ಬೆಂಗಳೂರು ನಗರದ ಅಭಿವೃದ್ಧಿಗೆ 6 ಸಾವಿರ ಕೋಟಿ ರೂ.ನೆರವು ನೀಡಲು ಸಂಪುಟ ಒಪ್ಪಿಗೆ

Update: 2022-01-06 17:13 GMT

ಬೆಂಗಳೂರು, ಜ. 6: ರಾಜಧಾನಿ ಬೆಂಗಳೂರು ನಗರದ ಅಭಿವೃದ್ಧಿಗೆ ಅಮೃತ್ ನಗರೋತ್ಥಾನ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 2 ಸಾವಿರ ಕೋಟಿ ರೂ.ಗಳಂತೆ ಒಟ್ಟು 6 ಸಾವಿರ ಕೋಟಿ ರೂ.ವೆಚ್ಚ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಗುರುವಾರ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ, ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸರಕಾರ ರಸ್ತೆ, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದೆ ಎಂದರು.

ಹತ್ತು ಪಥದ ರಸ್ತೆ ಅಭಿವೃದ್ಧಿ: ನಗರದ ಹೆಬ್ಬಾಳ ಜಂಕ್ಷನ್ ಸಾಮಥ್ರ್ಯ ಹೆಚ್ಚಳ ಮಾಡಲು ಉದ್ದೇಶಿಸಿದ್ದು, ಹೆಬ್ಬಾಳ, ತುಮಕೂರು ರಸ್ತೆ ಹಾಗೂ ಕೆ.ಆರ್.ಪುರ ರಸ್ತೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಮಾಸ್ಟರ್ ಪ್ಲಾನ್‍ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಸಂಬಂಧ ಸಮಗ್ರ ಯೋಜನಾ ವರದಿ ತಯಾರಿಸಿ ಕೊಡಲು ಬಿಎಂಆರ್‍ಸಿಎಲ್‍ಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ 2051ರಲ್ಲಿನ ಸಂಚಾರ ಅಗತ್ಯವನ್ನು ಪೂರೈಸಲು ಸಾಮಥ್ರ್ಯ ವರ್ಧನೆಗಾಗಿ ಮತ್ತು ಈ ಪ್ರಮುಖ ಜಂಕ್ಷನ್‍ನಲ್ಲಿ ನಗರದ ಹೆಬ್ಬಾಳ, ತುಮಕೂರು ರಸ್ತೆ ಹಾಗೂ ಕೆ.ಆರ್.ಪುರ ರಸ್ತೆಯ ಸಂಚಾರವನ್ನು ಸುಗಮಗೊಳಿಸಲು ಯೋಜನೆ ರೂಪಿಸಲು ಒಂದು ಸಮಗ್ರ ಅಧ್ಯಯನವನ್ನು ಬಿಎಂಆರ್‍ಸಿಎಲ್ ಕೈಗೊಂಡಿದೆ ಎಂದು ಅವರು ತಿಳಿಸಿದರು.

