ಪಿಟಿಸಿಎಲ್ ಕಾಯ್ದೆ ಜಾರಿಗೆ ಸದನದ ಒಳಗಡೆ ಹೋರಾಟ: ಶಾಸಕ ಎಂ.ಪಿ.ಕುಮಾರಸ್ವಾಮಿ

Update: 2022-01-12 14:02 GMT

ಬೆಂಗಳೂರು, ಜ. 12: ಪಿಟಿಸಿಎಲ್ ಕಾಯ್ದೆ ಸರಿಯಾದ ರೀತಿ ಜಾರಿಯಾಗುತ್ತಿಲ್ಲ. ಈ ಬಗ್ಗೆ ಎಲ್ಲ ಶಾಸಕರು ಒಗ್ಗೂಡಿ ಸದನದ ಒಳಗಡೆ ಹೋರಾಟ ನಡೆಸುತ್ತೇವೆ' ಎಂದು ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಕರ್ನಾಟಕ ದಲಿತ ಉದ್ದಿಮೆದಾರ ಸಂಘದ ವತಿಯಿಂದ 2022-23ನೆ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಬಗ್ಗೆ ಸದನದ ಒಳಗಡೆ ನಾವು ಪ್ರಮಾಣಿಕವಾಗಿ ಹೋರಾಟ ನಡೆಸುತ್ತೆವೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗಿದೆ ನಮ್ಮ ಸಮಿತಿಯಲ್ಲೂ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರದಿಂದ ದಲಿತರ ಏಳಿಗೆಗಾಗಿ ಪ್ರತ್ಯೇಕವಾಗಿ 26 ಸಾವಿರ ಕೋಟಿ ರೂ.ಬಿಡುಗಡೆಗೊಳಿಸಲಾಗಿದೆ. ಆದರೆ, ಈ ಹಣ ಸರಿಯಾದ ರೀತಿ ಬಳಕೆಯಾಗಿದೆ ಎಂಬ ಬಗ್ಗೆ ಚಿಂತನೆ ನಡೆಸಬೇಕಿದೆ. ನಮ್ಮ ಕಣ್ಣೆದುರು ಭಾರೀ ಪ್ರಮಾಣದ ಅನ್ಯಾಯ ನಡೆಯುತ್ತಿದೆ. ಹೆಸರಿಗಷ್ಟೇ ದಲಿತರಿಗೆ ಬಾರೀ ಪ್ರಮಾಣ ಹಣ ಒದಗಿಸಲಾಗುವುದು ಎಂದು ಹೇಳಲಾಗುತ್ತದೆ. ಆದರೆ ಈ ಹಣ ಯಾವುದೋ ಸೇತುವೆ, ಕಾಲುವೆ, ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದರಿಂದ ದಲಿತ ಉದ್ದಾರ ಸಾಧ್ಯವೆ. ದಲಿತರ ಏಳಿಗೆಗಾಗಿ ಈ ಹಣ ನಿಜವಾಗಿ ಬಳಕೆಯಾಗಬೇಕಿದೆ ಎಂದು ಅವರು ತಿಳಿಸಿದರು.

ದಲಿತ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೊಬ್ಬರಿಗೆ ಹೆದರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಿರುವ ದಲಿತ ಶಾಸಕರಲ್ಲಿ ಪ್ರಿಯಾಂಕ ಖರ್ಗೆ, ಪಿ.ರಾಜೀವ್, ಎನ್.ಮಹೇಶ್ ಸೇರಿ ಏಳೆಂಟು ಮಂದಿ ಶಾಸಕರು ದಲಿತರ ಏಳಿಗೆ ಕುರಿತು ಬದ್ಧತೆ ಹೊಂದಿದ್ದಾರೆ. ಸಮುದಾಯ ಬಗ್ಗೆ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ದಲಿತರ ಏಳ್ಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕೊಳೆಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಮಾತನಾಡಿ, ದಲಿತರ ಉದ್ದಿಮೆ ನಷ್ಟ ಸೇರಿದಂತೆ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕಾಗಿ ಅನುಸೂಚಿತ ಜಾತಿ, ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲ ದಲಿತ ಸಂಘಟನೆಗಳ ಪ್ರಮುಖರ ಸಭೆ ಕರೆದು ಚರ್ಚೆ ನಡೆಸಲಾಗುವುದು. 1961ರಿಂದ ಇದುವರೆಗೂ ದಲಿತ ಜನಾಂಗದವರಲ್ಲಿ ಭೂ ಒಡೆಯರಾದವರು ಶೇ.9ರಷ್ಟು ಮಾತ್ರ. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ದಲಿತ ಜನಾಂಗದವರು ಪಟ್ಟಣ ಪ್ರದೇಶಗಳಿಗೆ ಬರುವುದನ್ನು ತಪ್ಪಿಸಲು ಅವರಿಗೆ ಭೂಮಿ ನೀಡುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ದಲಿತ ಜನಾಂಗದವರಿಗೆ ಭೂಮಿ ಹಂಚಿಕೆಯಾಗಬೇಕಿದೆ ಎಂದು ತಿಳಿಸಿದರು.

ಕರ್ನಾಟಕ  ದಲಿತ ಉದ್ದಿಮೆದಾರರ ಸಂಘದ ಅಧ್ಯಕ್ಷ ಸಿ.ಜಿ.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರಕಾರದ ಸಂಬಂಧಪಟ್ಟ ಸಚಿವರು, ಶಾಸಕರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಎಸ್ಸಿ-ಎಸ್ಟಿ ಮೀಸಲಿದ್ದ ಹಣ ದಲಿತರಿಗಾಗಿ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ. ಕೈಗಾರಿಕೆಗಳಿಗೆ ಸಿಗಬೇಕಾದ ಶೇ.75ರಷ್ಟು ಸಬ್ಸಿಡಿಯನ್ನು ಕೊಡಲು ಸರಕಾರ ಮೀನಾಮೇಷ ಏಣಿಸುತ್ತಿದೆ ಎಂದು ಹೇಳಿದರು. ಟಿ.ನರಸೀಪುರ ಶಾಸಕ ಆಶ್ವಿನ್ ಕುಮಾರ್, ಮುಖಂಡರಾದ ಮಾವಳಿ ಶಂಕರ್, ನಾಗರಾಜ್, ಎಂ.ವೆಂಕಟಸ್ವಾಮಿ, ಪ್ರೊ.ಬಿ.ಕೆ.ಟ್ರಸ್ಟ್‍ನ ಇಂದಿರಾ ಕೃಷ್ಣಪ್ಪ, ಪುರುಷೊತ್ತಮ್ ದಾಸ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News