ಬೀಗ

Update: 2022-01-23 11:03 GMT

ಬಿ.ಎಂ. ಬಶೀರ್

ಮರದ ಪೆಟ್ಟಿಗೆಯ ಅಥವಾ ಗೋದ್ರೆಜ್ ಕಪಾಟಿನ ಬೀಗ ತೆರೆದಂತೆ ಇನ್ನೊಬ್ಬರ ಮನಕ್ಕೆ ಜಡಿದ ಬೀಗವನ್ನು ತೆರೆದು ಅವರ ಬಳಿಗೆ ಸಾಗುವುದು ಅಷ್ಟು ಸುಲಭವಿಲ್ಲ. ನಮ್ಮ ಪ್ರತಿಷ್ಠೆ, ಅಹಂಕಾರ, ಬಿಗುಮಾನಗಳ ಇಟ್ಟಿಗೆಗಳಲ್ಲಿ ನಮ್ಮ ಸುತ್ತ ಗೋಡೆ ಕಟ್ಟಿ ನಮಗೇ ಗೊತ್ತಿಲ್ಲದೆ ಪರಸ್ಪರ ಬೀಗ ಜಡಿದುಕೊಳ್ಳುತ್ತೇವೆ. ಆ ಬೀಗಗಳನ್ನು ಮುರಿದು, ನಮ್ಮನ್ನು ಪರಸ್ಪರ ಒಂದಾಗಿಸುವ ಶಕ್ತಿ ಸಾವಿಗೆ ಮಾತ್ರ ಇದೆಯೇನೋ ಎಂದು ಒಮ್ಮಿಮ್ಮೆ ಅನ್ನಿಸುತ್ತದೆ.

ಇಂದು ನಾವು ನಾಲ್ಕು ಗೋಡೆಗಳ ನಡುವೆ ಬೀಗ ಹಾಕಿ ಕುಳಿತರೂ, ಫೇಸ್‌ಬುಕ್ ಮೂಲಕ ನಿರಂತರವಾಗಿ ಹೊರ ಜಗತ್ತಿನ ಜೊತೆಗೆ ಸಂಪರ್ಕದಲ್ಲಿರುತ್ತೇವೆ. ಮನೆಯೊಳಗಿದ್ದೂ ಬೀದಿಯ ಗದ್ದಲಗಳಲ್ಲಿ ಸೇರಿಕೊಳ್ಳುತ್ತೇವೆ. ಒಂಟಿಯಾಗಿದ್ದೂ ಎಲ್ಲರೊಳಗೆ ಬೆಸೆದುಕೊಂಡಿರುತ್ತೇವೆ. ಫೇಸ್‌ಬುಕ್ ಇಡೀ ಜಗತ್ತನ್ನು ಒಂದೆಡೆ ಸೇರಿಸಿದ ಪರಿ ವಿಸ್ಮಯ ಹುಟ್ಟಿಸುತ್ತದೆ. ಇತ್ತೀಚೆಗೆ ಹಲವರು ಫೇಸ್‌ಬುಕ್ ಗೆಳೆತನದ ಸಂದೇಶ ರವಾನಿಸುತ್ತಾರೆ. ‘‘ಯಾರಿವರು? ’’ ಎಂದು ಅವರ ವಿವರಗಳನ್ನು ಪರಿಶೀಲಿಸಲು ಹೊರಟರೆ, ತಮ್ಮ ಪ್ರೊಫೈಲ್‌ಗಳಿಗೆ ‘ಬೀಗ’ ಜಡಿದಿರುತ್ತಾರೆ. ಫೇಸ್‌ಬುಕ್‌ನ ಪ್ರೊಫೈಲ್‌ಗಳಿಗೆ ಬೀಗ ಜಡಿದು ಸ್ನೇಹವನ್ನು ಬಯಸುವವರು ಆಳದಲ್ಲಿ ಪುಕ್ಕಲರು, ಸಜ್ಜನರು ಮತ್ತು ಸೇಫ್‌ರೆನ್‌ನ್ನು ಕಾಪಾಡಿಕೊಳ್ಳುವವರಾಗಿರುತ್ತಾರೆ ಅಥವಾ ನಕಲಿ ಐಡಿದಾರರಾಗಿರುತ್ತಾರೆ. ಇನ್ನೂ ಮುಂದಕ್ಕೆ ಹೋದರೆ, ಅವರು ತಮ್ಮೆಳಗಿರುವ ಯಾವುದೋ ರಹಸ್ಯವನ್ನು, ಖಾಸಗಿತನವನ್ನು ಕಾಪಾಡಿಕೊಳ್ಳುವ ಸಂಕಷ್ಟದಲ್ಲಿರುತ್ತಾರೆ. ಇನ್ನೂ ತಮಾಷೆಯೆಂದರೆ, ಫೇಸ್‌ಬುಕ್‌ನಲ್ಲಿ ಹುಟ್ಟಿದ ದಿನವನ್ನಷ್ಟೇ ಹೆಚ್ಚಿನವರು ಹಂಚಿಕೊಳ್ಳುತ್ತಾರೆ. ಇಸವಿಯನ್ನು ತಪ್ಪಿಯೂ ಹಾಕುವುದಿಲ್ಲ.

