ಒಂದು ಒತ್ತಕ್ಷರದ ತಪ್ಪುಹೇಗೆ ಹೊಸ ಜಾತಿಗಳ ಉಗಮಕ್ಕೆ ಕಾರಣವಾಗುತ್ತಿದೆ?

Update: 2022-01-10 19:30 GMT

ಅಂದಿನ ಬ್ರಿಟಿಷರು ನಮೂದಿಸಿರುವ ಜಾತಿಗಳ ಹೆಸರಿನ ಕಾಗುಣಿತಗಳು ಅದೇ ಹೆಸರಿನಿಂದ ಇನ್ನೂ ಮುಂದುವರಿಯುತ್ತಿರುವುದು ಕಂಡುಬರುತ್ತಿದೆ. ಹೆಚ್ಚಿನ ಜಾತಿಗಳ ಹೆಸರುಗಳು ನಿಜಕ್ಕೂ ಸರಿ ಇದೆಯೇ ಇಲ್ಲವೇ ಎನ್ನುವುದು ಇಂದಿನ ಪೀಳಿಗೆಗೆ ಗೊತ್ತಿಲ್ಲ. ಇಂತಹ ಕಾಗುಣಿತ ತಪ್ಪುಗಳಿಂದ ಅಥವಾ ತಪ್ಪುಹೆಸರುಗಳಿಂದ ಎಷ್ಟೋ ಜಾತಿಗಳು ನಶಿಸಿ ಹೋಗಿವೆ ಮತ್ತು ಅವುಗಳ ಅಸ್ಮಿತೆ ಸಂಪೂರ್ಣ ಮಾಯವಾಗಿವೆ. ಅಂದು ಬ್ರಿಟಿಷರು ನಮೂದಿಸಿರುವ ಕಾಗುಣಿತ ಆಧಾರದ ಮೇಲೆ ಇಂದಿಗೂ ನಾವು ಜಾತಿಗಳನ್ನು ಗುರುತಿಸುತ್ತಿದ್ದೇವೆ.


ಕೆಲವೊಂದು ಇತಿಹಾಸಕಾರರು ಭಾರತದಲ್ಲಿ ಸಾವಿರಾರು ಜಾತಿಗಳ ಉಗಮಕ್ಕೆ ವಸಾಹತುಶಾಹಿಗಳು ಕಾರಣವಾದರೇ ಎನ್ನುವ ಅನುಮಾನವನ್ನು ತೇಲಿಬಿಡುತ್ತಾರೆ. ಜಾತಿಗಳು ದೇಶದಲ್ಲಿ ಹೇಗೆ ಹುಟ್ಟಿಕೊಂಡಿತ್ತು ಎನ್ನುವುದರ ಕುರಿತು ಇಂದಿಗೂ ಸರಿಯಾದ ಪ್ರಕಲ್ಪನೆಗಳು ನಮ್ಮಲ್ಲಿಲ್ಲ. ಪ್ರಕಲ್ಪನೆಗಳು ಇದ್ದರೂ ಅವುಗಳು ತಮ್ಮದೇ ಅನುಮಾನಗಳನ್ನು ಇನ್ನೂ ಉಳಿಸಿವೆ. ವಿದೇಶಿ ದಾಳಿಯಿಂದ ಮತ್ತು ವಲಸೆಗಳಿಂದ ಹೆಚ್ಚಿನ ಜಾತಿಗಳು ಹುಟ್ಟಿಕೊಂಡಿವೆ ಎನ್ನುವುದು ಕೆಲವರ ಅಭಿಪ್ರಾಯ. ಈ ಮಧ್ಯೆ ನಾವು ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ 1871ರಿಂದ ಭಾರತದ ಪ್ರತಿ ಜನಗಣತಿಯು ಹೊಸ ಹೊಸ ಜಾತಿಗಳನ್ನು ಹುಟ್ಟುಹಾಕುತ್ತಿದೆ ಎನ್ನುವ ಆರೋಪದ ಕುರಿತಾಗಿ. ಸಾಮಾನ್ಯವಾಗಿ ಬ್ರಿಟಿಷ್ ಜನಗಣತಿ ನಡೆದ ಸಂದರ್ಭದಲ್ಲಿ ಮಾಹಿತಿಯನ್ನು ನೀಡುವವರು ಮತ್ತು ಮಾಹಿತಿಯನ್ನು ಪಡೆಯುವ ಮಧ್ಯ ಉಂಟಾಗುವ ಸಂವಹನ ಕೊರತೆಗಳು ಹೊಸ ಹೊಸ ಜಾತಿಗಳನ್ನು ಹುಟ್ಟು ಹಾಕಿರಬಹುದೆಂದು ತಜ್ಞರು ನಂಬುತ್ತಾರೆ. ಕೆಲವೊಮ್ಮೆ ಜಾತಿ ಕುರಿತಾದ ಮಾಹಿತಿಗಳನ್ನು ಬೆರಳಚ್ಚು ಮಾಡಬೇಕಾದರೂ ತಪ್ಪುಗಳಿಂದ ಸಹ ಹೊಸ ಜಾತಿಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಕೆಲವರ ಆರೋಪ!

