ಕನ್ನಡ ಚಿಂತನೆ: ವೌಲಿಕವಾದ ಬರವಣಿಗೆ

Update: 2022-01-02 07:11 GMT

ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಅವರು ಮೂರು ದಶಕಗಳಿಂದ ಕನ್ನಡವನ್ನು ವಿವಿಧ ನೆಲೆಗಳಲ್ಲಿ ಕಟ್ಟುವ ಕೆಲಸದಲ್ಲಿ ನಿಷ್ಠೆಯಿಂದ ತೊಡಗಿಕೊಂಡವರು. ಕನ್ನಡ ಕಾರ್ಯಕರ್ತರಾಗಿ, ಸಾಹಿತ್ಯದ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಕವಿಯಾಗಿ, ವಿಮರ್ಶಕರಾಗಿ, ವಿದ್ವಾಂಸ ಚಿಂತಕರಾಗಿ ಅವರು ಕನ್ನಡ ಪರವಾಗಿ ಕ್ರಿಯಾಶೀಲರಾಗಿರುವುದನ್ನು ನೋಡಿದರೆ, ಅವರ ಕೇಂದ್ರ ಪ್ರಜ್ಞೆಯಲ್ಲಿಯೇ ಕನ್ನಡದ ಹಿತ ಮತ್ತು ಘನತೆಗಳು ನೆಲೆಸಿವೆ ಎನ್ನಬಹುದು. ಕವಿತಾರಚನೆ, ವಿಚಾರ-ವಿಮರ್ಶೆ, ಸಂಪಾದನೆ, ಧ್ವನಿಸಾಂದ್ರಿಕೆಗಳನ್ನವರು ಹೊರತಂದು ಇದೀಗ ತಮ್ಮ ಸಮಗ್ರ ಕೃತಿಗಳನ್ನವರು ಅನೇಕ ಸಂಪುಟಗಳಲ್ಲಿ ಪ್ರಕಟಿಸುತ್ತಿದ್ದಾರೆ. ಆ ಸಂಪುಟಗಳಲ್ಲಿ ‘ಕನ್ನಡ ಚಿಂತನೆ’ಯು ಮೊದಲನೆಯದಾಗಿರುವುದು ಕೇವಲ ಆಕಸ್ಮಿಕವಾಗಿರದೆ, ಈಗ ನಾನು ಹೇಳಿದ ಮಾತಿಗೆ ಪುರಾವೆಯಾಗಿದೆ. ಈ ಬೃಹತ್ ಸಂಪುಟವು ಅವರ ಈ ವರೆಗಿನ ಕನ್ನಡದ ಬರಹಗಳ ಸಂಕಲನವಾಗಿದೆ. ಅದರಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ಮೊದಲನೆಯ ಭಾಗ ‘ಕನ್ನಡಪರ ಚಿಂತನೆ ಮತ್ತು ಪರಂಪರೆ’ ಎಂಬ ಅವರ ಪಿಎಚ್‌ಡಿ ನಿಂಬಂಧ ಮತ್ತು ಎರಡನೆಯದು ಕನ್ನಡಕ್ಕೆ ಸಂಬಂಧಿಸಿದ ವಿವಿಧ ಸಂದರ್ಭಗಳಿಗೆ ಸ್ಪಂದಿಸಿದ ಲೇಖನಗಳು. ಅವರ ಡಾಕ್ಟರೇಟ್ ನಿಬಂಧವು ಆರಂಭದಿಂದ ಇಲ್ಲಿವರೆಗಿನ ಕನ್ನಡ ಸಾಹಿತ್ಯ-ಸಂಸ್ಕೃತಿಗಳಲ್ಲಿ ಕನ್ನಡತನವು ಅಭಿವ್ಯಕ್ತಗೊಳ್ಳುವ ಬಗೆಯನ್ನು ವಿಶ್ಲೇಷಿಸುವ ಕ್ರಮವು ಅನೇಕ ಒಳನೋಟಗಳಿಂದ ಕೂಡಿ, ರಾಜಕೀಯ, ಆರ್ಥಿಕ, ಮಾನವ ಶಾಸ್ತ್ರೀಯ ನೆಲೆಗಳ ಹಿನ್ನೆಲೆಯಲ್ಲಿನ ಅಧ್ಯಯನವನ್ನು ಒಳಗೊಂಡಿರುವುದರಿಂದ ನೋಟವು ವ್ಯಾಪಕವೂ ಆಗಿದೆ, ಆಳವೂ ಆಗಿದೆ. ಶ್ರೀಯುತರು ತಮ್ಮ ಡಾಕ್ಟರೇಟ್ ವಿಷಯವಾಗಿ ಕನ್ನಡ ಚಿಂತನೆಯನ್ನು ಆರಿಸಿಕೊಂಡಿರುವುದು, ಅವರ ಪ್ರಜ್ಞೆಯನ್ನು ಕನ್ನಡವು ಹೇಗೆ ಆವರಿಸಿದೆ ಎಂಬುದನ್ನು ತೋರಿಸುತ್ತದೆ. ಇತಿಹಾಸದ ಅರಿವಿಲ್ಲದವನು ಇತಿಹಾಸ ನಿರ್ಮಿಸಲಾರ ಎಂಬುದು ನಿಜ. ಕನ್ನಡ ಚಿಂತನೆಯ ಇತಿಹಾಸವು ಕನ್ನಡ ಚಳವಳಿಗೆ ಒಂದು ಸತ್ವಪೂರ್ಣ ತಾತ್ವಿಕ ನೆಲೆಗಟ್ಟನ್ನು ಒದಗಿಸುವುವಲ್ಲಿ ನೆರವಾಗಬಲ್ಲದು, ಇತರ ನೆಲೆಗಳಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡವರಿಗೆ ಮಾರ್ಗದರ್ಶಕವೂ ಆಗಬಲ್ಲದು. ಹಾಗೆಯೇ ಬಿಡಿ ಲೇಖನಗಳು ಕನ್ನಡದ ಆಗುಹೋಗುಗಳನ್ನು ಅವರು ನಿಕಟವಾಗಿ ಗಮನಿಸುವ ಪರಿಯನ್ನೂ, ಸ್ಪಂದನದ ಮೂಲಕ ಅವರು ಹೇಗೆ ಸಮಸ್ಯೆಗಳನ್ನು ಕಾಣುವರೆಂಬುದನ್ನೂ ತೋರಿಸುತ್ತದೆ. ಹೀಗೆ ಸ್ಪಂದಿಸುವಲ್ಲಿ ಅವರಲ್ಲಿ ಕನ್ನಡ ಪ್ರಜ್ಞೆಯು ಹೇಗೆ ಸದಾ ಜಾಗೃತವಾಗಿರುತ್ತದೆ ಎಂಬುದು ವಿಧಿತವಾಗುತ್ತದೆ. ತಮ್ಮ ಬರಹಗಳನ್ನು ಒಟ್ಟಾರೆಯಾಗಿ ಪ್ರಕಟಿಸುತ್ತಿರುವ ಅವರನ್ನು ನಾನು ಅಭಿನಂದಿಸುವುದಲ್ಲದೆ, ಮುಂದೆಯೂ ವೌಲಿಕವಾದ ಬರವಣಿಗೆಯನ್ನು ಮಾಡುತ್ತಿರಲಿ ಎಂದು ಆಶಿಸುತ್ತೇನೆ.

ಪುಸ್ತಕ: ಕನ್ನಡ ಚಿಂತನೆ

ಲೇಖಕರು:

ಡಾ. ಕಾ.ವೆಂ. ಶ್ರೀನಿವಾಸಮೂರ್ತಿ

ಪ್ರಕಾಶಕರು: ಪ್ರಿಯದರ್ಶಿನಿ ಪ್ರಕಾಶನ, ನಂ.138, 7ನೇ ಮೈನ್, ಹಂಪಿ ನಗರ, ಬೆಂಗಳೂರು-560104

ಮೊ:9845062549

ಬೆಲೆ: ರೂ. 500

Writer - ಡಾ. ಪಿ.ವಿ. ನಾರಾಯಣ

contributor

Editor - ಡಾ. ಪಿ.ವಿ. ನಾರಾಯಣ

contributor

Similar News