​ಮನುಷ್ಯನಿಗೆ ಹಂದಿ ಹೃದಯ ಕಸಿ ; ಅಮೆರಿಕ ತಜ್ಞರ ಸಾಧನೆ

Update: 2022-01-11 01:41 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: 57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ತಳಿ ಹಂದಿಯ ಹೃದಯವನ್ನು ಅಮೆರಿಕ ವೈದ್ಯರು ಕಸಿ ಮಾಡಿದ್ದಾರೆ. ವೈದ್ಯಕೀಯ ಜಗತ್ತಿನಲ್ಲೇ ಮೊಟ್ಟಮೊದಲ ಈ ಪ್ರಕರಣ, ಅಂಗಾಂಗ ದಾನದ ತೀವ್ರ ಕೊರತೆಯ ಸಮಸ್ಯೆಗೆ ಉತ್ತರವಾಗುವ ನಿರೀಕ್ಷೆ ಇದೆ.

ಮೆರಿಲ್ಯಾಂಡ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸ್ಕೂಲ್‌ನಲ್ಲಿ ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಪ್ರಾಣಿಗಳ ಅಂಗಾಂಗವನ್ನು ಮನುಷ್ಯರಿಗೆ ಯಶಸ್ವಿಯಾಗಿ ಕಸಿ ಮಾಡುವ ಈ ಹೆಜ್ಜೆ ಮೈಲುಗಲ್ಲು ಎಂದು ಬಣ್ಣಿಸಲಾಗಿದೆ.

ಡೇವಿಡ್ ಬೆನೆಟ್ ಎಂಬ ರೋಗಿಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಮನುಷ್ಯನ ಅಂಗಾಂಗ ಕಸಿಗೆ ಆತನನ್ನು ಅನರ್ಹ ಎಂದು ನಿರ್ಧರಿಸಲಾಗಿತ್ತು. ಇದೀಗ ರೋಗಿ ಚೇತರಿಸಿಕೊಳ್ಳುತ್ತಿದ್ದು, ಹೊಸ ಅಂಗಾಂಗ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ನಿಗಾ ವಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

"ಈ ಕಸಿ ಶಸ್ತ್ರಚಿಕಿತ್ಸೆ ’ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿಯದ್ದಾಗಿದೆ. ನಾನು ಬದುಕಲು ಬಯಸಿದ್ದೇನೆ" ಇದು ಕಟ್ಟಕಡೆಯ ಆಯ್ಕೆಯಾಗಿತ್ತು" ಎಂದು ಮೆರಿಲ್ಯಾಂಡ್ ನಿವಾಸಿ ಶಸ್ತ್ರಚಿಕಿತ್ಸೆಗೆ ಮುನ್ನ ಪ್ರತಿಕ್ರಿಯಿಸಿದ್ದರು.

ಹೃದಯ- ಶ್ವಾಸಕೋಶ ಬೈಪಾಸ್ ಮೆಷಿನ್ ನೆರವಿನಲ್ಲಿದ್ದ ಬೆನೆಟ್ ಹಲವು ತಿಂಗಳಿಂದ ಹಾಸಿಗೆ ಹಿಡಿದಿದ್ದರು. "ನಾನು ಚೇತರಿಸಿಕೊಂಡ ಬಳಿಕ ಹಾಸಿಗೆ ಬಿಟ್ಟು ಮೇಲೇಳುವ ನಿರೀಕ್ಷೆಯಲ್ಲಿದ್ದೇನೆ" ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಸಾಂಪ್ರದಾಯಿಕ ಕಸಿಗೆ ಸೂಕ್ತವಲ್ಲ ಎಂದು ರೋಗಿಯನ್ನು ಪರಿಗಣಿಸಲಾದ ಹಿನ್ನೆಲೆಯಲ್ಲಿ ಈ ವಿನೂತನ ಪ್ರಯೋಗಕ್ಕೆ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ ವ್ಯವಸ್ಥೆ (ಎಫ್‌ಡಿಎ) ತುರ್ತು ಅನುಮೋದನೆ ನೀಡಿತ್ತು. "ಈ ಕ್ರಾಂತಿಕಾರಕ ಶಸ್ತ್ರಚಿಕಿತ್ಸೆಯಿಂದ ಅಂಗಾಂಗ ಕೊರತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದುವರಿದಂತಾಗಿದೆ" ಎಂದು ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯ ಬೆರ್ಟ್‌ಲಿ ಗ್ರಿಫಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News