ಡ್ರಗ್ ಪೆಡ್ಲರ್ ಬಂಧನ: 7 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ವಶ

Update: 2021-12-31 18:15 GMT

ಬೆಂಗಳೂರು, ಡಿ.31: ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್‍ನೊಬ್ಬನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿ 7 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. 

ಬಂಧಿತನನ್ನು ಒರಿಸ್ಸಾ ಮೂಲದ ಸತ್ಯಪ್ರಸಾನ್(51) ಎಂದು ಗುರುತಿಸಲಾಗಿದೆ. ನಗರದಲ್ಲಿ ಡ್ರಗ್ ಮಾರಾಟ ಮಾಡುವ ಪೆಡ್ಲರ್‍ಗಳನ್ನು ಪತ್ತೆ ಮಾಡಲು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಅಲ್ಲದೆ, ಹೊಸ ವರ್ಷಾಚರಣೆ ಸಮಯದಲ್ಲಿ ನಡೆಸುವ ಪಾರ್ಟಿಗಳಿಗೆ ಮಾದಕವಸ್ತುಗಳನ್ನು ಸರಬರಾಜು ಮಾಡುವ ಸಂಭವವಿರುವುದರಿಂದಲೂ ಸಹ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದರು.

ಇಂದಿರಾನಗರ ಪೊಲೀಸ್ ಠಾಣೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಒರಿಸ್ಸಾ ಮೂಲದ ಡ್ರಗ್ ಪೆಡ್ಲರ್ ನನ್ನು ಬಂಧಿಸಿ, 7 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ವರ್ಷದ ಪ್ರಯುಕ್ತ ನಡೆಯುವ ಪಾರ್ಟಿಗಳಿಗೆ ಗಾಂಜಾ ಸರಬರಾಜು ಮಾಡಲು ಬಂದಿರುವುದಾಗಿ ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾನೆ. ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ, ಮಾದಕ ವಸ್ತು ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News