‘ಗೋದಿ ಮಾಧ್ಯಮ’ದ ಬಳಿಕ ಈಗ ‘ಗೋದಿ ಎನ್‌ಜಿಒ’ಗಳು

Update: 2022-01-13 06:29 GMT

ಮೂಲ ಸಮಸ್ಯೆಗಳನ್ನು ಗುರುತಿಸುವ, ಪರಿಹಾರಗಳನ್ನು ಹುಡುಕುವ ಹಾಗೂ ಆ ಪರಿಹಾರಗಳನ್ನು ಜಾರಿಗೊಳಿಸಲು ಸಂಪನ್ಮೂಲಗಳ ವ್ಯವಸ್ಥೆ ಮಾಡುವ ಸಾಮರ್ಥ್ಯ ಮತ್ತು ಪರಿಕರಗಳನ್ನು ಹೊಂದಿರುವ ನಾಗರಿಕ ಸಮಾಜದ ಇಂಥ ಶಕ್ತಿಗಳ ಸ್ವಾತಂತ್ರಗಳನ್ನು ರದ್ದುಪಡಿಸುವುದು ಅಥವಾ ಕಡಿತಗೊಳಿಸುವುದು ಹಾಗೂ ತನಗೆ ಬೇಕಾದ ‘ಗೋದಿ ಎನ್‌ಜಿಒ’ಗಳನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸುವುದು ಭಾರತದ ಪ್ರಜಾಸತ್ತೆಗೆ ನೀಡುತ್ತಿರುವ ಇನ್ನೊಂದು ದೊಡ್ಡ ಪ್ರಹಾರವಾಗಿದೆ.

ಹೊಸ ವರ್ಷದ ಬೆಳಗ್ಗೆ ಎದ್ದಾಗ ವಿಶೇಷ ಸುದ್ದಿಯೊಂದು ನನ್ನನ್ನು ಸ್ವಾಗತಿಸಿತು. ವಿದೇಶಿ ನಿಧಿ ಪಡೆಯಲು ನೀಡಲಾಗಿದ್ದ ಪರವಾನಿಗೆಯನ್ನು ನವೀಕರಿಸುವಂತೆ ಕೋರಿ ನೂರಾರು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎನ್ನುವುದೇ ಆ ಸುದ್ದಿ. ಗೌರವಾನ್ವಿತ ಸಂಸ್ಥೆ ಆಕ್ಸ್‌ಫಾಮ್, ಮದರ್‌ತೆರೇಸಾ ಸ್ಥಾಪಿಸಿರುವ ಸಂಸ್ಥೆ ಮಿಶನರೀಸ್ ಆಫ್ ಚಾರಿಟಿ ಮತ್ತು ಉತ್ತರ ಮತ್ತು ಮಧ್ಯ ಭಾರತದಲ್ಲಿ ಹರಡಿರುವ ಸಣ್ಣ ಗ್ರಾಮೀಣ ಆಸ್ಪತ್ರೆಗಳ ಸಮೂಹವು ಈ ಪಟ್ಟಿಯಲ್ಲಿತ್ತು. ಈ ಗ್ರಾಮೀಣ ಆಸ್ಪತ್ರೆಗಳ ಸಮೂಹದಲ್ಲಿ ನಾನು ಸ್ವಲ್ಪ ಸಮಯ ಕೆಲಸ ಮಾಡಿದ್ದೆ.

ಗ್ರಾಮೀಣ ಆಸ್ಪತ್ರೆಗಳ ಸಮೂಹ ಮತ್ತು ಮಿಶನರೀಸ್ ಆಫ್‌ಚಾರಿಟಿಯ ಪರವಾನಿಗೆಯನ್ನು ನವೀಕರಿಸಲಾಗಿದೆ ಎಂಬ ಸುದ್ದಿ ಈಗ ಬಂದಿದೆ. ಆದರೆ, ಆಕ್ಸ್‌ಫಾಮ್‌ನ ಪರವಾನಿಗೆ ನವೀಕರಣವಾಗಿಲ್ಲ. ಅದೇ ವೇಳೆ, ಮಾಧ್ಯಮಗಳಲ್ಲಿ ಸುದ್ದಿಯಾಗದ ಇಂತಹದೇ ನೂರಾರು ಸಂಘಟನೆಗಳ ಪರವಾನಿಗೆಯೂ ನವೀಕರಣಗೊಂಡಿರುವ ಸಾಧ್ಯತೆಯಿಲ್ಲ.

