ಎಂಇಎಸ್ ನಿಷೇಧಿಸಲು ಒತ್ತಾಯಿಸಿ ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಪ್ರತಿಭಟನಾ ರ‍್ಯಾಲಿ

Update: 2021-12-31 14:20 GMT

ಬೆಂಗಳೂರು, ಡಿ.31: ನಾಡಿಗೆ ಅವಮಾನ ಮಾಡಿದ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಶುಕ್ರವಾರದಂದು ಕನ್ನಡದ ಸಂಘಟನೆಗಳು ಪ್ರತಿಭಟನಾ ಜಾಥಾವನ್ನು ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ಹಮ್ಮಿಕೊಳ್ಳಲಾಗಿತ್ತು. ಆದರೆ, ಹಲಸೂರು ಗೇಟ್ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. 

ಕನ್ನಡ ಪರ ಸಂಘಟನೆಗಳು ಎಂಇಎಸ್ ನಿಷೇಧಿಸುವಂತೆ ಡಿ.31ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಸಂಧಾನದಿಂದಾಗಿ ಬಂದ್ ಅನ್ನು ಮುಂದೂಡಲಾಯಿತು. ಹಾಗಾಗಿ ಶುಕ್ರವಾರದಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಾ.ರಾ. ಗೋವಿಂದು, ಕೆ.ಆರ್.ಕುಮಾರ್, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು. 

ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಭದ್ರತೆಯ ಹೊಣೆ ಹೊತ್ತಿದ್ದು, ಪ್ರತಿಭಟನೆಯಲ್ಲಿ ಅಹಿತಕರ ಘಟನೆ ಜರುಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಫ್ರೀಡಂ ಪಾರ್ಕ್ ಬಳಿ 10 ಕೆ.ಎಸ್.ಆರ್.ಪಿ ಹಾಗೂ ಕೇಂದ್ರ ಮೀಸಲು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

70ರ ದಶಕದಿಂದಲೂ ಎಂಇಎಸ್ ಸಂಘಟನೆಯು ನಾಡಿಗೆ ಧಕ್ಕೆಯಾಗುವ ಕೃತ್ಯಗಳನ್ನು ಮಾಡುತ್ತಲೇ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆಯ ಮೇಲೆಯು ಹಲ್ಲೆ ನಡೆಸಿದೆ ಎಂದು ಖದ್ದಾಗಿ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವುದೊಂದೇ ಪರಿಹಾರವಾಗಿದೆ. ಸರಕಾರವು ಅವರ ಮೇಲೆ ಪೊಲೀಸ್ ಕೇಸ್ ಹಾಕುವುದು. ನ್ಯಾಯಾಲಯಕ್ಕೆ ಒಪ್ಪಿಸುವುದು ಎಂದು ಹೇಳಿ ಕಾಲಹರಣ ಮಾಡಿದರೆ ಒಪ್ಪುವುದಿಲ್ಲ. 

-ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News