‘ಮಾತಿನ ಸೂತಕ’ ಕಳೆವ ಬಗೆ ಹಾಗೂ ಸಾಮಾಜಿಕ ಜಾಲತಾಣಗಳ ‘ಲಘು’ಬಗೆ

Update: 2022-01-10 07:19 GMT

  ‘ಮಂಜುನಾಥ ಲತಾ’ ಎಂದು ಬರೆಯುವ ಮಂಜುನಾಥ್ ಎಸ್. ಅವರು ಪತ್ರಿಕೋದ್ಯಮ, ಅಭಿವೃದ್ಧಿ ಪರ ಚಟುವಟಿಕೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಣ್ಣ ಕಥೆಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ. ತೆಂಕಲಕೇರಿ, ಕತೆ ಎಂಬ ಇರಿವ ಅಲಗು (ಕಥಾ ಸಂಕಲನಗಳು), ಪರದೇಸಿ ಮಗನ ಪದವು, ಆಹಾ ಅನಿಮಿಷ ಕಾಲ, ಸೋಜಿಗದ ಸೂಜಿ (ಕವನ ಸಂಕಲನಗಳು), ಪಲ್ಲಂಗ (ಕಾದಂಬರಿ), ಮಾತಿನ ಓದು (ಲೇಖನಗಳ ಸಂಗ್ರಹ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಗಳಿಸಿವೆ.

   ಮಂಜುನಾಥ್ ಲತಾ

ಮೊದಲಿಗೆ ಒಂದೆರಡು ಉದಾಹರಣೆಗಳನ್ನು ಕೊಡಬಯಸುತ್ತೇನೆ. ಇದು ಬಹುತೇಕರಿಗೆ, ಬುದ್ಧನನ್ನು ಬಲ್ಲವರಿಗೆ ಗೊತ್ತಿರುವ ಪ್ರಸಿದ್ಧ ಸಂಗತಿ. ಇದು ಬಹುಕಾಲದಿಂದಲೂ ನನ್ನೊಳಗೆ ಉಳಿದಿರುವುದರಿಂದ ಹೇಳುತ್ತಿದ್ದೇನೆ (ಈ ಪ್ರಸಂಗವನ್ನು ಡಾ. ಪ್ರಭುಶಂಕರ ಅವರು ತಮ್ಮ ‘ಪ್ರೇಮ ಭಿಕ್ಷು’ ಕಾದಂಬರಿಯಲ್ಲಿಯೂ ತಂದಿದ್ದಾರೆ).

 

ಅದು ಬುದ್ಧನ ‘ಪ್ರವಚನ ಪರ್ಯಟನ’ದ ಕಾಲ. ಗ್ರಾಮವೊಂದರಲ್ಲಿ ತಥಾಗತನ ಪ್ರವಚನ ನಡೆಯುತ್ತಿರುತ್ತದೆ. ಬುದ್ಧನ ಶಿಷ್ಯಬಳಗ, ಅನುಯಾಯಿಗಳು, ಗ್ರಾಮಸ್ಥರು ಸೇರಿದ್ದಾರೆ. ಪ್ರವಚನ ನಡೆಯುತ್ತಿರುವಾಗಲೇ ಅಲ್ಲಿಗೊಬ್ಬ ವ್ಯಕ್ತಿ ಧಾವಿಸಿ ಬರುತ್ತಾನೆ. ಬಂದೊಡನೆಯೇ ಏಕಪ್ರಹಾರವೆಂಬಂತೆ ಬುದ್ಧನನ್ನು ನಿಂದಿಸತೊಡಗುತ್ತಾನೆ, ಬೈಗುಳಗಳ ಸುರಿಮಳೆ ಸುರಿಸುತ್ತಾನೆ. ಆತನ ಅವಾಚ್ಯ ಶಬ್ದಗಳ ವಾಗ್ಝರಿ ಬಹಳ ಹೊತ್ತಿನ ತನಕ ಹರಿಯುತ್ತದೆ. ಬುದ್ಧನನ್ನು ಮನಬಂದಂತೆ ಹಂಗಿಸಿ, ನಿಂದಿಸಿ ಆತ ದಣಿವುಗೊಂಡು ನಿಲ್ಲುತ್ತಾನೆ. ಆತನ ಮಾತುಗಳಿಗೆ ಆವರೆಗೂ ಪ್ರತಿಯಾಡದೆ ನಗುಮೊಗದಿಂದಲೇ ಇದ್ದ ಬುದ್ಧ ‘ನಿನ್ನದು ಮುಗಿಯಿತಾ? ನಾನೀಗ ನಿನಗೆ ಕೆಲವು ಪ್ರಶ್ನೆಗಳನ್ನು ಕೇಳಬಹುದೆ?’ ಎನ್ನುತ್ತಾನೆ.

 

‘ಕೇಳು ಅದೇನು?’ ಎನ್ನುತ್ತಾನೆ ಆ ವ್ಯಕ್ತಿ. ‘ನಿನಗೆ ಈ ಊರಿನಲ್ಲಿ ಮನೆ ಇದೆ ತಾನೆ?’

‘ಹೌದು, ಇದೆ’

‘ನಿನ್ನ ಮನೆಗೆ ಆಗಾಗ್ಗೆ ಅತಿಥಿಗಳು ಬರುತ್ತಾರಲ್ಲವೆ?’

‘ಬರದೆ ಏನು?’

