ಮೇಕೆದಾಟು ಪಾದಯಾತ್ರೆ: ಕೇಂದ್ರ ಅನುಮತಿ ನೀಡುತ್ತದೆ ಎಂದಾದರೆ, ನಾನೇ ಮೊದಲು ನಡೆಯುತ್ತೇನೆ; ಕುಮಾರಸ್ವಾಮಿ

Update: 2022-01-07 15:20 GMT

ಬೆಂಗಳೂರು, ಜ. 7: ಮೇಕೆದಾಟು ಪಾದಯಾತ್ರೆ ಮೂಲಕ ಆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ನನಗೆ ಗ್ಯಾರಂಟಿ ಕೊಟ್ಟರೆ ನಾನು ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ `ಜನತಾ ಜಲಧಾರೆ' ಕಾರ್ಯಕ್ರಮದಲ್ಲಿ ರಾಜ್ಯವ್ಯಾಪಿ ಜಲ ಸಂಗ್ರಹಕ್ಕೆ ತೆರಳಲಿರುವ `ಗಂಗಾ ರಥಯಾತ್ರೆ'ಗೆ ಸಿದ್ಧಪಡಿಸಲಾಗಿದ್ದ ವಾಹನವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, `ಕಾಂಗ್ರೆಸ್ ಪಕ್ಷದ್ದು ಪಾದಯಾತ್ರೆ ಅಲ್ಲ, ಅದು ಮತಯಾತ್ರೆ ಮಾತ್ರ. ಕೇವಲ ಮುಂದಿನ ಚುನಾವಣೆಯಲ್ಲಿ ಮತ ಪಡೆಯುವ ಏಕೈಕ ಉದ್ದೇಶದಿಂದ ಆ ಪಕ್ಷ ಜನರಿಗೆ ಪಾದಯಾತ್ರೆ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ ಎಂದು ಟೀಕಿಸಿದರು.

ಆ ಪಕ್ಷದ ಪ್ರತಿಪಕ್ಷ ನಾಯಕರು ಮೇಕೆದಾಟು ಯೋಜನೆ ಬಗ್ಗೆ ದಿನಕ್ಕೆ ಒಂದೊಂದು ಹಸಿಸುಳ್ಳು ಹೇಳುತ್ತಿರುತ್ತಾರೆ. ಇನ್ನು, ಆ ಪಕ್ಷದ ರಾಜ್ಯಾಧ್ಯಕ್ಷರು ಪ್ರಾಣ ಹೋದರೂ ಪಾದಯಾತ್ರೆ ನಿಲ್ಲಲ್ಲ ಎನ್ನುತ್ತಾರೆ ಪಾಪ.. ನಿಮ್ಮ ಪ್ರಾಣ ಏಕೆ ವ್ಯಥ್ರ್ಯ ಮಾಡಿಕೊಳ್ತೀರಾ? ನೀವು ಕಾವೇರಿ ಕೊಳ್ಳದ ಜನರ ಭಾವನೆಗಳ ಜತೆ ಚೆಲ್ಲಾಟ ಆಡಿಕೊಂಡು ಅವರ ಜೀವ ತೆಗೆಯಲು ಹೊರಟಿದ್ದೀರಾ. ಅಂತಹ ಕೆಲಸ ಬೇಡ ಎಂದು ವ್ಯಂಗ್ಯವಾಗಿ ಸಲಹೆ ನೀಡಿದರು. 

ಡಿಎಂಕೆ ಸಖ್ಯ: ಕರ್ನಾಟಕದಲ್ಲಿ ಕಾಂಗ್ರೆಸ್ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತಿದೆ. ಆದರೆ, ಪಕ್ಕದ ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧ ಮಾಡುತ್ತಿರುವ ಡಿಎಂಕೆ ಪಕ್ಷದ ಮಿತ್ರಪಕ್ಷವಾಗಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ರಾಜ್ಯಪಾಲರಿಂದ ಭಾಷಣ ಮಾಡಿಸಿರುವ ಸ್ಟ್ಯಾಲಿನ್ ಸರಕಾರದ ಜತೆ ಕಾಂಗ್ರೆಸ್ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬಹುದಲ್ಲ. ಅದನ್ನು ಬಿಟ್ಟು ಪಾದಯಾತ್ರೆ ಮೂಲಕ ನಾಟಕ ಮಾಡುವುದು ಏಕೆ ಎಂದು ಪ್ರಶ್ನೆ ಮಾಡಿದರು.  

