ಕನ್ನಡ ವಿವಿಗೆ 2 ಕೋಟಿ ರೂ. ಕೊಡಲು ಸರಕಾರದ ಬಳಿ ಹಣವಿಲ್ಲ: ಟಿ.ಎಸ್.ನಾಗಾಭರಣ
ಬೆಂಗಳೂರು, ಜ. 13: `ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿ ಕನ್ನಡ ಕಲಿಸದೇ ಇನ್ನೆಲ್ಲಿ ಕಲಿಸಬೇಕು? ಕನ್ನಡ ಕಲಿಯುವುದರಿಂದ ಸಂಸ್ಕೃತ ಭಾಷೆಗೆ, ಭಾಷಿಕರಿಗೆ ಹಾಗೂ ಸಂಸ್ಕೃತ ಬೋಧಕರಿಗೆ ಯಾವ ರೀತಿಯ ತೊಂದರೆಯಾಗಿದೆ ಎಂಬುದಕ್ಕೆ ಏನಾದರೂ ಸಾಕ್ಷಧಾರಗಳಿವೆಯೇ? ಇದು ಸಂಸ್ಕೃತದ ಹೆಸರಿನಲ್ಲಿ ಬಂಡವಾಳಶಾಹಿ ಆಂಗ್ಲಮಾಧ್ಯಮ ಮನಸ್ಸುಗಳ ಹುನ್ನಾರ ಎನ್ನಿಸುತ್ತದೆ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯವಾಗಿ ಬೋಧಿಸುವ ಕುರಿತು ವಿಕಾಸಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕನ್ನಡಿಗರು ಕಟ್ಟುವ ತೆರಿಗೆ ಹಣದಿಂದಲೇ ಸರಕಾರ ಸಂಸ್ಕೃತ ಭಾಷೆಗೂ ಆದ್ಯತೆ ನೀಡಿ ಮಾಗಡಿಯಲ್ಲಿ 100 ಎಕರೆ ಜಾಗದಲ್ಲಿ 359 ಕೋಟಿ ರೂ. ನೀಡಿದೆ. ಆದರೆ, ಜಗತ್ತಿನಲ್ಲಿ 6.5ಕೋಟಿ ಕನ್ನಡಿಗರಿಗಾಗಿ ಇರುವ ಏಕೈಕ ವಿಶ್ವ ವಿದ್ಯಾಲಯಕ್ಕೆ ವರ್ಷಕ್ಕೆ 2 ಕೋಟಿ ಕೊಡಲು ಸರಕಾರದ ಬಳಿ ಹಣವಿಲ್ಲ, ಕನ್ನಡಿಗರ ಅಸ್ಮಿತೆಯನ್ನ ಅಳಿಸಿ ಹಾಕಲು ಸರಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವಂತಿದೆ' ಎಂದು ವಾಗ್ದಾಳಿ ನಡೆಸಿದರು.
`ಭಾರತದಲ್ಲಿ ಒಟ್ಟು 24 ಸಾವಿರ ಸಂಸ್ಕೃತ ಜನರಿಗೆ 18 ವಿಶ್ವ ವಿದ್ಯಾಲಯಗಳು, ಮಾಗಡಿಯಲ್ಲಿ 100 ಎಕರೆಯಲ್ಲಿ ಸ್ಥಾಪನೆಯಾಗುತ್ತಿರುವ ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ಸರಕಾರ 359 ಕೋಟಿ ರೂ.ನೀಡುತ್ತಿರುವುದನ್ನು ಗಮನಿಸಿದರೆ ಕನ್ನಡವನ್ನು ನಿರ್ಲಕ್ಷಿಸುವ ಕೆಲಸವಾಗುತ್ತಿದೆ ಎನ್ನಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಗುರುತು ಮಾಡಿ ಸಾರ್ವಜನಿಕರು ಚರ್ಚಿಸುತ್ತಿದ್ದಾರೆ. ಈ ಸಂಬಂಧ ಸಿಎಂಗೆ ಪತ್ರ ಬರೆಯಲಾಗಿದೆ' ಎಂದು ಅವರು ತಿಳಿಸಿದರು.
