ದೂರುದಾರರ ಮೇಲೆಯೇ ಪೊಲೀಸರ ದೌರ್ಜನ್ಯ: ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಿಂದ ಬಹಿರಂಗ

Update: 2022-01-12 03:07 GMT

ಬೆಂಗಳೂರು: ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸುವುದು, ದೂರುದಾರರ ವಿರೋಧಿಗಳ ಜತೆ ಶಾಮೀಲಾಗುವುದು, ಭ್ರಷ್ಟಾಚಾರ ಮತ್ತು ಲಂಚಕ್ಕೆ ಬೇಡಿಕೆಯಿಡುವುದು, ಅಕ್ರಮವಾಗಿ ಬಂಧನದಲ್ಲಿರಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಸಂಗತಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ಬಹಿರಂಗಗೊಳಿಸಿದೆ.

ಕರ್ನಾಟಕ ರಾಜ್ಯ ಪೊಲೀಸ್ ಪ್ರಾಧಿಕಾರವು 2019 ಮತ್ತು 2020ನೇ ಸಾಲಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ವಾರ್ಷಿಕ ವರದಿಯು ರಾಜ್ಯದ ಪೊಲೀಸ್ ಇಲಾಖೆಯ ಮುಖವಾಡವನ್ನು ಕಳಚಿದೆ. ವಾರ್ಷಿಕ ವರದಿಯನ್ನು ಪ್ರಾಧಿಕಾರವು ಶೀಘ್ರದಲ್ಲಿಯೇ ವಿಧಾನಸಭೆಗೆ ಮಂಡಿಸಲಿದೆ. ಈ ಎರಡೂ ಸಾಲಿನ ವರದಿಯ ಪ್ರತಿ ‘the-file.in’ಗೆ ಲಭ್ಯವಾಗಿದೆ.

ಪೊಲೀಸ್ ಇಲಾಖೆಯ ಎಲ್ಲಾ ಸ್ತರಗಳ ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂಬುದು ಸೇರಿದಂತೆ ಇನ್ನಿತರ ಅಂಶ ಮತ್ತು ಪ್ರಕರಣಗಳ ಕುರಿತು ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ಗಮನಿಸಿರುವುದು ಪ್ರಾಧಿಕಾರದ ವರದಿಯಿಂದ ಗೊತ್ತಾಗಿದೆ. 2019 ಮತ್ತು 2020ರಲ್ಲಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದರು.

 ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ಗಳು ಮತ್ತು ಅಧೀನ ಅಧಿಕಾರಿಗಳ ವಿರುದ್ಧ ಸಾರ್ವ   ಜನಿಕರು, ಬಾಧಿತರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿರುವ ಪೊಲೀಸ್ ಪ್ರಾಧಿಕಾರಗಳಿಗೆ ದೂರು ಸಲ್ಲಿಸಿದ್ದಾರೆ. ಈ ದೂರುಗಳನ್ನಾಧರಿಸಿ ರಾಜ್ಯ ಪೊಲೀಸ್ ಪ್ರಾಧಿಕಾರವು ವಾರ್ಷಿಕ ವರದಿಗಳನ್ನು ಸಿದ್ಧಪಡಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ಪ್ರಕರಣಗಳ ಸ್ವರೂಪದ ಬಗ್ಗೆ ಹಲವು ಅಂಶಗಳನ್ನು ಗಮನಿಸಿದ ನಂತರ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿದೆ ಎಂದು ತಿಳಿದು ಬಂದಿದೆ. ಕಿರುಕುಳ, ವಂಚನೆ, ಹಲ್ಲೆ, ಕೊಲೆ ಯತ್ನ ಸೇರಿದಂತೆ ಇನ್ನಿತರ ಗಂಭೀರ ಸ್ವರೂಪದ ಪ್ರಕರಣಗಳ ಸಂಬಂಧ ಬಾಧಿತರು ಸಲ್ಲಿಸುವ ದೂರನ್ನಾಧರಿಸಿ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸುತ್ತಿಲ್ಲ. ಎಫ್‌ಐಆರ್ ದಾಖಲಿಸಿದರೂ ಆಪಾದಿತರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳನ್ನು  ಪೊಲೀಸ್ ದೂರು ಪ್ರಾಧಿಕಾರವು ಸಿದ್ಧಪಡಿಸಿರುವ ವರದಿಯು ಬಲಪಡಿಸಿದಂತಾಗಿದೆ.

 ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ಪ್ರಕರಣಗಳ ಸ್ವರೂಪದ ಬಗ್ಗೆ ಹಲವು ಅಂಶಗಳನ್ನು ಗಮನಿಸಿವೆ.

‘ಬಹಳಷ್ಟು ದೂರುದಾರರು ದೂರು ನೀಡಿ ಅವರನ್ನು ಸಂಪರ್ಕಿಸಿದ್ದರೂ ಅಧೀನ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವ ವರಿಷ್ಠ ಅಧಿಕಾರಿಗಳ ವಿರುದ್ಧ ಇರುತ್ತದೆ. ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸದಿರುವ ಬಗ್ಗೆ ವರಿಷ್ಠ ಅಧಿಕಾರಿಗಳಿಗೆ ದೂರು ಸಲ್ಲಿಸಿದ ಮೇಲೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಆದೇಶಿಸಿದ್ದರೆಂದು ಕಂಡು ಬರುತ್ತದೆ’ ಎಂಬ ಅಂಶ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಅಕ್ರಮ ಬಂಧನ, ಗಂಭೀರ ಗಾಯ, ಪೊಲೀಸ್ ಬಂಧನದಲ್ಲಿ ಮೃತ್ಯು, ಭ್ರಷ್ಟಾಚಾರ ಮತ್ತು ಲಂಚಕ್ಕೆ ಪೊಲೀಸ್ ಅಧಿಕಾರಿಗಳು ಬೇಡಿಕೆಯಿಡುತ್ತಿದ್ದಾರೆ ಎಂದು ವರದಿಯು ಪ್ರಕರಣಗಳನ್ನು ವರ್ಗೀಕರಿಸಿದೆ.

ದೂರುಗಳನ್ನು ಸ್ವೀಕರಿಸದಿರುವುದು ಮತ್ತು ಎಫ್‌ಐಆರ್ ದಾಖಲಿಸದಿರುವುದು, ಎಫ್‌ಐಆರ್ ದಾಖಲಿಸಿದರೂ ಸರಿಯಾಗಿ ತನಿಖೆ ನಡೆಸದೇ ವಿರೋಧಿಗಳಿಗೆ ಸಹಾಯ ಮಾಡುವುದು, ಕೆಲವು ಪ್ರಕರಣಗಳಲ್ಲಿ ವರಿಷ್ಠ ಅಧಿಕಾರಿಗಳ ಗಮನಕ್ಕೆ ತಂದ ನಂತರ ಎಫ್‌ಐಆರ್ ದಾಖಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಂಶ ವಾರ್ಷಿಕ ವರದಿಯಲ್ಲಿ ಉಲ್ಲೇಖವಾಗಿದೆ.

ಅದೇ ರೀತಿ ಕೆಟ್ಟದಾಗಿ ನಿಂದಿಸುವ ವರ್ತನೆ, ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸುವುದು, ದೈಹಿಕ ಹಿಂಸೆ ನೀಡುವುದು, ದೂರುದಾರರ ವಿರೋಧಿಗಳ ಜತೆ ಶಾಮೀಲಾಗಿರುವುದು, ನ್ಯಾಯಾಲಯದ ತಡೆಯಾಜ್ಞೆ ಜಾರಿ ಮಾಡದಿರುವುದು, ಆಪಾದಿತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ದೂರುಗಳನ್ನು ಮುಚ್ಚಿ ಹಾಕುವುದು, ಆಪಾದಿತರ ವಿರುದ್ಧ ದೂರಿನ ಮೇಲೆ ಬಿ ರಿಪೋರ್ಟ್ ದಾಖಲಿಸುವುದು, ದೂರುದಾರರ ವಿರುದ್ಧ ಪ್ರತಿಸ್ಪರ್ಧಿಯೊಂದಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವುದನ್ನು ಕರ್ನಾಟಕ ಪೊಲೀಸ್ ಪ್ರಾಧಿಕಾರವು ಗಮನಿಸಿದೆ ಎಂಬ ಅಂಶವು ವರದಿಯಲ್ಲಿ ಪ್ರಸ್ತಾಪವಾಗಿದೆ.

