×
Ad

ಸಿಎಸ್‍ಆರ್ ನಿಧಿ ಪರಿಸರ ಸಂರಕ್ಷಣೆಗೆ ಬಳಕೆಯಾಗಲಿ: ಯದುವಿರ್ ಕೃಷ್ಣದತ್ತ ಒಡೆಯರ್

Update: 2022-01-07 23:10 IST

ಬೆಂಗಳೂರು, ಜ. 7: `ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಎಂದರೆ ಪಿಎಂ ಕೇರ್ಸ್‍ನಂತಹ ನಿಧಿಗಳಿಗೆ ತನ್ನ ಪಾಲಿನ ದೇಣಿಗೆ ನೀಡಿ ಸುಮ್ಮನಾಗುವುದು ಸೂಕ್ತವಲ್ಲ. ಬದಲಿಗೆ ಸಿಎಸ್‍ಆರ್ ನಿಧಿಯನ್ನು ಅತ್ಯಂತ ರಚನಾತ್ಮಕವಾಗಿ ಅಭಿವೃದ್ಧಿ ಉದ್ದೇಶಗಳಿಗೆ ಬಳಸಿದರೆ ಮಾತ್ರ ಅದು ಸಾರ್ಥಕತೆ ಪಡೆಯುತ್ತದೆ' ಎಂದು ಮೈಸೂರಿನ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 49ನೆ ಕಂಪೆನಿ ಸಕ್ರೆಟರಿಗಳ ರಾಷ್ಟ್ರೀಯ ಸಮಾವೇಶದಲ್ಲಿ `ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಆಡಳಿತ' ಕುರಿತು ಮಾತನಾಡಿದ ಅವರು, `ಸರಕಾರದ ನಿಧಿಗಳಿಗೆ ಸಿಎಸ್‍ಆರ್ ನಿಧಿಯನ್ನು ಸಮರ್ಪಿಸಿದರೆ ತನ್ನ ಸಾಮಾಜಿಕ ಜವಾಬ್ದಾರಿ ಕುರಿತ ತನ್ನ ಖರ್ಚು ವೆಚ್ಚಗಳಿಗೆ ವಿನಾಯಿತಿ ದೊರೆಯುತ್ತದೆ. ಪಿಎಂ ಕೇರ್ಸ್‍ನಿಂದಲೂ ಅತ್ಯುತ್ತಮ ಕೆಲಸಗಳಾಗುತ್ತಿವೆ. ಆದರೆ ಕಂಪೆನಿಗಳು ಗಳಿಸುವ ತನ್ನ ಆದಾಯವನ್ನು ತಾವಿರುವ ಪರಿಸರದಲ್ಲಿ ಸದ್ಬಳಕೆ ಮಾಡಿಕೊಳ್ಳುವುದು ಸೂಕ್ತ ವಿಧಾನವಾಗುತ್ತದೆ. ಕಂಪೆನಿಗಳು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ಹೇಳಿದರು.

ಕಂಪೆನಿಗಳು ಸಿಎಸ್‍ಆರ್ ನಿಧಿಯನ್ನು ಪರಿಸರ ಸಂರಕ್ಷಣೆಗಾಗಿ ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಬೇಕು. ಪರಿಸರ ಸಮತೋಲನ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟುಗಳು ಮತ್ತಿತರ ನಿರ್ಮಾಣ ಕಾಮಗಾರಿಗಳಿಂದ ಅಗಾಧವಾಗಿ ಅನುಕೂಲವಾಗುತ್ತಿದ್ದು, ಅಣೆಕಟ್ಟೆ ವ್ಯಾಪ್ತಿಯಲ್ಲಿ ವಿವಿಧ ಕಾರ್ಖಾನೆಗಳು ತಲೆ ಎತ್ತಿವೆ. ಆದರೆ, ಇದೇ ಕಾಲಕ್ಕೆ ಪರಿಸರದ ಮೇಲೂ ಪ್ರತಿಕೂಲ ಪರಿಣಾಮಗಳಾಗುತ್ತಿವೆ ಎಂಬ ಆಕ್ಷೇಪವೂ ಇದೆ. ಪ್ರತಿಯೊಂದು ಕಂಪೆನಿ ತನ್ನ ಆದಾಯ ಹೆಚ್ಚಿಸಿಕೊಳ್ಳಲು, ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗುತ್ತವೆ. ಇದೇ ರೀತಿ ತನ್ನ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವುದನ್ನು ಮರೆಯಬಾರದು ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ, ಸಿಎಸ್‍ಆರ್ ಚಟುವಟಿಕೆ ಎನ್ನುವುದು ಈಗಿನ ಪರಿಕಲ್ಪನೆಯಲ್ಲ. ನಮ್ಮ ಸಂಸ್ಕøತಿಯಲ್ಲೆ ಅಂತರ್ಗತವಾಗಿದೆ. ಈ ನಿಟ್ಟಿನಲ್ಲಿ ಎನ್‍ಜಿಓಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು. ಅಧ್ಯಕ್ಷ ಸಿ.ಎಸ್.ನಾಗೇಂದ್ರ ಡಿ.ರಾವ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕಾರಿ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಮಹಾರಾಷ್ಟ್ರದ ನಿವೃತ್ತ ಐಎಎಸ್ ಅಧಿಕಾರಿ ಸಂಜಯ್ ಉಬಲೆ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News