ಮೊದಲ ಬಾರಿಗೆ ಜನಗಣತಿ ಮಾಡಿದ ಬ್ರಿಟಿಷ್ ಸರಕಾರ ಅಂದಿನ ಭಾರತದಲ್ಲಿದ್ದ ನೂರಾರು ಸಣ್ಣಪುಟ್ಟ ಜಾತಿಗಳನ್ನು ಕೈಬಿಟ್ಟಿದೆ ಮತ್ತು ಒತ್ತಕ್ಷರಗಳ ಪ್ರಮಾದದಿಂದ ನೂರಾರು ಹೊಸ ಜಾತಿಗಳು ಸೃಷ್ಟಿ ಆಗಿರುವುದಕ್ಕೆ ದಾಖಲೆಗಳಿವೆ ಎನ್ನುತ್ತಾರೆ ತಜ್ಞರು. ಈ ಗೊಂದಲ ಇಂದಿಗೂ ಸಹ ಅಲ್ಲಲ್ಲಿ ಮುಂದುವರಿಯುತ್ತಿದೆ. ಮಾನವಶಾಸ್ತ್ರಜ್ಞರ ಪ್ರಕಾರ ಬ್ರಿಟಿಷ್ ಕಾಲದಲ್ಲಿದ್ದ ಹಲವಾರು ಬುಡಕಟ್ಟು ಜನಾಂಗಗಳು ಒತ್ತಕ್ಷರಗಳ ಪ್ರಮಾದದಿಂದ ಹಿಂದೂ ಜಾತಿಗಳಾಗಿ ಪರಿವರ್ತನೆಯಾದವು ಎನ್ನಲಾಗುತ್ತಿದೆ. 1931ರಲ್ಲಿ ನಡೆದ ಜನಗಣತಿಯಲ್ಲಿ ‘ಮೀರಿ’ ಎಂಬ ಜಾತಿಯನ್ನು ಉರ್ದು ಭಾಷೆಯಲ್ಲಿ ಬರೆಯಬೇಕಾದರೆ ಉಂಟಾದ ಕಾಗುಣಿತದ ತಪ್ಪಿನಿಂದ ಕೊನೆಗೆ ಅದೇ ಒಂದು ಹೊಸ ಹಿಂದೂ ಜಾತಿಯಾಗಿ ಪರಿವರ್ತನೆಯಾಗಿರುವುದು ಈಗ ಇತಿಹಾಸ (ಆಧಾರ: ಜನಗಣತಿ,1931). ಇದೇ ರೀತಿ ‘ತಿಜಾರ’ ಎಂಬ ಬುಡಕಟ್ಟು ಕೊನೆಗೆ ‘ಇಜ್ರಾ’ ಆಯಿತು ಎನ್ನುವುದು ತಜ್ಞರಾದ ಮುಝಫ್ಫರ್ ಅಸ್ಸಾದಿಯವರ ಅಭಿಪ್ರಾಯ. ಇನ್ನು ಕೆಲವು ಇತಿಹಾಸ ತಜ್ಞರ ಪ್ರಕಾರ ಅಂದು ಜನಗಣತಿಗೆ ನೇಮಕವಾಗಿದ್ದ ಹೆಚ್ಚಿನ ಜನ ಮೇಲ್ಜಾತಿಗೆ ಸೇರಿದ್ದರು ಹಾಗಾಗಿ ಸೂಕ್ಷ್ಮ ಜಾತಿಗಳ ದಾಖಲೀಕರಣದಲ್ಲಿ ಸಾಕಷ್ಟು ಪೂರ್ವಗ್ರಹ ತಪ್ಪುಗಳು ನಡೆದಿರಬಹುದು ಎನ್ನುವುದು ಕೆಲವರ ಅಭಿಪ್ರಾಯ.