 

‘ಅತಿಥಿಗಳು ಬಂದಾಗ ನೀನು ಅವರನ್ನು ಹೇಗೆ ಸತ್ಕರಿಸುವೆ?’ ಎಂದು ಬುದ್ಧ ಅದೇ ನಗುಮೊಗದೊಂದಿಗೆ ಕೇಳುತ್ತಾನೆ. ‘ಹಣ್ಣು-ಹಂಪಲು, ಹಾಲು, ಪಾನಕ ನೀಡಿ ಸತ್ಕರಿಸುವೆ...’

‘ಅವರು ಅವುಗಳನ್ನು ಸ್ವೀಕರಿಸದಿದ್ದರೆ?’

‘ಒಳ್ಳೆಯದೇ ಆಯಿತು...ಅವು ನನಗೇ ಉಳಿಯುತ್ತವೆ...’

‘ಹಾಗೆಯೇ ನಾನೂ ಕೂಡ ಈವರೆಗೆ ನೀನು ನನ್ನನ್ನು ಕುರಿತು ಆಡಿದ ಮಾತುಗಳನ್ನು ಸ್ವೀಕರಿಸುವುದಿಲ್ಲ!’ ಎನ್ನುತ್ತಾನೆ ಬುದ್ಧ.

ಮತ್ತೊಂದು:

ಹನ್ನೊಂದು ವರ್ಷಗಳ ಹಿಂದೆ ನಾನು ಹಾಗೂ ನನ್ನ ಗೆಳೆಯರೊಬ್ಬರು ಕನ್ನಡದ ಸಾಹಿತ್ಯಕ ತ್ರೈಮಾಸಿಕವೊಂದು ಸಾಂಸ್ಕೃತಿಕ ಲೋಕಕ್ಕೆ ‘ರೂಢಿಸಲು’ ಹೊರಟ ‘ಶ್ರೇಷ್ಠತೆಯ ವ್ಯಸನ’ದ ಬಗ್ಗೆ ಲೇಖನವೊಂದನ್ನು ‘ಗೌರಿ ಲಂಕೇಶ್’ ಪತ್ರಿಕೆಯಲ್ಲಿ ಪ್ರಕಟಿಸಿದೆವು. ಆ ಲೇಖನದಲ್ಲಿ ನಾವು ಬಳಸಿದ ಭಾಷಾಶೈಲಿ ಅತಿ ವ್ಯಂಗ್ಯದ್ದೂ ಕಟಕಿಯದ್ದೂ ಆಗಿತ್ತು. ನಮ್ಮ ಆ ‘ಭಾಷಾಶೈಲಿ’ಯ ಬಗ್ಗೆ ಹಲವರು ತಕಾರರು ತೆಗೆದರು. ಕೆಲವರು ನಮ್ಮನ್ನು ಬೆಂಬಲಿಸಿ ಬರೆದರು. ಸರಿಸುಮಾರು ಆರು ತಿಂಗಳುಗಳ ಕಾಲ ನಮ್ಮ ಲೇಖನದ ಸುತ್ತಲೇ ಚರ್ಚೆ ನಡೆಯಿತು. ಆಗ ನಮ್ಮ ಲೇಖನದ ಕುರಿತು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದ್ದೊಂದು ಮಾತು ನನಗೆ ನೆನಪಿದೆ: ‘ಸತ್ಯ ಯಾವಾಗಲೂ ಮುಂದಿರಬೇಕು; ನಾವು ಅದರ ಹಿಂದಿರಬೇಕು’.

 

ಅಂದು ನಾವು ನಮ್ಮದೇ ಶೈಲಿಯ ‘ಆ’ ಭಾಷೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದೆವು. ಆದರೆ ಅಂದು ದೇವನೂರ ಅವರು ಹೇಳಿದ ಮಾತನ್ನು ನಾನು ಅಷ್ಟು ದಿನಗಳಿಂದಲೂ ಮನನಿಸುತ್ತಲೇ ಬಂದಾಗ ನನಗೂ ‘ಆ ಸತ್ಯ’ ಸರಿ ಇದೆ ಎನ್ನಿಸತೊಡಗಿತು. ಅವರ ಮಾತಿನ ಹಿಂದೆಯೇ ಮತ್ತೊಂದನ್ನು ಸೇರಿಸಿಕೊಂಡೆ: ‘ಆದರೆ ನಮ್ಮ ಮಾತು-ಭಾಷೆ ಸತ್ಯವನ್ನು ಅಡಗಿಸಿಡಕೂಡದು’.

 

ಈ ಎರಡೂ ಪ್ರಸಂಗಗಳನ್ನು ನಾನು ಇಲ್ಲಿ ನೆನಪಿಗೆ ತಂದುಕೊಳ್ಳುತ್ತಿರುವುದರ ಹಿಂದಿನ ಭೂಮಿಕೆ ನಮ್ಮ ಈ ಹೊತ್ತಿನ ಸಾಮಾಜಿಕ ಜಾಲತಾಣಗಳ ಭಾಷೆ. ಈ ‘ಭಾಷಾವೇಷ’, ‘ಭಾಷಾವೇಶ’ಗಳು ಹುಟ್ಟುಹಾಕುತ್ತಿರುವ ಹೊಸ ‘ಚಿಂತನಾ ವ್ಯಾಖ್ಯಾನ’ಗಳು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅನೇಕ ಸೂಕ್ಷ್ಮಜ್ಞರ ಅನುಭವಕ್ಕೆ ಇದು ಬಂದಿರಬಹುದು. ಅಂತಹರಿಗೆ ಈ ಜಾಲತಾಣಗಳು ಇತ್ತೀಚೆಗೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸೃಷ್ಟಿಸುತ್ತಿರುವ ಚರ್ಚೆಗಳು ಹೊಸ ಬಗೆಯ ‘ವೈಚಾರಿಕ ವಿಘಟನೆ’ಗಳಿಗೂ ಕಾರಣವಾಗುತ್ತಿವೆಯೇನೋ ಅನಿಸಿರಬಹುದು. ಇದೊಂದು ಪುನರಾವರ್ತನೆ, ಸವಕಲು ಅಭಿಪ್ರಾಯ ಎನ್ನಿಸಿದರೂ ಹೇಳಿಬಿಡುತ್ತೇನೆ.

ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಹೊಸಬಗೆಯ ಸ್ವತಂತ್ರ ಅಭಿವ್ಯಕ್ತಿ ಮಾಧ್ಯಮಗಳಾಗಿ ಹೊರಹೊಮ್ಮಿದ್ದು, ಅದನ್ನು ಬಳಸುವವರಲ್ಲಿ ಶಿಕ್ಷಿತರು, ವಿದ್ವಾಂಸರು, ವಿವಿಧ ಕ್ಷೇತ್ರಗಳ ಜ್ಞಾನ-ವಿಜ್ಞಾನಗಳ ನಿಪುಣರು, ಚಳವಳಿಗಾರರು, ಸಂವೇದನಾಶೀಲ ಬರಹಗಾರರು ಇರುವಂತೆಯೇ ಮಧ್ಯಮವರ್ಗದ ಗೃಹಿಣಿಯರು, ತರಕಾರಿಯವರು, ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು ಮುಂತಾದ ಅರೆಶಿಕ್ಷಿತ ಸಮುದಾಯಗಳಿಗೆ ಸೇರಿದವರೂ ಇದ್ದಾರೆ. ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬಹುದು. ಇವರೆಲ್ಲರೂ ಸಾಮಾಜಿಕ ಜಾಲತಾಣಗಳಿಗಾಗಿ ಮೊಬೈಲ್‌ಗಳನ್ನೇ ಆಶ್ರಯಿಸಿದ್ದಾರೆ; ಇವರೆಲ್ಲರೂ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳನ್ನೇ ಹೆಚ್ಚು ಬಳಸುವವರು. ಆದರೆ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನ ಬಳಕೆಯನ್ನು ಸಮಗ್ರವಾಗಿ ಬಲ್ಲವರೇನೂ ಅಲ್ಲ. ಅಂದರೆ ತಮ್ಮ ಖಾತೆಗಳ ಮೂಲಕ ಸ್ವತಂತ್ರವಾಗಿ ಪೋಸ್ಟ್ ಬರೆಯುವ, ತಮ್ಮ ಗ್ರೂಪ್‌ಗಳಲ್ಲಿ ಕಾಣಿಸಿಕೊಳ್ಳುವ ಪೋಸ್ಟ್‌ಗಳಿಗೆ ಕಮೆಂಟ್ ಬರೆಯುವ ಸೃಜನಶೀಲರೇನೂ ಅಲ್ಲ. ಹೆಚ್ಚೆಂದರೆ ತಮ್ಮ ಮಾಧ್ಯಮಗಳಲ್ಲಿ ಹೊಕ್ಕು-ಬಳಕೆಯಾಗುವ ಪೋಸ್ಟ್‌ಗಳನ್ನು ಹಂಚುವ ಕೌಶಲವನ್ನಷ್ಟೇ ತಿಳಿದ ಅರೆಶಿಕ್ಷಿತ ವರ್ಗದವರು. ಇಂತಹ ‘ಸಾಮಾಜಿಕ ಜಾಲತಾಣ ಸಮೂಹ’ಕ್ಕೆ ಪುನೀತ್ ರಾಜ್‌ಕುಮಾರ್ ಸಾವು ಹೇಗೋ ಹಾಗೆಯೇ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾದ ಸೇನಾ ಮುಖ್ಯಸ್ಥರ ಸಾವೂ ಕೂಡ; ಅಂತೆಯೇ ರಸ್ತೆ ಅಪಘಾತದಲ್ಲಿ ಗಾಯಗೊಂಡೋ, ಸಾವಿಗೀಡಾಗಿಯೋ ನರಳುವ ತಮ್ಮಂತಹ ಮನುಷ್ಯರ ಫೋಟೊಗಳು, ವೀಡಿಯೊಗಳೂ ಕೂಡ!

 