ಭಾರತದ ಉತ್ಸಾಹಿ ನಾಗರಿಕ ಸಮಾಜ, ಅದರಲ್ಲೂ ಮುಖ್ಯವಾಗಿ ಎನ್‌ಜಿಒ ಕ್ಷೇತ್ರವನ್ನು ಕಳೆದ ಹಲವಾರು ವರ್ಷಗಳಿಂದ ವಿವಿಧ ಸರಕಾರಗಳು ಮತ್ತು ಸ್ಥಾಪಿತ ಹಿತಾಸಕ್ತಿಗಳು ಬೆದರಿಕೆ ಎಂಬಂತೆ ಪರಿಗಣಿಸಿದ್ದವು. 2014ರ ಬಳಿಕವಂತೂ ಈ ಮಾತುಗಳು ಮತ್ತೆ ಮತ್ತೆ ಗೋಡೆಯಲ್ಲಿ ಬರೆದಿಟ್ಟಂತೆ ಸ್ಪಷ್ಟವಾಗಿದ್ದವು. ಇಂದು ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ನಾಯಕರನ್ನು ಬೆದರಿಸಲಾಗುತ್ತಿದೆ, ಅವರ ಮೇಲೆ ದಾಳಿ ನಡೆಸಲಾಗುತ್ತಿದೆ ಹಾಗೂ ಅವರ ಕೊಲೆಗಳೂ ನಡೆದಿವೆ. ಮೇಲ್ನೋಟಕ್ಕೆ ಕಾಣುವ ಒಂದೇ ಒಂದು ತಪ್ಪೆಂದರೆ, ಈ ಗುಂಪುಗಳು ಮತ್ತು ವ್ಯಕ್ತಿಗಳು ಬಡವರು, ಮುಖ್ಯವಾಹಿನಿಯಿಂದ ಹೊರಗಿರುವವರು ಮತ್ತು ಸಮಾಜದ ದುರ್ಬಲ ವರ್ಗಗಳ ಪರವಾಗಿ ಹೊಂದಿರುವ ಅದಮ್ಯ ಬದ್ಧತೆ ಹಾಗೂ ದೊಡ್ಡ ಧ್ವನಿಯಲ್ಲಿ ಎಲ್ಲರಿಗೂ ಕಾಣುವಂತೆ ಸರಕಾರಕ್ಕೆ ಸತ್ಯಗಳನ್ನು ಹೇಳುತ್ತಿರುವುದು! ಸತ್ಯ ಮತ್ತು ನ್ಯಾಯದ ಪರವಾಗಿ ಮಾತನಾಡಲು ಹಾಗೂ ಸಂವಿಧಾನ ಎಲ್ಲರಿಗೂ ನೀಡಿರುವ ಹಕ್ಕುಗಳು ಮತ್ತು ಸ್ವಾತಂತ್ರಗಳಿಗಾಗಿ ಹೋರಾಡಲು ಸರ್ವಾಧಿಕಾರಿ ಆಡಳಿತದಲ್ಲಿ ಅವಕಾಶವಿಲ್ಲ.

