ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್ ಶೇರುದಾರರ ಪ್ರತಿಭಟನೆ, ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

Update: 2022-01-10 13:37 GMT
 ಶೇರುದಾರರು ಮತ್ತು ಠೇವಣಿದಾರರಿಂದ ಪ್ರತಿಭಟನೆ

ಬೆಂಗಳೂರು, ಜ.10: ದೇಶದಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ನಡೆಯುತ್ತಿದ್ದು, ಸರಕಾರವು ತನಿಖೆಗೆ ಆಗ್ರಹಿಸಿ, ವಂಚನೆಗೆ ಒಳಾಗಾದವರಿಗೆ ನ್ಯಾಯ ಒದಗಿಸಿರುವ ನಿದರ್ಶನಗಳಿವೆ. ಆರೋಪಿಗಳಿಗೆ ಶಿಕ್ಷೆಯೂ ಆಗಿದೆ. ಆದರೆ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣದ ಬಗ್ಗೆ ಯಾವುದೇ ತನಿಖೆ ನಡೆಯದೆ ಇರುವುದು ಇಲ್ಲಿಯ ಸ್ಥಳೀಯ ಜನಪ್ರತಿನಿಧಿಗಳ ಜನಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‍ನ ಶೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕ ಡಾ. ಶಂಕರ್ ಗುಹಾ ದ್ವಾರಕಾನಾಥ್ ಬೆಳ್ಳೂರು ಬೇಸರ ವ್ಯಕ್ತಪಡಿಸಿದ್ದಾರೆ. 

ಸೋಮವಾರದಂದು ನಗರದ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿ ಜಮಾಯಿಸಿದ್ದ ನೂರಾರು ಠೇವಣಿದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಬ್ಯಾಂಕ್ ವಂಚನೆಯ ಕುರಿತು ಠೇವಣಿದಾರರು ಹೋರಾಟ ಮಾಡಿದ ಫಲವಾಗಿ 5 ಲಕ್ಷ ರೂ. ವಿಮೆ ಹಣವನ್ನು ಪರಿಹಾರ ರೂಪದಲ್ಲಿ ಪಡೆದುಕೊಂಡರು. ಈ ಹೋರಾಟಗಳನ್ನು ಪಕ್ಕಕ್ಕಿಟ್ಟು ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ತಾವೇ ಠೇವಣಿದಾರರಿಗೆ ವಿಮೆ ಹಣ ಕೊಡಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ 5 ಲಕ್ಷಕ್ಕಿಂತ ಅಧಿಕ ಹಣವನ್ನು ಠೇವಣಿ ಇಟ್ಟ ಗ್ರಾಹಕರ ಕಥೆ ಏನು? ಅವರಿಗೆ ಸಂಸದ ತೇಜಸ್ವಿ ಸೂರ್ಯ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. 

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕಳೆದ ಒಂದು ವರ್ಷದಿಂದ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ. ಆದರೆ ರಾಜ್ಯ ಸರಕಾರವು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪರಿಣಾಮವಾಗಿ ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಆದರೆ ಆರೋಪಿಗಳು ಮಾತ್ರ ರಾಜಾರೋಷವಾಗಿ ಸಭೆ ಸಮಾರಂಭಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ. ಜನಪರ ಕಾಳಜಿಯುಳ್ಳ ಜನಪ್ರತಿನಿಧಿಗಳು ಜನರ ಯೋಗಕ್ಷೇಮದ ಬಗ್ಗೆ ಚಿಂತಿಸಬೇಕು. ಆದರೆ ಬ್ಯಾಂಕ್ ಹಗರಣದ ವಿಷಯದಲ್ಲಿ ಇದು ವಿರುದ್ಧವಾಗಿದೆ. ಹಾಗಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ಅಂಚೆ ಮೂಲಕ ರವಾನೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ಇದೇ ವೇಳೆ ಪ್ರತಿಭಟನಾನಿರತ ಠೇವಣಿದಾರರು ಗೋವಿಂದ ಗೋವಿಂದ ಸಂಕಷ್ಟ ಕೀರ್ತನೆ ಹಾಡಿದರು. ಬಳಿಕ ಬೇರೆ ಬೇರೆ ಕಡೆಯಿಂದ ಬಂದಂತಹ ನೂರಾರು ಠೇವಣಿದಾರರು ಮೆರವಣಿಗೆ ಮೂಲಕ ಹೋಗಿ ಬಸವನಗುಡಿ ಅಂಚೆ ಕಚೇರಿಯಲ್ಲಿ ಪ್ರಧಾನಿಗಳ ಕಚೇರಿಗೆ ಪತ್ರಗಳನ್ನು ಪೋಸ್ಟ್ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News