ಅಲ್ಲದೆ ಅಂದಿನ ಜನಗಣತಿ ದಾಖಲಾತಿ ಸಾಕಷ್ಟು ವೈಜ್ಞಾನಿಕವಾಗಿ ಇರುತ್ತಿರಲಿಲ್ಲ. ಅಂದಿನ ಬ್ರಿಟಿಷ್ ಕಾಲದಲ್ಲಿ ಜನಗಣತಿ ನಡೆಯಬೇಕಾದರೆ ಜನರ ಕಸುಬನ್ನು ಆಧರಿಸಿ ದಾಖಲಾತಿ ಮಾಡುವ ವ್ಯಕ್ತಿ ಜನರ ಜಾತಿಯನ್ನು ತಾನೇ ಊಹೆ ಮಾಡಿಕೊಂಡು ತನಗೆ ಗೊತ್ತಿರುವ ಹಾಗೆ ಬರೆದುಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದು ಗುಂಪಿನ ಕಸಬು ಬದಲಾದ ಹಾಗೆ ಕಾಲಕ್ರಮೇಣ ಅವುಗಳ ಜಾತಿಯು ಸಹ ಬದಲಾಗಿರುವ ಸಾಧ್ಯತೆ ಇರುತ್ತದೆ. ಸಾಮ್ರಾಜ್ಯಗಳು ನಾಶವಾದಂತೆ ಜನರು ಸಹ ಜಾತಿಗಳನ್ನು ಬದಲಿಸಿಕೊಂಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಬ್ರಿಟಿಷರು ಅಧ್ಯಯನಗಳನ್ನು ಕೈಗೊಂಡಾಗ ಆದಿವಾಸಿ ಅಲೆಮಾರಿ ಕುಶಲಕರ್ಮಿಗಳು ಇವರ ಜಾತಿ ಬರೆದುಕೊಳ್ಳುವ ವಿಚಾರದಲ್ಲಿ ಸಾಕಷ್ಟು ಕಾಗುಣಿತದ ತಪ್ಪುಗಳು ನಡೆದಿರುವುದು ಕಂಡು ಬರುತ್ತದೆ ಎನ್ನುತ್ತಾರೆ ತಜ್ಞರು.

ಇಂದಿನ ಬ್ರಿಟಿಷರಿಗೆ ಭಾರತದ ಜಾತಿ ಮತ್ತು ಆದಿವಾಸಿಗಳ ಬಗ್ಗೆ ಇಂತಹ ಅಸ್ಪಷ್ಟತೆ, ಅರೆಬರೆ ಜ್ಞಾನ ಮತ್ತು ದೇಸಿ ನೆಲೆಗಟ್ಟಿನ ಜ್ಞಾನದ ಕೊರತೆ ಇವೆಲ್ಲವೂ ಜಾತಿ ದಾಖಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಂದು ಕಾಲದಲ್ಲಿ ಬುಡಕಟ್ಟುಗಳಾಗಿದ್ದ ಹೊಲೆಯರು ಮತ್ತು ಮಾದಿಗರು 1871ರ ಜನಗಣತಿಯ ನಂತರ ಮೈಸೂರು ಭಾಗದಲ್ಲಿ ಜಾತಿಗಳಾಗಿ ಪರಿವರ್ತನೆ ಆಗಿರುವುದನ್ನು ದಾಖಲೆಗಳಲ್ಲಿ ಗಮನಿಸಬಹುದಾಗಿದೆ (Lindsay,1871) ಮತ್ತು ಇದೇ ಜನಗಣತಿ ಪ್ರಕಾರ ಹಲವು ಜಾತಿಗಳು ಸೇರಿ ಲಿಂಗಾಯತ ಎಂಬ ಹೊಸ ಜಾತಿಯ ಉಂಟಾಗಿದೆ ಎಂದು ಹೇಳುತ್ತದೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ ಬೇಕಾಗಿದೆ. ಇನ್ನು ಕೆಲವರು ವಾದದ ಪ್ರಕಾರ ಗಡಿಯಂಚಿನ ಪ್ರದೇಶಗಳಲ್ಲಿ ಜನಗಣತಿ ನಡೆಯುವ ಸಂದರ್ಭಗಳಲಿ ಕಾಗುಣಿತದ ತಪ್ಪಿನಿಂದ ಹೊಸ ಜಾತಿಗಳು ಹುಟ್ಟಿಕೊಂಡಿರುವ ಸಾಧ್ಯತೆಗಳಿರುತ್ತವೆ. ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಇದು ಹೆಚ್ಚಾಗಿದೆ.