ಇತ್ತೀಚೆಗೆ ಗೆಳೆಯನೊಬ್ಬ ‘ನಿಮ್ಮ ಪ್ರೊಫೈಲ್ ಲಾಕ್ ಮಾಡಿ ಸರ್. ಯಾರ್ಯಾರೋ ಬಂದು ಏನೇನೋ ಬೊಗಳುವುದು ತಪ್ಪುತ್ತದೆ’ ಎಂದು ಹೇಳಿದ. ‘ನಾವಾಡುವ ಮಾತು ನಮ್ಮ ಯೋಗ್ಯತೆಯನ್ನು ತಿಳಿಸುತ್ತದೆ. ಅವರಾಗಿ ಬಂದು ಅವರ ಯೋಗ್ಯತೆಯನ್ನು ಘೋಷಿಸಿದರೆ, ನಾವ್ಯಾಕೆ ಅದಕ್ಕೆ ಅಡ್ಡಿ ಪಡಿಸಬೇಕು?’ ಉತ್ತರಿಸಿದೆ. ಮುಖ್ಯವಾಗಿ ಈ ಬೀಗ ಹಾಕಿ ಮುಚ್ಚಿಡುವುದರ ಬಗ್ಗೆ ನನಗೆ ಮೊದಲಿನಿಂದಲೂ ನಂಬಿಕೆಯಿಲ್ಲ. ಮನೆ ಬಾಗಿಲೊಂದನ್ನು ಬಿಟ್ಟು ಮನೆಯೊಳಗಿರುವ ಅಥವಾ ಕಚೇರಿಯೊಳಗಿರುವ ನನ್ನ ಯಾವುದೇ ಕಬೋರ್ಡಿಗೆ ಅಥವಾ ಡ್ರಾವರ್‌ಗೆ ನಾನು ಬೀಗ ಹಾಕಿಯೇ ಇಲ್ಲ. ಕಚೇರಿಯ ಕಪಾಟಿನಲ್ಲಿರುವ ಪುಸ್ತಕಗಳು ಒಮ್ಮಾಮ್ಮೆ ಅನಾಮತ್ತಾಗಿ ಕಾಣೆಯಾಗುವಾಗ, ‘ಬೀಗ ಹಾಕುತ್ತೇನೆ’ ಎಂದು ಹೇಳಿ ಬೆದರಿಸಿದ್ದೇನೆಯೇ ಹೊರತು ಈವರೆಗೆ ಬೀಗ ಹಾಕಿಲ್ಲ. ಕಿರಿಯರು ತೆರೆದ ಕಪಾಟನ್ನು ನೋಡಿಯಾದರೂ ಓದುವ ಮನಸ್ಸು ಮಾಡಲಿ ಎನ್ನುವ ಕಾರಣಕ್ಕೆ.