ರಾಜಕೀಯದಲ್ಲಿ ವಿದೇಶಿ ಪ್ರಭಾವವನ್ನು ತಡೆಯುವ ಉದ್ದೇಶದಿಂದ ಎಫ್‌ಸಿಆರ್‌ಎಯನ್ನು ರೂಪಿಸಲಾಗಿತ್ತು. ಈಗ ಅದನ್ನು ನಾಗರಿಕ ಸಮಾಜದ ಸಂಘಟನೆಗಳ ವಿರುದ್ಧ ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಸರಕಾರದ ನೀತಿಗಳನ್ನು ವಿರೋಧಿಸುವ ಅಥವಾ ಅವುಗಳ ಬಗ್ಗೆ ಚರ್ಚೆ ಮಾಡುವ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಎಫ್‌ಸಿಆರ್‌ಎ ರದ್ದತಿಯ ಮೂಲಕ ಬೆದರಿಸಾಗುತ್ತಿದೆ.

ಈಗ ನಾವಿರುವ ಸಾಂಪ್ರದಾಯಿಕ ರಾಜಕಾರಣದಲ್ಲಿ ನಾಗರಿಕ ಸಮಾಜ ಮೃತಪಟ್ಟಿದೆ. ಬಹುಶಃ ಗೋದಿ ನಾಗರಿಕ ಸಮಾಜವನ್ನು ಹೊರತುಪಡಿಸಿ ನಾಗರಿಕ ಸಮಾಜ ಈಗ ಉಳಿದಿಲ್ಲ. ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡಮಿಯಲ್ಲಿ ಇತ್ತೀಚೆಗೆ ನಡೆದ ತರಬೇತಿ ಸಮಾಪನ ಕಾರ್ಯಕ್ರಮವೊಂದರಲ್ಲಿ ಪ್ರೊಬೆಶನರಿ ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನಾಗರಿಕ ಸಮಾಜವು ಭಾರತೀಯರ ಹೊಸ ಶತ್ರು ಎಂಬುದಾಗಿ ಹೇಳಿದರು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಉಳಿಸಿಕೊಳ್ಳಲು ಹೋರಾಡುವಂತೆ ಪೊಲೀಸರಿಗೆ ಕರೆ ನೀಡಿದರು.

ನಾಗರಿಕ ಸಮಾಜವು ಯುದ್ಧದ ನಾಲ್ಕನೇ ಗಡಿಯಾಗಿದೆ ಎಂದು ದೋವಲ್ ತರಬೇತಿ ಪಡೆಯುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು. ಒಂದು ಶತ್ರು ಸಾಂಪ್ರದಾಯಿಕ ಯುದ್ಧವನ್ನು ದುಬಾರಿ ಮತ್ತು ಅನುಪಯುಕ್ತ ಎಂಬುದಾಗಿ ಪರಿಗಣಿಸಬಹುದು. ಆದರೆ ದೇಶವೊಂದರ ಹಿತಾಸಕ್ತಿಯನ್ನು ಘಾಸಿಗೊಳಿಸಲು ನಾಗರಿಕ ಸಮಾಜವನ್ನು ಬುಡಮೇಲುಗೊಳಿಸಬಹುದಾಗಿದೆ, ಬಳಸಬಹುದಾಗಿದೆ, ವಿಭಜಿಸಬಹುದಾಗಿದೆ, ಹಸ್ತಕ್ಷೇಪ ಮಾಡಬಹುದಾಗಿದೆ ಎಂದು ಅವರು ಎಚ್ಚರಿಸಿದರು. ಅವರ ಸಂಪೂರ್ಣ ರಕ್ಷಣೆಯನ್ನು ನೋಡಿಕೊಳ್ಳಲು ನೀವಿದ್ದೀರಿ ಎಂಬುದಾಗಿ ಅವರು ಪೊಲೀಸ್ ಅಧಿಕಾರಿಗಳನ್ನು ನೆನಪಿಸಿದರು.