ಈಗ ಛತ್ತೀಸಗಡ ರಾಜ್ಯದಲ್ಲಿ ಇಂತಹದೇ ಒಂದು ದೊಡ್ಡ ಸಮಸ್ಯೆ ಉಂಟಾಗಿದೆ (2016). ಸುಮಾರು 26 ಜಾತಿಗಳು ಕಾಗುಣಿತ ತಪ್ಪಿನಿಂದ ನರಳುತ್ತಿವೆ. ಇದರಲ್ಲಿ 8 ದಲಿತ ಜಾತಿಗಳು ಮತ್ತು 18 ಬುಡಕಟ್ಟು ಗುಂಪುಗಳಿವೆ. ಛತ್ತೀಸ್‌ಗಡದಲ್ಲಿ, ‘ಖೈರವರ್’ ಮೀಸಲಾತಿಗೆ ಒಳಪಟ್ಟಿಲ್ಲ, ಆದರೆ ‘ಖೈರವಾರ್’ ಮೀಸಲಾತಿಗೆ ಒಳಪಟ್ಟಿದೆ. ಇದು ದತ್ತಾಂಶವನ್ನು ದಾಖಲಿಸುವ ಪ್ರಕ್ರಿಯೆಯು ಕಂದಾಯ ಅಧಿಕಾರಿಗಳ ತಪ್ಪಿನಿಂದ ಉಂಟಾಗಿದೆ. ಇದರ ಪರಿಣಾಮವಾಗಿ ಇಂದು ಖೈರವಾರ್ ಬುಡಕಟ್ಟು ವರ್ಗ ಖೈರವರ್ (ಅಸ್ತಿತ್ವದಲ್ಲಿರುವ ಜಾತಿ) ದಾಖಲಾಗಿದೆ. ಇದರಿಂದ ಮೀಸಲಾತಿ ಗೊಂದಲವಾಗಿ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಈ ರಾಜ್ಯದಲ್ಲಿ ಮಹಾರ್, ಮಹಾರಾ ಮತ್ತು ಮಹಾರ ಜಾತಿ ಜಾತಿಗಳ ವಿಚಾರದಲ್ಲಿ ಇದೇ ಸಮಸ್ಯೆ ಉಂಟಾಗಿದೆ. ರಾಯಪುರ, ಬಿಲಾಸ್‌ಪುರ, ದುರ್ಗ್ ಮತ್ತು ಭಿಲಾಯಿಯಲ್ಲಿ ಅಧಿಕಾರಿಗಳು 1950ರ ಹಿಂದಿನ ಕಂದಾಯ ದಾಖಲೆಗಳನ್ನು ಜನರಿಂದಲೇ ಕೇಳುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಯಾರಿಗೆ ಶಿಕ್ಷೆ? ಮಾಹಿತಿಯನ್ನು ಬರೆದು ಕೊಂಡಾಗ ಆಗಿರುವ ತಪ್ಪಿನ ಜೊತೆಗೆ ಬೆರಳಚ್ಚು ಮಾಡುವಾಗ ಉಂಟಾಗಿರಬಹುದಾದ ಪ್ರಮಾದವೇ ದೇವರೇ ಬಲ್ಲ. ಬುಡಕಟ್ಟು ಸಚಿವಾಲಯದ ಪ್ರಕಾರ, ಇಂತಹ ಕಾಗುಣಿತ ಸಮಸ್ಯೆಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಆದರೆ ರಾಜ್ಯಗಳು ಡೇಟಾವನ್ನು ಸರಿಯಾಗಿ ನವೀಕರಿಸಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಹೊಸ ರಾಜ್ಯಗಳು ಸ್ಥಾಪನೆಯಾದ ನಂತರ ಇಂತಹ ಸಮಸ್ಯೆಗಳು ಹೆಚ್ಚಾದವು. ಇಂತಹ ಕಾಗುಣಿತ ತಪ್ಪುಗಳು, ಹೋಲಿಕೆಗಳು, ಉಚ್ಛಾರಣೆಗಳ ತಿದ್ದುಪಡಿ ಕೇಂದ್ರದ ವಿಷಯವಲ್ಲ, ಇದು ಸಂಪೂರ್ಣ ರಾಜ್ಯದ ವ್ಯವಹಾರವಾಗಿದೆ. 2019 ಆಗಸ್ಟ್ 6ರಂದು ಸಂಸತ್ತು ಅಂಗೀಕರಿಸಿದ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಶಾಸನದಲ್ಲಿ 50ಕ್ಕೂ ಹೆಚ್ಚು ಸ್ಪಷ್ಟವಾದ ಕಾಗುಣಿತ ಮತ್ತು ವ್ಯಾಕರಣ ದೋಷಗಳು ಕಂಡುಬಂದ ನಂತರ ದೊಡ್ಡ ಗೊಂದಲಕ್ಕೆ ಕಾರಣವಾಯಿತು.

ಈ ಸಮಸ್ಯೆ ಇಷ್ಟಕ್ಕೇ ನಿಲ್ಲುವುದಿಲ್ಲ. ಉದಾಹರಣೆ ಕರ್ನಾಟಕದಲ್ಲಿ 123 ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಹೆಸರುಗಳಲ್ಲಿ ಸಹ ಸಾಕಷ್ಟು ಗೊಂದಲಗಳು ಮತ್ತು ಗೋಲ್‌ಮಾಲ್‌ಗಳು ಎರಡೂ ನಡೆಯುತ್ತಿವೆ. ಉತ್ತರ ಕರ್ನಾಟಕದ ಕೆಲವೆಡೆ ಕೊರಮರು ‘ಕೊರಗ’ (ಪರಿಶಿಷ್ಟ ವರ್ಗ) ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವುದು ಇಂದು ರಹಸ್ಯವಾಗಿ ಉಳಿದಿಲ್ಲ. ಇಲ್ಲಿ ‘ಮ’ ಮತ್ತು ‘ಗ’ ಎರಡು ಮಾತ್ರ ವ್ಯತ್ಯಾಸ. ಇದೇ ರೀತಿ ‘ಬುಡ್ಗಜಂಗಮ’/‘ಬುಡುಗ ಜಂಗಮ’, ‘ನಾಯಕ’/‘ನಾಯ್ಕ’ ಹಾಗೂ ‘ಸಿಂದೋಳಿ’/ ‘ಸಿಂದೋಳ್ಳಿ’ (ರಾಯಚೂರು) ಗೊಂದಲ ಇನ್ನೂ ಹಾಗೆಯೇ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮುಂದುವರಿಯುತ್ತಿದೆ. ‘ಕೊರಮ’/‘ಕೊರವ’ ಮತ್ತು ‘ಕೊರಚರು’/‘ಕೊರಚರ್’ ಹಾಗೂ ‘ಹಂದಿಜೋಗಿ’/‘ಹಂಡಿಜೋಗಿ’ ಇವೆಲ್ಲವೂ ಕಾಗುಣಿತ ತಪ್ಪಿನಿಂದ ಉಂಟಾಗಿರುವ ಹೊಸ ಜಾತಿಗಳು? ಕೆಲವೊಮ್ಮೆ ಸ್ಥಳೀಯರು ಕೆಲವು ಜಾತಿಗಳನ್ನು ಕರೆಯುವ ಶೈಲಿಯಿಂದಲೇ ಅದು ಇನ್ನೊಂದು ಹೊಸ ಜಾತಿ ಯಾಗಿರುವ ಉದಾರಣೆಗಳು ನಮ್ಮಲ್ಲಿ ಇವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ‘ನೀರ ಶಿಕಾರಿ’ ಮತ್ತು ‘ಮೇಲ ಶಿಕಾರಿ’. ಸಿಖ್ ಧರ್ಮದ ಸಾಂಸ್ಕೃತಿಕ ವಿಚಾರಗಳನ್ನು ಅಳವಡಿಸಿಕೊಂಡಿರುವ ಕರ್ನಾಟಕದ ‘ಸಿಕ್ಲಿಗರು’ ಅಲೆಮಾರಿ ಸಮುದಾಯ ಇಂದು ರಾಜ್ಯದ ಯಾವುದೇ ಮೀಸಲಾತಿ ಪಟ್ಟಿಗೆ ಸೇರಿಲ್ಲ!.

ಏಕೆಂದರೆ ದೇಶದಲ್ಲಿ ಕಳೆದ ವರ್ಷ ನಡೆಯಬೇಕಾಗಿದ್ದ ಜನಗಣತಿ ಕೊರೋನದಿಂದ ನಿಂತು ಹೋಗಿದ್ದು ಈ ವರ್ಷ ನಡೆಯುವ ಸಾಧ್ಯತೆ ಇದೆಯೆಂದು ಸುದ್ದಿಗಳು ಹರಿದಾಡುತ್ತಿವೆ. ದೇಶದ ದಲಿತ ಮತ್ತು ಬುಡಕಟ್ಟು ಜನಸಂಖ್ಯೆಯನ್ನು ಉತ್ತಮವಾಗಿ ಎಣಿಸುವ ಪ್ರಯತ್ನದ ಭಾಗವಾಗಿ, ಜನಗಣತಿ-2021 ದತ್ತಾಂಶ ಸಂಗ್ರಾಹಕರಿಗೆ ಪ್ರತಿ ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ವರ್ಗಗಳ ಅಡಿಯಲ್ಲಿ ಬರುವ ಉಪ ಜಾತಿಗಳ ದಾಖಲೀಕರಣಕ್ಕೆ ಪೂರ್ವ-ಕೋಡೆಡ್ ಚಾರ್ಟ್‌ಗಳನ್ನು ಬಳಸಲು ಹೇಳಲಾಗಿದೆ. ನಂತರದ ಎಣಿಕೆಯ ಕೆಲಸದ ಸಮಯದಲ್ಲಿ, ಜಾತಿಯ ಅಧಿಕೃತ ಹೆಸರಿನೊಂದಿಗೆ ಪೂರ್ವ-ಕೋಡೆಡ್ ಚಾರ್ಟ್‌ಗಳಲ್ಲಿ ಬರೆಯಲಾದ ಜಾತಿಯನ್ನು ಹೊಂದಿಸುವ ಕಾರ್ಯವು ಸುಲಭವಾಗುತ್ತದೆ. ಏಕೆಂದರೆ ಕೆಲವೊಮ್ಮೆ ಗಣತಿದಾರರು ಬರೆದದ್ದು ಅಧಿಕೃತ ಡೇಟಾದಲ್ಲಿ ಬಳಸಲಾದ ನಿಜವಾದ ಜಾತಿಯ ಹೆಸರಿಗಿಂತ ಭಿನ್ನವಾಗಿರುತ್ತದೆ. ಕಾಗುಣಿತ ತಪ್ಪುಗಳು, ತಪ್ಪುಹೆಸರುಗಳು ಇತ್ಯಾದಿ ಇರುತ್ತವೆ.