ನನ್ನ ಬಾಲ್ಯದಲ್ಲಿ ಅಣ್ಣ ತನ್ನ ಪುಸ್ತಕದ ಕಪಾಟಿಗೆ, ಪೆಟ್ಟಿಗೆಗೆ ಬೀಗ ಹಾಕುತ್ತಿದ್ದ. ಅವನು ಹಾಕುವ ಬೀಗವೇ ನನಗದನ್ನು ತೆರೆದು ನೋಡಬೇಕು ಎಂದು ಪ್ರೇರೇಪಿಸುತ್ತಿತ್ತು. ಬಾಲ್ಯದಲ್ಲೇ ಅವನಿಗೊಂದು ಮರದ ಪೆಟ್ಟಿಗೆ ಇತ್ತು. ಮುಂದೆ ಮನೆಯಲ್ಲಿ ತಂದೆ ಉಪಯೋಗಿಸುತ್ತಿದ್ದ ಹಳೆಯ ಗೋದ್ರೆಜ್ ಕಪಾಟನ್ನು ತನ್ನದಾಗಿಸಿಕೊಂಡು ಅದಕ್ಕೆ ಬೀಗ ಜಡಿಯ ತೊಡಗಿದ. ಅವನು ಹೈಸ್ಕೂಲ್ ಓದುವ, ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದಾಗಿನ ಸಂದರ್ಭಗಳು ಇವು. ಅವನು ಆಗಾಗ ಅಮರ ಚಿತ್ರ ಕಥೆಗಳು, ಇಂದ್ರಜಾಲ ಕಾಮಿಕ್ಸ್, ಪುಟಾಣಿ ಮೊದಲಾದ ಪುಸ್ತಕಗಳನ್ನು ತರುತ್ತಿದ್ದ. ಇದಕ್ಕೆ ಹಣ ಹೇಗೆ ಹೊಂದಿಸುತ್ತಿದ್ದ ಎನ್ನುವುದು ನನಗೆ ನೆನಪಿಲ್ಲ. ಅದನ್ನು ಅಷ್ಟೇ ಜಾಗರೂಕತೆಯಿಂದ ಅವನ ಮರದ ಪೆಟ್ಟಿಗೆಯಲ್ಲಿಟ್ಟು ಬೀಗ ಜಡಿಯುತ್ತಿದ್ದ. ನಾನೇನಾದರೂ ಪುಸ್ತಕ ಓದಬೇಕೆಂದರೆ ನಾನವನಿಗೆ ಒಂದು ಪುಸ್ತಕಕ್ಕೆ ಹತ್ತು ಪೈಸೆ ನೀಡಬೇಕಾಗಿತ್ತು. ನನಗೆಂದಲ್ಲ, ನಮ್ಮ ಊರಿನ ಹಲವರಿಗೆ ಅವನು ಹೀಗೆ ಪುಸ್ತಕ ಕೊಟ್ಟು ಹತ್ತು ಪೈಸೆ ವಸೂಲಿ ಮಾಡುತ್ತಿದ್ದ. ಕೆಲವರು ಪುಸ್ತಕ ಕೊಂಡು ಹೋಗಿ, ಹಣ ಕೊಡದೆ ಜಗಳಗಳಾದದ್ದೂ ಇವೆ. ಪುಸ್ತಕ ಓದುವುದಕ್ಕಾಗಿ ನಾನು ಅವನಲ್ಲಿ ಸಾಲ ಮಾಡುತ್ತಿದ್ದೆ. ಈ ಸಾಲದ ಪಟ್ಟಿ ಹತ್ತು ರೂಪಾಯಿವರೆಗೆ ಬೆಳೆಯಿತು. ಒಂದು ದಿನ ‘ಇನ್ನು ನಿನಗೆ ಪುಸ್ತಕ ಕೊಡಲಾಗುವುದಿಲ್ಲ’ ಎಂದ. ನನಗೋ ಕಥೆ ಪುಸ್ತಕಗಳೇ ಜಗತ್ತು. ಒಮ್ಮೆ ತಾಯಿಯ ಪೆಟ್ಟಿಗೆಯಿಂದ ಹತ್ತು ರೂಪಾಯಿ ಕದ್ದು ಅವನ ಸಾಲವನ್ನು ತೀರಿಸಿ ಬಿಟ್ಟೆ.