ಈಗ ಪೊಲೀಸರ ಕರ್ತವ್ಯ ಪಟ್ಟಿ ದೊಡ್ಡದಾಗಿದೆ. ಅಪರಾಧವನ್ನು ತಡೆಗಟ್ಟುವುದು ಮಾತ್ರ ಈಗ ಅವರ ಕೆಲಸವಲ್ಲ, ಬುಡಮೇಲು ಚಟುವಟಿಕೆಗಳಲ್ಲಿ ತೊಡಗಿದೆ ಎನ್ನಲಾಗುವ ಎನ್‌ಜಿಒಗಳು ಮತ್ತು ಇತರ ನಾಗರಿಕ ಸಮಾಜದ ಪಾಲುದಾರರನ್ನು ಗುರುತಿಸಿ ಹತ್ತಿಕ್ಕುವುದು ಕೂಡ ಈಗ ಪೊಲೀಸರ ಕರ್ತವ್ಯದ ಭಾಗವಾಗಿದೆ. ಎನ್‌ಜಿಒ ಕ್ಷೇತ್ರವನ್ನು ಈಗ ‘ಒಳ್ಳೆಯ ಎನ್‌ಜಿಒಗಳು’ ಮತ್ತು ‘ಹತ್ತಿಕ್ಕಬೇಕಾದ ಕೆಟ್ಟ ಎನ್‌ಜಿಒಗಳು’ ಎಂಬುದಾಗಿ ವಿಂಗಡಿಸಲು ನೋಡಲಾಗುತ್ತಿದೆ.

 ಸರಕಾರದ ಟೀಕಾಕಾರರನ್ನು ‘ರಾಷ್ಟ್ರ ವಿರೋಧಿ’ಗಳು ಎಂಬ ಪದದಿಂದ ಕರೆಯುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ, ಭಾರತದ ಹಲವು ಶ್ರೇಷ್ಠ ಹಾಗೂ ಧೀರ ಚೇತನಗಳು ಈಗ ರಾಷ್ಟ್ರ ವಿರೋಧಿಗಳಾಗಿಬಿಟ್ಟಿವೆ. ವಿಚಾರವಾದಿಗಳು, ಲೇಖಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಮತ್ತು ಧರ್ಮದ ಆಧಾರದಲ್ಲಿ ಹರಡಲಾಗುತ್ತಿರುವ ದ್ವೇಷ ಮತ್ತು ವಿಭಜನೆಯನ್ನು ವಿರೋಧಿಸುವವರು ಎಲ್ಲರೂ ಈಗ ರಾಷ್ಟ್ರ ವಿರೋಧಿಗಳ ಪಟ್ಟಿಯಲ್ಲಿ ಇದ್ದಾರೆ. ದೇಶವು ಹಲವು ಸಮಸ್ಯೆಗಳಿಂದ ಜರ್ಜರಿತವಾಗಿರುವಾಗ, ಅವರ ಪರಿಣತಿ ಮತ್ತು ಚಿಂತನೆಗಳ ಲಾಭವನ್ನು ಪಡೆಯುವ ಬದಲು ಅವರ ಬಾಯಿ ಮುಚ್ಚಿಸಲು ಯತ್ನಿಸಲಾಗುತ್ತಿದೆ. ಈ ಹೊಸ ಮಾದರಿಯ ಯುದ್ಧವನ್ನು ಎದುರಿಸಲು ನಾಗರಿಕ ಸಮಾಜದ ಸದಸ್ಯರು ಹೇಗೆ ತಯಾರಾಗಬಹುದು?.