ಬಹಳಷ್ಟು ದೂರುದಾರರು ದೂರು ನೀಡಿ ಅವರನ್ನು ಸಂಪರ್ಕಿಸಿದ್ದರೂ ಅಧೀನ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವ ವರಿಷ್ಠ ಅಧಿಕಾರಿಗಳ ವಿರುದ್ಧವೇ ದೂರುಗಳಿವೆ. ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸದಿರುವ ಬಗ್ಗೆ ವರಿಷ್ಠ ಅಧಿಕಾರಿಗಳಿಗೆ ದೂರು ಸಲ್ಲಿಸಿದ ಮೇಲೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಆದೇಶಿಸಿದ್ದರೆಂದು ಕಂಡು ಬರುತ್ತದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ 2020ನೇ ಸಾಲಿನ ಆರಂಭದಲ್ಲಿ ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಒಟ್ಟು 370 ಪ್ರಕರಣಗಳು ಬಾಕಿ ಇದ್ದವು. ಇದೇ ವರ್ಷದಲ್ಲಿ ರಾಜ್ಯ ಪ್ರಾಧಿಕಾರಕ್ಕೆ ಒಟ್ಟು 139 ಪ್ರಕರಣಗಳು ಸ್ವೀಕೃತವಾಗಿದ್ದವು. ದೂರು ಪ್ರಾಧಿಕಾರದ ಮುಂದೆ ಒಟ್ಟಾರೆ 509 ಪ್ರಕರಣಗಳು ಪರಿಗಣನೆಗೆ ಮಂಡನೆಯಾಗಿದ್ದವು.

ಈ ಪೈಕಿ 175 ಪ್ರಕರಣಗಳು ವಿಲೇ ಆಗಿದ್ದರೆ ಇನ್ನೂ 334 ಪ್ರಕರಣಗಳು ಬಾಕಿ ಇದ್ದವು.

ಅದೇ ರೀತಿ 2019ರ ಆರಂಭದಲ್ಲಿ ರಾಜ್ಯ ಪ್ರಾಧಿಕಾರದ ಮುಂದೆ ವಿವಿಧ ಜಿಲ್ಲೆಗಳಿಂದ 404 ಪ್ರಕರಣಗಳು ಬಾಕಿ ಇದ್ದವು. ಅದೇ ವರ್ಷದಲ್ಲಿ 172 ಪ್ರಕರಣಗಳನ್ನು ರಾಜ್ಯ ಪ್ರಾಧಿಕಾರವು ಸ್ವೀಕರಿಸಿತ್ತು. ಪ್ರಾಧಿಕಾರದ ಮುಂದೆ ಒಟ್ಟಾರೆ 576 ಪ್ರಕರಣಗಳಿದ್ದವು. ಈ ಪೈಕಿ 206 ಪ್ರಕರಣಗಳು ವಿಲೇವಾರಿ ಆಗಿದ್ದರೆ 370 ಪ್ರಕರಣಗಳು ಬಾಕಿ ಇದ್ದವು.

ಹಾಗೆಯೇ ಜಿಲ್ಲಾ ಪೊಲೀಸ್ ಪ್ರಾಧಿಕಾರಗಳ ಮುಂದೆ 2020ರ ಆರಂಭದಲ್ಲಿ 1,027 ಪ್ರಕರಣಗಳು ಇದ್ದವು. ಅದೇ ವರ್ಷದಲ್ಲಿ 119 ಪ್ರಕರಣಗಳನ್ನು ಜಿಲ್ಲಾ ಪ್ರಾಧಿಕಾರಗಳು ಸ್ವೀಕರಿಸಿದ್ದವು. ಒಟ್ಟಾರೆ 1,146 ಪ್ರಕರಣಗಳ ಪೈಕಿ 29 ಪ್ರಕರಣಗಳಷ್ಟೇ ವಿಲೇ ಆಗಿದ್ದರೆ 2020ರ ಅಂತ್ಯಕ್ಕೆ 1,117 ಪ್ರಕರಣಗಳು ಬಾಕಿ ಇದ್ದವು ಎಂಬುದು ವರದಿಯಿಂದ ತಿಳಿದು ಬಂದಿದೆ.

