ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ ಆರೋಪ: ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನ ವಿರುದ್ಧ ದೂರು
ಬೆಂಗಳೂರು: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಸಾರ ತಡೆಗೆ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದಲ್ಲಿ ಪತ್ರಕರ್ತನ ವಿರುದ್ಧ ನಗರದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ವಾಹಿನಿಯ ಸಿಬ್ಬಂದಿ ಸುದ್ದಿ ಪ್ರಸಾರ ತಡೆಹಿಡಿಯಲು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡುವುದಾಗಿ ದೂರುದಾರ ಒಪ್ಪಿಕೊಂಡಿದ್ದಾರೆ. ಬಳಿಕ ಹೆಣ್ಣೂರು ಸಮೀಪ ಸುದ್ದಿವಾಹಿಯ ಸಿಬ್ಬಂದಿಯನ್ನು ಕರೆಸಿಕೊಂಡ ದೂರುದಾರರು ಹಣ ಪಡೆಯುವ ವೀಡಿಯೋ ಚಿತ್ರೀಕರಿಸಿದ್ದಾರೆ.
ಪತ್ರಕರ್ತ ಎನ್ನಲಾದ ವ್ಯಕ್ತಿ ಹಣದ ಕಟ್ಟನ್ನು ಕಾರಿನಲ್ಲಿ ಇರಿಸಿ ಎಣಿಸುವುದು ವೀಡಿಯೋದಲ್ಲಿ ದಾಖಲಾಗಿದೆ.
ಇನ್ನು ಈ ವೀಡಿಯೋ ಹಾಗೂ ಆಡಿಯೋ ಸಂಗ್ರಹಿಸಿ ಹೆಣ್ಣೂರು ಪೊಲೀಸ್ ಠಾಣೆಗೆ ಸುನೀಲ್ ಹಾಗೂ ಅನಿಲ್ ಎಂಬವರು ಪತ್ರಕರ್ತ ತೀರ್ಥ ಪ್ರಸಾದ್ ಹಾಗೂ ಇತರ ನಾಲ್ವರ ವಿರುದ್ಧ ದೂರು ನೀಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ನ್ಯಾಯಕ್ಕಾಗಿ ಧರಣಿ: ಇನ್ನು ದೂರುದಾರರು ಹೆಣ್ಣೂರು ಪೊಲೀಸ್ ಠಾಣೆ ಮುಂದೆ ಮಧ್ಯ ರಾತ್ರಿ ವೇಳೆ ಧರಣಿ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.