ಪಂಜಾಬ್‌ನಲ್ಲಿ ರಾತ್ರಿ ಕರ್ಫ್ಯೂ,ಶಾಲಾ-ಕಾಲೇಜುಗಳು ಜನವರಿ 15 ರವರೆಗೆ ಬಂದ್
ಚಂಡಿಗಡ: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರಕಾರವು ಮಂಗಳವಾರ ಸಾರ್ವಜನಿಕ ಚಲನವಲನವನ್ನು ನಿರ್ಬಂಧಿಸಲು ಶಾಲೆಗಳು ಹಾಗೂ ಕಾಲೇಜುಗಳನ್ನು ಮುಚ್ಚಲು ಹಾಗೂ ರಾತ್ರಿ ಕರ್ಫ್ಯೂ ವಿಧಿಸಲು ಆದೇಶಿಸಿದೆ.
ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಚರನ್ ಜಿತ್ ಸಿಂಗ್ ಚನ್ನಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಹೊಸ ನಿರ್ಬಂಧಗಳನ್ನು ಘೋಷಿಸಲಾಯಿತು.
ಇಂದು ಹೊರಡಿಸಲಾದ ಹೊಸ ಆದೇಶದ ಪ್ರಕಾರ ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಆಫ್‌ಲೈನ್ ತರಗತಿಗಳಿಗೆ ಮುಚ್ಚಲ್ಪಡುತ್ತವೆ ಹಾಗೂ ವರ್ಚುವಲ್ ತರಗತಿಗಳು ಮುಂದುವರಿಯುತ್ತವೆ. ಆದಾಗ್ಯೂ ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಾರ್‌ಗಳು, ಸಿನಿಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಸ್ಪಾಗಳು, ಮ್ಯೂಸಿಯಂಗಳು ಮತ್ತು ಮೃಗಾಲಯಗಳು 50 ಶೇ. ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು, ಎಲ್ಲಾ ಸಿಬ್ಬಂದಿ ಸದಸ್ಯರು ಸಂಪೂರ್ಣವಾಗಿ ಲಸಿಕೆ ಹಾಕಿಕೊಂಡಿರಬೇಕು ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ.
ಹೊಸ ನಿರ್ಬಂಧಗಳು ಜನವರಿ 15 ರವರೆಗೆ ಜಾರಿಯಲ್ಲಿರುತ್ತವೆ.