ಪಾದಯಾತ್ರೆ ಮೂಲಕ ಜನರ ಬದುಕಿನ ಜೊತೆ ಕಾಂಗ್ರೆಸ್ ಚೆಲ್ಲಾಟ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-01-10 14:55 GMT

ಬೆಂಗಳೂರು, ಜ.10: ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ‘ಮೇಕೆದಾಟು ಪಾದಯಾತ್ರೆ’ ಹಮ್ಮಿಕೊಳ್ಳುವುದರ ಮೂಲಕ, ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಗಾರಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಈ ಪಾದಯಾತ್ರೆ ಆಯೋಜಿಸಿರುವವರ ವಿರುದ್ಧ ರಾಮನಗರ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.

ರಾಜಕೀಯ ಉದ್ದೇಶಕ್ಕಾಗಿ ನಡೆಸುತ್ತಿರುವ ಈ ಪಾದಯಾತ್ರೆಗೆ ರಾಜ್ಯದ ಜನತೆ ಅಸಮಾಧಾನ ಹೊಂದಿದ್ದಾರೆ. ಇವರ ಪಾದಯಾತ್ರೆಯಿಂದ ಈ ಸೋಂಕು ಮತ್ತಷ್ಟು ಹೆಚ್ಚಾದರೆ ಅದಕ್ಕೆ ಕಾಂಗ್ರೆಸ್ ನಾಯಕರೆ ಹೊಣೆ ಹೊರಬೇಕು. ಈಗಾಗಲೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದ್ದು, ತಮ್ಮ ಹೊಣೆಗೇಡಿತನದ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡಲಿ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯನ್ನು ನಿರ್ಲಕ್ಷಿಸಿ. ಈಗ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಮ್ಮ ಸರಕಾರ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಬದ್ಧವಾಗಿದೆ. ಈ ಬಗ್ಗೆ ಯಾವುದೆ ಸಂಶಯ ಬೇಡ ಎಂದು ಆರಗ ಜ್ಞಾನೇಂದ್ರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News