ಹೀಗೆ ಬಹುಸಮುದಾಯಗಳು ಸಾಮಾಜಿಕ ಜಾಲತಾಣಗಳನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮಗಳನ್ನಾಗಿಸಿಕೊಂಡಿರುವುದರ ಹಿಂದೆ ಹಲವು ಕಾರಣಗಳಿವೆ. ಅವುಗಳಲ್ಲಿ ಮೊದಲನೆಯದು ಸದ್ಯಕ್ಕಿರುವ ಮುಖ್ಯಧಾರೆಯ ಮಾಧ್ಯಮಗಳಾದ ಪತ್ರಿಕೆ, ಟಿವಿಗಳಲ್ಲಿ ತಮಗೆ ಅನ್ನಿಸಿದ್ದನ್ನು ಅಭಿವ್ಯಕ್ತಿಸುವ, ಹಂಚಿಕೊಳ್ಳುವ ಅವಕಾಶಗಳಿಲ್ಲದಿರುವುದು. ಹಾಗೆ ಅವಕಾಶಗಳಿದ್ದಾಗ್ಯೂ ತಮ್ಮದೇ ಭಾಷೆಯಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುವ ಸ್ವಾತಂತ್ರವಿಲ್ಲದಿರುವುದು. ಇದರಿಂದಾಗಿಯೇ ಸಾಮಾಜಿಕ ಜಾಲತಾಣಗಳ ಬಳಕೆ ದಿನದಿಂದ ದಿನಕ್ಕೆ ಜನಸಾಮಾನ್ಯರ ಬದುಕಿನಲ್ಲಿ ಹೆಚ್ಚಾಗುತ್ತಲೇ ಇದೆ. ಇನ್ನು ಸಾಮಾಜಿಕ ಜಾಲತಾಣಗಳನ್ನು ತಮ್ಮದೇ ಬಗೆಯಲ್ಲಿ ಬಳಸುತ್ತಿರುವ ‘ಜ್ಞಾನ ವಲಯ’ವೊಂದಿದೆ. ಇದೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣದ ‘ಜ್ಞಾನವರ್ಗ’. ಇದರಲ್ಲಿ ನಾನು ಮೊದಲಿಗೆ ಹೇಳಿದ ಎಲ್ಲ ಬಗೆಯ ನೈಪುಣ್ಯ ಪಡೆದವರು ಇದ್ದಾರೆ. ಈಗ ನಾನು ಹೇಳಹೊರಟಿರುವುದು ಇಂತಹ ಕನ್ನಡದ ಸಾಮಾಜಿಕ ಜಾಲತಾಣಗಳ ಜ್ಞಾನವರ್ಗದ ಇತ್ತೀಚಿನ ಚಿಂತನೆಗಳ ಸುತ್ತ; ಅಲ್ಲಿ ಪ್ರಕಟಗೊಳ್ಳುತ್ತಿರುವ ಭಾಷೆಯ ಸುತ್ತ. ಇದು ಒಂದು ಬಗೆಯಲ್ಲಿ ನನ್ನನ್ನು ವೈಯಕ್ತಿಕವಾಗಿ ಕಾಡಿದ್ದು; ಜೊತೆಗೆ ಸಾರ್ವತ್ರಿಕವೂ ಆಗಿದೆ ಎಂಬ ನಂಬಿಕೆ ಇರುವುದರಿಂದ ಇದನ್ನು ಇಲ್ಲಿ ಚರ್ಚೆಗೊಡ್ಡಿದ್ದೇನೆ. ನನ್ನ ಚರ್ಚೆಯ ಮುಖ್ಯಕೇಂದ್ರವಾಗಿ ಇತ್ತೀಚೆಗೆ ನಮ್ಮ ನಡುವೆ ನಡೆದ ಮೂರು ವಿದ್ಯಮಾನಗಳನ್ನು ಹಾಗೂ ಅವುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡ ಪ್ರತಿಕ್ರಿಯೆಗಳನ್ನೂ ಪರಿಗಣಿಸಿದ್ದೇನೆ. ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಈ ಮೂರೂ ಸಂಗತಿಗಳನ್ನು ಈ ವಿದ್ಯಮಾನಗಳು ಒಳಗೊಂಡಿರುವುದರಿಂದ ಇದಕ್ಕೊಂದು ಸಮಗ್ರತೆ ದಕ್ಕಿದೆ ಎಂದುಕೊಂಡಿದ್ದೇನೆ. ಮೊದಲನೆಯದು, ಕನ್ನಡದ ಜನಪ್ರಿಯ ದಿನಪತ್ರಿಕೆಯೊಂದರಲ್ಲಿ ಅದೇ ಪತ್ರಿಕೆಯ ಉಪಸಂಪಾದಕ ರೊಬ್ಬರು ತಮ್ಮ ಅಂಕಣದಲ್ಲಿ ಬರೆದ ‘ವಿಧ್ವಂಸಕ ಗುಣದ ಬುಲ್ಡೋಜರ್ ವಿಮರ್ಶೆ’ ಎಂಬ ಲೇಖನ. ಅದರಲ್ಲಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಚರ್ಚೆಗಳ ಕುರಿತಂತೆ ಸಾರಾಸಗಟಾದ ವಿಮರ್ಶೆಗಳೂ ಏಕಮುಖಿಯಾದ ಟೀಕೆಗಳೂ ವ್ಯಕ್ತವಾಗುತ್ತಿವೆ ಎಂಬರ್ಥದಲ್ಲಿ ಚರ್ಚಿಸಿದರು. ಅಲ್ಲಿ ಅಂಕಣಕಾರರು ಚರ್ಚಿಸಿದ ವಿಷಯಗಳಲ್ಲಿ ಹಲವಾರು ವೈರುಧ್ಯಗಳಿದ್ದವು. ಏಕಮುಖವೂ, ಸಪಾಟು ಚಿಂತನೆಯೂ ಅಲ್ಲಿತ್ತು. ವಿಪರ್ಯಾಸವೆಂದರೆ ಈ ಲೇಖನದ ವಿಷಯವನ್ನೆತ್ತಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡತೊಡಗಿದ ಕನ್ನಡದ ಹಲವು ಬರಹಗಾರರು ಬಳಸಿದ ಭಾಷೆ ಕೂಡ ಅಂಕಣಕಾರನ ಭಾಷೆಗಿಂತ ಭಿನ್ನವಾಗಿಯೇನೂ ಇರಲಿಲ್ಲ! ಸಾಹಿತ್ಯಕ ವಿದ್ಯಮಾನವೊಂದಕ್ಕೆ ಸ್ಪಂದಿಸುವಾಗ ನಾವು ಬಳಸುವ ‘ಭಾಷಾ ಮಾನದಂಡ’ಗಳ ಅಳತೆ ಎಷ್ಟರದು ಎಂಬುದು ಅಂಕಣ ಬರೆದ ಲೇಖಕನಿಗೂ ಗೊತ್ತು; ಅದಕ್ಕೆ ಪ್ರತಿಕ್ರಿಯಿಸುತ್ತಿರುವ ಲೇಖಕರಿಗೂ ಗೊತ್ತು. ಆದರೆ ಚರ್ಚೆ ನಡೆಯುವ ಸಂದರ್ಭದಲ್ಲಿ ಬಳಕೆಯಾದ ‘ಭಾಷಾ ವೈಖರಿ’ ಕನ್ನಡದ ವಿಮರ್ಶಾ ಸಂವೇದನೆ ಹಿಂದಕ್ಕೆ ಚಲಿಸುತ್ತಿದೆಯೇನೋ ಎಂಬಂತೆ ಇತ್ತು. ಇದು ಕೇವಲ ‘ಭಾಷಾ ಶುದ್ಧಿ’ಗೆ ಸಂಬಂಧಿಸಿದ ಸಂಗತಿಯಲ್ಲ; ಸಂವೇದನೆಯ ಕೊರತೆಗೆ ಸಂಬಂಧಿಸಿದ್ದಾಗಿತ್ತು. ಈ ಚರ್ಚೆಯನ್ನು ಹಲವು ದಿನಗಳ ತನಕ ಕೊಂಡೊಯ್ದ ಕೆಲ ಚಿಂತನಶೀಲ ಬರಹಗಾರರು ಕೂಡ ತಮ್ಮ ಗಾಂಭೀರ್ಯವನ್ನು ಬಿಟ್ಟು ವೈಯಕ್ತಿಕ ಟೀಕೆಗಳ ಧಾಟಿಗೆ ಇಳಿದರು. ಈವರೆಗಿನ ಕನ್ನಡ ವಿಮರ್ಶಾ ಪರಂಪರೆಯನ್ನು ಬಲ್ಲವರೆಲ್ಲರಿಗೂ ಇದು ಗೊತ್ತಿದೆ; ಎದುರಾಳಿಯನ್ನು ಕೂಡ ನಾವು ಅವನ ಭಾಷೆಯನ್ನಿಟ್ಟುಕೊಂಡೇ ನೋಡಬೇಕಾಗುತ್ತದೆ. ಅದರಲ್ಲೂ ಸಾಹಿತ್ಯದಂತಹ ಗಂಭೀರ ಚಿಂತನೆಯೊಂದಕ್ಕೆ ಸಹ ಸ್ಪಂದಿಸುವಾಗ ಅಷ್ಟೇ ‘ಮಾನವೀಯ ಘನತೆ’ಯಿಂದ ನೋಡುವ ಅಗತ್ಯವಿರುತ್ತದೆ; ಇಲ್ಲದೆ ಹೋದರೆ ನಮ್ಮ ವಿಮರ್ಶೆ ಕೂಡ ಒಕ್ಕಣ್ಣಿನ ‘ಕೊಂಕು ನೋಟ’ವಾಗಿ ಹೋಗುತ್ತದೆ. ಗಂಭೀರವಾದ ಸಾಹಿತ್ಯಕ ಚರ್ಚೆಯೊಂದಕ್ಕೆ ಕಾರಣವಾಗಬಹುದಾಗಿದ್ದ ಈ ಪ್ರಸಂಗ ಕೇವಲ ‘ಸಣ್ಣತನ’ದ ಕಮೆಂಟ್‌ಗಳಿಗೆ ಸೀಮಿತವಾಗಿ ನಿಂತುಬಿಟ್ಟಿದ್ದು ಅಲ್ಲಿ ಪ್ರಕಟಗೊಂಡ ‘ಭಾಷಾ ದೋಷ’ದ ಕಾರಣದಿಂದಾಗಿಯೆ.

ಎರಡನೆಯದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪೇಜಾವರ ಸ್ವಾಮೀಜಿ ಕುರಿತು ಆಡಿದ ಮಾತು ವಿವಾದವಾದ ಪ್ರಕರಣ. ಇದರ ಪೂರ್ವಾಪರಗಳೆಲ್ಲವೂ ಈಗಾಗಲೇ ಅನೇಕ ಕಡೆಗಳಲ್ಲಿ ಚರ್ಚೆಯಾಗಿರುವುದರಿಂದ ನಾನು ಈ ಕುರಿತು ಹೆಚ್ಚಿಗೆ ಚರ್ಚಿಸಲು ಹೋಗುವುದಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಕ್ರಿಯೆ-ಪ್ರತಿಕ್ರಿಯೆಗಳ ಬಗ್ಗೆಯೂ ಅನೇಕರಿಗೆ ಗೊತ್ತಿದೆ. ಇಲ್ಲಿ ನಾನು ಹೇಳಹೊರಟಿರುವುದು ‘ಹಂಸಲೇಖ ಪ್ರಕರಣ’ದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಕಟಿಸಿದ ಉಗ್ರ ಪತ್ರಿಕ್ರಿಯೆಗಳ ಬಗ್ಗೆ. ‘ಬಾಡೇ ನಮ್ಮ ಗಾಡು’ ಎಂಬ ಅಭಿಯಾನದಲ್ಲಿ ಬಳಕೆಯಾದ ಅಭಿವ್ಯಕ್ತಿ ವಿಧಾನ ನಮ್ಮ ನಡುವಿನ ತಳ ಸಮುದಾಯಗಳ ಸಾಂಸ್ಕೃತಿಕ ಚಹರೆಯನ್ನು ತೆರೆದಿಟ್ಟಿತು. ಇದು ಒಂದು ಬಗೆಯಲ್ಲಿ ಏಕ ಸಂಸ್ಕೃತಿಯನ್ನು ಹೇರುವ, ಮತೀಯ ಚಿಂತನೆಯನ್ನು ಆಹಾರದ ಹಕ್ಕಿನ ಮೇಲೂ ಹಬ್ಬಿಸುವ ಹುನ್ನಾರದ ವಿರುದ್ಧದ ಪ್ರಬಲ ಹೋರಾಟವಾಗಿಯೂ ಕಾಣಿಸಿಕೊಂಡಿತು. ಸಾಮಾಜಿಕ ಜಾಲತಾಣಗಳ ನಿರಂತರ ಪ್ರತಿರೋಧದ ಫಲವೆಂಬಂತೆ ರಾಜ್ಯಾದ್ಯಂತ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಹಲವು ಪ್ರತಿಭಟನೆ, ಚಳವಳಿಗಳು ನಡೆದವು. ಇದೊಂದು ರೀತಿಯಲ್ಲಿ ಸಕಾರಾತ್ಮಕ ಸ್ಪಂದನ. ಆದರೆ ನನ್ನ ಆಕ್ಷೇಪವಿರುವುದು ಈ ಅಭಿಯಾನದಲ್ಲಿ ಸಾಮಾಜಿಕ ಜಾಲತಾಣಗಳ ನೆಟ್ಟಿಗರು ಹಂಸಲೇಖ ಅವರನ್ನು ಬೆಂಬಲಿಸುವ ಭರದಲ್ಲಿ ಓತಪ್ರೋತವಾಗಿ ಬಳಸತೊಡಗಿದ ‘ಭಾಷಾ ವೈಖರಿ.’

