×
Ad

ಮಂಗಳೂರು: ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಹಿಡಿದ ಪೊಲೀಸ್ !

Update: 2022-01-13 16:11 IST

ಮಂಗಳೂರು: ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಕಳವು ಆರೋಪಿಯನ್ನು ಹಿಡಿದ ಘಟನೆಯೊಂದು ಮಂಗಳೂರಿನಲ್ಲಿ ಬುಧವಾರ ನಡೆದಿದೆ.

ಮಂಗಳೂರು ನಗರದ ಹೃದಯಭಾಗದ ಸ್ಟೇಟ್‌ಬ್ಯಾಂಕ್‌ ಬಳಿ ಈ ಘಟನೆ ನಡೆದಿದ್ದು , ಈ ಮೂಲಕ ನಗರದ  ಪ್ರಮುಖ ಸ್ಥಳಗಳಲ್ಲಿ ಪಿಕ್ ಪಾಕೆಟ್, ಮೊಬೈಲ್ ಕಳ್ಳತನ ನಡೆಸುತ್ತಿದ್ದ ತಂಡವೊಂದರ ಇಬ್ಬರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ.

ಬಂಧಿತರನ್ನು ಮಂಗಳೂರು ಹೊರವಲಯದ ಹರೀಶ್ ಪೂಜಾರಿ ನೀರುಮಾರ್ಗ, ಅತ್ತಾವರ ನಿವಾಸಿ ಶಮಂತ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ‌ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪ್ರಮಖ ಪಾತ್ರ ವಹಿಸಿರುವ ಕಮಿಷನರೇಟ್‌ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ  ಎಎಸ್‌ಐ ವರುಣ್‌ ಅವರನ್ನು ಗೌರವಿಸಿ, ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಆರಂಭದಲ್ಲಿ ಒಬ್ಬ ಆರೋಪಿಯನ್ನು‌ ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಂಡವೊಂದು ನೆಹರೂ ಮೈದಾನ ಹಾಗೂ ಸುತ್ತಮುತ್ತ ಜನ ಮಲಗಿರುವ ಸಂದರ್ಭದಲ್ಲಿ, ನಿರ್ಜನ ಪ್ರದೇಶದಲ್ಲಿ ಪಿಕ್ ಪಾಕೆಟ್, ಮೊಬೈಲ್ ಕಳ್ಳತನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ಕಾರ್ಯಾಚರಣೆ ಮೂಲಕ ಇನ್ನೊಬ್ಬ ಆರೋಪಿಯನ್ನು 10 ನಿಮಿಷಗಳ ಅವಧಿಯಲ್ಲೇ ಬಂಧಿಸುವಲ್ಲಿ ಎಎಸ್ಐ ಯಶಸ್ವಿಯಾಗಿದ್ದಾರೆ. ಅವರ ಜತೆ ಅಲ್ಲಿದ್ದ ಆಟೋ ಡ್ರೈವರ್ ಕೂಡಾ ಸಹಕಾರ ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?

ನಿನ್ನೆ ಮಧ್ಯಾಹ್ನ ಮಂಗಳೂರು ನಗರ ಪೊಲೀಸ್‌ ಕಮಿಷನರ್ ಕಚೇರಿಯ ಮುಂಭಾಗದಲ್ಲಿರುವ ಕೇಂದ್ರ ಮೈದಾನದಲ್ಲಿ ರಾಜಸ್ಥಾನದ ಡೋಲಾಪುರ ನಿವಾಸಿ ಗ್ರಾನೈಟ್‌ ಕೆಲಸ ಮಾಡಿಕೊಂಡಿದ್ದ ಪ್ರೇಮ್ ನಾರಾಯಣ ತ್ಯಾಗಿ ಎಂಬವರ ಮೊಬೈಲ್  ಕಳವು ಮಾಡಿ ಪರಾರಿಯಾಗಲೆತ್ನಿಸಿದ್ದರು.

ತಕ್ಷಣವೇ ಪ್ರೇಮ್ ನಾರಾಯಣ ಹಾಗೂ ಸ್ಥಳೀಯರು ಎಚ್ಚೆತ್ತು ಬೊಬ್ಬೆ ಹಾಕಿದ್ದಾರೆ. ಈ ಸಂದರ್ಭ ಕಮಿಷನರೇಟ್‌ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ ವರುಣ್‌ ಅವರು ಗಮನಿಸಿ ಸಿನಿಮೀಯ ರೀತಿಯಲ್ಲಿ ಆತನ ಬೆನ್ನಟ್ಟಿದ್ದಾರೆ. ಆದರೆ ಆ ಸಂದರ್ಭದಲ್ಲಿ ಆರೋಪಿಯಿಂದ ಮೊಬೈಲ್ ದೊರೆತಿರಲಿಲ್ಲ. ತಕ್ಷಣ ಆತನನ್ನು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮತ್ತಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಕದ್ದ ಮೊಬೈಲ್ ಕೂಡ ಅವರೊಂದಿಗೆ ಇರುವುದರ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ವಶದಲ್ಲಿದ್ದ ಆರೋಪಿಯನ್ನು ಬಳಸಿ ಪರಾರಿಯಾಗಿರುವ ಮತ್ತಿಬ್ಬರನ್ನು ಬಂಧಿಸಲು ಪೊಲೀಸರು ತಂತ್ರ ರೂಪಿಸಿ ವಶದಲ್ಲಿರುವ ಆರೋಪಿಯಿಂದಲೇ ಆತನ ಸಹಚರರಿಗೆ ಫೋನ್ ಮಾಡಿಸಿ ರೈಲ್ವೆ ಸ್ಟೇಷನ್ ಬಳಿ ಬರುವಂತೆ ಹೇಳಿಸಿದ್ದಾರೆ.

ಪ್ಲಾನ್ ನಂತೆ ವಶದಲ್ಲಿರುವ ಆರೋಪಿಯನ್ನು ಮತ್ತೊಂದು ವಾಹನದಲ್ಲಿ ಪೊಲೀಸರು ರೈಲ್ವೆ ಸ್ಟೇಷನ್ ಬಳಿ ಕರೆದುಕೊಂಡು ಹೋಗಿದ್ದಾರೆ. ಆತನನ್ನು ಮುಂದೆ ಹೋಗಲು ಬಿಟ್ಟು, ಹಿಂದಿನಿಂದ ಪೊಲೀಸರು ಆತನನ್ನು ಫಾಲೋ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆತ ಕೂಡ ತನ್ನ ಸಹಚರರೊಂದಿಗೆ ರಿಕ್ಷಾ ಏರಿ ಪರಾರಿಯಾಗಲು ಯತ್ನಿಸಿದ್ದಾನೆ. ಪರಿಸ್ಥಿತಿಗನುಗುಣವಾಗಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆನ್ನಟ್ಟಿ ಇಬ್ಬರನ್ನು ಬಂಧಿಸಿದ್ದಾರೆ.

ಕಳ್ಳತನದಲ್ಲಿ ಮೂವರು ಭಾಗಿಯಾಗಿದ್ದು, ಮತ್ತೋರ್ವ ಆರೋಪಿ ರಾಜೇಶ್ ಎಂಬಾತ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ರಾಜೇಶ್ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೊ ನೋಡಿದ ನೆಟ್ಟಿಗರು ಪೊಲೀಸ್‌ ಅಧಿಕಾರಿ ವರುಣ್‌ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News