ಬಾಲಕಿ ನಾಪತ್ತೆ ಪ್ರಕರಣ: ಆತ್ಮಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ದೂರು
ಬೆಂಗಳೂರು, ಜ.10: ತಮ್ಮ ಪುತ್ರಿಯೂ ಆಶ್ರಮ ಸೇರಲು ಆತ್ಮಾನಂದ ಸರಸ್ವತಿ ಸ್ವಾಮೀಜಿಯೇ ಕಾರಣ ಎಂದು ಆರೋಪಿಸಿ ಬಾಲಕಿಯ ಪೋಷಕರು ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜ.1ರಂದು ಬಾಲಕಿ ತನ್ನ ತಾಯಿ ಹಾಗೂ ಮಾವನನ್ನು ಮನೆಯಲ್ಲಿ ಕೂಡಿ ಹಾಕಿ ಸ್ಕೂಟರ್ ತೆಗೆದುಕೊಂಡು ನಾಪತ್ತೆಯಾಗಿದ್ದಳು. ಇದಾದ ಬಳಿಕ ಪೋಷಕರು ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬಾಲಕಿಯ ಹುಡುಕಾಟ ನಡೆಸಿದ ಪೊಲೀಸರು ಉತ್ತರಹಳ್ಳಿ ಬಳಿಯಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿ ಆಶ್ರಮದಲ್ಲಿ ಬಾಲಕಿ ಇರುವುದನ್ನು ಪತ್ತೆ ಹಚ್ಚಿದ್ದರು. ನಂತರ, ಕಾವಿಧಾರಿಯಾಗಿದ್ದ ಬಾಲಕಿಯನ್ನು ಪೋಷಕರು ಕರೆದೊಯ್ಯಲು ಮುಂದಾದಾಗ ಬಾಲಕಿ ವಿರೋಧಿಸಿದ್ದಾಳೆ. ಸ್ವಇಚ್ಛೆಯಂತೆ ಮನೆ ಬಿಟ್ಟು ಬಂದಿರುವುದಾಗಿ ಹೇಳಿಕೆ ನೀಡಿದ್ದಳು ಎನ್ನಲಾಗಿದೆ.
ಬಳಿಕ ಬಾಲಕಿಯನ್ನು ಮಕ್ಕಳ ಕಲ್ಯಾಣ ಕೇಂದ್ರಕ್ಕೆ ದಾಖಲಿಸಿ, ಆಪ್ತ ಸಲಹೆ ಮೂಲಕ ಬಾಲಕಿಯ ಮನವೊಲಿಸಲಾಗಿತ್ತು. ಇದೀಗ ಪೋಷಕರು ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದು, ಈ ಘಟನೆಗೆ ಸ್ವಾಮೀಜಿಯೇ ಕಾರಣವಾಗಿದ್ದು, ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಕೆ ಮಾಡಿದ್ದಾರೆ.