ಒಂದು ದಿನ ಅವನು ಶಾಲೆಗೆ ಹೋದ ಬಳಿಕ ನಾನು ಹೊಟ್ಟೆನೋವು ಎಂದು ರಜೆ ಹಾಕಿದೆ. ಸಣ್ಣ ಸರಿಗೆಯೊಂದನ್ನು ಬಳಸಿ, ಅವನ ಪೆಟ್ಟಿಗೆಯ ಬೀಗವನ್ನು ತೆರೆಯುವಲ್ಲಿ ಯಶಸ್ವಿಯಾದೆ. ಪೆಟ್ಟಿಗೆ ತೆರೆದರೆ, ನಿಧಿಯ ರಾಶಿ. ಬಗೆ ಬಗೆಯ ಕಥೆ ಪುಸ್ತಕಗಳು. ಇಡೀ ದಿನ ಕೂತು ಓದಿದೆ. ಮುಂದೆ, ಅವನ ಪೆಟ್ಟಿಗೆಯ ಬೀಗ ತೆರೆಯಲೆಂದೇ ಆಗಾಗ ರಜೆ ಹಾಕತೊಡಗಿದೆ. ಒಂದೆರಡು ತಿಂಗಳು ಕಳೆದಿರಬಹುದು. ಅಣ್ಣನಿಗೆ ವಾಸನೆ ಬಡಿಯಿತು. ಯಾಕೆಂದರೆ, ನಾನು ಅವನಲ್ಲಿ ಪುಸ್ತಕಗಳನ್ನೇ ಕೇಳುತ್ತಿಲ್ಲ? ಒಂದು ದಿನ ನಾನು ರಜೆ ಹಾಕಿದ ದಿನವೇ ಅವನು ಮಧ್ಯಾಹ್ನ ಶಾಲೆಗೆ ರಜೆ ಹಾಕಿ ಬಂದ. ಅವನಿಗೆ ನಾನು ಆತನ ಪೆಟ್ಟಿಗೆಯ ಬೀಗವನ್ನು ತೆರೆದು ಕದ್ದು ಓದುತ್ತಿರುವುದು ಗೊತ್ತಾಗಿ ಹೋಯಿತು. ಸರಿ, ಮನೆಯಲ್ಲಿ ಗದ್ದಲ. ತಾಯಿಯ ಸಂಧಾನ. ಕೊನೆಗೂ ದಂಡವಾಗಿ ತಾಯಿ ಅವನಿಗೆ ಐದು ರೂಪಾಯಿ ಕೊಟ್ಟು ಸಮಾಧಾನಿಸಿದಳು.

ಆದರೆ ಅವನು ಜಾಗರೂಕನಾಗಿದ್ದ. ಅವನೀಗ ಹಳೆಯ ಬೀಗವನ್ನು ಎಸೆದು, ಹೊಸ ಅಂಕಿಗಳ ಬೀಗವನ್ನು ತಂದು ಪೆಟ್ಟಿಗೆಗೆ ಜಡಿದ. ಅಂಕಿಯನ್ನು ಕ್ರಮ ಪ್ರಕಾರ ಜೋಡಿಸಿದರೆ ಬೀಗ ತೆರೆದುಕೊಳ್ಳುತ್ತಿತ್ತು. ನನಗೋ ಅವನ ಪೆಟ್ಟಿಗೆಯ ಮೇಲಿನ ಮೋಹ ಹೋಗಿಲ್ಲ. ಆದರೆ ಈಗ ನನ್ನ ಬಗ್ಗೆ ತಾಯಿಯೂ ಒಂದು ಕಣ್ಣಿಟ್ಟಿದ್ದರು. ‘‘ಅವನ ಪೆಟ್ಟಿಗೆಯನ್ನು ಮುಟ್ಟಿದರೆ ಜಾಗೃತೆ’’ ಎಂದು ಆಗಾಗ ಎಚ್ಚರಿಸುತ್ತಿದ್ದರು.

‘‘ಅವನು ಅಪ್ಪನ ಶರ್ಟಿನಿಂದ ದುಡ್ಡು ಕದ್ದು ಕಥೆ ಪುಸ್ತಕ ತರುವುದು. ನನಗೂ ಕೊಡಲಿ’’ ಎನ್ನುವುದು ನನ್ನ ತರ್ಕ.

