ಸ್ವಾಭಿಮಾನದ ಸಾಧನೆ ಪ್ರೇರಣೆಯಾಗಲಿ: ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು, ಜ.3: ಸಾವಿರಾರು ಸಮಸ್ಯೆಗಳಿದ್ದರೂ ನಮ್ಮ ದೇಶದಲ್ಲಿ ಜಾತಿ, ರಾಜಕೀಯ ಬೆಂಬಲವಿಲ್ಲದೆ, ಒಬ್ಬ ವ್ಯಕ್ತಿ ಸ್ವಾಭಿಮಾನದಿಂದ ಜೀವಿಸಿ ಸಾಧನೆ ಮಾಡಬಹುದು. ಇದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಿದ್ದ ತಿಂಗಳ ಬಂಧುತ್ವ ಮಾತುಕತೆ ಎಂಬ ಸಂವಾದದಲ್ಲಿ ಮಾತನಾಡಿದ ಅವರು, ಸಾಧಿಸುವ ಜನರು ರಾಜಕಾರಣಿಗಳ ಬೆನ್ನ ಹಿಂದೆ ಹೋಗಬಾರದು. ಪ್ರಶಸ್ತಿ-ಪುರಸ್ಕಾರಗಳಿಗೆ ರಾಜಕಾರಣಿಗಳ ಹಿಂದೆ ಹೋದರೆ ಅದು ಅರ್ಥಹೀನವಾಗುತ್ತದೆ. ಸಾಹಿತ್ಯವು ಇದಕ್ಕೆ ಹೊರತೇನು ಅಲ್ಲ. ಕೃತಿಗಳಿಗೆ ಪ್ರಶಸ್ತಿಗಳು ಬಂದರೆ ಸಾಲದು, ಬದಲಾಗಿ ಅನ್ಯರಿಗೆ ಪ್ರೇರಣೆಯಾಗಬೇಕು ಎಂದರು.
‘ದೊಡ್ಡವರಿಗೆ ದೊಡ್ಡ ವೇದಿಕೆಗಳು ನಿರ್ಮಾಣವಾಗುವಂತೆ ಸಣ್ಣವರಿಗೆ ಸಣ್ಣ ವೇದಿಕೆ ನಿರ್ಮಾಣವಾಗುತ್ತವೆ’ ಎಂದು ಸಾಹಿತಿ ಕಿ.ರಂ.ನಾಗರಾಜು ಕಿವಿಮಾತು ಹೇಳುವ ಮೂಲಕ ‘ಕಾಗೆ ಮುಟ್ಟಿದ ನೀರು’ ಎಂಬ ಆತ್ಮಕತೆಯನ್ನು ಬರೆಯಲು ಪ್ರೇರಣೆ ನೀಡಿದರು ಎಂದು ನೆನಪಿಸಿಕೊಂಡ ಅವರು, ಕೃತಿಯಲ್ಲಿ ಜೀವನದ ಸುದೀರ್ಘ ಪ್ರ್ರಯಾಣವಿದ್ದರೂ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕೆಲವು ರಾಜಕೀಯ ಘಟನೆಗಳನ್ನು ಉದ್ದೇಶಪೂರ್ವಕವಾಗಿ ಬರೆದಿಲ್ಲ. ಅಲ್ಲದೆ, ಬರೆದಿದ್ದರಲ್ಲಿ 150 ಪುಟಗಳಷ್ಟು ವಿಷಯವನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸಮಕಾಲೀನ ಭಾರತದಲ್ಲಿ ಅಂದರೆ 2014ರಿಂದ ಈಚೆಗೆ ಎಲ್ಲವೂ ವ್ಯತಿರಿಕ್ತವಾಗಿ ಬದಲಾಗುತ್ತಿದೆ. ಹಿಂದೂ ಪವಿತ್ರ ಸ್ಥಳವೆಂದು ಹೆಸರಾಗಿದ್ದ ಕಾಶಿಯನ್ನು ರಾಜಕೀಯಗೊಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ವರ್ತಮಾನದ ಭಾರತ ಎಂಬ ಕೃತಿಯನ್ನು ಬರೆಯುತ್ತಿದ್ದು, ಅದರಲ್ಲಿ ನಾನು ಹಿಂದೆ ಬದುಕಿದ್ದ ಬಾರತಕ್ಕೂ, ಈಗ ಬದುಕುತ್ತಿರುವ ಭಾರತಕ್ಕೂ ಇರುವ ವ್ಯತ್ಯಾಸಗಳನ್ನು ಬಿಂಬಿಸಲಾಗುತ್ತಿದೆ. ನಾನು ಜೆಎನ್‍ಯು ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದಾಗ ನಡೆದಿರುವ ರಾಷ್ಟ್ರದ ಪ್ರಮುಖ ಸಂಗತಿಗಳನ್ನು ಕೃತಿಯಲ್ಲಿ ಚಿಕಿತ್ಸಕ ದೃಷ್ಟಿಯಿಂದ ನೋಡಲಾಗುತ್ತದೆ ಎಂದು ಅವರು ತಮ್ಮ ಮುಂಬರುವ ಕೃತಿಯ ಬಗ್ಗೆ ತಿಳಿಸಿದರು.