ಅನುದಾನ ತಾರತಮ್ಯ ವಿರೋಧಿಸಿ ಬಿಬಿಎಂಪಿ-ಸಿಎಂ ಕಚೇರಿ ಮುಂದೆ ಕಾಂಗ್ರೆಸ್‌ನಿಂದ ಧರಣಿ: ರಾಮಲಿಂಗಾರೆಡ್ಡಿ

Update: 2022-01-07 12:45 GMT

ಬೆಂಗಳೂರು, ಜ.7: ಬೆಂಗಳೂರಿನಲ್ಲಿ ಕೇವಲ 1 ಗಂಟೆಯಲ್ಲಿ 90 ಮಿ.ಮೀಟರ್ ಮಳೆಯಾದರೆ ಸುಮಾರು 100 ಕಡೆಗಳಲ್ಲಿ ಪ್ರವಾಹವಾಗುತ್ತದೆ. ಅದು ಪ್ರಕೃತಿ ವಿಕೋಪ. ಅದನ್ನು ತಡೆಯಲು ಸಾಧ್ಯವಿಲ್ಲ, ಆದರೆ ನಂತರ ಸರಕಾರ ಹೇಗೆ ನಡೆದುಕೊಳ್ಳಲಿದೆ ಎಂಬುದು ಮುಖ್ಯ. ಇತ್ತೀಚೆಗೆ ಅತಿಯಾದ ಮಳೆ ಬಿದ್ದಾಗ ಮುಖ್ಯಮಂತ್ರಿ 1500 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಮಾತೆತ್ತಿದರೆ ಅವರು ಬೆಂಗಳೂರು ಅಭಿವೃದ್ಧಿ ಎಂದು ಹೇಳುತ್ತಾರೆ. ಅವರ ಪ್ರಕಾರ ಬಿಜೆಪಿ ಶಾಸಕರು ಎಲ್ಲಿದ್ದಾರೋ ಅದು ಮಾತ್ರ ಬೆಂಗಳೂರು ಎಂದು ತಿಳಿದುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಗಾರಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರವಿದ್ದು, ಈ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿಯಾದಂತೆ. ಕಾಂಗ್ರೆಸ್ ಸರಕಾರ ಇದ್ದಾಗ, ಸಮ್ಮಿಶ್ರ ಸರಕಾರದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಸರಾಸರಿ 150 ಕೋಟಿಯಷ್ಟು ಅನುದಾನ ನೀಡಿದ್ದೆವು. ನಾವು ಸ್ವಲ್ಪ ಹೆಚ್ಚಿನ ಅನುದಾನ ಪಡೆದಿದ್ದು, ಹೊರವಲಯದ ಕ್ಷೇತ್ರಗಳಿಗೆ ಅಭಿವೃದ್ಧಿ ಮಾಡಲು ಹೆಚ್ಚಿನ ಅನುದಾನ ನೀಡಿದ್ದೆವು ಎಂದರು.