`2 ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆ ಕಲಿಯುವುದರಿಂದ ಸಂಸ್ಕೃತದ ವಿದ್ಯಾರ್ಥಿಗಳಿಗೆ ಅಥವಾ ಸಂಸ್ಕೃತದ ಪ್ರಾಧ್ಯಾಪಕರಿಗೆ ಯಾವ ರೀತಿಯ ಹಾನಿಯುಂಟಾಗುತ್ತದೆ? ನಾಡಿನ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯೆ ಕಲಿಯಲು ಬಂದಿರವ ಅನ್ಯ ಭಾಷಿಕರು ಈ ನೆಲದ ಜನರ ಭಾಷೆ ಕಲಿಯುವುದು ಅವರ ಉತ್ತರದಾಯಿತ್ವ. ಜೊತೆಗೆ ಅನ್ಯ ರಾಜ್ಯದವರಿಗೆ ಕನ್ನಡ ಕಲಿಕೆ ಕೇವಲ ಬಳಕೆ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಅದು ಅವರು ಶಿಕ್ಷಣಕ್ಕಾಗಿ ವಲಸೆ ಬಂದು ಉಳಿದುಕೊಂಡ ಪ್ರದೇಶದ ಪರಿಚಯಾತ್ಮಕ ಕ್ರಮವೇ ಹೊರತು ಭಾಷೆಯ ಹೇರಿಕೆಯಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಅವರು ಸಲಹೆ ಮಾಡಿದರು.
`ನಾಡಿನ ಜನಭಾಷೆಯಾದ ಕನ್ನಡವನ್ನು ಅಧಿಕೃತವಾಗಿ ಕಲಿತ ಪಕ್ಷದಲ್ಲಿ, ತಾನು ನೆಲೆಸಿರುವ ನಾಡಿನ ಜನರ ಸೇವೆ ಮಾಡುವುದಕ್ಕೆ ಆ ಭಾಷೆ ಒಂದು ಸುವರ್ಣ ಮಾಧ್ಯಮವಾಗುತ್ತದೆ. ಅವನ ಸೇವೆ ಜನ ಭಾಷೆಯ ಮೂಲಕ ಜನತೆಗೆ ತಲುಪುತ್ತದೆ ಎಂದು ಅರ್ಥ. ಅಷ್ಟಲ್ಲದೆ ಕರ್ನಾಟಕದ ಬಗೆಗಿನ ಮಾಹಿತಿಗಳನ್ನು ಕನ್ನಡದಲ್ಲಿ ಅರ್ಥ ಮಾಡಿಕೊಂಡು ತನ್ನ ಸೇವೆಯನ್ನು ಜನಸಾಮಾನ್ಯರತ್ತ ವಿಸ್ತರಿಸುವ ಮೂಲಕ ನಿಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದಂತಾಗುತ್ತದೆ ಎಂದು ಹೇಳಿದರು.
`ರಾಜ್ಯದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಜ್ಞಾನವನ್ನು ಪಡೆಯುವುದು ಅವಶ್ಯ ಎಂಬ ಸಾಮಾನ್ಯ ತಿಳುವಳಿಕೆಯನ್ನು ಅಳವಡಿಸಿಕೊಳ್ಳದ ನಮ್ಮ ಶಿಕ್ಷಣ ವ್ಯವಸ್ಥೆ, ನಾಡಿನ ಜನಭಾಷೆಯ ಮಹತ್ವವನ್ನು ಅರಿಯದೆ ಈ ಹಿಂದೆ ಮಾಡಿದ್ದ ಉದಾರನೀತಿಯಿಂದಾಗಿ ಪರೋಕ್ಷವಾಗಿ ಕನ್ನಡವನ್ನು ನಿವಾರಿಸುವ ಕಾರ್ಪೊರೇಟ್ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆಗೆ ಇಂಬು ನೀಡುವಂತಿದೆ. ಇಂಗ್ಲಿಷ್‍ನಂತೆ ಕನ್ನಡವನ್ನೂ ಕಡ್ಡಾಯಗೊಳಿಸದ ಹೊರತು ಈ ಹಿಂಬಾಗಿಲ ಮೂಲಕ ನಡೆಯುವ ಭಾಷಾ ಕಲಿಕೆಯ ಮಸಲತ್ತುಗಳನ್ನು ಪರಿಹರಿಸಲು ಸಾಧ್ಯವಿಲ್ಲ.