 2019ರಲ್ಲಿ ಜಿಲ್ಲಾ ಪೊಲೀಸ್ ಪ್ರಾಧಿಕಾರಗಳ ಮುಂದೆ 948 ಪ್ರಕರಣಗಳಿದ್ದವು. ಅದೇ ವರ್ಷದಲ್ಲಿ 194 ಪ್ರಕರಣಗಳನ್ನು ಜಿಲ್ಲಾ ಪ್ರಾಧಿಕಾರಗಳು ಸ್ವೀಕರಿಸಿದ್ದವು. ಒಟ್ಟಾರೆ 1,142 ಪ್ರಕರಣಗಳ ಪೈಕಿ 115 ಪ್ರಕರಣಗಳನ್ನು ವಿಲೇ ಮಾಡಿದ್ದರೆ 1,027 ಪ್ರಕರಣಗಳು ಬಾಕಿ ಇದ್ದವು ಎಂಬುದು ವರದಿಯಿಂದ ಗೊತ್ತಾಗಿದೆ.

ಪೊಲೀಸ್ ಇಲಾಖೆಯ ಶುದ್ಧೀಕರಣ ಅಗತ್ಯ

ಕೆಆರ್‌ಎಸ್ ಪಕ್ಷವು ಈ ಹಿಂದೆ ಅನೇಕ ಬಾರಿ ಸಾಕ್ಷ್ಯಾಧಾರಗಳ ಸಮೇತ ಪ್ರತಿಪಾದಿಸಿದ್ದ ರೀತಿಯಲ್ಲಿ ಕರ್ನಾಟಕ ಪೊಲೀ ಸ್ ಇಲಾಖೆಯ ಒಂದು ವರ್ಗದ ಭ್ರಷ್ಟ ಅಧಿಕಾರಿಗಳು ಸಂಘಟಿತ ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನುವುದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ವರದಿಯಿಂದ ಸಾಬೀತಾಗಿದೆ. ಈ ಸರಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಮತ್ತು ಮಾನವ ಹಕ್ಕುಗಳ ಬಗ್ಗೆ ಕನಿಷ್ಠ ಮಟ್ಟದ ಕಾಳಜಿ ಇದ್ದಲ್ಲಿ ಮತ್ತು ಪೊಲೀಸ್ ಇಲಾಖೆಯನ್ನು ಸುಧಾರಿಸಬೇಕು ಎನ್ನುವ ಮನೋಭಾವ ಇದ್ದಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗಿ ಇಡೀ ಪೊಲೀಸ್ ಇಲಾಖೆಯನ್ನು ಶುದ್ಧೀಕರಣ ಮಾಡಬೇಕು. ಯಾವೆಲ್ಲಾ ಪೊಲೀಸರ ಮೇಲೆ ಗುರುತರ ಆರೋಪಗಳು ಬಂದಿವೆಯೋ ಸಾಧ್ಯವಾದಲ್ಲಿ ಅವರನ್ನು ಅಮಾನತಿನಲ್ಲಿಡಬೇಕು ಅಥವಾ ವಿಚಾರಣೆ ಮುಗಿಯುವ ತನಕ ಅವರನ್ನು ರಜೆಯ ಮೇಲೆ ಕಳುಹಿಸಬೇಕು. ಯಾವುದೇ ಭ್ರಷ್ಟ, ದುಷ್ಟ ಮನೋಭಾವದ ವ್ಯಕ್ತಿಯ ಮೇಲೆ ಖಾಕಿ ದಿರಿಸು ಇರಬಾರದು.

ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News