ಸಾಮಾಜಿಕ ವಿದ್ಯಮಾನವೊಂದಕ್ಕೆ ನಾವು ಪ್ರತಿಸ್ಪಂದಿಸುವಾಗ ನಾವು ಬಳಸುವ ಭಾಷೆಯೇ ನಮ್ಮ ಹಕ್ಕೊತ್ತಾಯವನ್ನು ಹೇಳುವಂತಾಗಿರಬೇಕು. ಮಾತಿನ ಎದುರಾಳಿಯೊಬ್ಬನನ್ನು ವೈಚಾರಿಕ ಎದುರಾಳಿಯೆಂದೇ ನಾವು ಭಾವಿಸಬೇಕು. ಅದಕ್ಕೆ ಬೇಕಾದ ಶಾಬ್ದಿಕ ಸಿದ್ಧತೆ, ರಚನಾತ್ಮಕ ವೈಚಾರಿಕತೆ ನಮ್ಮ ಪ್ರತ್ಯಸ್ತ್ರಗಳಾಗಬೇಕು. ಹಾಗೆಯೇ ಎದುರಾಳಿಯ ಮನವೊಲಿಸುವಂತೆಯೂ ಇರಬೇಕು. ಇಲ್ಲಿ ಎಲ್ಲರಿಗೂ ತಿಳಿದಿರುವ ಬಸವಣ್ಣನವರ ವಚನವೊಂದು ನೆನಪಾಗುತ್ತಿದೆ:

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

 ಮೇಲ್ನೋಟಕ್ಕೆ ಈ ವಚನ ನಾವಾಡುವ ಮಾತು ‘ಎಲ್ಲರನ್ನೂ ಮೆಚ್ಚಿ ಸುವಂತಿರಬೇಕು’ ಎಂಬುದನ್ನೇ ಧ್ವನಿಸುವಂತಿದೆ. ಆದರೆ ಅದರ ಮುಂದಿನ ಸಾಲೇ ‘ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು’ ಎಂದು ಹೇಳುತ್ತದೆ. ‘ಸ್ಫಟಿಕ’ ಎಂಬ ಪದಕ್ಕೆ ‘ಪಾರದರ್ಶಕ’ ಎಂಬ ಸಮಾನ ಅರ್ಥವೂ ‘ಶಲಾಕೆ’ ಎಂಬ ಶಬ್ದಕ್ಕೆ ‘ಚೂಪಾದ ಆಯುಧ’ ಎಂಬ ಅರ್ಥವೂ ಇದೆ. ಈ ಮೂಲಕ ಬಸವಣ್ಣನವರು ಏನನ್ನು ಹೇಳುತ್ತಿದ್ದಾರೆ? ನಾವು ಬಳಸುವ ಭಾಷೆ ಏಕಕಾಲಕ್ಕೆ ನಮ್ಮ ಮಾತಿಗೆ ಕಿವಿಗೊಡುವವರನ್ನು ಮೆಚ್ಚಿಸುತ್ತ ಇರುವಂತೆಯೇ ಅವರನ್ನು ಎಚ್ಚರಿಸುವ ಧ್ವನಿಯನ್ನೂ ಒಳಗೊಂಡಿರಬೇಕು ಎಂಬುದನ್ನೇ ಹೇಳುತ್ತಿದ್ದಾರೆ!

ಇದಕ್ಕೆ ಮತ್ತೊಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ. ಇದು ಪಿ.ಲಂಕೇಶ್ ಅವರ ಪ್ರಸಿದ್ಧ ಕವಿತೆ:

‘ಸೂ...ಮಗನೆ, ನಿನ್ನ ಕರೆದಾಗ ನನ್ನನ್ನೇ ಕರೆದಂತಾಗುತ್ತೆ

ನೀನೆಂದೊಡೆ ನಿನ್ನ ಅಮ್ಮನ ನೆನಪಾಗುತ್ತೆ.