ಆದುದರಿದ ಕರ್ನಾಟಕದಲ್ಲಿ ಇರುವ ಪ್ರತಿಯೊಂದು ಕಾಲೇಜಿನಲ್ಲಿ ಅಧ್ಯಯನ ಮಾಡುವ ಯಾವುದೇ ಪದವಿಯ ವಿದ್ಯಾರ್ಥಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯುವ ನಿಯಮವನ್ನು ಕಡ್ಡಾಯಗೊಳಿಸುವುದು ಅನಿವಾರ್ಯ. ಇದು ಕೇವಲ ಭಾಷೆ ಮೇಲಿನ ವ್ಯಾಮೋಹವಲ್ಲ. ಬದಲಾಗಿ ಈ ನಾಡಿನಲ್ಲಿ ಶಿಕ್ಷಣ ಪಡೆದು ಭವಿಷ್ಯದಲ್ಲಿ ಇಲ್ಲಿಯೇ ಉದ್ಯೋಗ ಪಡೆಯ ಬಯಸುವವರು ಇಲ್ಲಿನ ಪ್ರಧಾನ ಭಾಷಿಕರೊಡನೆ ವ್ಯವಹಾರ ನಡೆಸಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಜನಭಾಷೆಯನ್ನು ಕಲಿಯದವನು ಸಮಾಜದಲ್ಲಿ ಯಾವ ರೀತಿಯಲ್ಲಿ ಜನಸೇವೆ ಮಾಡಬಲ್ಲ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿದರು.
`ಕನ್ನಡ ಭಾಷೆ ಕಲಿಯುವುದರಿಂದ ಸಂಸ್ಕೃತ ಭಾಷೆಗೆ ಯಾವುದೇ ಹಾನಿಯಾಗದಂತಹ ಸಂದರ್ಭದಲ್ಲಿ ಹಾಗೂ ಕನ್ನಡ ನಾಡಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದಿರುವ ಸಂಸ್ಕೃತ ಭಾರತ ಟ್ರಸ್ಟ್ ಹಾಗೂ ಮಹಾ ವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಹಯಗ್ರಿವ ಟ್ರಸ್ಟ್, ವ್ಯೂಮ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಷನ್ ಇವುಗಳು ಕನ್ನಡದ ವಿರುದ್ಧವೇ ಈ ರೀತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೇಗೆ ಸಲ್ಲಿಸುತ್ತವೆ? ಮತ್ತು ಇದು ಹೇಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಲಿದೆ? ಎಂದು ಪ್ರಶ್ನಿಸಿದರು.
ಕೋರ್ಟ್‍ಗೆ ಹೋದವರು ಆಲೋಚಿಸಬೇಕು
`ನಮ್ಮ ನೆಲದಲ್ಲಿ ಶಿಕ್ಷಣ ಪಡೆದ ಅನ್ಯಭಾಷಿಕರು ಉದ್ಯೋಗ ಮಾಡಬೇಕಾದ ಸಂದರ್ಭದಲ್ಲಿ ಇಲ್ಲಿನ ಜನರೊಂದಿಗೆ ಸಂವಹನ ನಡೆಸಲು ಕನ್ನಡ ಅಗತ್ಯವೇ ಹೊರತು ಸಂಸ್ಕೃತವಲ್ಲ ಎಂಬುದನ್ನು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ಸಂಸ್ಕೃತ ಭಾರತ ಟ್ರಸ್ಟ್ ಮತ್ತು ಇತರೆ ಉಳಿದವರು ಆಲೋಚಿಸಬೇಕು. ಕನ್ನಡ ನಾಡಿನಲ್ಲಿ ಸಂಸ್ಕೃತ ಕಲಿತರೆ ಅಥವಾ ಕಲಿಯದಿದ್ದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ ಕನ್ನಡ ಕಲಿಯದಿದ್ದರೆ ಇಲ್ಲಿನ ಜನರೊಂದಿಗೆ ಬೆರೆತು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ?
-ಟಿ.ಎಸ್.ನಾಗಾಭರಣ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