3 ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅರವಿಂದ್ ಕೇಜ್ರಿವಾಲ್ ಗೆ ಕೊರೋನ ಪಾಸಿಟಿವ್

Update: 2022-01-04 05:01 GMT

ಹೊಸದಿಲ್ಲಿ: ನನಗೆ  ಕೋವಿಡ್‌-19 ಸೋಂಕು ದೃಢಪಟ್ಟಿದ್ದು,  ಮನೆಯಲ್ಲಿ ಸ್ವತಃ ಪ್ರತ್ಯೇಕವಾಗಿದ್ದೇನೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ .

ಕಳೆದ ಮೂರು ದಿನಗಳಲ್ಲಿ ಉತ್ತರ ಪ್ರದೇಶ, ಪಂಜಾಬ್ ಹಾಗೂ  ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬೃಹತ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್ ತನಗೆ ಕೊರೋನದ  ಸೌಮ್ಯ ರೋಗಲಕ್ಷಣಗಳಿದ್ದವು ಎಂದು ಹೇಳಿದರು.

"ನಾನು ಕೋವಿಡ್‌  ಪರೀಕ್ಷೆ ಮಾಡಿದ್ದೇನೆ. ಪಾಸಿಟಿವ್ ಆಗಿದೆ. ನನಗೆ ಸೌಮ್ಯ ಲಕ್ಷಣಗಳಿದ್ದವು. ಮನೆಯಲ್ಲಿ ನನ್ನನ್ನು ನಾನು ಪ್ರತ್ಯೇಕಿಸಿಕೊಂಡಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ನಿಮ್ಮನ್ನು ಪ್ರತ್ಯೇಕಿಸಿ ಹಾಗೂ  ನಿಮ್ಮನ್ನು ಪರೀಕ್ಷಿಸಿಕೊಳ್ಳಿ" ಎಂದು ಮುಖ್ಯಮಂತ್ರಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ 53 ವರ್ಷದ ಕೇಜ್ರಿವಾಲ್ ಅವರು ತಮ್ಮ ಆಮ್ ಆದ್ಮಿ ಪಾರ್ಟಿ (ಎಎಪಿ) ಗಾಗಿ ಬಿರುಸಿನ  ಪ್ರಚಾರ ನಡೆಸಿದ್ದಾರೆ. ಅವರು ನಿನ್ನೆ ಡೆಹ್ರಾಡೂನ್‌ನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಅದಕ್ಕೂ ಮೊದಲು ಅಮೃತಸರ ಹಾಗೂ  ಪಟಿಯಾಲದಲ್ಲಿ  ರ್ಯಾಲಿಗಳನ್ನು ನಡೆಸಿದ್ದರು.

ಸೋಮವಾರ 24 ಗಂಟೆಗಳಲ್ಲಿ 4,099 ಹೊಸ ಪ್ರಕರಣಗಳೊಂದಿಗೆ ದಿಲ್ಲಿ ಪಾಸಿಟಿವ್ ದರ ಹೆಚ್ಚುತ್ತಿರುವ ಕುರಿತು ವರದಿಯಾಗಿದೆ.

ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಜನರು ಭಯಭೀತರಾಗಬೇಡಿ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News