ನನ್ನ ಅಮ್ಮನ ನೆನಪಾಗುತ್ತೆ

ಸುಳ್ಳು ಶುರುವಾದೊಡನೆ ಯಾರೋ ಗೊಳ್ಳನೆ ನಕ್ಕು ಬೆವೆಯುತ್ತೆ

 

ಈ ಕವಿತೆಯನ್ನು ನಾವೆಲ್ಲ ವಿವರಿಸಿಕೊಳ್ಳುವಾಗ ಮೊದಲಿಗೇ ಬೆಚ್ಚುವಂತಾಗುತ್ತದೆ. ಕಳೆದ ನಾಲ್ಕು ದಶಕಗಳಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜವನ್ನು, ವ್ಯಕ್ತಿತ್ವಗಳನ್ನು, ಧಾರ್ಮಿಕ ನಂಬಿಕೆಗಳನ್ನು ಅನೇಕ ದಿಕ್ಕುಗಳಲ್ಲಿ ವಿಮರ್ಶೆಗೊಡ್ಡುತ್ತಾ ಬಂದಿರುವ ಈ ಕವಿತೆ ಇಂದು ಓದಿಕೊಳ್ಳುವಾಗ ಬೇರೆಯದೇ ಅರ್ಥ ಹೊರಡಿಸುತ್ತದೆ. ‘ನೆಟ್ಟನೋಟ’ಕ್ಕೆ ವ್ಯಕ್ತಿಯೊಬ್ಬನ ಖಾಸಗಿತನವನ್ನು, ಧಾರ್ಮಿಕ ನಂಬಿಕೆಯನ್ನು ಲೇವಡಿಗೀಡು ಮಾಡುವ, ಆತನ ಬುಡವನ್ನಲ್ಲಾಡಿಸುವ ಈ ಸಾಲುಗಳು ಎದುರಾಳಿಯನ್ನು ತಬ್ಬಿಬ್ಬಾಗಿಸುತ್ತವೆ; ಜೊತೆಗೇ ರೊಚ್ಚಿಗೇಳಿಸುತ್ತವೆ. ಆದರೆ ಸಾಲುಗಳು ಮುಂದುವರಿಯುತ್ತಲೇ ನೀನೆಂದೊಡೆ ನಿನ್ನ ಅಮ್ಮನ ನೆನಪಾಗುತ್ತೆ.

ನನ್ನ ಅಮ್ಮನ ನೆನಪಾಗುತ್ತೆ

ಎಂದಾಗ ಎದುರಾಳಿಯ ಎದೆ ತಣ್ಣಗೆ ಗದಗುಡತೊಡಗುತ್ತದೆ; ಈ ಸಾಲುಗಳು ಆತನನ್ನು ಮರು ಆಲೋಚನೆಗೆ ಸಜ್ಜುಗೊಳಿಸುತ್ತವೆ. ಬಹುಶಃ ಬಸವಣ್ಣನ ‘ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು’ ಎಂಬ ಸಾಲುಗಳು ಇದನ್ನು ನುಡಿಸುತ್ತಿರಬೇಕು. ಇವೆಲ್ಲಕ್ಕೂ ನಮ್ಮ ಸಾಮಾಜಿಕ ಜಾಲತಾಣಗಳು ಬಳಸುತ್ತಿರುವ ‘ಭಾಷೆ’ಗಳಿಗೂ ಎಲ್ಲೋ ಒಂದೆಡೆ ‘ಲಿಂಕ್’ ಇದೆ ಎಂದು ನನಗೆ ತೋರುತ್ತಿದೆ.

ಈ ‘ಲಿಂಕ್’ಗಳು ನಮ್ಮ ‘ಜಾಲತಾಣಿಗರ’ ಕೈಯಿಂದ ಎಲ್ಲೋ ತಪ್ಪಿಸಿಕೊಂಡಿವೆಯೇನೋ ಎಂದು ನನಗೆ ಅನ್ನಿಸುತ್ತಿರುವುದಕ್ಕೆ ಕಾರಣಗಳಿವು:

 