ನಗರದ ಹೆಬ್ಬಾಳ ಜಂಕ್ಷನ್ ಅತ್ಯಂತ ಜನನಿಬಿಡ ಜಂಕ್ಷನ್. ಇಲ್ಲಿ ಸಂಚಾರ ದಟ್ಟಣೆಯಿಂದ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಮತ್ತು ಹಿಂದಿರುಗಲು ವಿಳಂಬವಾಗುತ್ತಿದೆ. ಅದೇ ರೀತಿ ತುಮಕೂರು ರಸ್ತೆ-ಕೆ.ಆರ್.ಪುರ ರಸ್ತೆಯಲ್ಲೂ ಸಿಗ್ನಲ್ ಇರುವುದರಿಂದ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ. ಈ ಕಾರಣಕ್ಕೆ ಹೆಬ್ಬಾಳ ಜಂಕ್ಷನ್‍ನಲ್ಲಿ ರಸ್ತೆ ಮತ್ತು ರೈಲು ಮೂಲಸೌಕರ್ಯಗಳ ಸಾಮಥ್ರ್ಯ ವರ್ಧನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಗರದಿಂದ ವಿಮಾನ ನಿಲ್ದಾಣಕ್ಕೆ ಅಸ್ತಿತ್ವದಲ್ಲಿರುವ ಮೇಲ್ಸೇತುವೆಯ ಪಶ್ಚಿಮಕ್ಕೆ ನಾಲ್ಕು ಪಥದ ಮೇಲ್ಸೇತುವೆ ಹಾಗೂ ಈ ಮೇಲ್ಸೇತುವೆ 3 ಪಥಗಳು ವಿಮಾನ ನಿಲ್ದಾಣದ ಕಡೆಗೆ ಮುಂದುವರಿಯುತ್ತವೆ. 2 ಪಥಗಳು ತುಮಕೂರು ಕಡೆಗೆ ಇಳಿಯಲಿವೆ. ತುಮಕೂರಿನಿಂದ ಕೆ.ಆರ್.ಪುರದ ಕಡೆಗೆ ಹೊಸ 3-ಪಥದ ಕೆಳಸೇತುವೆ ಕೆ.ಆರ್.ಪುರದಿಂದ ನಗರಕ್ಕೆ ಹೊಸ 2-ಪಥದ ಮೇಲ್ಸೇತುವೆ, ಕೆ.ಆರ್.ಪುರದಿಂದ ವಿಮಾನ ನಿಲ್ದಾಣಕ್ಕೆ ಹೊಸ 2-ಪಥದ ಮೇಲ್ಸೇತುವೆ ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸೇತುವೆ ಪೂರ್ವಕ್ಕೆ ಹೊಸ 3-ಪಥದ ಮೇಲ್ಸೇತುವೆ ವಿಮಾನ ನಿಲ್ದಾಣದಿಂದ ನಗರಕ್ಕೆ ಪ್ರಸ್ತಾಪ. ಕೆ.ಆರ್.ಪುರಂನಿಂದ ನಗರಕ್ಕೆ 2 ಪಥದ ಮೇಲ್ಸೇತುವೆಯ ಹೊಸ ಮೇಲ್ಸೇತುವೆಯಲ್ಲಿ ವಿಲೀನಗೊಂಡು ಚತುಷ್ಪಥ ಆಗಲಿದೆ.

ಪ್ರಸ್ತಾವಿತ ವಿನ್ಯಾಸವನ್ನು ಪೂರ್ಣಗೊಳಿಸಿದ ನಂತರ ನಗರದಿಂದ ವಿಮಾನ ನಿಲ್ದಾಣಕ್ಕೆ 5 ಪಥ ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ 5 ಪಥಗಳು ಇರುತ್ತವೆ. ಹೆಬ್ಬಾಳ ಜಂಕ್ಷನ್ ಮೂಲಸೌಕರ್ಯಗಳ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ಕ್ರಿಯಾ ಯೋಜನೆ ವರದಿ ನೀಡಲು ಸೂಚಿಸಲಾಗಿದೆ ಎಂದರು.

ಚುನಾವಣೆ ಸದಾ ಸಿದ್ಧ: ಮುಂದಿನ ಬಜೆಟ್‍ನಲ್ಲಿ ನಗರದ ಅಭಿವೃದ್ಧಿಗೆ ಹಣಕಾಸನ್ನು ಒದಗಿಸಲಾಗುವುದು. ಹೀಗಾಗಿಯೇ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಘೋಷಣೆ ಮಾಡಿಲ್ಲ. ಒಂದು ರಾಜಕೀಯ ಪಕ್ಷವಾಗಿ ನಾವು ಚುನಾವಣೆಗೆ ಸದಾ ಸಿದ್ಧ. ಆದರೆ, ಭವಿಷ್ಯದ ದೃಷ್ಟಿಯಿಂದ ನಗರದ ಅಭಿವೃದ್ಧಿಯೂ ಮುಖ್ಯ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News