ಒಂದು ದಿನ ಶಾಲೆಗೆ ರಜೆ ಹಾಕಿದವನು ಇಡೀ ದಿನ ಕೂತು ನಂಬರ್‌ಗಳನ್ನು ಜೋಡಿಸತೊಡಗಿದೆ. ಕೊನೆಗೂ ಬೀಗ ತೆರೆಯಿತು. ಮುಂದೆ ಅವನಿಗರಿವಿಲ್ಲದಂತೆಯೇ ನಾನು ಪೆಟ್ಟಿಗೆಯನ್ನು ತೆರೆದು ಓದುತ್ತಿದ್ದೆ. ಅವನೋ ಗೆದ್ದವನಂತೆ ಬೀಗಿ ನನ್ನ ಮುಂದೆಯೇ ಕಥೆೆ ಪುಸ್ತಕಗಳನ್ನು ಓದುತ್ತಿದ್ದ. ನಾನು ಏನೂ ಗೊತ್ತಿಲ್ಲದವನಂತೆ ವರ್ತಿಸುತ್ತಿದ್ದೆ. ಆಗಾಗ ಅವನು ಕೋಡ್‌ನಂಬರ್‌ಗಳನ್ನು ಬದಲಿಸುತ್ತಿದ್ದನಾದರೂ, ನಾನು ಅಷ್ಟೇ ಸಾವಧಾನದಿಂದ ಆ ನಂಬರ್‌ಗಳನ್ನು ಜೋಡಿಸುವಲ್ಲಿ ಯಶಸ್ವಿಯಾಗುತ್ತಿದ್ದೆ. ಮುಂದೆ ಅವನು ಕಾಲೇಜು ತಲುಪಿದಾಗ ಅಪ್ಪನ ಸಣ್ಣ ಗೋದ್ರೆಜ್ ಕಾಪಾಟನ್ನು ತನ್ನ ವಶ ಮಾಡಿಕೊಂಡು ಅಲ್ಲಿ ಪುಸ್ತಕಗಳನ್ನು ಜೋಡಿಸಿ ಇಡತೊಡಗಿದ್ದ. ಅವನು ಯಾವುದೇ ಪುಸ್ತಕ ಕೊಂಡರೆ, ಅದಕ್ಕೆ ಸುಂದರವಾಗಿ ಬೈಂಡ್ ಹಾಕಿ, ಅಷ್ಟೇ ಸುಂದರವಾಗಿ ಅದರ ಮೇಲೆ ಪುಸ್ತಕದ ಹೆಸರು ಬರೆಯುತ್ತಿದ್ದ. ಅವನಲ್ಲಿರುವ ಒಂದೇ ಒಂದು ಪುಸ್ತಕದ ಕಿವಿ ಮಡಚಿದ್ದು ನಾನು ನೋಡಿರಲಿಲ್ಲ. ಪುಸ್ತಕದ ಪುಟಗಳ ಕಿವಿ ಮಡಚುವುದೆಂದರೆ ಅವನಿಗಾಗುತ್ತಿರಲಿಲ್ಲ. ಅವನ ಪುಸ್ತಕಗಳ ಕಪಾಟಿಗೆ ಬೀಗವಿರುತ್ತಿದ್ದುದರಿಂದ, ನಾನು ನನ್ನದೇ ಒಂದು ಗೋಡೆ ಕಪಾಟಿನಲ್ಲಿ ನನ್ನ ಪುಸ್ತಕಗಳನ್ನು ಜೋಡಿಸತೊಡಗಿದೆ. ನನ್ನ ಗೋಡೆ ಕಪಾಟಿಗೆ ಬಾಗಿಲು ಇರುತ್ತಿರಲಿಲ್ಲ. ಒಮ್ಮಿಮ್ಮೆ ನನ್ನ ಒಂದೆರಡು ಪುಸ್ತಕಗಳು ಅಚಾನಕ್ಕಾಗಿ ಕಾಣೆಯಾಗಿ ಬಿಡುತ್ತಿದ್ದವು. ನಾನೋ ಯಾರೋ ಓದಲು ಎತ್ತಿಕೊಂಡು ಹೋಗಿರಬಹುದು ಎಂದು ಸುಮ್ಮನಿರುತ್ತಿದೆ. ಅಣ್ಣ ತೀರಿ ಹೋದ ಬಳಿಕ ಅವನ ಗೋದ್ರೆಜ್ ಕಪಾಟನ್ನು ತೆರೆದಾಗ ಅಲ್ಲಿ ನನ್ನ ಕಾಣೆಯಾದ ಹಲವು ಪುಸ್ತಕಗಳು ದೊರಕಿದವು. ಅವುಗಳನ್ನು ಬೈಂಡ್ ಹಾಕಿ, ಸುಂದರ ಅಕ್ಷರಗಳಲ್ಲಿ ಪುಸ್ತಕದ ಹೆಸರು ಬರೆದು ಜೋಪಾನವಾಗಿಟ್ಟಿದ್ದ. ಅವನ ಅನಂತರ ಆ ಕಾಪಾಟಿನಲ್ಲಿರುವ ಪುಸ್ತಕಗಳು ಮತ್ತು ನನ್ನ ಗೋಡೆ ಕಪಾಟಿನಲ್ಲಿರುವ ಪುಸ್ತಕಗಳು ಒಂದಾದವು. ಮತ್ತೆಂದೂ ನಾನು ಆ ಕಪಾಟಿಗೆ ಬೀಗ ಹಾಕಲು ಹೋಗಲಿಲ್ಲ.

