ಒಲಿದ ಸ್ವರಗಳು

Update: 2022-01-19 07:57 GMT

ಪ್ರೀತಿಯ ಒರತೆಯನ್ನು ತುಂಬಿಕೊಂಡ ಕವಿತೆಗಳಿಗಾಗಿ ಯುವ ಕವಿ ಫೈಝ್ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಅಚ್ಚುಮೆಚ್ಚು. ವೃತ್ತಿಯಲ್ಲಿ ಪತ್ರಕರ್ತ. ಒನ್ ಇಂಡಿಯಾದಲ್ಲಿ ದುಡಿಮೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂದು.

ಫೈಝ್, ಬಂಟ್ವಾಳ

ಎರಡು ಅದ್ಭುತ ಘಟನೆ

ಎರಡು ಅದ್ಭುತ ಘಟನೆ

ಮೊದಲಿಗೆ ಎರಡನೆಯದ್ದು ಹೇಳುತ್ತೇನೆ.

ಯಾವುದೋ ಧಾವಂತದಲ್ಲಿ
ಓಡಿ ಬಂದು
ಏನನ್ನೂ ಆಡದೆ ನೀ ಸುಮ್ಮನೆ
ಎದೆಗಾತುಕೊಂಡೆ.
ಕಡಲಿನಷ್ಟು ನೋವು ಕರಗಿ
ನೀರಾಗಿ ಎದೆ ಒದ್ದೆ ಮಣ್ಣಂತೆ
ಹಸಿಯಾಯಿತು.

ನೀನು ಮಾತ್ರ ಇದ್ದ ಅಲ್ಲಿ
ಇಬ್ಬರೂ ಒಟ್ಟಾಗಿ ಅಚ್ಚಾದೆವು.
ಎಂದೋ ಒಂದು ಪಾರಿವಾಳ
ಹಾಕಿದ ಹಿಕ್ಕೆಯಲ್ಲಿದ್ದ
ಯಾವುದೋ ಗಿಡದ
ಬೀಜವೊಂದು ತನ್ನಷ್ಟಕ್ಕೆ
ಮೊಳೆಯಿತು.

ದುಂಬಿಗಳು ತುಂಬಿ
ನಮ್ಮಂತೆ ಪ್ರೇಮಿಸಿದಾಗ
ಹಸಿರಹೊದ್ದು ನಿಂತ ಉದ್ಯಾನ
ನಿನ್ನ ಬಿಂಕ ಕಡಪಡೆದು ಮೆರೆಯಿತು.
ನೋಡ ನೋಡುತ್ತಿದ್ದಂತೆ
ಇಡಿಯ ಉದ್ಯಾನದಲಿ ಅಸಂಖ್ಯ
ಪ್ರೇಮಿಗಳು ಪ್ರೀತಿಯಲ್ಲಿ ತನ್ಮಯರಾಗಿಬಿಟ್ಟರು.
ನೀ ಎದೆಗಾತುಕೊಂಡೇ ಇದ್ದೆ.
ನಿನ್ನೆದೆಯ ಕಾವು ನನ್ನಿಡೀ ದೇಹ
ಹಬ್ಬುತ್ತಿದ್ದಂತೆ ಸಣ್ಣಗೆ ಮಳೆ,
ಅದರಲ್ಲೊಂದು ಹನಿ
ನನ್ನ ಕೆನ್ನೆಯ ದಾಟಿ ನಿನ್ನ ಕೂದಲೆಡೆಯಲ್ಲೆಲ್ಲೋ
ಅವಿತುಕೊಂಡಿತು.

ನೀನು ಅಪ್ಪಿಕೊಂಡೇ ಇದ್ದೆ.
ನನ್ನೆದೆ ಬಡಿತಕ್ಕೆ ತಾಳ ಹಾಕುವಂತೆ,
ಧ್ಯಾನದ ಮೌನದಲ್ಲಿರುವಂತೆ,
ಹಾಲೂಡಿಸುವ ತಾಯಿಯ ಕೈಯಲ್ಲಿರುವ
ಮಗುವಂತೆ ನಿನ್ನ ಕಣ್ಣು ಮುಚ್ಚಿತ್ತು.