ನಾನು ಮೊದಲಿಗೆ ಉದಾಹರಿಸಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರ ಪೈಕಿ ಮಧ್ಯಮವರ್ಗದ ಗೃಹಿಣಿಯರು, ತರಕಾರಿಯವರು, ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಸಣ್ಣಪುಟ್ಟ ವ್ಯಾಪಾರಿಗಳು-ಹೀಗೆ ಅನೇಕ ಜನಸಾಮಾನ್ಯರು ಇದ್ದಾರೆ. ಇಂತಹವರೊಂದಿಗೆ ನಾನು ಉದಾಹರಿಸಿದ ಶಿಕ್ಷಿತರು, ವಿದ್ವಾಂಸರು, ವಿವಿಧ ಕ್ಷೇತ್ರಗಳ ಜ್ಞಾನ-ವಿಜ್ಞಾನಗಳ ನಿಪುಣರು, ಚಳವಳಿಗಾರರು, ಸಂವೇದನಾಶೀಲ ಬರಹಗಾರರು-ಇಂತಹ ‘ವಿದ್ವಜ್ಜನ’ ‘ಕನೆಕ್ಟ್’ ಆಗಲು ಸಾಧ್ಯವಾಗಿದೆಯೇ? ಬಹುಶಃ ಇಲ್ಲ. ಯಾಕೆಂದರೆ ಇದಕ್ಕೊಂದು ಸರಳ ಉತ್ತರವಿದೆ. ಸಾಮಾನ್ಯವಾಗಿ ‘ಫೇಸ್‌ಬುಕ್’ನಂತಹ ಮಾಧ್ಯಮಗಳಲ್ಲಿ ತಮ್ಮ ‘ಸ್ನೇಹಿತರ ಹುಡುಕಾಟ’ದಲ್ಲಿ ತೊಡಗುವ ಬಹುತೇಕರು ತಮ್ಮ ‘ಸಮಾನ ಮನಸ್ಥಿತಿ’ಯವರನ್ನೇ ಬಯಸುತ್ತಾರೆ; ಇದು ತಪ್ಪೇನೂ ಅಲ್ಲ. ಇದೊಂದು ಮನಃಶಾಸ್ತ್ರೀಯ ನಿಜ ಕೂಡ. ಆದರೆ ಹೀಗೆ ಅಸ್ತಿತ್ವಕ್ಕೆ ಬರುವ ‘ಸಮಾನ ಮನಸ್ಕರ ಗೆಳೆಯರ ಗುಂಪಿನಲ್ಲಿ’ ನಡೆಯುವ ಚರ್ಚೆಗಳಲ್ಲಿ ಹೆಚ್ಚಿ ನ ವಿಚಾರಗಳು ಹೊರಗಿನವರದ್ದೇ ಆಗಿರುತ್ತವೆ. ಉದಾಹರಣೆಗೆ ಪ್ರಗತಿಪರವಾಗಿ ಆಲೋಚಿಸುವ ಫೇಸ್‌ಬುಕ್ ಗುಂಪಿನ ಸ್ನೇಹಿತರು ಶೋಷಿತರು, ನೊಂದವರು, ದಲಿತರು, ಮಹಿಳೆಯರು-ಇಂತಹವರ ಬಗ್ಗೆಯೇ ಹೆಚ್ಚು ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ, ಗುಂಪಿನೊಳಗೆ ಆ ಕುರಿತೇ ಹೆಚ್ಚು ಚರ್ಚೆಗಳಲ್ಲೇ ತೊಡಗಿರುತ್ತಾರೆ. ಆದರೆ ಅಂತಹ ಸಮುದಾಯಗಳ ‘ಫ್ರೆಂಡ್ಸ್ ರಿಕ್ವೆಸ್ಟ್’ಗಳನ್ನು ನಿರ್ಲಕ್ಷಿಸುತ್ತಲೇ ಇರುತ್ತಾರೆ! ನಮ್ಮಾಳಗಿನವರೆಂದು ಚರ್ಚಿಸುತ್ತಿರುವ ಅವರನ್ನು ಅವರೇ ಹೊರಗಿಟ್ಟಿರುತ್ತಾರೆ! ಇದೊಂದು ಅರ್ಥವಾಗದ ಸ್ಥಿತಿ.

‘ಭಾಷಾ ವಿಕಲ್ಪ’ದೊಂದಿಗೆ ಮಾತನಾಡುವ, ಚೀರಾಡುವ ಸಾಮಾಜಿಕ ಶತ್ರುವನ್ನು ನಮ್ಮದೇ ತಣ್ಣಗಿನ, ಆದರೆ ಹಿಮದ ಶಲಾಕೆಗಿಂತಲೂ ಚೂಪಾದ ದನಿಯಲ್ಲಿ ಎದುರಿಸಿದಿದ್ದರೆ ನಮ್ಮ ಎಲ್ಲ ಪ್ರತಿವಾದಗಳೂ ನಿಷ್ಪ್ರಯೋಜಕ. ನಾನು ಮೊದಲಿಗೆ ಉದಾಹರಿಸಿದ ಬುದ್ಧನ ಪ್ರಸಂಗ ಈ ಹೊತ್ತಿನಲ್ಲಿ ನಮ್ಮೆಲ್ಲ ‘ಮಾತಿನ ಶೂರ’ರನ್ನು ಎಚ್ಚರಿಸಬೇಕಿದೆ.

ಈವರೆಗಿನ ಕನ್ನಡ ವಿಮರ್ಶಾ ಪರಂಪರೆಯನ್ನು ಬಲ್ಲವರೆಲ್ಲರಿಗೂ ಇದು ಗೊತ್ತಿದೆ; ಎದುರಾಳಿಯನ್ನು ಕೂಡ ನಾವು ಅವನ ಭಾಷೆಯನ್ನಿಟ್ಟುಕೊಂಡೇ ನೋಡಬೇಕಾಗುತ್ತದೆ. ಅದರಲ್ಲೂ ಸಾಹಿತ್ಯದಂತಹ ಗಂಭೀರ ಚಿಂತನೆಯೊಂದಕ್ಕೆ ಸಹ ಸ್ಪಂದಿಸುವಾಗ ಅಷ್ಟೇ ‘ಮಾನವೀಯ ಘನತೆ’ಯಿಂದ ನೋಡುವ ಅಗತ್ಯವಿರುತ್ತದೆ; ಇಲ್ಲದೆ ಹೋದರೆ ನಮ್ಮ ವಿಮರ್ಶೆ ಕೂಡ ಒಕ್ಕಣ್ಣಿನ ‘ಕೊಂಕು ನೋಟ’ವಾಗಿ ಹೋಗುತ್ತದೆ.

Writer - ಮಂಜುನಾಥ ಲತಾ

contributor

Editor - ಮಂಜುನಾಥ ಲತಾ

contributor

Similar News

ಬೀಗ