೀತ ಹೋರಾಟ ಎಂದು ಶಿವಕುಮಾರ್ ತಿಳಿಸಿದರು. 

ಸ್ವಾಮೀಜಿಗಳು ಬರುತ್ತಾರೆ

ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಮಠಕ್ಕೆ ಹೋಗಿ ನಿರ್ಮಲಾನಂದ ಸ್ವಾಮೀಜಿ ಅವರನ್ನು ಆಹ್ವಾನಿಸಿದ್ದು, ಅವರು ಆಗಮಿಸುವುದಾಗಿ ತಿಳಿಸಿದ್ದಾರೆ. ಸಿದ್ದಗಂಗಾ ಶ್ರೀಗಳು ಸೇರಿದಂತೆ ಎಲ್ಲ ಶ್ರೀಗಳು ಹಾಗೂ ಧರ್ಮ ಪೀಠದ ಮುಖ್ಯಸ್ಥರನ್ನು ಭೇಟಿ ಮಾಡುತ್ತಿದ್ದೇವೆ. ವಾಣಿಜ್ಯ ಮಂಡಳಿಗೆ ಮುಂಚಿತವಾಗಿ ಬಂದು ಆಹ್ವಾನಿಸುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು. 

ಇದು ಎಲ್ಲರ ಯೋಜನೆ

ಮೇಕೆದಾಟು ಯೋಜನೆ ದೇವೇಗೌಡರ ಕಾಲದಲ್ಲಿ ಆಗಿದ್ದು, ಕಾಂಗ್ರೆಸ್ ಹೈಜಾಕ್ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಇದು ದೇವೇಗೌಡರ ಯೋಜನೆಯಾದರೂ ಸಂತೋಷ, ಕುಮಾರಸ್ವಾಮಿ ಅವರ ಯೋಜನೆಯಾದರೂ ಸಂತೋಷ, ಬಿಜೆಪಿಯವರ ಯೋಜನೆಯಾದರೂ ಸಂತೋಷ. ಇದು ಎಲ್ಲರ ಯೋಜನೆ ಎಂದರು.
ಕುಮಾರಸ್ವಾಮಿ ಕೂಡ ಮೈಸೂರಿನಿಂದ ಹೋರಾಟ ಮಾಡುತ್ತೇನೆ ಎಂದಿದ್ದರು.

ಅವರು ಮಾಡಲಿ. ಯಾರು ಬೇಡ ಎನ್ನುವುದಿಲ್ಲ, ನಮ್ಮ ತಕರಾರಿಲ್ಲ. ಅವರು ಹೋರಾಟ ಮಾಡಿರುವುದಾಗಿ ಹೇಳಿದ್ದಾರೆ. ಜನ ಯಾರು ಯಾವ ಹೋರಾಟ ಮಾಡಿದ್ದಾರೆ ಎಂದು ನೋಡಿದ್ದಾರೆ. ಜನ ದಡ್ಡರಲ್ಲ. ನಾವು ಯಾರ ಜತೆಗೂ ಸ್ಪರ್ಧೆಗೆ ಬೀಳುವ ಅವಶ್ಯಕತೆ ಇಲ್ಲ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋರಾಟ ಮಾಡುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಈ ಹೋರಾಟಕ್ಕೆ ಆಗಮಿಸುವಂತೆ ಎಲ್ಲ ಪಕ್ಷದ ಶಾಸಕರಿಗೆ ಆಹ್ವಾನ ಕಳುಹಿಸುತ್ತೇನೆ. ಎಲ್ಲ ಸಂಘ, ಸಂಸ್ಥೆಗಳು, ಮಾಜಿ ಶಾಸಕರಿಗೂ ಕಳುಹಿಸುತ್ತೇನೆ. ಎಲ್ಲರೂ ಬಂದು ಹೆಜ್ಜೆ ಹಾಕಲಿ. ನಾವು ಯಾರನ್ನೂ ಮೆಚ್ಚಿಸುವುದು ಬೇಡ, ನಮ್ಮ ಆತ್ಮಸಾಕ್ಷಿಯನ್ನು ನಾವು ಸಂತೋಷಪಡಿಸಿದರೆ ಸಾಕು ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News