ಮುಸ್ಲಿಮ್ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್

Update: 2022-01-03 08:00 GMT

ಫಾತಿಮಾ ಶೇಖ್‌ರವರು ಮುಸ್ಲಿಂ ಸಮಾಜದಿಂದ ಬಂದ ಮೊದಲ ಶಿಕ್ಷಕಿ. ಫಾತಿಮಾ ಶೇಖ್ ಪುಣೆಯ ಮೋಮಿನಪುರದ ಗಂಜ್‌ಪೇಠ ಎಂಬಲ್ಲಿ 1841 ರಿಂದ 1847ರ ವರೆಗೆ ವಾಸವಾಗಿದ್ದರು ಎಂದು ತಿಳಿದು ಬರುತ್ತದೆ. ಇವರ ಕಾರ್ಯಕ್ಷೇತ್ರ ಪುಣೆಯಾಗಿತ್ತು. ಕುಟುಂಬದಿಂದ ತಿರಸ್ಕೃತವಾಗಿ ಸಾವಿತ್ರಿಬಾಯಿ ಫುಲೆ ಮತ್ತು ಪತಿ ಜ್ಯೋತಿಬಾ ಫುಲೆ ಬೀದಿ ಪಾಲಾದಾಗ ಅವರಿಗೆ ಆಶ್ರಯ ನೀಡಿರುವುದು ಫಾತಿಮಾ ಶೇಖ್. ಫಾತಿಮಾ ಶೇಖ್‌ರು, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರೊಂದಿಗೆ ಸೇರಿ 1ನೇ ಜನವರಿ 1848ರಲ್ಲಿ ತಮ್ಮ ಪುಣೆಯಲ್ಲಿಯ ಮನೆಯಲ್ಲಿಯೇ ಮೊಟ್ಟ ಮೊದಲ ಶಾಲೆಯನ್ನು ಹೆಣ್ಣುಮಕ್ಕಳಿಗಾಗಿ ತೆರೆಯುತ್ತಾರೆ.

ಫಾತಿಮಾ ಶೇಖ್‌ರ ಪರಿಶ್ರಮವನ್ನು ಸಾವಿತ್ರಿಬಾಯಿಯವರು ತಮ್ಮ ಪತ್ರದಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ. ಸಾವಿತ್ರಿಯ ಎಲ್ಲ ಜವಾಬ್ದಾರಿಗಳನ್ನು ಫಾತಿಮಾರವರು ಬಹಳ ಸಮರ್ಥವಾಗಿ ನಿಭಾಯಿಸುತ್ತಿದ್ದರು. ಈ ಇಬ್ಬರೂ ಗೆಳತಿಯರು ತಮ್ಮ ಕೆಲಸದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಸಾವಿತ್ರಿ ತನ್ನ ಪತಿ ಜ್ಯೋತಿಬಾ ಫುಲೆಯವರಿಗೆ ಹಲವಾರು ಪತ್ರಗಳನ್ನು ಬರೆದಿರುತ್ತಾರೆ. ಅವರಿಬ್ಬರ ನಡುವೆ ಬಹಳಷ್ಟು ಪತ್ರ ವ್ಯವಹಾರಗಳು ನಡೆದಿರಬಹುದಾದರೂ ಅವು ಈಗ ಲಭ್ಯಇಲ್ಲದಿರುವುದು ವಿಷಾದಕರ. ಸಾವಿತ್ರಿಬಾಯಿಯವರ ಕೇವಲ ಮೂರು ಪತ್ರಗಳು ಮಾತ್ರ ಇಂದು ಲಭ್ಯವಾಗಿವೆ. ಸಾವಿತ್ರಿಬಾಯಿ 1856ರಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ತವರಿಗೆ ಹೋಗಿರುತ್ತಾರೆ. ಆಗ ಅವರು ತಮ್ಮ ಹೆಣ್ಣುಮಕ್ಕಳ ಮತ್ತು ದಲಿತ ಮಕ್ಕಳ ಶಾಲೆಗಳ ಜವಾಬ್ದಾರಿಯನ್ನು ಫಾತಿಮಾ ಶೇಖ್‌ರಿಗೆ ನೀಡಿ ಹೋಗಿರುತ್ತಾರೆ. ಅದನ್ನು ಅವರು ತಮ್ಮ ಪತ್ರದಲ್ಲಿ ಹೀಗೆ ಹೇಳುತ್ತಾರೆ. ಅದರಲ್ಲಿ ‘‘ತನ್ನ ಗೈರು ಹಾಜರಿಯಿಂದ ಸಹಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ತೊಂದರೆಯಾಗಿರಬಹುದು’’ ಎಂಬ ಪ್ರಸ್ತಾಪ ಬರುತ್ತದೆ ಹಾಗೂ ತಾನು ಆದಷ್ಟು ಬೇಗ ಗುಣಮುಖಳಾಗಿ ವಾಪಸ್ ಕೆಲಸಕ್ಕೆ ಬರುವುದಾಗಿ ಬರೆಯಲಾಗಿದೆ ಅದು ಅವರು ಶಾಲೆಯನ್ನು ಪ್ರಾರಂಭಿಸಿದ ಆರಂಭಿಕ ದಿನಗಳಾಗಿದ್ದವು. ಸರ್ ಸೈಯದ್ ಅಹ್ಮದ್ ಖಾನ್‌ರವರು ‘ಮಹಮ್ಮದೀಯರ ಆಂಗ್ಲೋ ಓರಿಯಂಟಲ್ ಕಾಲೇಜ್’ನ್ನು 1875ರಲ್ಲಿ ಸ್ಥಾಪಿಸಿದರು. ಮುಂದೆ ಇದು ಪ್ರಖ್ಯಾತ ಅಲಿಗಢ ಮುಸ್ಲಿಂ ಯುನಿವರ್ಸಿಟಿಯಾಗಿ ಪರಿವರ್ತನೆಯಾಯಿತು. ಆದರೆ ಇವರಿಗಿಂತ ಮುಂಚೆಯೇ ಇಂಗ್ಲಿಷ್ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿದ ಮಹಿಳೆಯೊಬ್ಬಳು ಆಗಿ ಹೋಗಿರುವುದನ್ನು ಇತಿಹಾಸ ಯಾಕೆ ಮರೆಯಿತು ?

ಫಾತಿಮಾ ಶೇಖ್‌ರವರ ಜನ್ಮ ದಿನಾಂಕ ನಿಖರವಾಗಿಲ್ಲದಿದ್ದರೂ ಅನೇಕ ಚರ್ಚೆ, ಸಂವಾದಗಳು ನಡೆದು ಕೊನೆಗೆ 9ನೇ ಜನವರಿಯಂದು ಅವರ ಜನ್ಮದಿನವನ್ನು ಆಚರಿಸಬೇಕೆಂದು ತೀರ್ಮಾನಿಸಲಾಗಿದೆ. ಆದರೂ ಯಾರೂ ಯಾಕೆ ಫಾತಿಮಾ ಶೇಖ್‌ರವರ ಜನ್ಮದಿನವನ್ನು ಜನವರಿ 9ರಂದು ಆಚರಿಸುತ್ತಿಲ್ಲವೆಂಬುದು ಯೋಚಿಸಬೇಕಾದ ವಿಷಯವಾಗಿದೆ. ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆಯವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ. ಆಗಿನ ಪತ್ರಿಕೆಗಳೂ ಆ ಕುರಿತು ದಾಖಲಿಸಿರುವುದರಿಂದ ದಾಖಲೆಗಳು ಲಭ್ಯವಾದವು. ಫುಲೆ ದಂಪತಿಯ ನಿಧನದ 170 ವರ್ಷಗಳ ಬಳಿಕ ಅವರನ್ನು ದಾಖಲಿಸುವ ಕೆಲಸವಾಯಿತು. ಇಂದಿಗೆ ಸುಮಾರು 200 ವರ್ಷಗಳ ಹಿಂದೆಯೇ ಫಾತಿಮಾ ಶೇಖ್‌ರವರ ಜನನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫಾತಿಮಾ ಶೇಖ್‌ರವರ ಜನ್ಮ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಅವರು ಹುಟ್ಟಿದ್ದು ಇಂದಿಗೆ 200 ವರ್ಷಗಳ ಹಿಂದೆ ಎಂದು ಅಂದಾಜಿಸಲಾಗಿದೆ. ಕೆಲವು ದಾಖಲೆಗಳ ಪ್ರಕಾರ ಫಾತಿಮಾ ಶೇಖ್‌ರವರ ಜನ್ಮ ದಿನವನ್ನು ಬಹಳಷ್ಟು ಚರ್ಚೆಗಳ ನಂತರ 9ನೇ ಜನವರಿ ಎಂದು ತೀರ್ಮಾನಿಸಲಾಗಿದೆ. ಸರಕಾರವು 2014ರಲ್ಲಿ ಬಾಲಭಾರತಿ ಮಹಾರಾಷ್ಟ್ರ ಸ್ಟೇಟ್ ಬ್ಯಿರೋನವರು ಸರ್ ಸೈಯದ್ ಅಹ್ಮದ್ ಖಾನ್, ಝಾಕೀರ್ ಹುಸೇನ್, ಅಬ್ದುಲ್ ಕಲಾಂ ಆಝಾದ್‌ರಂತೆ ಫಾತಿಮಾ ಶೇಖ್‌ರ ಸಂಕ್ಷಿಪ್ತ ಪರಿಚಯ ನೀಡುವ ಪಠ್ಯವನ್ನು ಉರ್ದು ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿದೆ. ಫಾತಿಮಾ ಶೇಖ್‌ರ ಬಗ್ಗೆ ದಾಖಲಿಸುವುದು ಬಹಳ ಸಂಕೀರ್ಣ ವಿಷಯವಾಗಿದೆ ನಿಜ, ಏಕೆಂದರೆ ಅವರು ಇತಿಹಾಸದಲ್ಲಿ ಕಳೆದು ಹೋಗಿದ್ದಾರೆ. ಆದರೆ ಅವರನ್ನು ಮತ್ತೆ ಸ್ಥಾಪಿಸುವಂತಹ ಮಹತ್ವದ ಕಾರ್ಯ ಇನ್ನು ಮುಂದಾದರೂ ನಡೆಯಬೇಕಿದೆ.