ಎರಡನೆಯದ್ದು ಒಂದು ಅದ್ಭುತ ಕನಸು

ಇನ್ನು ಮೊದಲಿನದ್ದು
ನಿನಗೆ ಗೊತ್ತೇ ಇದೆ.
ನಿನ್ನ ನಿರಾಕರಣೆಯ ಬಳಿಕವೂ
ನಾನು ಉಸಿರಾಡುತ್ತಲೇ ಇದ್ದೇನೆ 

**************************************

ಉರಿದ ಊರಿನ ಪ್ರೇಮಪತ್ರ 

ಅವಳ ಮುಂಗೋಪವನ್ನು,
ಶುದ್ಧ ಮಗುತನದ ಆಸೆಗಳನ್ನು
ಎಷ್ಟು ಉತ್ಕಟವಾಗಿ ಹಚ್ಚಿಕೊಂಡಿದ್ದೇನೆ
ಎಂಬುದನ್ನು
ತೀವ್ರವಾಗಿ ಬರೆಯಬೇಕೆಂದಷ್ಟೇ
ನಾನು ಕೂರುತ್ತೇನೆ.

ಆರ್ಧ್ರವಾಗಿ ನನ್ನೆಲ್ಲಾ ಭಾವನೆಗಳನ್ನು
ಬರೆದು ಅವಳ ವಿಳಾಸದ ಅಂಚೆ ಡಬ್ಬಿಗೆ
ಹಾಕಿ ಬಂದು ಮುಗ್ಧವಾಗಿ ಉತ್ತರಕ್ಕೆ
ಕಾಯಬೇಕು ಎಂದುಕೊಳ್ಳುತ್ತೇನೆ
ಎಷ್ಟೋ ಬಾರಿ.

ಆದರೆ,
ಚರಿತ್ರೆಯ ಪಾಠಗಳು ನನ್ನನ್ನು ಸುಮ್ಮನೆ
ಕನಸಲು ಬಿಡುವುದಿಲ್ಲ.
ಡಿಟೆನ್ಶನ್ ಕ್ಯಾಂಪಿನಲ್ಲಿ ಉಸಿರುಗಟ್ಟಿದವರಿಂದ
ಗುಜರಾತಿನ ಗಲ್ಲಿಯವರೆಗಿನ
ಅಮ್ಮಂದಿರ ಕೂಗು ನನ್ನ
ರಾತ್ರಿಗಳನ್ನು ಕಸಿದುಕೊಳ್ಳುತ್ತವೆ
ಅಮಾನುಷವಾಗಿ.
ಅವಳ ವಿಳಾಸಕ್ಕೆ ಕಳುಹಿಸಿದ ಪತ್ರ
ಅಂಚೆಡಬ್ಬಿಯೊಂದಿಗೆ ಹೊತ್ತಿಯುರಿದಂತೆ,
ಅವಳ ವಿಳಾಸದಲ್ಲಿ; ಆಗಷ್ಟೇ ಸುಟ್ಟ-
ಗೋಡೆಯಲ್ಲಿ ಸುರುಳಿ ಸುರುಳಿಯಾಗಿ
ಹೊಗೆ ಏಳುವಂತೆ..
ಅಥವಾ..
ಅಥವಾ..
ಇನ್ನೂ ಸ್ಟಾಂಪಿಸದ ಅರ್ಧ ಸುಟ್ಟ ಪತ್ರ
ನನ್ನೊಂದಿಗೆ ದಫನಗೊಂಡ
ಹಾಗೆ ಕನಸುಗಳು ಬೀಳುತ್ತವೆ.

ದ್ವ್ವೇಷ ತುಂಬಿಕೊಂಡು
ಹೊತ್ತಿ ಉರಿಯಲು ಸಿದ್ಧವಾಗಿಬಿಟ್ಟ
ಊರಿನ ಬಾಗಿಲಲ್ಲಿ ಪ್ರೇಮಪತ್ರ
ಬರೆದವರ ಕತೆಯಿದ್ದರೆ ಹೇಳಿ;
ಅವಳ ವಿಳಾಸದ ಅಂಚೆಡಬ್ಬಿಗೆ
ಪತ್ರ ಹಾಕಲು ನನ್ನ ಬಳಿಯೂ
ವಿಷಯಗಳಿವೆ. 

