ಸಮಾಜವಾದಿ ಪಕ್ಷದ ಎಂಎಲ್ ಸಿ ಪುಷ್ಪರಾಜ್ ಜೈನ್ ಮೇಲೆ ಆದಾಯ ತೆರಿಗೆ ದಾಳಿ

Update: 2021-12-31 05:24 GMT

ಲಕ್ನೋ/ಹೊಸದಿಲ್ಲಿ: ಉತ್ತರ ಪ್ರದೇಶದ ಉದ್ಯಮಿ ಪಿಯೂಷ್ ಜೈನ್  ಮೇಲೆ ತೆರಿಗೆ ದಾಳಿ ನಡೆದ ಕೆಲವು ದಿನಗಳ ಬಳಿಕ ಪ್ರತಿಪಕ್ಷ ಸಮಾಜವಾದಿ ಪಕ್ಷದ ಎಂಎಲ್ ಸಿ ಪುಷ್ಪರಾಜ್ 'ಪಂಪಿ' ಜೈನ್ ಅವರಿಗೆ ಸೇರಿರುವ ಸ್ಥಳಗಳಲ್ಲಿ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳನ್ನು ಶೋಧ ಕಾರ್ಯ ಆರಂಭಿಸಿದ್ದಾರೆ.

ಸುಗಂಧ ದ್ರವ್ಯ, ಪೆಟ್ರೋಲ್ ಪಂಪ್‌ಗಳು ಹಾಗೂ ಕೋಲ್ಡ್ ಸ್ಟೋರೇಜ್ ಗಳನ್ನು ಹೊಂದಿರುವ ಉದ್ಯಮಿಗೆ ಸಂಬಂಧಿಸಿದ ಉತ್ತರ ಪ್ರದೇಶ, ದಿಲ್ಲಿ ಹಾಗೂ ಮುಂಬೈನಲ್ಲಿ ಆದಾಯ ತೆರಿಗೆ ಇಲಾಖೆಯು ಸುಮಾರು 50 ಸ್ಥಳಗಳನ್ನು ಶೋಧಿಸುತ್ತಿದೆ.

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರಪ್ರದೇಶ ಚುನಾವಣೆಗೆ ಮುಂಚಿತವಾಗಿ 'ಸಮಾಜವಾದಿ ಪಕ್ಷದ ಸುಗಂಧ ದ್ರವ್ಯ'ವನ್ನು ಉದ್ಯಮಿ ಪುಷ್ಪರಾಜ್ ಜೈನ್ ಬಿಡುಗಡೆ ಮಾಡಿದ್ದರು.

ಟ್ವಿಟರ್‌ನಲ್ಲಿ ದಾಳಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷವು "ಕಳೆದ ಬಾರಿ ಭಾರಿ ವೈಫಲ್ಯದ ನಂತರ ಈ ಬಾರಿ ಬಿಜೆಪಿಯ ಅಂತಿಮ ಮಿತ್ರ ಐಟಿ (ಆದಾಯ ತೆರಿಗೆ ಇಲಾಖೆ) ಅಂತಿಮವಾಗಿ ಎಸ್‌ಪಿ ಎಂಎಲ್‌ಸಿ ಪುಷ್ಪ್ ರಾಜ್ ಜೈನ್ ಹಾಗೂ  ಕನೌಜ್‌ನ ಇತರ ಸುಗಂಧ ದ್ರವ್ಯ ವ್ಯಾಪಾರಿಗಳ ಸ್ಥಳದ ಮೇಲೆ ದಾಳಿ ಮಾಡಿದೆ. ಯುಪಿ ಚುನಾವಣೆಯಲ್ಲಿ ಹೆದರಿದ ಬಿಜೆಪಿಯಿಂದ ಬಹಿರಂಗವಾಗಿ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಸಾಮಾನ್ಯವಾಗಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ, ಅವರು ಮತದ ಮೂಲಕ ಉತ್ತರಿಸುತ್ತಾರೆ'' ಎಂದಿದೆ.

ಮತ್ತೋರ್ವ ಉದ್ಯಮಿ ಪಿಯೂಷ್ ಜೈನ್ ಅವರ ಕಾನ್ಪುರ ಹಾಗೂ  ಕನೌಜ್ ನಲ್ಲಿ ನಡೆದ  ಐಟಿ ದಾಳಿಯಲ್ಲಿ ರೂ. 196 ಕೋಟಿ ನಗದು ಮತ್ತು 23 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಊಹಾಪೋಹಗಳ ನಡುವೆ ಈ ದಾಳಿ ನಡೆದಿದೆ.

ಚುನಾವಣಾ ಅಭಿಯಾನದ ನಡುವೆ ನಡೆಯುತ್ತಿರುವ ಈ ದಾಳಿಯು ರಾಜಕೀಯ ರೂಪ ಪಡೆದಿದೆ.

"ಪಿಯೂಷ್ ಜೈನ್ ಹಾಗೂ ಪುಷ್ಪರಾಜ್ ಜೈನ್ ಕುರಿತು ಬಿಜೆಪಿ ಗೊಂದಲಕ್ಕೆ ಸಿಲುಕಿತ್ತು. ಪುಷ್ಪರಾಜ್  ಅವರು ನಮ್ಮ ಪಕ್ಷದ ಹೆಸರಿನ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ್ದರು. ಪಿಯೂಷ್ ಜೈನ್ ಅವರೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ. ಬಿಜೆಪಿಯು 'ತನ್ನ ಸ್ವಂತ ಉದ್ಯಮಿ(ಪಿಯೂಷ್) ಮೇಲೆ ತಪ್ಪಾಗಿ ದಾಳಿ ಮಾಡಿದೆ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ  ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News