ಫಾತಿಮಾ ಮತ್ತು ಅವರ ಸೋದರ ಉಸ್ಮಾನ್ ಶೇಖ್ ಪ್ರಗತಿಪರ ಕೆಲಸಗಳ ಕುರಿತು ವೈದಿಕರ ವಿರೋಧವಿತ್ತು ನಿಜ. ಆದರೆ ಮುಸ್ಲಿಂ ಸಮುದಾಯ ಅವರ ಕಾರ್ಯಗಳನ್ನು ಹೇಗೆ ಸ್ವೀಕರಿಸಿತ್ತು?. ಅವರ ಸಮಾಜದೊಳಗಿನಿಂದ ಅವರಿಗೆ ಪ್ರಶಂಸೆ ದೊರೆಯಿತೇ ಅಥವಾ ವಿರೋಧಿಸಿತೇ? ಎಂಬ ವಿವರ ದೊರಕುವುದಿಲ್ಲ. ಇಂತಹ ದಿಟ್ಟ ಹೋರಾಟಗಾರ್ತಿಯ ಕುರಿತು ಅವರ ಬದುಕು ಹೋರಾಟಗಳ ಕುರಿತು ಈಗಲೂ ಸಂಶೋಧನೆ ಮತ್ತು ದಾಖಲೀಕರಣದ ಕೆಲಸ ನಡೆಯಬೇಕಾಗಿದೆ. ಇಲ್ಲವಾದರೆ ಇವರು ಅಜ್ಞಾತಕ್ಕೆ ಸೇರುವ ಸಾಧ್ಯತೆ ಇದೆ.

 ಭಾರತೀಯ ಇತಿಹಾಸದಲ್ಲಿ ಫಾತಿಮಾರಂತಹ ಅನೇಕ ಮಹನೀಯರು ಮರೆವಿಗೆ ಸಂದಿದ್ದಾರೆ. ಈಗಲಾದರೂ ಅವರ ಕುರಿತು ಸರಿಯಾದ ದಾಖಲಾತಿಗಳನ್ನು ಹೆಕ್ಕಿ ತೆಗೆಯಬೇಕಾಗಿದೆ. ಮನುಕುಲದ ಶಿಕ್ಷಣದ ಇತಿಹಾಸವನ್ನು ಜಾತಿವಾರು ಸಂಘಟಿಸಲು ಸಾಧ್ಯವಿಲ್ಲ. ಸಾವಿತ್ರಿಬಾಯಿಯ ಚರಿತ್ರೆಯನ್ನು ಅವರ ಜಾತಿಯವರೇ ಮತ್ತು ಫಾತಿಮಾ ಶೇಖ್ ಚರಿತ್ರೆಯನ್ನು ಅವರವರ ಜಾತಿಯವರೇ ಸಂಘಟಿಸಬೇಕು, ಅವರೇ ಸಂಶೋಧನೆ ನಡೆಸಬೇಕೆಂದೇನೂ ಇಲ್ಲ. ಸಾವಿತ್ರಿಬಾಯಿಯನ್ನು ಮುಖ್ಯವಾಹಿನಿಗೆ ತಂದಂತೆ, ಫಾತಿಮಾರನ್ನೂ ಮುಖ್ಯವಾಹಿನಿಗೆ ತರುವುದು ಭಾರತೀಯರೆಲ್ಲರ ಜವಾಬ್ದಾರಿಯಾಗಿದೆ.

Writer - ಡಾ.ಕೆ.ಷರೀಫಾ, ಬೆಂಗಳೂರು

contributor

Editor - ಡಾ.ಕೆ.ಷರೀಫಾ, ಬೆಂಗಳೂರು

contributor

Similar News