**************************************

ಕಾಡುವವರು

ಹುಡುಗೀ
ಇಲ್ಲಿ ಕೇಳು.
ಪ್ರೇಮದ ಮಧುವಿನ
ಕುರಿತು,
ಒಡಲು ಸುತ್ತುವ ಕಾಮದ
ಬಳ್ಳಿಯ ಕುರಿತು
ಕವಿತೆ ಕಟ್ಟುವುದಷ್ಟೇ
ನನ್ನದೂ ಉದ್ದೇಶ

ಮಲದ ಗುಂಡಿಯ ಅಪ್ಪಟ ಹುತಾತ್ಮ
ದನದ ಹೆಸರಲ್ಲಿ ಸಾಯುವ ಸಾಬಿ
ಬೆಂಕಿ ಕಾಣದ ಒಲೆ ಕಣ್ಣೊಳಗಿಟ್ಟು ಕಾದ
ಹಸಿವಿನ ಹಕ್ಕುದಾರ
ಮೇಲ್ಕಂಡ ಇವರ ಹಗೆ
ನನ್ನಂತವರ ಮೇಲೆ.
ಕಾಡಬೇಕಾದವರನ್ನು ಕಾಡದೆ
ನನ್ನಂತವರನ್ನು ಕಾಡಿದರೆ
ಕವಡೆ ಕಿಮ್ಮತ್ತಿನ ಪ್ರಯೋಜನವಿಲ್ಲವೆಂದು
ಇವರಿಗೆ ಹೇಳುವುದಾರು?

ಕವಿತೆಯ ಮೇಲೆ
ಇವರು ತಾವು ಕಟ್ಟಿಕೊಂಡಂತೆಲ್ಲಾ
ಆಕಾಶಕ್ಕೆ ಮೆಟ್ಟಿಲಿಟ್ಟಂತೆ
ಪೈಪೋಟಿಗೆ ಬಿದ್ದು
ಕಟ್ಟಡ ಕಟ್ಟುವ ಧಣಿಗಳು,
ಧಣಿಗಳು ನನ್ನ ಮೂಲಕವೇ
ಆರಿಸಿಕೊಂಡ ಅವರ ಸೇವಕರು,
ಇದಾವುದನ್ನೂ ಕಾಣದಂತೆ
ಕಂಡದ್ದು ಹೇಳದಂತೆ ತಡೆಯುವ
ಸೇವಕರ ಆಳುಗಳ ವಿರುದ್ಧ
ವಿಪರೀತ ಆವೇಶ ಹುಟ್ಟಿಕೊಳ್ಳುತ್ತದೆ

ನನ್ನ ಕೂಗು ನಕ್ಸಲರ
ಧ್ವನಿಯಂತೆ ಕೇಳಿಸಿಕೊಳ್ಳುವವರ
ಮಂದಿಯ ನಡುವೆ
ನಿನ್ನ ಮೇಲಿನ ಕವಿತೆಯಷ್ಟೇ
ಕಟ್ಟಬೇಕೆಂದನಿಸುತ್ತದೆ.
ಆದರೇನು ಮಾಡುವುದು ಹುಡುಗಿ..
ಕೆಲವೊಮ್ಮೆ ನೀನು
ಇವರಷ್ಟೆಲ್ಲಾ ಕಾಡುವುದಿಲ್ಲ

**************************************

ಬಾಂಬ್ ಮತ್ತು ಅವಳು

ಹೇಗೋ ನಾವು ಪ್ರೀತಿಸಿಬಿಟ್ಟೆವು.
ಪ್ರೀತಿ ಹುಟ್ಟಿದ್ದು ಹೇಗೆಂದರೆ
ನನಗೂ ಗೊತ್ತಿಲ್ಲ.
ಅವಳಿಗಂತೂ ಇದು
ಪ್ರೀತಿಯೇನಾ ಅನ್ನೋ
ಗೊಂದಲ
ಇನ್ನೂ ಮುಗಿದಂತಿಲ್ಲ