  ಸ್ವಾತಂತ್ರ ಸಿಕ್ಕಿದ ಆರಂಭಿಕ ವರ್ಷಗಳ ನೆಹರೂ ಅವಧಿಯಲ್ಲಿ ಸರಕಾರ ಮತ್ತು ನಾಗರಿಕ ಸಮಾಜವು ಅತ್ಯಂತ ಸಹಕಾರ ಮತ್ತು ರಚನಾತ್ಮಕ ಬಾಂಧವ್ಯವನ್ನು ಹೊಂದಿತ್ತು. ಆದರೆ, ನಂತರ ಬಂದ ಇಂದಿರಾಗಾಂಧಿ ಸರಕಾರವು ನಾಗರಿಕ ಸಮಾಜದ ಮೇಲೆ ನಿರ್ಬಂಧಗಳನ್ನು ವಿಧಿಸಿದರು, ಅದರಲ್ಲೂ ಮುಖ್ಯವಾಗಿ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರಿಕ ಸಮಾಜವನ್ನು ದಮನಿಸಿದರು. ತಥಾಕಥಿತ ಜಾತ್ಯತೀತ ಮತ್ತು ಪ್ರಗತಿಪರ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸೇರಿದಂತೆ ನಂತರ ಬಂದ ವಿವಿಧ ಸರಕಾರಗಳು ತುರ್ತು ಪರಿಸ್ಥಿತಿಯನ್ನು ಖಂಡಿಸಿದವು. ಆದರೆ, ಎಫ್‌ಸಿಆರ್‌ಎ ಹಾಗೂ ಇಂಥದೇ ಇತರ ಕಾಯ್ದೆಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದವು. ವಾಸ್ತವವಾಗಿ, ನಾಗರಿಕ ಸಮಾಜಕ್ಕೆ ಮೂಗುದಾರತೊಡಿಸಲು ಈ ಕಾಯ್ದೆಗಳನ್ನು ಇನ್ನಷ್ಟು ಕಠಿಣಗೊಳಿಸಿದವು.

ಉದಾಹರಣೆಗೆ; ಯಪಿಎ ಸರಕಾರವು ಒಂದು ಕಡೆ, ರಾಷ್ಟ್ರೀಯ ಸಲಹಾ ಮಂಡಳಿ ಸ್ಥಾಪನೆ ಮೂಲಕ ಸರಕಾರ ಮತ್ತು ನಾಗರಿಕ ಸಮಾಜದ ನಡುವಿನ ಬಾಂಧವ್ಯವನ್ನು ವೃದ್ಧಿಸಿತು ಹಾಗೂ ಬಡವರು ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಹಿತಾಸಕ್ತಿಗಳ ರಕ್ಷಣೆಗಾಗಿ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳನ್ನು ರೂಪಿಸಿತು. ಆದರೆ, ಇನ್ನೊಂದು ಕಡೆ, ಸರಕಾರದ ಆರ್ಥಿಕ ಉದಾರೀಕರಣ ನೀತಿಗಳನ್ನು ತಡೆಯುತ್ತಿದ್ದಾರೆ ಎಂಬುದಾಗಿ ಪರಿಗಣಿಸಲಾದ, ನಾಗರಿಕ ಸಮಾಜದ ಒಳಗಿರುವ ರಾಜಕೀಯ ಶಕ್ತಿಗಳನ್ನು ನಿಯಂತ್ರಿಸುವುದಕ್ಕಾಗಿ 1976ರ ಎಫ್‌ಸಿಆರ್‌ಎ ಕಾಯ್ದೆಯ ಜಾಗದಲ್ಲಿ 2010ರಲ್ಲಿ ನೂತನ ಎಫ್‌ಸಿಆರ್‌ಎ ಕಾಯ್ದೆಯನ್ನು ಜಾರಿಗೆ ತಂದಿತು.