ಇಂದು ನಾನು ಮನೆಯಲ್ಲಿ ಏಕಾಂಗಿ. ಮನೆಯಲ್ಲಿ ಒಟ್ಟು ಐದು ಕಪಾಟುಗಳಿವೆ. ಒಂದು ನನ್ನ ಅಣ್ಣ ಉಪಯೋಗಿಸುತ್ತಿದ್ದ ಗೋದ್ರೆಜ್ ಕಾಪಾಟು. ಇನ್ನು ಮೂರು ನನ್ನ ಮೂವರು ತಂಗಿಯರ ಮದುವೆಯ ಸಂದರ್ಭಗಳಲ್ಲಿ ತೆಗೆದ ಕಪಾಟುಗಳು. ಅವರು ವರ್ಷಕ್ಕೆರಡು ಬಾರಿ ಬಂದಾಗ ಬಳಸಿಕೊಳ್ಳುತ್ತಾರೆ. ಉಳಿದಂತೆ ನನ್ನ ಪುಸ್ತಕಗಳೇ ಇರುವ ಒಂದು ಗಾಜಿನ ಬಾಗಿಲು ಇರುವ ಕಾಪಾಟು ಇದೆ. ಮಕ್ಕಳೆಲ್ಲ ಬಂದಾಗ ಆ ಕಪಾಟಿನ ಗಾಜು ಸರಿಸಿ ಪುಸ್ತಕಗಳನ್ನು ರಾಶಿ ಹಾಕಿ ಆಟ ಆಡುತ್ತಾರೆ. ಮಕ್ಕಳಿಗಿಂತ ಪುಸ್ತಕ ದೊಡ್ಡದಲ್ಲ ಎಂದು ಅವರನ್ನು ಅದರಲ್ಲಿ ಆಡಲು ಬಿಟ್ಟು ಬಿಡುತ್ತೇನೆ. ಬೀಗ ಹಾಕಿ ಇಡುವಷ್ಟು ದುಡ್ಡು ನನ್ನ ಬಳಿ ಇಲ್ಲದೇ ಇರುವುದರಿಂದ ತಿಜೋರಿಯ ಅಗತ್ಯ ನನಗೆ ಬೀಳಲೇ ಇಲ್ಲ. ನನ್ನ ಪ್ಯಾಂಟಿನ ಕಿಸೆಯಲ್ಲಿ ಒಂದು ಸಣ್ಣ ಪರ್ಸಿದೆ. ಮನೆಯಲ್ಲಿ ಯಾರಾದರೂ ಇದ್ದು, ಅವರದನ್ನು ತೆಗೆಯುತ್ತಾರೆ ಎನ್ನುವ ಭಯವೂ ನನಗಿಲ್ಲ. ಯಾಕೆಂದರೆ ಅವರಿಗೆ ಅಗತ್ಯ ಇದ್ದರೆ ದುಡ್ಡು ತೆಗೆದುಕೊಳ್ಳಲಿ ಎಂದೇ ಎಲ್ಲರಿಗೂ ಕಾಣುವ ಹಾಗೆ ಅದನ್ನು ಇಟ್ಟಿರುತ್ತೇನೆ.