ಈಗ, ಪ್ರತಿ ಎಸ್ಸಿ ಮತ್ತು ಎಸ್ಟಿ ಉಪ ಜಾತಿಯ ಹೆಸರನ್ನು ಮೊದಲೇ ಕೋಡ್ ಮಾಡಿರುವುದರಿಂದ, ಸಮಸ್ಯೆ ಕಡಿಮೆಯಾಗುತ್ತದೆ. ಈ ಬಾರಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಅಂದಿನ ಬ್ರಿಟಿಷರು ನಮೂದಿಸಿರುವ ಜಾತಿಗಳ ಹೆಸರಿನ ಕಾಗುಣಿತಗಳು ಅದೇ ಹೆಸರಿನಿಂದ ಇನ್ನೂ ಮುಂದುವರಿಯುತ್ತಿರುವುದು ಕಂಡುಬರುತ್ತಿದೆ. ಹೆಚ್ಚಿನ ಜಾತಿಗಳ ಹೆಸರುಗಳು ನಿಜಕ್ಕೂ ಸರಿ ಇದೆಯೇ ಇಲ್ಲವೇ ಎನ್ನುವುದು ಇಂದಿನ ಪೀಳಿಗೆಗೆ ಗೊತ್ತಿಲ್ಲ. ಇಂತಹ ಕಾಗುಣಿತ ತಪ್ಪುಗಳಿಂದ ಅಥವಾ ತಪ್ಪುಹೆಸರುಗಳಿಂದ ಎಷ್ಟೋ ಜಾತಿಗಳು ನಶಿಸಿ ಹೋಗಿವೆ ಮತ್ತು ಅವುಗಳ ಅಸ್ಮಿತೆ ಸಂಪೂರ್ಣ ಮಾಯವಾಗಿವೆ. ಅಂದು ಬ್ರಿಟಿಷರು ನಮೂದಿಸಿರುವ ಕಾಗುಣಿತ ಆಧಾರದ ಮೇಲೆ ಇಂದಿಗೂ ನಾವು ಜಾತಿಗಳನ್ನು ಗುರುತಿಸುತ್ತಿದ್ದೇವೆ. ಕೆಲವೊಂದು ಜಾತಿಗಳ ಕಾಗುಣಿತ ವಿಚಾರದಲ್ಲಿ ಸುಮಾರು 100 ವರ್ಷಗಳ ಹಿಂದೆ ಪ್ರಕಟವಾದ ‘ದಕ್ಷಿಣ ಭಾರತದಲ್ಲಿ ಜಾತಿ ಮತ್ತು ವರ್ಗ’, ‘ಮೈಸೂರು ರಾಜ್ಯದಲ್ಲಿ ಜಾತಿ ಮತ್ತು ವರ್ಗ’ ಎಂಬ ಎರಡು ಪುಸ್ತಕಗಳನ್ನು ಇಂದಿಗೂ ನಾವು ಬಳಸಿಕೊಳ್ಳಬೇಕಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ತಪ್ಪಿಗೆ ಒಳಗಾಗಿರುವ ಜಾತಿಗಳು ಅತ್ಯಂತ ಹಿಂದುಳಿದ ಮತ್ತು ಸಮಾಜದ ಕೆಳಸ್ತರದ ಜಾತಿಗಳಾಗಿವೆ. ಮುಂದುವರಿದ ಜಾತಿಗಳಲ್ಲಿ ಕಾಗುಣಿತಗಳು ತಪ್ಪುಗಳು ಕಡಿಮೆ ಇರುವುದು ಸೋಜಿಗ. 1871 ಜನಗಣತಿ ಪ್ರಕಾರ ಮೈಸೂರು ಮತ್ತು ಕೊಡಗಿನಲ್ಲಿದ್ದ ಹಲವಾರು ಜಾತಿಗಳು ಇಂದು ಸಂಪೂರ್ಣ ಕಣ್ಮರೆಯಾಗಿವೆ. ಇವುಗಳಲ್ಲಿ ಹೆಚ್ಚಿನವು ಕಾಗುಣಿತ ತಪ್ಪಿನಿಂದ ಆಗಿರಬಹುದೇ?

(ಆಧಾರ-ವಿವಿಧ ಮೂಲಗಳಿಂದ)

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News