×
Ad

ಗೃಹ ನಿರ್ಮಾಣ ಸಂಸ್ಥೆಗಳು ರಿಯಲ್ ಎಸ್ಟೇಟ್ ಏಜೆಂಟ್ ನಂತೆ ರೂಪಾಂತರ: ಜಿ.ಟಿ.ದೇವೇಗೌಡ

Update: 2022-01-13 19:22 IST

ಬೆಂಗಳೂರು, ಜ. 13: 'ಜನರ ಜೀವ ನಾಡಿ ಸಹಕಾರ ಕ್ಷೇತ್ರ, ರಾಜ್ಯ ರಾಜಕಾರಣದಲ್ಲಿ ನಾಯಕರನ್ನು ಸೃಷ್ಟಿಸುತ್ತಿದ್ದ ಸಹಕಾರ ಕ್ಷೇತ್ರ, ಇಂದು ಸೊರಗುವಂತೆ ಆಗಿದೆ. ಸಹಕಾರ ಸಂಘವನ್ನು ಬಳಸಿಕೊಂಡು ಬೆಳೆದ ನಾಯಕರು ತಮ್ಮ ಮೂಲವನ್ನು ಮರೆತಿರುವುದರಿಂದ ಹೀಗಾಗುತ್ತಿದೆ  ಎಂದು ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ಪತ್ರಕರ್ತರ ಸಹಕಾರ ಸಂಘದ ಕೊಠಡಿಯಲ್ಲಿ ಸಂಘ ಪ್ರಕಟಿಸಿರುವ 'ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಅಮೃತ ಮಹೋತ್ಸವದೆಡೆಗೆ ಪತ್ರಕರ್ತರ ಸಹಕಾರ ಸಂಘ' ಎಂಬ ಪರಿಕಲ್ಪನೆಯ ವಿನೂತನ ಗೋಡೆ ಕ್ಯಾಲೆಂಡರ್‌ ಅನ್ನು  ಅನಾವರಣ ಮಾಡಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ಅನೇಕರಿಗೆ ರಾಜಕೀಯ ನೆಲೆಯನ್ನು ಕಲ್ಪಿಸಿದೆ. ಉನ್ನತ ಸ್ಥಾನಕ್ಕೆ ಏರಿದವರು ಈ ಕ್ಷೇತ್ರವನ್ನು ಮರೆಯದೇ ಇದ್ದಿದ್ದರೆ ರಾಜ್ಯದ ಪ್ರತಿ ಕುಟುಂಬಕ್ಕೂ ಮನೆ– ನಿವೇಶನ ಕೊಡಲು ಸಾಧ್ಯವಿತ್ತು ಎಂದು ಅವರು ಹೇಳಿದರು.

ಸಹಕಾರ ತತ್ವದ ಅಡಿ ಸ್ಥಾಪನೆಯಾಗಿರುವ ಗೃಹ ನಿರ್ಮಾಣ ಉದ್ದೇಶಿತ ಸಂಸ್ಥೆಗಳು ತಾತ್ವಿಕವಾಗಿ ತಮ್ಮ ಆಶಯವನ್ನು ಬಿಟ್ಟು ರಿಯಲ್‌ ಎಸ್ಟೇಟ್‌ ಏಜೆಂಟ್‌ನಂತೆ ರೂಪಾಂತರ ಹೊಂದಿವೆ. ಆರಂಭದಲ್ಲಿ ಪಡಿತರಕ್ಕೆ ಸೀಮಿತವಾಗಿದ್ದ ಸಹಕಾರ ಕ್ಷೇತ್ರ, ಕೃಷಿ ಮತ್ತು ಮಾರುಕಟ್ಟೆ ಎಂದು ಬಹುವಿಸ್ತಾರವಾಗಿ ಬೆಳೆದಿದೆ ಎಂದು ಅವರು ನುಡಿದರು.
 
ದೇಶಕ್ಕೆ ಪಂಚವಾರ್ಷಿಕ ಯೋಜನೆಯನ್ನು ಪರಿಚಯಿಸಿದ ನೆಹರು ಅವರು ಸಹಕಾರ ರಂಗವನ್ನು ಭಾರತ ದೇಶಕ್ಕೆ ಆರ್ಥಿಕ ಹೆಬ್ಬಾಗಿಲು ಎಂದು ಹೇಳಿದ್ದರು. ಅದು ಅಕ್ಷರ ಸಹ ಸತ್ಯ. ಸಹಕಾರ ಕ್ಷೇತ್ರ ಉದ್ಯೋಗ ಸೃಷ್ಟಿಸಿದಷ್ಟು ಸರ್ಕಾರಗಳೂ ಸೃಷ್ಟಿಸಿಲ್ಲ. ಮರೆತವರು ತಮ್ಮ ಮೂಲದತ್ತ ತಿರುಗಿ ನೋಡಿದರೆ ಖಂಡಿತ ಸಹಕಾರ ಕ್ಷೇತ್ರ ಜನರ ಜೀವನಾಡಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಜಿ.ಟಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ರಾಘವೇಂದ್ರ ಕೆ. ತೊಗರ್ಸಿ, ದೇಶದ ಸ್ವಾತಂತ್ರೋತ್ಸವಕ್ಕೆ ಅಮೃತ ಮಹೋತ್ಸವ. ಈ ಹೊತ್ತಿನಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದ ತ್ಯಾಗ ಬಲಿದಾನವನ್ನು ಸ್ಮರಿಸುವ ದೃಷ್ಟಿಯಿಂದ ರಾಷ್ಟ್ರೀಯ ಚಳವಳಿಯನ್ನು ಸೃಜನಶೀಲವಾಗಿ ಕಾಣುವ ಪರಿಕಲ್ಪನೆಯಲ್ಲಿ ಈ ಕ್ಯಾಲೆಂಡರ್‌ ರೂಪಿಸಲಾಗಿದೆ. ಈ ಕ್ಯಾಲೆಂಡರ್‌ ತನ್ನ ಅನನ್ಯತೆಯ ದಿನದರ್ಶಿಕೆ ಮಾತ್ರವಾಗಿ ಉಳಿಯದೆ, ಸಂಗ್ರಹ ಯೋಗ್ಯ ಕಲಾಕೃತಿಯಾಗಿಯೂ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು. 

ಸಂಘದ ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ಮುಂಜಾನೆ ಸತ್ಯ, ನಿರ್ದೇಶಕರಾದ ಎಂ.ಎಸ್‌. ರಾಜೇಂದ್ರಕುಮಾರ್‌, ಯತಿರಾಜು, ಲಕ್ಷ್ಮಿನಾರಾಯಣ್‌ ಎಸ್‌., ಮೋಹನ್‌ಕುಮಾರ್‌ ಬಿ.ಎನ್‌., ಸಚ್ಚಿದಾನಂದ ಕುರಗುಂದ ಸಂಘದ ಕಾರ್ಯದರ್ಶಿ ತೇಜಸ್ವಿನಿ ಮತ್ತು ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News