ನಾವು ಸೇರಿದಾಗ
ಹೊತ್ತಿ ಉರಿಯುವ ಊರು
ಕಾರಣ ನೀಡುವಾಗ
ಮುಗ್ಧಳಾಗಿ ಕೇಳುತ್ತಾಳೆ
ಪ್ರೀತಿಯಿದ್ದಲ್ಲಿ
ದ್ವೇಷ ಹೇಗೆ?
ಉತ್ತರ ನನಗೂ ಗೊತ್ತಿಲ್ಲ.
ಮತ್ತೆ ಮೌನ

ಇಂತಿಪ್ಪ ಇವಳು
ದನ ತಿನ್ನುವ ನನ್ನ ಪ್ರೀತಿಸಿದ್ದು ಹೇಗೆ?
ದನ ತಿನ್ನುವುದು ನನ್ನ
ಹಕ್ಕೆಂದು ಜಗಳಕ್ಕೆ
ನಿಲ್ಲುವ ನಾನು
ಅವಳಿಗೂ ತಿಳಿಯದಂತೆ
ತ್ಯಜಿಸುತ್ತಾ ಬಂದದ್ದೇಕೆ?

ಇರಲಿ ಬಿಡಿ.
ಸಣ್ಣಗಿನ ಮೀಸೆ, ಖಡಕ್ಕು ದಾಡಿಯ
ನನಗೂ,
ನೆತ್ತಿಯೆಂದೂ ಬೋಳಾಗಿಡದ
ಅವಳಿಗೂ ಜಗಳಗಳಿಲ್ಲವೆಂದಲ್ಲ
ಮೊನ್ನೆ ಜಗಳ ತಾರಕಕ್ಕೇರಿ
ಕೆನ್ನೆಗೆ ಬಾರಿಸಿದ್ದಳು
ಮತ್ತೆ ದಾಡಿ ಹಿಡಿದು
ಮುದ್ದಿಸಿದ್ದಳು
ನನಗಿದು ಅಭ್ಯಾಸ

ಹೀಗೆ ಮತ್ತೆ ಮತ್ತೆ
ನಾವು ಸೇರುವಾಗೆಲ್ಲಾ
ಏನಾದರೊಂದು ಮಾತುಗಳಿರುತ್ತವೆ
 ಇವತ್ತಿನದ್ದು ಅಲ್ಲಿ ಬಾಂಬು
ಬಿದ್ದ ಕುರಿತು
ಮಾತಿನ ನಡುವೆ ಕೇಳಿಬಿಟ್ಟಿದ್ದಳು
‘‘ನಿಮ್ಮವರೇಕೆ ಹೀಗೆ?’’

ಮತ್ತೆ ಮೌನ.!
ಆಯುಧ ವ್ಯಾಪಾರಿಗಳ
ಲೆಕ್ಕಪತ್ರದ ಕುರಿತು
ನಾನೇನನ್ನಲಿ ಈ ಹುಡುಗಿಯ
ಬಳಿ?

