×
Ad

"ಮೋದಿ ಬಗ್ಗೆ ಹುಷಾರು ಎಂದು ಅಮಿತ್ ಶಾ ಹೇಳಿದರು" ಎಂಬ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಮೇಘಾಲಯ ರಾಜ್ಯಪಾಲ

Update: 2022-01-04 11:51 IST
ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ (PTI)

ಹೊಸದಿಲ್ಲಿ,ಜ.4: ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಅಹಂಕಾರಿ’ಯೆಂದು ಬಣ್ಣಿಸುವ ಮೂಲಕ ವಿವಾದದ ಕಿಡಿ ಹೊತ್ತಿಸಿದ ಮೇಘಾಲಯದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಮಂಗಳವಾರ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಕೃಷಿಕಾಯ್ದೆಯ ವಿಷಯದಲ್ಲಿ ಪ್ರಧಾನಿಯವರು ಪ್ರತಿಭಟನಕಾರರ ಜೊತೆ ಹೊಂದಿಕೊಳ್ಳುವ ಧೋರಣೆಯನ್ನು ಪ್ರದರ್ಶಿಸಲಿಲ್ಲವೆಂದು ಹೇಳಿಕೊಂಡಿದ್ದಾರೆ.

ಪ್ರಧಾನಿ ಜೊತೆಗೆ ತಾನು ನಡೆಸಿದ ಮಾತುಕತೆಯ ಬಗ್ಗೆ ಇಂಡಿಯಾಟುಡೇ ಟಿವಿ ಜೊತೆ ಮಾತನಾಡಿದ ಮಲಿಕ್ ‘ ಕೃಷಿ ಕಾಯ್ದೆಗಳ ಬಗ್ಗೆ ಪ್ರಧಾನಿ ತುಂಬಾ ಜಿಗುಟು ಧೋರಣೆ ಹೊಂದಿದ್ದರು. ಅವರು ಆ ಕಾಯ್ದೆಯಲ್ಲಿ ಯಾವುದೇ ಬದಲಾವಣೆಯನ್ನು ತರಲು ಸಿದ್ಧರಿರಲಿಲ್ಲ’ ಎಂದು ಹೇಳಿದರು.

ಇದನ್ನು ನಾನು ಆರೋಪವೆಂದು ಹೇಳುವುದಿಲ್ಲ. ಕೃಷಿ ಕಾಯ್ದೆಗಳ ಬಗ್ಗೆ ಪ್ರಧಾನಿ ಮೋದಿಯವರ ನಿಲುವು ಹೇಗಿತ್ತೆಂದರೆ,ಯಾವುದೇ ಮಾತನ್ನು ಕೇಳುವುದು ಅವರಿಗೆ ಬೇಕಾಗಿರಲಿಲ್ಲ. ಈ ಬಗ್ಗೆ ಅವರೊಂದಿಗೆ ಮಾತನಾಡಿದಾಗ, ನೀವು ಹೋಗಿ ಅಮಿತ್ಶಾರನ್ನು ಭೇಟಿ ಮಾಡಿ ಎಂದು ನನ್ನಲ್ಲಿ ಹೇಳಿದ್ದರೆಂದು ಸತ್ಯಪಾಲ್ ಮಲಿಕ್ ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘‘ಪ್ರತಿಭಟನೆ ನಡೆಸುತ್ತಿರುವವರು ಸಿಖ್ಖ್ ಸಮುದಾಯವಾಗಿದ್ದು, ಅವರು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ ಮತ್ತು ಜಾಟರು ಕೂಡಾ ಅವರೊಂದಿಗೆ ಸೇರಿಕೊಂಡಿದ್ದಾರೆ.ಹೀಗಾಗಿ ಇದು ಅತ್ಯಂತ ಸೂಕ್ಷ್ಮಸಂವೇದಿ ವಿಷಯವಾಗಿದೆ. ಅವರ ವಿರುದ್ಧ ಬಲಪ್ರಯೋಗಿಸಬೇಡಿ ಹಾಗೂ ಅವರನ್ನು ಬರಿಗೈಯಲ್ಲಿ ಕಳುಹಿಸದಿರಿ’’ ಎಂದು ತಾನು ಮೋದಿಯವರಿಗೆ ತಿಳಿಸಿದ್ದಾಗೆ ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.

ರವಿವಾರ ಪ್ರಸಾರವಾದ ವಿವಾದಾತ್ಮಕ ವಿಡಿಯೋವೊಂದರಲ್ಲಿ ಸತ್ಯಪಾಲಕ್ ಮಲಿಕ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತನ್ನೊಂದಿಗೆ ಪ್ರಧಾನಿಯ ಮನಸ್ಸು ನೆಟ್ಟಗಿಲ್ಲವೆಂದು ಹೇಳಿರುವುದಾಗಿ ಬಹಿರಂಗಪಡಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅವರು ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಅವರು, ತಾನು ಪ್ರಧಾನಿ ಮೋದಿಯನ್ನು ಅಪಾರವಾಗಿ ಗೌರವಿಸುತ್ತೇನೆ ಹಾಗೂ ಕೆಲವು ವ್ಯಕ್ತಿಗಳು ಅವರಿಗೆ ತಪ್ಪುಮಾರ್ಗದರ್ಶನ ನೀಡುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ ಎಂದರು.