ದೇವೇಗೌಡರು ಮಾಡಿದ ಪ್ರಯತ್ನದ ಫಲವಾಗಿ ಇಂದು ಬೆಂಗಳೂರು ಜನರಿಗೆ ಕಾವೇರಿ ನಾಲ್ಕನೆ ಹಂತದಲ್ಲಿ 9 ಟಿಎಂಸಿ ನೀರು ಸಿಕ್ಕಿದೆ. ದೇವೇಗೌಡರು ಪ್ರಧಾನಿಗಳ ಜತೆ ವಿಶ್ವಾಸ ಇಟ್ಟುಕೊಂಡಿದ್ದಾರೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಷ್ಟು ನಂಬಿಕೆ ಇದ್ದ ಮೇಲೆ ದೇವೇಗೌಡರನ್ನೇ ಪ್ರಧಾನಿ ಜತೆ ಮಾತನಾಡಿ ಎಂದು ಕಾಂಗ್ರೆಸ್ ನಾಯಕರು ಹೇಳಬಹುದಲ್ಲವೆ? ಹಾಗಿದ್ದ ಮೇಲೆ ಪಾದಯಾತ್ರೆ ಏತಕ್ಕೆ? ಎಂದು ಅವರು ಕೇಳಿದರು. 

ಮಾತೆತ್ತಿದರೆ ಕುಮಾರಣ್ಣ, ನಮ್ಮಣ್ಣ ಅನ್ನುತ್ತಾರೆ. ಅವರು ಹೊಡೆದರೆ ಹೊಡೆಸಿಕೊಳ್ತೀನಿ ಎನ್ನುತ್ತಾರೆ. ಅಶೋಕಣ್ಣ, ಅಶ್ವತ್ಥನಾರಾಯಣ ಅಣ್ಣ ಎಂದು ಮಾತನಾಡುತ್ತಾರೆ. ನೀರಾವರಿ ವಿಷಯದಲ್ಲಿ ಇಂಥ ಡ್ರಾಮಾ ಎಲ್ಲ ಏಕೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ತಮ್ಮ ಸರಕಾರ ಇದ್ದಾಗಲೇ ಡಿಪಿಆರ್ ಮಾಡಿ ಸಲ್ಲಿಕೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು 2017ರಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ ಸಲ್ಲಿಕೆ ಮಾಡಿದ್ದು ಕೇವಲ ಯೋಜನೆ ಪಿಎಫ್‍ಆರ್ (ಪ್ರೈಮರಿ ಫೀಸಬಲ್ ರಿಪೆÇೀರ್ಟ್) ಮಾತ್ರ. ಅದು ಅಲ್ಲಿಗೇ ನಿಂತಿತು ಎಂದು ಟೀಕಿಸಿದರು.

123 ಸೀಟು ಗೆಲ್ಲಲಿಕ್ಕೆ ಕಾರ್ಯಕ್ರಮ: ನಾನು ಯಾವುದನ್ನು ಮುಚ್ಚುಮರೆ ಮಾಡುತ್ತಿಲ್ಲ. ನಮಗೆ ಐದು ವರ್ಷಗಳ ಸ್ವತಂತ್ರ ಸರಕಾರ ಕೊಡಿ ಎಂದು ಜನರನ್ನು ನೇರವಾಗಿಯೇ ಕೇಳುತ್ತಿದ್ದೇನೆ. 123 ಸೀಟು ಗೆಲ್ಲಿಸಿಕೊಡಿ ಎಂದು ಮನವಿ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಪೂರ್ಣ ಪ್ರಮಾಣದ ಸರಕಾರ ಸಿಕ್ಕಿದರೆ ನಾವು ಮಾತು ಕೊಟ್ಟಂತೆ ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಷಡ್ಯಂತ್ರ ಮಾಡುವ ನೀಚ ಕೆಲಸ ಮಾಡಲ್ಲ: ತಮ್ಮ ವಿರುದ್ಧ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ದಿಲ್ಲಿಯಲ್ಲಿ ಷಡ್ಯಂತ್ರ ಮಾಡಿದ್ದಾರೆಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಇನ್ನೊಬ್ಬರ ವಿರುದ್ಧ ಷಡ್ಯಂತ್ರ ಮಾಡುವಂತಹ ನೀಚ ಕೆಲಸವನ್ನು ನಮ್ಮ ಕುಟುಂಬ ಎಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ದೇವೇಗೌಡರ ಪುಸ್ತಕ ಬಿಡುಗಡೆಗೆ ನಾನು ದಿಲ್ಲಿಗೆ ಹೋಗಿದ್ದೆ. ಮರುದಿನವೇ ನನ್ನ ಹುಟ್ಟುಹಬ್ಬ ಇತ್ತು. ಬೆಂಗಳೂರಿನಲ್ಲಿ ಜನ ಮನೆ ಬಳಿ ಬರುತ್ತಾರೆ, ಕೋವಿಡ್ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಹುಟ್ಟಿದ ಹಬ್ಬ ಆಚರಣೆ ಬೇಡ ಎಂದು ನಿರ್ಧಾರ ಮಾಡಿದ್ದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News