ಸಾವಿರಾರು ಮಂದಿ ಭಾಗವಹಿಸಿರುವಾಗ 30 ಜನರ ಮೇಲಷ್ಟೇ ಯಾಕೆ ಎಫ್ಐಆರ್?: ಡಿಕೆಶಿ ಪ್ರಶ್ನೆ

Update: 2022-01-10 05:27 GMT
ಡಿ.ಕೆ.ಶಿವಕುಮಾರ್ (File Photo)

ಬೆಂಗಳೂರು, ಜ.10: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿರುವವರು ಸಾವಿರಾರು ಜನ. ಆದರೆ ಬರೀ ಮೂವತ್ತು ಜನರ ಮೇಲಷ್ಟೇ ಏಕೆ ಎಫ್.ಐ.ಆರ್. ಹಾಕಿದ್ದೀರಿ  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

 ಪಾದಯಾತ್ರೆ ವೇಳೆ ವಾರಾಂತ್ಯ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಲ್ಲಿ ಮಾಜಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ 30 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದರಲ್ಲ? ಅವರ ಮೇಲೆಲ್ಲ ಕೇಸು ಹಾಕಿ ಎಂದು ಸರಕಾರಕ್ಕೆ ಸವಾಲು ಹಾಕಿದರು.

ಕೇವಲ ಮೂವತ್ತು ಜನರ ಮೇಲೆ ಕೇಸು ಹಾಕಿದರೆ ಏನರ್ಥ? ಪಾದಯಾತ್ರೆಯಲ್ಲಿ ಸಾಧು-ಸಂತರು, ನಾಡಿನ ಅನೇಕ ಗಣ್ಯರು ಭಾಗವಹಿಸಿದ್ದರು. ಅವರ ಮೇಲೆಲ್ಲ ಕೇಸು ಹಾಕಲಿ ಎಂದು ಹೇಳಿದರು.

ಡಿಕೆಶಿ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂಬ ಗೃಹ ಸಚಿವರ ಹೇಳಿಕೆ ಕುರಿತು ಮಾಧ್ಯಮದವರು ಗಮನಸೆಳೆದಾಗ,  ಅಜ್ಞಾನೇಂದ್ರಣ್ಣನ ಮಾತಿನ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಜನರಲ್ಲಿ ನಾವು ಯಾಕೆ ಕ್ಷಮೆ ಯಾಚಿಸಬೇಕು? ಏನು ತಪ್ಪು ಮಾಡಿದ್ದೇವೆ ಎಂದು ಕ್ಷಮೆ ಯಾಚಿಸಬೇಕು? ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ.ಇದು ತಪ್ಪು ಎಂದು ಹೇಳಬೇಕಾ? ಎಂದು ಪ್ರಶ್ನಿಸಿದರು.

ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ವೈದ್ಯರ ಸಲಹೆ ಮೇರೆಗೆ ಇಂದು ವಿಶ್ರಾಂತಿ ಪಡೆಯಲಿದ್ದಾರೆ.  ನಾಳೆಯಿಂದ ಸಿದ್ದರಾಮಯ್ಯ ಅವರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಡಿಕೆಶಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News