ಪ್ರಸಕ್ತ ಸರಕಾರವು ಅದೇ ನೀತಿಗಳಿಗೆ ಅತ್ಯಂತ ಬದ್ಧವಾಗಿದೆ. ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದ ತಕ್ಷಣ, 2020 ಮಾರ್ಚ್ 10ರಂದು ಸರಕಾರವು ಯುಪಿಎ ಸರಕಾರದ 2010ರ ಎಫ್‌ಸಿಆರ್‌ಎ ಕಾಯ್ದೆಗೆ ತಿದ್ದುಪಡಿ ತಂದಿತು. ಅದು ನಾಗರಿಕ ಸಮಾಜದ ಮೇಲೆ ಈವರೆಗೆ ಹೇರದ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಿತು. ಇದು ಏನು ಹೇಳುತ್ತದೆಂದರೆ, ಹಿಂದಿನ ಕಾಂಗ್ರೆಸ್ ಸರಕಾರಗಳು ತನಗೆ ನೀಡಿರುವ ಸಲಕರಣೆಗಳನ್ನು ಪ್ರಸಕ್ತ ಸರಕಾರವು ಆಂಶಿಕವಾಗಿ ಬಳಸುತ್ತಿದೆ. ಹಿಂದಿನ ಕಾಂಗ್ರೆಸ್ ಸರಕಾರಗಳು ಜಾತ್ಯತೀತವಾಗಿದ್ದರೂ, ನಾಗರಿಕ ಸಮಾಜದ ಸಂಘಟನೆಗಳಿಗೆ ಸಂಬಂಧಿಸಿದ ನಿಲುವಿನಲ್ಲಿ ಗೊಂದಲ ಹೊಂದಿದ್ದವು. ನಾಗರಿಕ ಸಮಾಜವು ಸಾಂಪ್ರದಾಯಿಕ ಪರೋಪಕಾರದ ವ್ಯಾಪ್ತಿಯಿಂದ ಹೊರಗೆ ಕಾರ್ಯಾಚರಿಸುತ್ತಿದ್ದವು ಹಾಗೂ ‘ಹಕ್ಕು ಆಧಾರಿತ ಅಭಿಯಾನ’ಗಳ ಬಗ್ಗೆ ಮಾತನಾಡುತ್ತಿದ್ದವು. ಯಾವುದು ಯಾರ ಕೆಲಸವೋ ಅದನ್ನು ಗುರುತಿಸಿ ಲೋಪಗಳಿಗೆ ಅವರನ್ನು ಹೊಣೆಯಾಗಿಸಲು ಮುಂದಾಗಿದ್ದವು.

ದಿನಗಳೆದಂತೆ, ಮಾನವ ಹಕ್ಕುಗಳು, ಪರಿಸರ ಮತ್ತು ಹವಾಮಾನ, ವ್ಯಕ್ತಿ ಸ್ವಾತಂತ್ರ, ಕಾರ್ಮಿಕರ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸ ಮಾಡುವ ಸ್ವಾಯತ್ತ ನಾಗರಿಕ ಸಮಾಜ ಸಂಘಟನೆಗಳಿಗೆ ಸಮಾಜದಲ್ಲಿ ಇರುವ ಜಾಗ ಕಿರಿದಾಗುತ್ತಿದೆ.

ನಾಗರಿಕ ಸಮಾಜ ಮತ್ತು ದಾನಕ್ಕೆ ಸಂಬಂಧಿಸಿದ ಕಾರ್ಪೊರೇಟ್ ಸಾಮಾಜಿಕ ಬಾಧ್ಯತಾ (ಸಿಎಸ್‌ಆರ್) ಕಾನೂನು ಆಸಕ್ತಿದಾಯಕವಾಗಿದೆ. ನಿಗದಿತ ಕಾರ್ಪೊರೇಟ್ ದಾನದ ಎರಡರಷ್ಟು ಮೊತ್ತವನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಅದು ಯಶಸ್ವಿಯಾಗಿದೆಯಾದರೂ, ಅದನ್ನು ಕಿರು ಅವಧಿಯ, ಉದ್ಯೋಗಿಗಳನ್ನು ತೃಪ್ತಿಪಡಿಸುವ ಹಾಗೂ ಸುಲಭವಾಗಿ ಕಣ್ಣಿಗೆ ಬೀಳುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲು ವಿನ್ಯಾಸಗೊಳಿಸಲಾಗಿದೆ. ದೇಶವನ್ನು ಬಾಧಿಸುತ್ತಿರುವ ದೀರ್ಘಾವಧಿಯ ಸಂಕೀರ್ಣ ಸಮಸ್ಯೆಗಳಿಗೆ ಅದು ಮಹತ್ವ ನೀಡುತ್ತಿಲ್ಲ. ಈ ಕಾನೂನು ಕಾರ್ಪೊರೇಟ್ ವಲಯವನ್ನು ಪ್ರಧಾನ ಪಾತ್ರದಲ್ಲಿರಿಸುತ್ತದೆ ಹಾಗೂ ಎನ್‌ಜಿಒಗಳನ್ನು ಕೇವಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಂಸ್ಥೆಗಳ ಮಟ್ಟಕ್ಕೆ ಇಳಿಸಲಾಗಿದೆ ಹಾಗೂ ಈ ಪ್ರಕ್ರಿಯೆಯಿಂದ ಚಿಂತಕರು ಮತ್ತು ಚಿಂತಕರ ಗುಂಪುಗಳನ್ನು ಹೊರಗಿಡಲಾಗಿದೆ.

