ಗೋವಾ: ಸ್ಥಾನ ಭದ್ರಪಡಿಸಿಕೊಳ್ಳುತ್ತಿರುವ ಟಿಎಂಸಿ- ಎಂಜಿಪಿ ಕೂಟ

Update: 2022-01-04 02:31 GMT
ಫೋಟೊ : PTI

ಬೆಳಗಾವಿ: ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಆರಂಭವಾಗಿದ್ದರೂ, ಟಿಎಂಸಿ-ಎಂಜಿಪಿ ಮೈತ್ರಿಕೂಟ ನಿಧಾನವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ.

ಯುವಕರು ಮತ್ತು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಯುವ ಶಕ್ತಿ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆ ಹೀಗೆ ಮೈತ್ರಿಕೂಟದ ಎರಡು ಪ್ರಮುಖ ಭರವಸೆಗಳಿಗೆ ಈ ಕರಾವಳಿ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ಹೇಳಲಾಗಿದೆ.

ಗೋವಾ ರಾಜಕೀಯ ಪಂಡಿತರ ಅಂದಾಜನ್ನು ನಂಬುವುದಾದರೆ, ಟಿಎಂಸಿ- ಎಂಜಿಪಿ ಕೂಟ, ಮುಂದಿನ ಕೆಲ ದಿನಗಳವರೆಗೆ ಇದೇ ರೀತಿ ಜನಬೆಂಬಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಕಾಂಗ್ರೆಸ್ ಹಾಗೂ ಬಿಜೆಪಿಯ ಸಾಂಪ್ರದಾಯಿಕ ಮತಬುಟ್ಟಿಗೆ ಕೈಹಾಕುವುದು ಖಚಿತ.

"ಟಿಎಂಸಿ-ಎಂಜಿಪಿ ಕೂಟ ಪ್ರಕಟಿಸಿರುವ ಭರವಸೆಗಳನ್ನು ಜನ ಮತ್ತು ಹಲವು ಮಂದಿ ನಾಯಕರು ಚೆನ್ನಾಗಿ ಸ್ವೀಕರಿಸಿದ್ದಾರೆ. ಇದು ಇಡೀ ಸ್ಪರ್ಧೆಯ ಗತಿಯನ್ನೇ ಬದಲಿಸುವ ನಿರೀಕ್ಷೆ ಇದೆ. ಟಿಎಂಸಿ- ಎಂಜಿಪಿ ಮೈತ್ರಿ ಪ್ರಸ್ತುತ ಉತ್ತಮ ರೂಪು ಪಡೆಯುತ್ತಿದ್ದು, ಕಣಕ್ಕಿಳಿಸುವ ಅಭ್ಯರ್ಥಿಗಳ ಮೇಲೆ ಪಕ್ಷದ ಭವಿಷ್ಯ ನಿಂತಿದೆ" ಎಂದು ರಾಜಕೀಯ ವಿಶ್ಲೇಷಕ ಕಿಶೋರ್ ನಾಯ್ಕ ಗಾಂವ್ಕರ್ ಹೇಳಿದ್ದಾರೆ.

ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಗುರಿ ಮಾಡಿರುವ ಟಿಎಂಸಿ- ಎಂಜಿಪಿ ಕೂಟ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂಬ ವಿಶ್ವಾಸವನ್ನು ಎಂಜಿಪಿ ನಾಯಕ ಸುದಿನ್ ದಾಲ್ವೇಕರ್ ವ್ಯಕ್ತಪಡಿಸಿದ್ದಾರೆ.

ರವಿವಾರ ಯುವಶಕ್ತಿ ಕಾರ್ಡ್‌ಗೆ ಚಾಲನೆ ನೀಡಿರುವ ಅವರು, ಈ ಯೋಜನೆ ಯುವ ಸಬಲೀಕರಣದ ಪ್ರಮುಖ ಅಸ್ತ್ರವಾಗಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News