ಈ ಹುಡುಗಿ
ನಿಮ್ಮ ಗಲ್ಲಿಯಲ್ಲಿ
ಟ್ಯಾಕ್ಸಿ ಡ್ರೈವರಿನ ಖಾಕಿಯೊಳಗೆ,
ಕಾಂಕ್ರೀಟು ಪಟ್ಟಣದಲ್ಲಿ
ಘೆಇ ಕಂಪೆನಿಯ ಏಸಿ
ಕಂಪಾರ್ಟುಮೆಂಟಿನಲ್ಲಿ
ಪತ್ರಿಕೆ, ಸರಕಾರಿ ಕಚೇರಿಗಳಲ್ಲಿ
ಬ್ಯಾಂಕು, ಬಾರು, ಠಾಣೆ, ಆಯಾ ಹೀಗೆ
ವಿವಿಧ ರೀತಿಯಲ್ಲಿ ವಿವಿಧ ಕೋಲದಲ್ಲಿ ಪ್ರಶ್ನಿಸುತ್ತಾಳೆ
ಮತ್ತೆ ನಾನು
ದೂರದ ಮರಳುಗಾಡಿನಲ್ಲಿ
ಜಿಮ್ಮಿನಲ್ಲಿ,
ಗುಜರಿ ಆಯುವ ಹುಡುಗನಲ್ಲಿ
ಮೀನಿನ ಕಾಕನಲ್ಲಿ
ಜೈಲಿನಲ್ಲಿ, ಬೀದಿಬದಿಯ ಕಿತ್ತಳೆ
ಮಾರುವವನಲ್ಲಿ,
ಅತ್ತರು, ದಾಯಿರ ಹಿಡಿದುಕೊಂಡು
ಸರ್ಕೀಟು ಹೊರಟವನಲ್ಲಿ,
ಇತಿಹಾಸದಲ್ಲಿ, ವರ್ತಮಾನದಲ್ಲಿ
ಹೀಗೆ ಬೇರೆ ಬೇರೆ
ಕಡೆ
ಬೇರೆ ಬೇರೆ ರೀತಿಯಲ್ಲಿ
ಉತ್ತರ ಕೊಡಲು
ತಡವರಿಸುತ್ತೇನೆ

ಆಯುಧ ವ್ಯಾಪಾರಿಯ
ಬ್ಯಾಂಕು ಬ್ಯಾಲೆನ್ಸಿನ
ಲೆಕ್ಕ ತುಂಬುವುದು
ಹೇಗೆಂದು
ಗೊತ್ತಿರುವವರು
ಹೇಳಿಬಿಡಿ
ಈ ಹುಡುಗಿ ನಿಮ್ಮೆದುರಿಗೂ
ಸಿಕ್ಕಾಳು

ಅರ್ಥ ಮಾಡಿಕೊಳ್ಳುವಲ್ಲಿ
ತಡವಾದರೂ
ಅರ್ಥ ಮಾಡಿಕೊಂಡಾಳು
ಹೇಳುವುದು ಮಾತ್ರ ನೀವು
ಮರೀಬೇಡಿ

***************************

ವಚನಭ್ರಷ್ಟ ಪ್ರೇಮಿ 

ಆ ಮೂರು ದಿನಗಳಲ್ಲಿ
ಅವಳು ಮಾತು ಮಾತಿಗೂ
ಕೋಪಿಸುತ್ತಾಳೆ.
ಮುನಿಸಿಕೊಂಡಷ್ಟು
ಹೆಚ್ಚು ಪ್ರೀತಿಸುವ ಬಯಕೆ
ಮೊಳಕೆಯೊಡೆದಿದ್ದು
ಆ ಹಗಲು ರಾತ್ರಿಗಳಲ್ಲೇ

ಎಳ್ಳಷ್ಟೂ ನೋವು ಕಾಡದಂತೆ
ಕಾಪಾಡಬಲ್ಲೆಯೆಂದು ಮಾತು
ಕೊಟ್ಟಿದ್ದೇನೆ
ಅವಳು ಕಿಬ್ಬೊಟ್ಟೆ ಒತ್ತಿ
ಬಿಡುವ ನಿಟ್ಟುಸಿರಿಗೆ
ನಾನು ವಚನಭ್ರಷ್ಟನಾಗುತ್ತೇನೆ

ಆ ದಿನಗಳ ನೋವು
ಸಹಿಸದ ಅವಳು
ಉದರ ಹಿಂಡುತ್ತಾಳೆ
ಆಕೆ ಹಿಂಡಿದಷ್ಟೂ
ನನ್ನೆದೆ ಕಿವುಚಿಕೊಳ್ಳುತ್ತದೆ
ತಿಂಗಳು ತಿಂಗಳು
 ಅವಳು ಕಿಬ್ಬೊಟ್ಟೆ ಒತ್ತುವಾಗಲೆಲ್ಲಾ
ನಾನು ಮೆತ್ತಗಾಗುತ್ತಾ ಹೋಗುತ್ತೇನೆ