ನಿನ್ನೆ ಮುಖ್ಯಮಂತ್ರಿ ಬೆಂಗಳೂರಿನ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ ನೀಡಿದ್ದು, ಅದರಲ್ಲಿ 298 ಕೆಲಸಗಳನ್ನು ಗುರುತಿಸಿದ್ದಾರೆ. ಮಳೆ ಬಂದಾಗ ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 10 ತಿಂಗಳ ಹಿಂದೆ ನಾನು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದೆ. ಅದರಲ್ಲಿ ನಾನು ನಾಲ್ಕು ಕಾಮಗಾರಿಗಳಿಗಾಗಿ 25 ಕೋಟಿ ಹಣ ಬೇಕು ಎಂದು ಕೇಳಿದ್ದೆ. ಸರಕಾರ ಈಗ ಕಾರ್ಯಯೋಜನೆ ಮೂಲಕ ನಗರಾಭಿವೃದ್ಧಿ ಸಚಿವಾಲಯಕ್ಕೆ ಹಣ ನೀಡಲಾಗಿದೆ. ಇದರಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್ ಶಾಸಕರು ಇರುವ ಸರ್ವಜ್ಞ ನಗರ, ಶಾಂತಿನಗರ, ಶಿವಾಜಿನಗರ, ಹೆಬ್ಬಾಳ, ಪುಲಕೇಶಿನಗರ, ಚಾಮರಾಜಪೇಟೆ, ವಿಜಯನಗರ, ಬ್ಯಾಟರಾಯನಪುರದ 9 ಶಾಸಕರಿಗೆ 248.29 ಕೋಟಿ ರೂ. ಅನುದಾನ ನೀಡಿದ್ದರೆ, ಬಿಜೆಪಿ 15 ಶಾಸಕರಿಗೆ 1100.34 ಕೋಟಿ ರೂ. ನೀಡಿದ್ದಾರೆ. ಜೆಡಿಎಸ್‍ನ ದಾಸರಹಳ್ಳಿ ಶಾಸಕರಿಗೆ 125 ಕೋಟಿ ರೂ. ನೀಡಿದ್ದಾರೆ. ದೇವೇಗೌಡರು ಹೋಗಿ ಪ್ರತಿಭಟನೆ ಮಾಡಿದ್ದಕ್ಕೆ ಕೊಟ್ಟಿದ್ದಾರೆ. ಅಗತ್ಯ ಇರುವ ಕಡೆ ಕೊಡಲಿ ನಾವು ಅದನ್ನು ಪ್ರಶ್ನಿಸುವುದಿಲ್ಲ. ಇನ್ನು ಜಯನಗರ ಹಾಗೂ ಬಿಟಿಎಂ ಕ್ಷೇತ್ರಕ್ಕೆ ಒಂದೇ ಒಂದು ಪೈಸೆ ಅನುದಾನವನ್ನು ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ಜಯನಗರ, ಬಿಟಿಎಂ ಲೇಔಟ್ ಕ್ಷೇತ್ರಗಳಲ್ಲಿ ಪ್ರವಾಹ ಉಂಟಾಗಿರಲಿಲ್ಲವೇ? ನಾನು ಈ ವಿಚಾರವಾಗಿ ಎರಡನೇ ತಿಂಗಳಲ್ಲೇ ಬ್ರಿಡ್ಜ್ ಸೇರಿದಂತೆ ಇತರೆ ಕೆಲಸಗಳ ಬಗ್ಗೆ ಹಣ ಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಸರಕಾರ ಯಾವ ಕಾರಣಕ್ಕೆ ಈ ಎರಡು ಕ್ಷೇತ್ರಗಳಿಗೆ ನಯಾಪೈಸೆ ಹಣ ನೀಡಿಲ್ಲ ಎಂದು ಮುಖ್ಯಮಂತ್ರಿಯನ್ನು ಕೇಳುತ್ತೇನೆ? ಇನ್ನು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಗೌರವ್ ಗುಪ್ತಾ ಅವರಿದ್ದು, ಈ ವಿಚಾರವಾಗಿ ನಾನು ಅವರ ಜತೆ ಮಾತನಾಡಿದ್ದೇನೆ. ಅವರು ಈ ವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಬಿಬಿಎಂಪಿ-ಸಿಎಂ ಕಚೇರಿ ಎದುರು ಧರಣಿ: ಸೋಮವಾರದ ಒಳಗೆ ಈ ವಿಚಾರ ಬಗೆಹರಿಸದಿದ್ದರೆ ಬಿಬಿಎಂಪಿ ಮುಂದೆ ಧರಣಿ ಮಾಡಬೇಕಾಗುತ್ತದೆ. ಕೋವಿಡ್ ಇರುವ ಹಿನ್ನೆಲೆಯಲ್ಲಿ ನಾನು ಹಾಗೂ ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರು ನಾವಿಬ್ಬರೇ ಧರಣಿ ಮಾಡುತ್ತೇವೆ. ನಂತರವೂ ಸರಕಾರ ಈ ಸಮಸ್ಯೆ ಬಗೆಹರಿಸದಿದ್ದರೆ ಜ.12ರಂದು ಮುಖ್ಯಮಂತ್ರಿ ಕಚೇರಿ ಮುಂದೆ ನಾವಿಬ್ಬರೇ ಧರಣಿ ಮಾಡುತ್ತೇವೆ. ಬೇರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಿಗೆ ಅನುದಾನ ಕಡಿಮೆ ಎನಿಸಿದರೆ ಅವರೂ ಬಂದು ನಮ್ಮ ಜತೆ ಧರಣಿ ಮಾಡಬಹುದು. ನಮಗೆ ಯಾವುದೇ ಅನುದಾನ ನೀಡದಿರುವುದನ್ನು ಪ್ರಶ್ನಿಸಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ರಾಮಲಿಂಗಾರೆಡ್ಡಿ ಎಚ್ಚರಿಸಿದರು.

ಅನುದಾನಕ್ಕೆ ಯಾರು ತಡೆಯೊಡ್ಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ನಮಗೆ ಒಂದು ರೂಪಾಯಿಯೂ ಅನುದಾನ ನೀಡಿಲ್ಲ. ಈ ಸಚಿವಾಲಯ ಇರೋದು ಮುಖ್ಯಮಂತ್ರಿ ಬಳಿ, ಈ ಪ್ರಸ್ತಾವನೆಯನ್ನು ಆಯುಕ್ತರಿಗೆ ಕಳುಹಿಸಬೇಕಾಗಿತ್ತು. ನಂತರ ರಾಕೇಶ್ ಸಿಂಗ್ ಮೂಲಕ ಮುಖ್ಯಮಂತ್ರಿ ಬಳಿ ಹೋಗುತ್ತೆ. ಅಧಿಕಾರಿಗಳು ಈ ವಿಚಾರ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಬಗೆಹರಿಯದಿದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ. ಸರಕಾರ ಅನುದಾನ ನೀಡಲಿಲ್ಲ ಎಂದರೆ, ನನಗೆ ಆ ಮೋರಿಗಳನ್ನು ದತ್ತು ನೀಡಲಿ, ನಾನು ಪಾಲಿಕೆ ಅನುದಾನ ಕೇಳದೇ ಶಾಸಕರ ನಿಧಿಯಿಂದ ಅವುಗಳ ಕೆಲಸ ಮಾಡಿಕೊಳ್ಳುತ್ತೇನೆ’ ಎಂದರು.

‘ಈ ಸರಕಾರ ಬಂದ ನಂತರ ನಮಗೆ ಕಳೆದ ಸರಕಾರಕ್ಕಿಂತ 176 ಕೋಟಿ ರೂ.ಅನುದಾನ ಕಡಿತ ಮಾಡಿದರು. ಕೇವಲ 17 ಕೋಟಿ ಮಾತ್ರ ಕೊಟ್ಟಿದ್ದಾರೆ. ಇದರಿಂದ ಮಡಿವಾಳ ಜಂಕ್ಷನ್‍ನಲ್ಲಿ ಒಂದು ಅಂಡರ್ ಪಾಸ್ ಮಾತ್ರ ಆಗುತ್ತದೆ. ನನ್ನ ಮಗಳ ಕ್ಷೇತ್ರ ಜಯನಗರಕ್ಕೆ ಸುಮಾರು 200 ಕೋಟಿ ರೂ.ಅನುದಾನ ಕಡಿಮೆ ಮಾಡಿದರು. ಈಗ ಯಾವುದೇ ಅನುದಾನ ನೀಡಿಲ್ಲ’ ಎಂದು ಅವರು ಕಿಡಿಗಾರಿದರು.

ಈ ಸರಕಾರ ಬಂದಾಗಿನಿಂದಲೂ ಈ ರೀತಿ ತಾರತಮ್ಯ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘2020-21ನೇ ಸಾಲಿನಲ್ಲಿ 198 ವಾರ್ಡ್ ಗಳಲ್ಲಿ ಯಾವುದೇ ವಾರ್ಡ್‍ಗಳಿಗೆ ನಯಾಪೈಸೆ ನೀಡಿಲ್ಲ. ಇನ್ನು 2021-22ನೇ ಸಾಲಿನಲ್ಲಿ ಕೇವಲ 60 ಲಕ್ಷ ಅನುದಾನ ನೀಡಿದ್ದು, ಅದು ಇನ್ನು ಕೋಡ್ ಆಗಿಲ್ಲ. ಅದರಲ್ಲಿ 20 ಲಕ್ಷ ರಸ್ತೆಗುಂಡಿ ಮುಚ್ಚಲು, 20 ಲಕ್ಷ ಕೊಳವೆಬಾವಿ ನಿರ್ವಹಣೆ, 20 ಲಕ್ಷ ಶಿಲ್ಟ್ ಅಂಡ್ ಟ್ರ್ಯಾಕ್ಟರ್ಗೆ ನೀಡಿದ್ದಾರೆ. ಹಾಗಾಗಿ ಎರಡು ವರ್ಷಗಳಲ್ಲಿ ಬಿಬಿಯಿಂದ 198 ಕ್ಷೇತ್ರಗಳಿಗೆ ಶೂನ್ಯ ಅನುದಾನ ಸಿಕ್ಕಿದೆ. ಈ ವರ್ಷ ನಮ್ಮ ಎರಡು ಕ್ಷೇತ್ರಕ್ಕೆ ಶೂನ್ಯ ಅನುದಾನ ಕೊಟ್ಟಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಎಲ್ಲ ಕೆಲಸ ಮುಗಿದಿದ್ದರೆ ಒಂದು ಮಾತು, ಆದರೆ ನಮ್ಮಲ್ಲೂ ಕೆಲಸಗಳು ಬಾಕಿ ಇವೆ’ ಎಂದು ಉತ್ತರಿಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಕೇಳಿದ ಪ್ರಶ್ನೆಗೆ, ‘ಎಪ್ರಿಲ್‍ನಲ್ಲಿ ಚುನಾವಣೆ ನಡೆಯಬಹುದು. ಸುಪ್ರೀಂಕೋರ್ಟ್ ಮುಂದೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಮೋದಿ ಅವರ ಪಕ್ಷ, ನಾನು ಇನ್ನು ಮುಂದೆ ಬಿಜೆಪಿ ಎಂದು ಹೇಳುವ ಬದಲು ದೇವೇಗೌಡರಂತೆ ಮೋದಿ ಪಕ್ಷದವರು ಎಂದು ಕರೆಯುತ್ತೇನೆ. ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ನಾವು ಸಿದ್ಧ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತಮ ಫಲಿತಾಶ ಬಂದಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಅವೆಲ್ಲಕ್ಕಿಂತ ಉತ್ತಮ ಫಲಿತಾಂಶ ಬರುವ ವಿಶ್ವಾಸವಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಸಹಸಂಚಾಲಕ ರಾಮಚಂದ್ರಪ್ಪ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಮನೋಹರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News