×
Ad

ಎಲ್ಲರನ್ನು ಒಳಗೊಳ್ಳುವ ಮನಸ್ಥಿತಿ ನಿರ್ಮಾಣವಾಗಲಿ: ಡಾ.ಸಬಿಹಾ ಭೂಮಿಗೌಡ

Update: 2022-01-07 19:10 IST

ಬೆಂಗಳೂರು, ಜ. 7: `ಶೋಷಿತರಲ್ಲೆ ಶೋಷಿತರಾಗಿರುವ ಮಹಿಳೆಯರಿಗೆ ಮೊಟ್ಟ ಮೊದಲ ಬಾರಿಗೆ ಅಕ್ಷರ ಜ್ಞಾನ ನೀಡಿದ ಸಾವಿತ್ರಿಬಾಯಿ ಫುಲೆಯಂತಹ ಮಹಾನ್ ಚೇತನಗಳ ಫಲದಿಂದಾಗಿ ನಾವೆಲ್ಲರೂ ಇಂದು ಸಮಾಜದಲ್ಲಿ ಮಾತನಾಡಲು ಮತ್ತು ಬದುಕಲು ಸಾಧ್ಯವಾಗಿದೆ. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ದುಡಿಯುವ ಮತ್ತು ಬದುಕುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಸಮಾಜ ಎಲ್ಲರನ್ನೂ ಸಮಾನ ನೆಲೆಯಲ್ಲಿ ಒಳಗೊಳ್ಳುವ, ಎಲ್ಲರನ್ನೂ, ಎಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಥಿತಿಗಳನ್ನು ನಿರ್ಮಾಣ ಮಾಡುವಂತಾಗಲಿ' ಎಂದು ಲೇಖಕಿ ಡಾ.ಸಬಿಹಾ ಭೂಮಿಗೌಡ ಆಶಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮಹಿಳಾ ಅಧ್ಯಯನ ಕೇಂದ್ರ ಮತ್ತು ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, `ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದೇ ಮಹಿಳಾ ಅಧ್ಯಯನ ಕೇಂದ್ರ ಆರಂಭವಾಗುತ್ತಿದ್ದು, ಇದು ನೆಪಮಾತ್ರಕ್ಕೆ ತೆಗೆಯಬಾರದು. ಅದು ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

`ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಇಬ್ಬರು ಮಹಿಳಾಲೋಕಕ್ಕೆ ಮಾದರಿಯಾದ ಪ್ರತಿಮೆಗಳು. ಅವರ ಬದುಕಿನ ದಾರಿಯಲ್ಲಿ, ಅವರ ಕನಸುಗಳನ್ನು ನನಸು ಮಾಡುವಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಆಧುನಿಕ ಲೋಕ ಓದುಗರು ಮತ್ತು ಓದದ, ಹಳ್ಳಿಗಾಡಿನ ಮತ್ತು ನಗರ ಪ್ರದೇಶದ ಮಹಿಳೆಯರ ಬಗೆಗೆ ಪ್ರತ್ಯೇಕತೆಯನ್ನು ಉಂಟುಮಾಡಿದೆ. ಕೆಲವೇ ವಿದ್ಯಾವಂತ ಮತ್ತು ನಗರಕೇಂದ್ರಿತ ಮಹಿಳೆಯರ ಸಮಸ್ಯೆ ಮತ್ತು ಅವರ ಆಲೋಚನೆಗಳನ್ನಷ್ಟೆ ಒಪ್ಪಿಕೊಳ್ಳುವ ಮನಸ್ಥಿತಿಗಳು ಇಂದಿಗೂ ಇವೆ. ಅದು ಬದಲಾಗಬೇಕು' ಎಂದರು.

`ವಿದ್ಯಾವಂತ ಮಹಿಳೆಯರಿಗಿಂತ ಹಳ್ಳಿಗಾಡಿನ ಮಹಿಳೆಯರ ಅನುಭವಲೋಕ ಬಹಳ ವಿಸ್ತಾರವಾದುದು. ಅದನ್ನು ಗ್ರಹಿಸಿರುವ ಅಧ್ಯಯನದ ಶಿಸ್ತಿಗೆ ಒಳಪಡಿಸುವ ಪರಿಪಾಠ ಆಗಬೇಕಿದೆ. ಆ ನೆಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಳ್ಳಿಗಾಡಿನ ಮತ್ತು ವಿದ್ಯಾವಂತರಲ್ಲದ ಮಹಿಳೆಯರ ಅನುಭವ ಮತ್ತು ಗ್ರಹಿಕೆಗಳನ್ನು ದಾಖಲಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆ ರೀತಿಯ ಕೆಲಸಗಳನ್ನು ಇನ್ನಷ್ಟು ಹೆಚ್ಚು ಆಗಬೇಕಿರುವ ಅನಿವಾರ್ಯತೆ ಇಂದಿಗೆ ಅಗತ್ಯವಾಗಿದೆ' ಎಂದರು. 

ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಂದ ಮರಾಠಿ ಮೂಲದಿಂದ ಕೆಸ್ತಾರ ಮತ್ತು ವಿಕಾಶ್ ಆರ್.ಮೌರ್ಯ ಅವರು ಕನ್ನಡಕ್ಕೆ ಅನುವಾದ ಮಾಡಿರುವ ಕೃತಿಯಾದ `ಸಾವಿತ್ರಿಬಾಯಿ ಫುಲೆ ಮತ್ತು ನಾನು' ಎಂಬ ಕೃತಿಯನ್ನು ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೊನೆಯಲ್ಲಿ ವಿದ್ಯಾರ್ಥಿಗಳೆ ನಿರ್ದೇಶಿಸಿ, ನಟಿಸಿದ ನಾಟಕ ಪ್ರದರ್ಶನ ಮಾಡಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್.ಎನ್.ನಾಗರಾಜರೆಡ್ಡಿ, ಪ್ರಾಂಶುಪಾಲೆ ಡಾ.ಅನ್ನಪೂರ್ಣಮ್ಮ ಸಿ.ಬಿ. ಹಾಗೂ ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕಿಯರಾದ ಡಾ.ರಮ್ಯಾ ನಾಗೇಶ್ ಹಾಗೂ ಡಾ.ಪ್ರತಿಮಾ ಪಿ.ಎಸ್. ಹಾಗೂ ಕಾಲೇಜಿನ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News