ಯಾವುದೇ ದೇಶದ ಒಟ್ಟಾರೆ ಬೆಳವಣಿಗೆ ಕ್ಷೇತ್ರದಲ್ಲಿ ವಹಿಸಲು ನಾಗರಿಕ ಸಮಾಜದ ಸಂಘಟನೆಗಳಿಗೆ ಮಹತ್ವದ ಪಾತ್ರವಿದೆ, ಅದರಲ್ಲೂ ಮುಖ್ಯವಾಗಿ ಬಡತನ, ಆರೋಗ್ಯ ಸಮಸ್ಯೆ, ಶಿಕ್ಷಣ ಮತ್ತು ಅಭಿವೃದ್ಧಿಯ ಇತರ ಸೂಚ್ಯಂಕಗಳಿಗೆ ಸಂಬಂಧಿಸಿದ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ಈ ಸಂಘಟನೆಗಳು ವಹಿಸಬೇಕಾದ ಪಾತ್ರ ಅಗಾಧವಾಗಿದೆ. ಸರಕಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಭಾರತದ ನಾಗರಿಕ ಸಮಾಜದ ಸಂಘಟನೆಗಳು ತಳಮಟ್ಟದಲ್ಲಿ ವಿಸ್ತತ ಜಾಲಗಳನ್ನು ಹೊಂದಿವೆ. ಈ ಜಾಲಗಳು ಮಾಹಿತಿಯನ್ನು ಪ್ರಸಾರಿಸುವ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಸಂಬಂಧಿಸಿದ ವಸ್ತುಗಳು ಮತ್ತು ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

ಮೂಲ ಸಮಸ್ಯೆಗಳನ್ನು ಗುರುತಿಸುವ, ಪರಿಹಾರಗಳನ್ನು ಹುಡುಕುವ ಹಾಗೂ ಆ ಪರಿಹಾರಗಳನ್ನು ಜಾರಿಗೊಳಿಸಲು ಸಂಪನ್ಮೂಲಗಳ ವ್ಯವಸ್ಥೆ ಮಾಡುವ ಸಾಮರ್ಥ್ಯ ಮತ್ತು ಪರಿಕರಗಳನ್ನು ಹೊಂದಿರುವ ನಾಗರಿಕ ಸಮಾಜದ ಇಂಥ ಶಕ್ತಿಗಳ ಸ್ವಾತಂತ್ರಗಳನ್ನು ರದ್ದುಪಡಿಸುವುದು ಅಥವಾ ಕಡಿತಗೊಳಿಸುವುದು ಹಾಗೂ ತನಗೆ ಬೇಕಾದ ‘ಗೋದಿ ಎನ್‌ಜಿಒ’ಗಳನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸುವುದು ಭಾರತದ ಪ್ರಜಾಸತ್ತೆಗೆ ನೀಡುತ್ತಿರುವ ಇನ್ನೊಂದು ದೊಡ್ಡ ಪ್ರಹಾರವಾಗಿದೆ.

ಕೃಪೆ:

Writer - ಶಂತನುದತ್ತ

contributor

Editor - ಶಂತನುದತ್ತ

contributor

Similar News