ರೈತರ ಪ್ರತಿಭಟನೆಯಿಂದಾಗಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗಿದೆ ಹಾಗೂ ಕೇಂದ್ರ ಸರಕಾರವು ಆರಂಭದಲ್ಲೇ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕಿತ್ತು ಎಂದವರು ಹೇಳಿದ್ದಾರೆ.

‘‘ ಬಿಜೆಪಿ ನಾಯಕರಿಗೆ ಈಗ ಹಳ್ಳಿಗಳಿಗೆ ಹೋಗುವುದು ಕೂಡಾ ಕಷ್ಟವಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿ ಸಚಿವರಿಗೆ ಹಳ್ಳಿಗೆ ಪ್ರವೇಶಿಸಲೂ ಸಾಧ್ಯವಾಗುತ್ತಿಲ್ಲ. ಹರ್ಯಾಣದಲ್ಲಿ ಜನರು ಮುಖ್ಯಮಂತ್ರಿ ಹೆಲಿಕಾಪ್ಟರನ್ನು ಕೂಡಾ ಇಳಿಯಲು ಬಿಟ್ಟಿಲ್ಲ’’ ಎಂದು ಸತ್ಯಪಾಲ್ ಮಲಿಕ್ ಹೇಳಿದರು..
 
ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ರೈತ ಸ್ನೇಹಿ ನಾಯಕರೆಂದು ಜನಪ್ರಿಯರಾಗಿದ್ದರು. ‘‘ ಮುಖ್ಯಮಂತ್ರಿಯಾಗಿದ್ದಾಗ ಅವರು ಕನಿಷ್ಠ ಬೆಂಬಲ ಬೆಲೆಯ ಪರವಾಗಿದ್ದರು. ಆದರೆ ಅವರಿಗೆ ಈಗ ಏನಾಗಿದೆಯೆಂದು ನನಗೆ ತಿಳಿಯುತ್ತಿಲ್ಲ’’ ಎಂದು ಮಲಿಕ್ ಹೇಳಿದರು.

‘‘ ಕೃಷಿ ಕಾಯ್ದೆ ಹಿಂತೆಗೆದುಕೊಂಡರೂ, ರೈತರಿಗೆ ಇನ್ನೂ ಸಮಾಧಾನವಾಗಿಲ್ಲ. ರೈತರ ಪರವಾಗಿ ತ್ವರಿತವಾಗಿ ನಿರ್ಧಾರವನ್ನು ಕೈಗೊಳ್ಳುವುದು ಉತ್ತಮ. ಒಂದು ವೇಳೆ ಪ್ರಧಾನಿ ಆರಂಭದಲ್ಲಿ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದಲ್ಲಿ, ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿರಲಿಲ್ಲ’’ ಎಂದರು.
 
ರೈತರ ಪ್ರತಿಭಟನೆಯ ಕುರಿದತು ತಾನು ಮಾತನಾಡಿದ ಬಳಿಕ ಮೇಘಾಲಯದ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೆ. ಆದರೆ ಯಾರೂ ಕೂಡಾ ರಾಜೀನಾಮೆ ನೀಡುವಂತೆ ನನ್ನನ್ನು ಕೇಳಿಕೊಳ್ಳಲಿಲ್ಲ’’ ಎಂದು ಮಲಿಕ್ ಇಂಡಿಯಾಟುಡೇ ಟಿವಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣವೊಂದರಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಮೇಘಾಲಯ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ರೈತ ಪ್ರತಿಭಟನೆಗಳ ಬಗ್ಗೆ ತಾನು ಪ್ರಧಾನಿಯನ್ನು ಭೇಟಿ ಮಾಡಿದ್ದರ ಬಗ್ಗೆ ಪ್ರಸ್ತಾವಿಸಿದ್ದರು. ‘‘ ರೈತರ ಪ್ರತಿಭಟನೆಯ ಕುರಿತು ನಾನು ಇತ್ತೀಚೆಗೆ ಪ್ರಧಾನಿಯನ್ನು ಭೇಟಿ ಮಾಡಿದ್ದಾಗ, ಐದು ನಿಮಿಷಗಳೊಳಗೆ ನಾನು ಚರ್ಚೆಗಿಳಿದೆ. ರೈತ ಪ್ರತಿಭಟನೆಯಲ್ಲಿ 500 ಮಂದಿ ಮೃತಪಟ್ಟಿದ್ದಾರೆಂದು ನಾನು ಅವರಿಗೆ ಹೇಳಿದೆ. ಆಗ ಮೋದಿ ಅವರು ‘ಅವರೇನು ನನಗೋಸ್ಕರ ಸತ್ತಿದ್ದಾರೆಯೇ’ ಎಂದು ನನ್ನನ್ನು ಪ್ರಶ್ನಿಸಿದ್ದಾಗಿ ಸತ್ಯಪಾಲ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News