×
Ad

ಇಂಡಿಯಾ ಸ್ಕಿಲ್ಸ್ 2021: ರಾಜ್ಯ ತಂಡಕ್ಕೆ 24 ಪದಕ

Update: 2022-01-10 22:40 IST

ಬೆಂಗಳೂರು: ನವದೆಹಲಿಯಲ್ಲಿ ನಡೆದ ಜಾಗತಿಕ ಮಟ್ಟದ ಕೌಶಲ್ಯ ಪ್ರದರ್ಶನದ ರಾಷ್ಟ್ರೀಯ ಮಟ್ಟದ ಸುತ್ತು `ಇಂಡಿಯಾ ಸ್ಕಿಲ್ಸ್-2021’ರಲ್ಲಿ ಭಾಗವಹಿಸಿದ್ದ ರಾಜ್ಯದ ವಿದ್ಯಾರ್ಥಿಗಳು ತಲಾ 8 ಚಿನ್ನ ಮತ್ತು ಬೆಳ್ಳಿ, 4 ಕಂಚು ಮತ್ತು ಉತ್ಕೃಷ್ಟತಾ ವಿಭಾಗದಲ್ಲಿ 4 ಪದಕಗಳನ್ನು ಗೆದ್ದಿದ್ದಾರೆ. ಒಟ್ಟು 24 ಪದಕಗಳನ್ನು ಮಡಿಲಿಗೆ ಹಾಕಿಕೊಂಡಿರುವ ಕರ್ನಾಟಕವು ಈ ಮೂಲಕ ದಾಖಲೆ ಸ್ಥಾಪಿಸಿದೆ. 

ಕೌಶಲಾಭಿವೃದ್ಧಿ ಇಲಾಖೆ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಇದೇ ತಿಂಗಳ 6ರಿಂದ 10ರವರೆಗೆ ಒಟ್ಟು ಐದು ದಿನಗಳ ಕಾಲ ಈ ಸ್ಪರ್ಧೆ ನಡೆಯಿತು. ಇದರಲ್ಲಿ ರಾಜ್ಯದ 35 ಸ್ಪರ್ಧಿಗಳು ಭಾಗವಹಿಸಿದ್ದರು. 

ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರ ಪೈಕಿ ಧಾರವಾಡ ಜಿಟಿಟಿಸಿಯ ಗಣೇಶ್ ಇರ್ಕಲ್ (ಪ್ಲಾಸ್ಟಿಕ್ ಡೈ ಎಂಜಿನಿಯರಿಂಗ್), ಫರಾನ್ ಪಾಂಥೋಜಿ (ಸಿಎನ್ ಸಿ ಮಿಲ್ಲಿಂಗ್) ಮತ್ತು ಬೆಂಗಳೂರು ಜಿಟಿಟಿಸಿಯ ರಾಘವೇಂದ್ರ (ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಿಎಡಿ) ಅವರು ಸ್ವರ್ಣ ಪದಕಗಳನ್ನು ಗೆದ್ದುಕೊಂಡಿದ್ದಾರೆ. 

ಮಿಕ್ಕಂತೆ ಧಾರವಾಡ ಜಿಟಿಟಿಸಿಯ ಹರೀಶ್ ಅವರು ಉತ್ಕೃಷ್ಟತಾ ಪದಕ (ಅಡಿಟೀವ್ ಮ್ಯಾನಫ್ಯಾಕ್ಚರಿಂಗ್), ಬೆಂಗಳೂರು ಜಿಟಿಟಿಸಿಯ ಜಸ್ಟಿನ್ ಬೆಳ್ಳಿ (ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಿಎಡಿ) ಇದೇ ಸಂಸ್ಥೆಯ ಕಿಶೋರ್ (ಇಂಡಸ್ಟ್ರಿಯಲ್ ಕಂಟ್ರೋಲ್ಸ್) ಮತ್ತು ಕೆ.ಗಿರಿಧರ್ (ಅಡಿಟೀವ್ ಮ್ಯಾನಫ್ಯಾಕ್ಚರಿಂಗ್) ಅವರು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News