ಒಮೈಕ್ರಾನ್ ಗೆ ದೇಶದಲ್ಲೇ ಮೊದಲ ಬಲಿ: ರಾಜಸ್ಥಾನದಲ್ಲಿ 75 ವರ್ಷದ ವೃದ್ಧ ಸಾವು

Update: 2022-01-05 18:36 GMT

ಜೈಪುರ/ಹೊಸದಿಲ್ಲಿ, ಜ. 5: ಒಮೈಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಯೋರ್ವರು ರಾಜಸ್ಥಾನದ ಉದಯಪುರದಲ್ಲಿ ಬುಧವಾರ ಮೃತಪಟ್ಟಿದ್ದಾನೆ. ಇದು ಒಮೈಕ್ರಾನ್ ಸೋಂಕಿನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವು ಎಂದು ಸರಕಾರದ ಮೂಲಗಳು ದೃಢಪಡಿಸಿವೆ. ‌

73 ವರ್ಷದ ವ್ಯಕ್ತಿಗೆ ಡಿಸೆಂಬರ್ 15ರಂದು ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಅನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಸಕ್ಕರೆ ಖಾಯಿಲೆ, ಹೈಪರ್ ಟೆಂಶನ್ ಹಾಗೂ ಇತರ ಸಹ ರೋಗಗಳು ಇದ್ದವು. ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸ್ ಗೆ ಕಳುಹಿಸಿ ಕೊಡಲಾಗಿತ್ತು. ಈ ನಡುವೆ ಡಿಸೆಂಬರ್ 21ರಂದು ಅವರ ಕೋವಿಡ್ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿತ್ತು. ಅವರು ಕೋವಿಡ್‌ನ ಎರಡೂ ಲಸಿಕೆಯನ್ನು ತೆಗೆದುಕೊಂಡಿದ್ದರು. ಅಲ್ಲದೆ, ಅವರಿಗೆ ಯಾವುದೇ ಪ್ರಮುಖ ಸಂಪರ್ಕವಾಗಲಿ, ಪ್ರಯಾಣ ಇತಿಹಾಸವಾಗಲಿ ಇರಲಿಲ್ಲ. ಅವರ ಸಾವನ್ನು ಒಮೈಕ್ರಾನ್‌ನಿಂದ ಸಂಭವಿಸಿದ ಸಾವು ಎಂದು ಪರಿಗಣಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ಇದು ಒಮೈಕ್ರಾನ್‌ನಿಂದ ಸಂಭವಿಸಿದ ಸಾವು ಎಂದು ರಾಜಸ್ಥಾನ ಸರಕಾರದ ಆರೋಗ್ಯ ಇಲಾಖೆ ದೃಢಪಡಿಸಿದೆ. ಡಿಸೆಂಬರ್ 25ರಂದು ಅವರ ಜೆನೋಮ್ ಸೀಕ್ವೆನ್ಸ್ ನ ವರದಿ ಬಂದಿತ್ತು. ಅವರ ವರದಿಯಲ್ಲಿ ಒಮೈಕ್ರಾನ್ ವೈರಸ್ ಪತ್ತೆಯಾಗಿತ್ತು. ಅನಂತರ 6 ದಿನಗಳ ಬಳಿಕ ಅಂದರೆ, ಡಿಸೆಂಬರ್ 31ರಂದು ಬೆಳಗ್ಗೆ 3.30ಕ್ಕೆ ಅವರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News