ಈ ಮುಂಗೋಪಿ ಹುಡುಗಿ
ಜಗವೇ ಮರೆಯುವಂತೆ
ನನ್ನೆದೆ ಅಪ್ಪಿಕೊಳ್ಳುತ್ತಾಳೆ
ಅಷ್ಟೂ ನೋವಿಗೆ ಸಾಂತ್ವನಿಸಲು
ಹಣೆಗೊಂದೆರಡು ಮುತ್ತು ಬಯಸುವ ಈಕೆ
ಆ ದಿನಗಳಲ್ಲಿ ಇನ್ನಷ್ಟು ಪ್ರಿಯವೆನಿಸುತ್ತಾಳೆ 

***************************

ಬರೆಯದೆ ಉಳಿದ ಪತ್ರ

ನಿನ್ನ ಸೇರಬಹುದಾದ
ದಾರಿಯನ್ನು,
ಹಾಗೂ,
 ಹಾಗೆ ಕೂಡಿಕೊಳ್ಳಲು
ನನಗಿರುವ ಎಲ್ಲಾ
ಸಾಧ್ಯತೆಗಳ ಕುರಿತು
ಗಂಭೀರವಾಗಿ ಯೋಚಿಸುತ್ತೇನೆ

ನನ್ನೆಲ್ಲಾ ನೋವು ಹೇಳುವ
ಆರ್ಧ್ರ ಕವಿತೆಗಳನ್ನು
ನಿನ್ನ ವಿಳಾಸಕ್ಕೆ ಕಳುಹಿಸಿದರೆ
ಹೇಗೆ?
ಒಂದು ಎನ್ವಲಪ್‌ನಲ್ಲಿ
ನನ್ನ ವಿಷಾದ ಒಂಟಿತನದ
ಒಂದು ತುಣುಕನ್ನು ಕಟ್ಟಿಕೊಟ್ಟರೆ
ಹೇಗೆ?

ಪತ್ರ ನಿನ್ನ ತಲುಪುವಾಗ
ಆರುವುದಿಲ್ಲವೆಂಬ ಭರವಸೆಯಿದ್ದರೆ
ಶುಭ್ರ ಕಣ್ಣೀರು ಕಳಿಸಿಕೊಡಲೇ?
ಈಗಷ್ಟೇ ಮುರಿದ
ಜೀವಂತ ಪಕ್ಕೆಲುಬು ಕೊರಿಯರ್
ಮಾಡಿ
ನನ್ನ ನೋವಿನ ತೀವ್ರತೆ
ತಿಳಿಸಿಕೊಡುವುದಾದರೆ..
ಕೇಳಬಹುದೇ ನಿನಗೆ?

ವಿಷಣ್ಣ ಗೀತೆಯಂತಹ
ಒಂದು ದೀರ್ಘ ನಿಟ್ಟುಸಿರು,
ಅಳುವ ಗಂಡಸಿನ ಕರ್ಕಶ ದನಿ
ಕಳಿಸುವುದಾ?
ಅಥವಾ,
ರೂಹಿಲ್ಲದೆ ಸ್ತಬ್ಧಗೊಂಡ
ಕಡೆಯ ಶಾಂತ ನಗೆ
ನಿನ್ನೆಡೆಗೆ ಎಸೆದುಬಿಡುವುದಾ?

ಏನು ತಲುಪಿಸಬೇಕು
ನಿನ್ನ ವಿಳಾಸದ ಅಂಚೆ ಪೆಟ್ಟಿಗೆಗೆ?
ಕನಿಷ್ಠ ನನ್ನ ಕಡೆಗೆ ತಿರುಗಿ
ನೋಡುವಂತೆ ಮಾಡಲು..

Writer - ಫೈಝ್, ಬಂಟ್ವಾಳ

contributor

Editor - ಫೈಝ್, ಬಂಟ್ವಾಳ

contributor

Similar News

ಬೀಗ