ಆದರೆ ನನ್ನ ಮನದ ತಿಜೋರಿಯನ್ನು ಅಷ್ಟೇ ಮುಕ್ತವಾಗಿ ತೆರೆದಿಟ್ಟಿದ್ದೇನೆ ಎಂದರೆ ಆತ್ಮವಂಚನೆಯಾದೀತು. ಹೊರ ಮನದ ಕಪಾಟು ತೆರೆದೇ ಇಟ್ಟಿದ್ದೇನಾದರೂ, ಅದರೊಳಗೆ ಯಾರೂ ಕಾಣದಂತಹ ಇನ್ನೊಂದು ಪುಟ್ಟ ತಿಜೋರಿಯನ್ನು ಬಚ್ಚಿಟ್ಟು ಬೀಗ ಜಡಿದಿದ್ದೇನೆ. ಆಗಾಗ ಕವಿತೆ, ಕಥೆಗಳನ್ನು ಬರೆಯುವ ಹೊತ್ತಿಗೆ ಅಪ್ರಯತ್ನವಾಗಿ ಆ ತಿಜೋರಿ ತೆರೆದುಕೊಳ್ಳುತ್ತದೆ. ಮರದ ಪೆಟ್ಟಿಗೆಯ ಅಥವಾ ಗೋದ್ರೆಜ್ ಕಪಾಟಿನ ಬೀಗ ತೆರೆದಂತೆ ಇನ್ನೊಬ್ಬರ ಮನಕ್ಕೆ ಜಡಿದ ಬೀಗವನ್ನು ತೆರೆದು ಅವರ ಬಳಿಗೆ ಸಾಗುವುದು ಅಷ್ಟು ಸುಲಭವಿಲ್ಲ. ನಮ್ಮ ಪ್ರತಿಷ್ಠೆ, ಅಹಂಕಾರ, ಬಿಗುಮಾನಗಳ ಇಟ್ಟಿಗೆಗಳಲ್ಲಿ ನಮ್ಮ ಸುತ್ತ ಗೋಡೆ ಕಟ್ಟಿ ನಮಗೇ ಗೊತ್ತಿಲ್ಲದೆ ಪರಸ್ಪರ ಬೀಗ ಜಡಿದುಕೊಳ್ಳುತ್ತೇವೆ. ಕೆಲವೊಮ್ಮೆ ಬೀಗ ಜಡಿದುಕೊಂಡವರು ಕೀಲಿಕೈಗಳನ್ನೇ ಕಳೆದುಕೊಂಡು ಬಿಡುತ್ತಾರೆ. ಬದುಕಿಡೀ ಆ ಕೀಲಿ ಕೈಗಳನ್ನು ಹುಡುಕುವುದರಲ್ಲೇ ಮುಗಿದು ಹೋಗಿರುತ್ತದೆ. ಹೊರಗಿರುವವರಿಗೆ ಆತನ ಹುಡುಕಾಟದ ಬಗ್ಗೆ ಅರಿವೇ ಇರುವುದಿಲ್ಲ. ಹೊರಗಿದ್ದವರಿಗೆ ತಾವು ಆತನ ಹುಡುಕಾಟಗಳಿಗೆ ನೆರವಾಗಬಹುದಿತ್ತು ಎನ್ನುವುದು ಅರಿವಿಗೆ ಬರುವಾಗ ಸಮಯ ಮೀರಿರುತ್ತದೆ. ನಮಗೆ ನಾವೇ ಹಾಕಿಕೊಳ್ಳುವ ಈ ಬೀಗಗಳನ್ನು ಮುರಿದು, ನಮ್ಮನ್ನು ಪರಸ್ಪರ ಒಂದಾಗಿಸುವ ಶಕ್ತಿ ಸಾವಿಗೆ ಮಾತ್ರ ಇದೆಯೇನೋ ಎಂದು ಒಮ್ಮಿಮ್ಮೆ ಅನ್ನಿಸುತ್ತದೆ.

Writer - ಬಿ.ಎಂ. ಬಶೀರ್

contributor

Editor - ಬಿ.ಎಂ. ಬಶೀರ್

contributor

Similar News